ಆತ್ಮಹತ್ಯೆ ಮತ್ತು ನಮ್ಮ ಸಮುದಾಯ

0
89

ಸನ್ಮಾರ್ಗ ವಾರ್ತೆ

✍️ ಸಲೀಮ್ ಬೋಳಂಗಡಿ

ಇದು ಕೆಲ ವರ್ಷಗಳ ಹಿಂದಿನ ಘಟನೆ. ಪಕ್ಕದ ಊರಿನ ಓರ್ವ ರೋಗಿಯ ಅಸಹಾಯಕತೆಯ ಬಗ್ಗೆ ತಿಳಿದುಕೊಂಡು ನಮ್ಮ ಸಮಾಜ ಸೇವಾ ಕಾರ್ಯಕರ್ತರ ಜೊತೆ ಸೇರಿ ಅವರ ಮನೆಯನ್ನು ಸಂದರ್ಶಿಸಿದೆವು. ಮೂರು ಮಕ್ಕಳ ತಂದೆ. ಗುಡಿಸಲಿನಂತಹ ಮನೆಯಲ್ಲಿ ವಾಸವಾಗಿದ್ದ ಅವರು ವೃತ್ತಿಯಲ್ಲಿ ಅಟೋ ಚಾಲಕರಾಗಿದ್ದರು. ಹೊಟ್ಟೆ ನೋವಿನಿಂದ ಬಳಲುತ್ತಿರುವ ಬಗ್ಗೆ ಬಗ್ಗೆ ನಮ್ಮಲ್ಲಿ ಅಳಲನ್ನು ತೋಡಿ ಕೊಂಡರು.

ಅದರಂತೆ ಮಂಗಳೂರಿನ ಖ್ಯಾತ ವೈದ್ಯರನ್ನು ಸಂಪರ್ಕಿಸಿ ಅವರ ಬೇಟಿಗಾಗಿ ದಿನಾಂಕ ನಿಗದಿಪಡಿಸಿ ಆ ದಿನ ಆ ವ್ಯಕ್ತಿಯನ್ನು ನಮ್ಮ ಅಧ್ಯಕ್ಷರ ಕಾರಲ್ಲಿಯೇ ಕರೆದು ಕೊಂಡು ಹೋಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಕೊಡಿಸಿದೆವು. ತಾಳಲಾರದ ಹೊಟ್ಟೆ ನೋವು ಸರಿಯಾಗಿ ಮಲವಿಸರ್ಜನೆಯಾಗದೆ ಕೆಲವಾರು ವರ್ಷಗಳಿಂದ ಬಳಲುತ್ತಿದ್ದೇನೆ ಎಂದು ವೈದ್ಯರಲ್ಲಿ ಹೇಳಿದಾಗ ಇಷ್ಟು ವರ್ಷಗಳ ಕಾಲ ಮಲ ವಿಸರ್ಜನೆ ಸರಿಯಾಗದೆ ನೀವು ಹೇಳಿದ ಪ್ರಕಾರ ಹೊಟ್ಟೆ ನೋವು ಇದ್ದಿದ್ದರೆ ಇಷ್ಟು ವರ್ಷ ಬದುಕಲು ಸಾಧ್ಯವೇ ಇಲ್ಲ. ನಿಮಗೆ ಅಂತಹದ್ದೇನೂ ಇಲ್ಲ ಎಂದು ಕೆಲವು ಔಷಧಿಗಳನ್ನು ನೀಡಿದರು. ನಂತರ ನಮ್ಮನ್ನು ಕರೆದು ಅವರು ನಿಜವಾಗಿ ಮಾನಸಿಕವಾಗಿ ತೊಂದರೆಯಲ್ಲಿದ್ದಾರೆ. ಯಾವುದಾದರೂ ಮಾನಸಿಕ ತಜ್ಞರನ್ನು ಸಂಪರ್ಕಿಸಿದರೆ ಉತ್ತಮ ಎಂದು ಸಲಹೆ ನೀಡಿದರು.

