ಮೋದಿ- ಕ್ಸಿ ಜಿನ್‌ಪಿಂಗ್‌ರನ್ನು ಭೇಟಿ ಮಾಡಿದ ಪುಟಿನ್ ; ಪಾಶ್ಚಿಮಾತ್ಯ ದೇಶಗಳಿಗೆ ಕೊಟ್ಟ ಸಂದೇಶವೇನು?

0
71

ಸನ್ಮಾರ್ಗ ವಾರ್ತೆ

ಐತಿಹಾಸಿಕ BRICS ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ, ಪುಟಿನ್ ಮಧ್ಯದಲ್ಲಿ ನಿಂತಿದ್ದು, ಅವರಿಗೆ ಪಕ್ಕದಲ್ಲೇ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಇದ್ದಾರೆ. ಈ ಸಂದರ್ಭದಲ್ಲಿ, ಪುಟಿನ್ ನಗುತ್ತಾ ಕ್ಯಾಮೆರಾದ ಕಡೆಗೆ ‘ಥಂಬ್ಸ್ ಅಪ್’ ಗೆಸ್ಚರ್ ನೀಡುತ್ತಿದ್ದಾರೆ.

ಪ್ರಧಾನಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಅವರು ಐದು ವರ್ಷಗಳ ನಂತರ BRICS ವೇದಿಕೆಯಲ್ಲಿ ಭೇಟಿಯಾಗಿದ್ದು, 2019ರಲ್ಲಿ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದಾಗ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು.

ಜನಸಂಖ್ಯೆಯ ದೃಷ್ಟಿಕೋನದಿಂದ ಅತಿದೊಡ್ಡ ರಾಷ್ಟ್ರಗಳಾಗಿರುವ ಭಾರತ-ಚೀನಾವನ್ನು, ಬ್ರಿಕ್ಸ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತರುವ ಮೂಲಕ ರಷ್ಯಾ ತಮ್ಮ ಕಾರ್ಯತಂತ್ರದ ಯಶಸ್ಸು ತೋರಿಸಲು ಪ್ರಯತ್ನಿಸುತ್ತಿವೆ. ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಂತೆಯೇ, ರಷ್ಯಾ ಪಾಶ್ಚಿಮಾತ್ಯ ದೇಶಗಳ ವ್ಯಾಪಾರ ಪ್ರಾಬಲ್ಯಕ್ಕೆ ಸವಾಲೆಸೆದು, ಕಜಾನ್‌ನಲ್ಲಿ BRICS ಸಮ್ಮೇಳನ ನಡೆಸುತ್ತಿದೆ.

ಅಂಕಣಕಾರ ಸುಧೀಂದ್ರ ಕುಲಕರ್ಣಿಯವರ ಪ್ರಕಾರ, ಕಜಾನ್‌ನಲ್ಲಿ ನಡೆದ BRICS ಶೃಂಗಸಭೆ ಅತ್ಯಂತ ಯಶಸ್ವಿಯಾಗಿದ್ದು, ಪುಟಿನ್ ಅದರ ನೇತೃತ್ವ ವಹಿಸಿದ್ದರು ಎಂದು ಹೇಳಿದ್ದಾರೆ. BRICS ಅನ್ನು 2006ರಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ದೇಶಗಳು ಸ್ಥಾಪಿಸಿದ್ದು, 2011ರಲ್ಲಿ ದಕ್ಷಿಣ ಆಫ್ರಿಕಾವೂ ಇದರಲ್ಲಿ ಸೇರಿತು. ಇಂದು ಬ್ರಿಕ್ಸ್ ಜಾಗತಿಕ ಜನಸಂಖ್ಯೆಯ 44% ಹಾಗೂ ಆರ್ಥಿಕತೆಯ ಮೂರನೇ ಭಾಗಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಪ್ರತಿನಿಧಿಸುತ್ತದೆ.

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು, ರಷ್ಯಾದ ವಿರುದ್ಧ ಕಟ್ಟುನಿಟ್ಟಾದ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದ್ದು, ಈ ಕ್ರಮದಿಂದಾಗಿ, ಈ ದೇಶಗಳೊಂದಿಗೆ ರಷ್ಯಾದ ಸಂಬಂಧಗಳು ಮಹತ್ವದ ತಿರುವು ಪಡೆದುಕೊಂಡಿದೆ.

