10 ಕುಟುಂಬಗಳಲ್ಲಿ 4 ಕುಟುಂಬಗಳು ಧೂಮಪಾನ ಚಟದಿಂದ ತತ್ತರ!; ಸಮೀಕ್ಷೆ

0
64

ಸನ್ಮಾರ್ಗ ವಾರ್ತೆ

ನವದೆಹಲಿ: ದೇಶದಲ್ಲಿ ತಂಬಾಕು ಬಳಕೆಯು ತೀವ್ರವಾಗಿ ಹೆಚ್ಚುತ್ತಿದ್ದು, 10 ಕುಟುಂಬಗಳಲ್ಲಿ ನಾಲ್ಕು ಕುಟುಂಬಗಳು ಧೂಮಪಾನ ಚಟದಿಂದ ತತ್ತರಿಸುತ್ತಿವೆ ಎಂದು ವರದಿಯಾಗಿದೆ.

ಶನಿವಾರ ಬಿಡುಗಡೆಯಾದ ವರದಿ ಪ್ರಕಾರ, 65% ಆರೋಗ್ಯ ವೃತ್ತಿಪರರು ತಂಬಾಕು ನಾಶವನ್ನು ತಡೆಯಲು ಸುರಕ್ಷಿತ ಮತ್ತು ಹೊಸ ಪರ್ಯಾಯಗಳ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೈಜೆನ್ ಗ್ಲೋಬಲ್ ಇನ್‌ಸೈಟ್ಸ್ ಮತ್ತು ಕನ್ಸಲ್ಟಿಂಗ್ ಸಹಯೋಗದಲ್ಲಿ ಡಾಕ್ಟರ್ಸ್ ಎಗೇನ್ಸ್ಟ್ ಅಡಿಕ್ಷನ್ (DAAD) ನಡೆಸಿದ ಸಮೀಕ್ಷೆಯಲ್ಲಿ, 65% ವೈದ್ಯರು ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ ಮತ್ತು ಹೀಟ್-ನಾಟ್-ಬರ್ನ್ ಉತ್ಪನ್ನಗಳಂತಹ ಸುರಕ್ಷಿತ ಪರ್ಯಾಯಗಳೇ ಸೂಕ್ತ ಎಂದಿದ್ದು ಈ ಬಗ್ಗೆ ಹೆಚ್ಚಿನ ಸಂಶೋಧನೆಯ ಅಗತ್ಯ ಇದೆ ಎಂದು ಒತ್ತಿ ಹೇಳಿದರು.

ದೇಶದಲ್ಲಿ ವರ್ಷಕ್ಕೆ 9,30,000 ಕ್ಕೂ ಹೆಚ್ಚು ಸಾವುಗಳಿಗೆ ತಂಬಾಕು ಕಾರಣವಾಗುತ್ತಿದ್ದು, ಧೂಮಪಾನ ಸಂಬಂಧಿತ ಕಾಯಿಲೆಗಳಿಂದ ಪ್ರತಿದಿನ 2,500 ಕ್ಕೂ ಹೆಚ್ಚು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಸರ್ ಗಂಗಾ ರಾಮ್ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ. ಮೊಹ್ಸಿನ್ ವಾಲಿ ಹೇಳುವಂತೆ, “ತಂಬಾಕು ಚಟವು ದೇಶದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸವಾಲಾಗಿದೆ. ತಂಬಾಕು ತ್ಯಜಿಸುವ ಬದಲು, ವೈಜ್ಞಾನಿಕವಾಗಿ ಸುರಕ್ಷಿತ ಪರ್ಯಾಯಗಳಿಗೆ ಆದ್ಯತೆ ನೀಡುವ ಮೂಲಕ ಜೀವ ಉಳಿಸುವ ಮಹತ್ವದ ಕಾರ್ಯ ನಡೆಯಬೇಕು ಎಂದು ಹೇಳಿದರು.

DAAD ನ ಮುಖ್ಯ ಸಂಯೋಜಕರಾದ ಡಾ. ಮನೀಶ್ ಶರ್ಮಾ ಅವರ ಪ್ರಕಾರ, “ಭಾರತದ ತಂಬಾಕು ಬಿಕ್ಕಟ್ಟು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಧೂಮಪಾನ ತೊರೆಯಲು ಸಾಬೀತಾಗಿರುವ ವೈಜ್ಞಾನಿಕ ಪರಿಹಾರಗಳಿಗೆ ಆದ್ಯತೆ ಕೊಡಬೇಕು” ಎಂದರು.

300 ಆರೋಗ್ಯ ವೃತ್ತಿಪರರನ್ನು ಒಳಗೊಂಡ ಸಮೀಕ್ಷೆಯಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಮಂದಿ ವ್ಯಸನದ ತೀವ್ರತೆಯನ್ನು ಒತ್ತಿ ಹೇಳಿದ್ದು, ತಂಬಾಕು ತೊರೆಯಲು ಪ್ರೇರಣೆಯ ಕೊರತೆಯೇ ಕಾರಣ ಎಂದು ಉಲ್ಲೇಖಿಸಿದ್ದಾರೆ.

ತಂಬಾಕು ವ್ಯಸನವನ್ನು ತೊಡೆದು ಹಾಕಲು ಬಹುಮುಖಿ ಪರಿಹಾರಗಳು ಅವಶ್ಯಕ. ಧೂಮಪಾನ ತೊರೆಯಲು ಸುರಕ್ಷಿತ ಮತ್ತು ಹೊಸ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸಂಪನ್ಮೂಲಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಜನರ ಜ್ಞಾನವನ್ನು ಹೆಚ್ಚಿಸಬೇಕು ಎಂದು ಹೊಸದಿಲ್ಲಿಯ BLK-Max ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಹಿರಿಯ ಸಲಹೆಗಾರ ಡಾ. ಪವನ್ ಗುಪ್ತಾ ಹೇಳಿದರು.