ಹೀಗೆ ಅಲ್ಲಿಂದ ವಾಹನದಲ್ಲಿ ಬರುತ್ತಿರುವಾಗ ಪರಸ್ಪರ ಅಭಿಪ್ರಾಯ ಹಂಚಿಕೊಳ್ಳುತ್ತಿರುವಾಗ ಅವರು ಮಾತನಾಡುತ್ತಾ, ನಾನು ಈ ಹಿಂದೆ ಒಮ್ಮೆ ಆತ್ಮಹತ್ಯೆ ಮಾಡಬೇಕೆಂದು ನಿರ್ಧರಿಸಿದ್ದೆ ಎಂದು ಹೇಳಿದರು. ನನಗೆ ಯಾರೋ ಮಾಟ ಮಾಡಿದ್ದಾರೆ. ನನ್ನ ಹೊಟ್ಟೆಯಲ್ಲಿ ಏನೋ ಉಳಿದು ಕೊಂಡಿದೆ, ಅದನ್ನು ವಾಂತಿ ಮಾಡಿಸಿ ಹೊರತೆಗೆಯಬೇಕು. ನನಗೆ ನೆಮ್ಮದಿಯಿಲ್ಲ ಎಂದೆಲ್ಲಾ ಹೇಳಿ ಗೋಗರೆಯ ತೊಡಗಿದರು. ಆ ವ್ಯಕ್ತಿಯ ಮನದಲ್ಲಿ ವಾಮಾಚಾರದ ರೋಗ ತಲೆಯಲ್ಲಿ ಅಂಟಿಕೊಂಡಿತ್ತು. ಆಗ ನಾವು ಅವರಿಗೆ ಆತ್ಮಹತ್ಯೆಯ ಭಯಾನಕ ಶಿಕ್ಷೆಯ ಬಗ್ಗೆ ಇಸ್ಲಾಮಿನ ಕಟು ಎಚ್ಚರದ ಬಗ್ಗೆ ಚೆನ್ನಾಗಿ ತಿಳಿ ಹೇಳಿದೆವು.

ಕೆಲವು ದಿನಗಳ ಬಳಿಕ ನಗರದ ಖ್ಯಾತ ಮಾನಸಿಕ ತಜ್ಞರನ್ನೂ ಸಂಪರ್ಕಿಸಿದೆವು. ಅವರು ಔಷಧಿಯನ್ನು ನೀಡಿ ಉಪಚರಿಸುತ್ತಲೇ ಇದ್ದರು. ಹಾಗೆಯೇ ಆ ವ್ಯಕ್ತಿ ನಂತರ ಅಟೋದಲ್ಲಿ ದುಡಿಯ ತೊಡಗಿದರು. ನಮಾಝಿಗನೂ ಆಗಿದ್ದ ಆ ವ್ಯಕ್ತಿ ನಮ್ಮ ಸಮಾಜ ಸೇವಾ ವಿಭಾಗದೊಂದಿಗೆ ಸಂಪರ್ಕದಲ್ಲಿಯೂ ಇದ್ದರು.

ಮತ್ತೆ ಹೊಟ್ಟೆ ನೋವು ಎಂದು ಅಳಲನ್ನು ತೋಡಿಕೊಳ್ಳುತ್ತಾ ಇದೇ ಸಮಸ್ಯೆಯನ್ನು ಹೇಳಿಕೊಳ್ಳುತ್ತಾ ಇದ್ದರು. ಇವರಿಗೆ ಮಾನಸಿಕ ತೊಳಲಾಟ ಇದೆ ಎಂಬುದನ್ನು ನಾವು ಅರ್ಥ ಮಾಡಿ ಕೊಂಡು ಅವರಲ್ಲಿ ಪ್ರತಿಕ್ರಿಯಿಸುತ್ತಿದ್ದೆವು. ಆದರೆ ಕೆಲವು ತಿಂಗಳ ಬಳಿಕ ಒಂದು ಮಧ್ಯಾಹ್ನ ಹಠಾತ್ತನೆ ಗರಬಡಿದಂತಹ ಸುದ್ದಿಯೊಂದು ನಮಗೆ ಬಂತು. ಅದು ಆತ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಸುದ್ದಿಯಾಗಿತ್ತು. ಮನೆಯವರೆಲ್ಲರೂ ಯಾವುದೋ ಮದುವೆಗೆ ತೆರಳಿದ ಸಂದರ್ಭ ನೋಡಿ ನೇಣು ಬಿಗಿದು ಕುಟುಂಬವನ್ನೇ ಅನಾಥ ಮಾಡಿ ಹೋಗಿದ್ದರು. ಅಲ್ಲಾಹನು ಆ ವ್ಯಕ್ತಿಯನ್ನು ಕ್ಷಮಿಸಿ ಅನುಗ್ರಹಿಸಲಿ.