ಈ ಒತ್ತವು ಉಕ್ರೇನ್‌ನಲ್ಲಿ ನಡೆದ ಯುದ್ಧ ಅಪರಾಧ ಪ್ರಕರಣಗಳವರೆಗೆ ತಲುಪಿದ್ದು, ಇದರಿಂದಾಗಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಬಂಧಿಸಲು ವಾರಂಟ್ ಹೊರಡಿಸಿತು. ಈ ವಾರಂಟ್ ಹೊರತಾಗಿಯೂ, ಪುಟಿನ್ ಸೆಪ್ಟೆಂಬರ್‌ನಲ್ಲಿ ಐಸಿಸಿ ಸದಸ್ಯ ರಾಷ್ಟ್ರವಾದ ಮಂಗೋಲಿಯಾಕ್ಕೆ ಭೇಟಿ ನೀಡಿದರು. ಬಂಧನ ವಾರಂಟ್ ಜಾರಿಯಾದ ನಂತರ, ಪುಟಿನ್ ಭೇಟಿ ನೀಡಿದ ಮೊದಲ ಐಸಿಸಿ ಸದಸ್ಯ ರಾಷ್ಟ್ರವಾಗಿದೆ.

ಈ ಬಗೆಯ ವಾರಂಟ್ ಜಾರಿಯಾದರೆ ಶಂಕಿತರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅವಕಾಶ ಐಸಿಸಿ ಸದಸ್ಯ ರಾಷ್ಟ್ರಗಳಿಗೆ ಇದೆ. ಆದರೆ ಇದಕ್ಕೆ ಯಾವುದೇ ಕಟ್ಟುನಿಟ್ಟಾದ ನಿಯಮಗಳು ಇಲ್ಲ.

ಬ್ರಿಕ್ಸ್ ಸಂಘಟನೆ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ, ಪಶ್ಚಿಮ ದೇಶಗಳ ಆರ್ಥಿಕ ನಿರ್ಬಂಧಗಳ ವಿಷಯವನ್ನು ಪರೋಕ್ಷವಾಗಿ ಉಲ್ಲೇಖಿಸಲಾಗಿದೆ.

ಈ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ, “ಅಂತರರಾಷ್ಟ್ರೀಯ ವ್ಯಾಪಾರ, ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ, ಮತ್ತು ವಿಶ್ವ ಆರ್ಥಿಕತೆಯ ಮೇಲೆ ಕಾನೂನುಬಾಹಿರ ನಿರ್ಬಂಧಗಳು ಮತ್ತು ಏಕಪಕ್ಷೀಯ ಕ್ರಮಗಳಿಂದ ಉಂಟಾಗುವ ಹಾನಿ ಬಗ್ಗೆ ನಾವು ಗಂಭೀರವಾಗಿ ಕಳವಳ ವ್ಯಕ್ತಪಡಿಸುತ್ತೇವೆ. ಇವು ಯುಎನ್ ಚಾರ್ಟರ್ ಉಲ್ಲಂಘನೆಗೆ ಸಮಾನವಾಗಿದ್ದು, ವ್ಯಾಪಾರ ವ್ಯವಸ್ಥೆ, ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಒಪ್ಪಂದಗಳನ್ನು ದುರ್ಬಲಗೊಳಿಸುತ್ತವೆ. ಇವು ಆರ್ಥಿಕ ಬೆಳವಣಿಗೆ, ಆರೋಗ್ಯ ಮತ್ತು ಆಹಾರ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಮಾತ್ರವಲ್ಲ, ಬಡತನವನ್ನೂ ಹೆಚ್ಚಿಸಿ ಪರಿಸರ ಸವಾಲುಗಳನ್ನು ಮತ್ತಷ್ಟು ಗಂಭೀರಗೊಳಿಸುತ್ತವೆ,” ಎಂದು ಉಲ್ಲೇಖಿಸಲಾಗಿದೆ.