ಆದರೆ ಈ ಆತ್ಮಹತ್ಯೆ ಸುದ್ದಿ ದೊಡ್ಡ ಸುದ್ದಿಯಾಗಲೇ ಇಲ್ಲ. ಯಾಕೆಂದರೆ ಆ ವ್ಯಕ್ತಿ ಜನಸಾಮಾನ್ಯನಾಗಿದ್ದ. ನಿಜಕ್ಕೂ ಈ ಆತ್ಮಹತ್ಯೆಯ ವಿಚಾರ ನನ್ನ ಮನಸ್ಸನ್ನು ಈಗಲೂ ಕಾಡುತ್ತಿದೆ. ತಿಳಿ ಹೇಳಿಯೂ ಆ ವ್ಯಕ್ತಿ ತಲೆಗೆ ಹಾಕಿಕೊಳ್ಳದೆ ಆತ್ಮಹತ್ಯೆಯ ದಾರಿ ಹಿಡಿದರಲ್ಲಾ.

ಈ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಅತ್ಮಹತ್ಯೆಯ ವರದಿಗಳು ಬಹಳ ಅಪರೂಪವಾಗಿದ್ದವು. ಆದರೆ ಇತ್ತೀಚೆಗೆ ಅದು ಹೆಚ್ಚಾಗುತ್ತಿರುವುದು ಖೇದಕರ. ಯಾಕೆ ನಮ್ಮ ಸಮುದಾಯವು ಈ ಜಾಡಿನತ್ತ ಹೊರಳುತ್ತಿದೆ ಎಂದರೆ ಇಸ್ಲಾಮೀ ಜ್ಞಾನದ ಕೊರತೆಯಾಗಿದೆ. ಸಂಪಾದನೆಗಿಂತ ಹೆಚ್ಚಿನ ಅನಿಯಂತ್ರಿತ ಖರ್ಚು ವೆಚ್ಚಗಳು, ವ್ಯಾಮೋಹಕ್ಕೆ ಮರುಳಾಗಿ ಬಾಳನ್ನು ಬರಡನ್ನಾಗಿಸುವುದು, ಹೆಣ್ಣು ಹೊನ್ನು ಹಣ ಎಲ್ಲವೂ ಅದರಲ್ಲಿ ಸೇರಿದೆ. ಕೊನೆಗೆ ಅಸಹಾಯಕನಾಗಿ ದಾರಿಗಾಣದಂತಾಗಿ ಪರಿಹಾರವಾಗಿ ಆತ್ಮಹತ್ಯೆಯ ದಾರಿಯತ್ತ ಸಾಗುತ್ತಾರೆ. ಅಲ್ಲಾಹನ ಮೇಲಿನ ಭರವಸೆಯನ್ನು ಸಂಪೂರ್ಣ ಕಳಕೊಳ್ಳುವಂತಹ ನಿರ್ಧಾರವದು. ಸಮುದಾಯದಲ್ಲಿ ಇಂತಹ ವರದಿಗಳು ಈ ಹಿಂದೆ ಅಪರೂಪವಾಗಿದ್ದರೂ ಇತ್ತೀಚೆಗೆ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಕೇಳಿ ಬರುತ್ತಿದೆ. ಈಮಾನಿನ ಕೊರತೆ, ದೇವಭಯದ ಕೊರತೆ, ವರಮಾನಕ್ಕಿಂತ ಹೆಚ್ಚಿನ ವ್ಯಯ, ಧರ್ಮದ ಆದೇಶದ ಮೇರೆ ಮೀರಿದ ನಡೆ ಇವೆಲ್ಲ ಮುಖ್ಯ ಕಾರಣವಾಗಿದೆ.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಆತ್ಮಹತ್ಯೆಯ ವಿಧಿ ವಿಧಾನಗಳ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ವಿಧಿ ಏನು ಎಂಬ ಬಗ್ಗೆ ಜನರಲ್ಲಿ ಚಿಂತೆ ಆತಂಕ ಇರುವುದು ಸಹಜ ವಾಗಿದೆ. ವಿವೇಕವಂತನು ಆತ್ಮಹತ್ಯೆ ಮಾಡಲಾರನು. ಹೃದಯದಲ್ಲಿ ಈಮಾನ್ ಪ್ರಬಲವಾಗಿದ್ದರೆ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಕಡು ಬಡತನ ಕಾಡಿದಾಗಲೂ ಮತ್ತಿತರ ಅಸಹನೀಯವಾದ ಸತ್ವ ಪರೀಕ್ಷೆ ಎದುರಾದಾಗಲೂ ಅಲ್ಲಾಹನ ಮೇಲಿನ ಭರವಸೆಯಿಂದ ಮುಂದುವರಿಯುವುದು ಸತ್ಯವಿಶ್ವಾಸಿಗಳ ಕರ್ತವ್ಯವಾಗಿದೆ. ಖಂಡಿತಾ ಅಲ್ಲಾಹನು ಒಂದು ಪರಿಹಾರ ತೋರದಿರಲಾರ ಎಂಬ ಛಲ ಭರವಸೆಯು ಆತನನ್ನು ಯಶಸ್ಸಿನತ್ತ ಕೊಂಡೊಯ್ಯಬಹುದು. ಆದ್ದರಿಂದ ಈಮಾನಿನ ಕೊರತೆ ಉದ್ಭವಿಸಿದರೆ ಇಂತಹ ಕೃತ್ಯ ಸಂಭವಿಸುತ್ತದೆ.

ಒಂದು ಯುದ್ದಕ್ಕೆ ತೆರಳಿದ ಸಹಾಬಿಯೋರ್ವರ ಕೈಯಲ್ಲಿ ಆಳವಾದ ಗಾಯವಿತ್ತು. ಅಸಹನೀಯವಾದ ನೋವಿನಿಂದ ಬಳಲುತ್ತಿದ್ದರು. ಅವರು ಮುಂಗೋಪಿಯಾಗಿದ್ದರು. ಅವರು ದೇಹದ ಒಂದು ನರವನ್ನು ಕಡಿದು ಹಾಕುತ್ತಾರೆ. ಕೊನೆಗೆ ಅವರು ಮರಣ ಹೊಂದುತ್ತಾರೆ. ಅವರು ಆಗ ತಾನೇ ಇಸ್ಲಾಮ್ ಸ್ವೀಕರಿಸಿದ ಸಹಾಬಿಯಾಗಿದ್ದರು. ಅವರೇನೂ ಬಹಳ ಹಿಂದೆಯೇ ಪ್ರವಾದಿವರ್ಯರ(ಸ) ಆಚಾರ ವಿಚಾರ ಕಂಡು ಇದ್ದ ಜೊತೆಗಾರರಲ್ಲ. ಪ್ರವಾದಿವರ್ಯರು(ಸ) ಅವರ ಜನಾಝವನ್ನು
ವೀಕ್ಷಿಸಿ ಜನಾಝಾ ನಮಾಝನ್ನು ನಿರ್ವಹಿಸದೆ ಸಹಾಬಿಗಳೊಂದಿಗೆ ನಮಾಝ್ ನಿರ್ವಹಿಸಲು ಹೇಳಿ ಅಲ್ಲಿಂದ ನಿರ್ಗಮಿಸಿದರು ಎಂದು ಹಿರಿಯ ವಿದ್ವಾಂಸರೊಬ್ಬರು ಪ್ರವಚನದಲ್ಲಿ ಹೇಳಿದ್ದರು. ಇದರ ಉದ್ದೇಶ ಈ ಆತ್ಮಹತ್ಯೆಯು ಮಹಾಪಾಪವಾಗಿದೆ. ಮಹಾನ್ ವ್ಯಕ್ತಿಗಳ ನಮಾಝ್ ಪ್ರಾರ್ಥನೆಯಿಂದ ಆತ ವಂಚಿತರಾಗಬಹುದು. ಅಲ್ಲಾಹನ ಪ್ರವಾದಿಯ ಶಫಾಅತ್‌ನಿಂದ ವಂಚಿತರಾಗಬಹುದು ಎಂದು ಸಮುದಾಯಕ್ಕೆ ಉಪದೇಶ ನೀಡುವುದಾಗಿದೆ ಎಂಬುದು ಹಿರಿಯ ಕರ್ಮಶಾಸ್ತ್ರ ವಿದ್ವಾಂಸರ ಅಭಿಪ್ರಾಯವಾಗಿದೆ.

ಈ ದೇಹದ ಒಡೆಯನು ಅಲ್ಲಾಹನಾಗಿದ್ದಾನೆ. ಅದರ ಅಂತ್ಯವನ್ನು ನಿರ್ಣಯಿಸುವವನು ಆತನೇ ಆಗಿದ್ದಾನೆ. ನಮ್ಮ ಬದುಕಿನ ಸುಖ ದುಃಖ ಕಷ್ಟ ನಷ್ಟ ಎಲ್ಲವನ್ನೂ ನೀಡಿದವನು ಅಲ್ಲಾಹನಾಗಿದ್ದಾನೆ. ಆದ್ದರಿಂದ ಅದನ್ನು ಹರಣ ಮಾಡುವ ಅಧಿಕಾರ ಯಾರಿಗೂ ಇಲ್ಲ. ಬೇರೆ ಬೇರೆ ಕಾರಣಗಳಿಂದ ಅವನ ಪ್ರಾಣ ಹರಣವಾಗಬಹುದು. ಆದರೆ ಆತ ಸ್ವಯಂ ಪ್ರಾಣ ಹರಣ ಮಾಡುವಂತಿಲ್ಲ. “ಪ್ರತಿಯೊಂದು ದೇಹವೂ ಈ ಕಅಬಾದಷ್ಟು ಪವಿತ್ರವಾಗಿದೆ. ಯಾರೂ ಯಾರ ಗೌರವವನ್ನು ಹರಣಗೊಳಿಸಬೇಡಿ” ಎಂದು ಪ್ರವಾದಿವರ್ಯರು(ಸ) ಪವಿತ್ರ ಕಅಬಾದತ್ತ ಬೆರಳು ತೋರಿಸಿ ಹೇಳಿದ್ದರು. ಯಾರೂ ಯಾರ ಒಂದು ಹನಿ ರಕ್ತವನ್ನೂ ಹರಿಸಬಾರದು.

ಪ್ರವಾದಿವರ್ಯರು(ಸ) ಮತ್ತು ಸಂಗಾತಿಗಳು ಮಹತ್ತರವಾದ ಸತ್ವ ಪರೀಕ್ಷೆಯನ್ನು ಎದುರಿಸಿದ್ದರು. ಮಕ್ಕಾದಲ್ಲಿ ಬಹಿಷ್ಕೃತಗೊಂಡ ಆ ಎರಡು ವರ್ಷಗಳ ಕಠಿಣ ದಿನಗಳನ್ನು ಅಧ್ಯಯನ ಮಾಡಿದಾಗ ಆ ಸಂಕಷ್ಟದ ದಿನಗಳು ಹೇಗಿತ್ತು ಎಂಬುದಾಗಿ ಚಿಂತಿಸಬಹುದು. ಎಲೆಗಳನ್ನು ತಿಂದು ಬದುಕಬೇಕಾದ ಸ್ಥಿತಿ ಅಲ್ಲಿ ಉದ್ಭವವಾಗಿತ್ತು. ಮಾರುಕಟ್ಟೆಯಿಂದ ಆಹಾರ ಸಾಮಗ್ರಿಗಳನ್ನು ಖರೀದಿಸುವುದನ್ನು ತಡೆಹಿಡಿಯಲಾಗಿತ್ತು. ಖರೀದಿಸುವುದಿದ್ದರೂ ದುಪ್ಪಟ್ಟು ಮೂರ್ಪಟ್ಟು ಬೆಲೆ ನೀಡಬೇಕಾಗಿತ್ತು. ಅಂಗಡಿ ಮಾರುಕಟ್ಟೆಯಲ್ಲಿ ಆಹಾರ ಸಾಮಗ್ರಿಗಳು ಉಳಿದರೆ ಅಬೂ ಲಹಬ್ ಖರೀದಿಸುವುದಾಗಿ ಹೇಳಿ ಮುಸ್ಲಿಮರನ್ನು ಸತಾಯಿಸಿದ್ದ. ಇಂತಹ ಸಂಕಷ್ಟದ ದಿನಗಳನ್ನು ಪ್ರವಾದಿವರ್ಯರು(ಸ) ಎದುರಿಸಿ ಸತ್ವ ಪರೀಕ್ಷೆಗಳನ್ನು ಗೆದ್ದು ಯಶಸ್ಸು ಕಂಡರು.

ಇನ್ನು ಪ್ರವಾದಿವರ್ಯರು(ಸ) ಆತ್ಮಹತ್ಯೆ ಮಾಡಿದವರ ಜನಾಝಾ ನಮಾಝ್ ನಿರ್ವಹಿಸಿಲ್ಲ ಎಂಬ ವಾದವೂ ಸಮಾಜದಲ್ಲಿ ವ್ಯಾಪಕವಾಗಿದೆ. ಅದನ್ನು ಕೇವಲ ಜನಾಝ ನಮಾಝ್‌ಗೆ ಮಾತ್ರ ಸಮುದಾಯ ಸೀಮಿತಗೊಳಿಸುವುದು ಏಕೆ? ಉದ್ದೇಶ ಪೂರ್ವಕವಾಗಿಯೇ ನಮಾಝನ್ನೂ ಸಂಪೂರ್ಣವಾಗಿ ತೊರೆದವನ ನಮಾಝನ್ನೂ ಪ್ರವಾದಿವರ್ಯರು(ಸ) ನಿರ್ವಹಿಸಿಲ್ಲ. ಮುರ್ತದ್ದ್ ಆದ ವ್ಯಕ್ತಿಯ ಜನಾಝ ನಮಾಝ್ ಕೂಡ ನಿರ್ವಹಿಸಿಲ್ಲ ಎಂದು ಇತಿಹಾಸಗಳಿಂದ ತಿಳಿದು ಬರುತ್ತದೆ. ಹಾಗೆಯೇ ಸಾಲಗಾರನ ನಮಾಝ್ ಕೂಡಾ ಪ್ರವಾದಿವರ್ಯರು(ಸ) ನಿರ್ವಹಿಸಿಲ್ಲ ಎಂದು ಹೇಳಲಾಗಿದೆ.

ಜನಾಝ ಬಂದಾಗ ಈ ವ್ಯಕ್ತಿ ಸಾಲಗಾರನೇ ಎಂದು ಪ್ರವಾದಿವರ್ಯರು(ಸ) ಕೇಳುತ್ತಿದ್ದರು. ಸಾಲಗಾರನೆಂದಾದರೆ ಆತನ ಸಾಲವನ್ನು ತೀರಿಸುವ ಅವಕಾಶವನ್ನು ಪ್ರವಾದಿವರ್ಯರು(ಸ) ಮಾಡಿಕೊಡುತ್ತಿದ್ದರು. ಆಗ ಅಲ್ಲಿದ್ದ ಅಬ್ದುರ‍್ರಹ್ಮಾನ್ ಬಿನ್ ಔಫ್‌ರಂತಹ ಶ್ರೀಮಂತರು ಅವರ ಸಾಲವನ್ನು ಸಂದಾಯ ಮಾಡಿ ಸಾಲ ಮುಕ್ತಗೊಳಿಸುತ್ತಿದ್ದರು. ಈ ಬಗ್ಗೆ ಹದಿನಾರು ಕಡೆ ವರದಿಯಾಗಿದೆ. ಆದರೆ ಆತ್ಮ ಹತ್ಯೆ ಮಾಡಿದವನ ನಮಾಝ್ ನಿರ್ವಹಿಸದ ಬಗ್ಗೆ ಒಂದು ಕಡೆ ಮಾತ್ರ ಹೇಳಲಾಗಿದೆ. ಪ್ರವಾದಿವರ್ಯರಲ್ಲಿ(ಸ) ಸಹಾಬಿಗಳು “ಪ್ರವಾದಿಗಳೇ, ಸಾಲಗಾರರ ನಮಾಝನ್ನು ನೀವು ಯಾಕೆ ನಿರ್ವಹಿಸುತ್ತಿಲ್ಲ” ಎಂದು ಕೇಳಿದಾಗ, “ಆ ಮೃತನ ಪತ್ನಿ ಮತ್ತು ಮಕ್ಕಳಿಗೆ ನಂತರ ಸಾಲಗಾರರು ಕಿರುಕುಳ ನೀಡಬಹುದಲ್ಲವೇ? ನಾನು ಯಾರಿಗೂ ನೋವುಂಟು ಮಾಡಲು ಬಂದವನಲ್ಲ. ಅವರನ್ನು ಸಾಲ ಮುಕ್ತಗೊಳಿಸಿ ಪಾರು ಮಾಡಲು ಈ ರೀತಿ ಮಾಡುತ್ತಿದ್ದೇನೆ” ಎಂದು ಹೇಳಿದರು.

ಆತ್ಮಹತ್ಯೆಗೈದವನಿಗೆ ನರಕ ಶಿಕ್ಷೆ ಎಂಬುದು ಇಸ್ಲಾಮಿನ ವಿಧಿಯಾಗಿದೆ. ಆತ್ಮಹತ್ಯೆಯ ಮಹಾಪಾಪದ ಬಗ್ಗೆ ಸಮಾಜದಲ್ಲಿ ಜಾಗೃತಿಯುಂಟು ಮಾಡಬೇಕಾಗಿದೆ. ಸಾಮಾಜಿಕ ಜಾಲ ತಾಣ, ಡ್ರಗ್ಸ್ ಮುಂತಾದವುಗಳ ದಾಸನಾಗಿ ಕೊನೆಗೆ ಹದಿಹರೆಯದ ಬಾಲಕರು ಕೂಡಾ ಆತ್ಮ ಹತ್ಯೆ ಮಾಡುವ ವರದಿಗಳು ಇತ್ತೀಚೆಗೆ ಕೇಳಿ ಬರುತ್ತಿವೆ. ಸಣ್ಣ ಪುಟ್ಟ ವಿಷಯಕ್ಕೂ ಉದಾಹರಣೆಗೆ ಮನೆಯಲ್ಲಿ ಪೋಷಕರು ಗದರಿಸಿದರೂ ಸಣ್ಣ ಪುಟ್ಟ ಮಕ್ಕಳು ಆತ್ಮ ಹತ್ಯೆ ಪರಿಹಾರ ಎಂದು ಕಂಡುಕೊಳ್ಳುವವರು ಇದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಬೇಕಾದ ಅಗತ್ಯವಿದೆ. ಪರಸ್ಪರ ಕರ್ಮಶಾಸ್ತ್ರಗಳ ಬಗ್ಗೆ ಚರ್ಚಿಸುವುದಕ್ಕಿಂತ ಈ ಪಿಡುಗಿನಿಂದ ಸಮುದಾಯವನ್ನು ಪಾರು ಮಾಡಬೇಕಾಗಿದೆ.