ಮುಸ್ಲಿಂ ಯುವಕನ ಗುಂಪು ಹತ್ಯೆ; ಹಸುವಿನ ಮಾಂಸವಲ್ಲ ಎಂದ ಲ್ಯಾಬ್ ವರದಿ

0
190

ಸನ್ಮಾರ್ಗ ವಾರ್ತೆ

ಹರ್ಯಾಣ: ದನ ಸಾಗಿಸುತ್ತಿದ್ದ ಶಂಕೆಯ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಗೋರಕ್ಷಕರು ಹತ್ಯೆ ಮಾಡಿದ ಪ್ರಕರಣದ ಮಹತ್ವದ ಮಾಹಿತಿ ಹೊರ ಬಂದಿದ್ದು, ಹನ್ಸಾವಾಸ್ ಖುರ್ದ್ ಗ್ರಾಮದ ಗುಡಿಸಲುಗಳಿಂದ ಪಡೆದ ಮಾಂಸ ಸ್ಯಾಂಪಲ್‌ಗಳಲ್ಲಿ ಹಸುವಿನ ಮಾಂಸದ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಫರಿದಾಬಾದ್ ಲ್ಯಾಬ್‌ನ ಅಂತಿಮ ವರದಿ ದೃಢಪಡಿಸಿದೆ.

“ಪೊಲೀಸರು ಶೀಘ್ರದಲ್ಲೇ ಎಲ್ಲಾ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ” ಎಂದು ಡಿಎಸ್ಪಿ ಭರತ್ ಭೂಷಣ್ ಭರವಸೆ ನೀಡಿದ್ದಾರೆ.

ಯುವಕನನ್ನು ಹತ್ಯೆಗೈದ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಆರು ಶಂಕಿತರು ತಲೆಮರೆಸಿಕೊಂಡಿದ್ದಾರೆ.

ಆಗಸ್ಟ್ 27ರಂದು ಈ ಘಟನೆ ನಡೆದಿದ್ದು, ನಿಷೇಧಿತ ಪ್ರಾಣಿಗಳ ಮಾಂಸವನ್ನು ಅಡುಗೆ ಮಾಡಿದ್ದಾರೆ ಎಂಬ ಶಂಕೆಯ ಮೇರೆಗೆ ಪಶ್ಚಿಮ ಬಂಗಾಳದ ಯುವಕ ಸಬೀರ್ ಮಲಿಕ್ ಎಂಬ ಯುವಕನನ್ನು ಗೋರಕ್ಷಕರು ಎನ್ನಲಾದ ಗುಂಪು ಹತ್ಯೆ ನಡೆಸಿದ್ದು, ಹನ್ಸಾವಾಸ್ ಖುರ್ದ್ ಬಳಿ ಮೃತದೇಹ ಪತ್ತೆಯಾಗಿತ್ತು.

ಪ್ರಕರಣದ ತೀವ್ರತೆ ಹೆಚ್ಚಿದ ನಂತರ, ವಲಸೆ ಕಾರ್ಮಿಕರ ಗುಡಿಸಲುಗಳಿಂದ ಪೋಲಿಸರು ಮಾಂಸದ ಮಾದರಿಗಳನ್ನು ಸಂಗ್ರಹಿಸಿ ಫರಿದಾಬಾದ್ ಲ್ಯಾಬ್‌ಗೆ ಕಳುಹಿಸಿದರು. ವರದಿ ಪ್ರಕಾರ, ಅದರಲ್ಲಿ ಯಾವುದೇ ಸಂರಕ್ಷಿತ ಪ್ರಾಣಿಯ ಅಥವಾ ಗೋವಿನ ಮಾಂಸದ ಪುರಾವೆ ಇಲ್ಲ ಎಂದು ದೃಢಪಟ್ಟಿದೆ.

“ಸಬೀರ್ ಮಲಿಕ್ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ಈಗಾಗಲೇ ಬಂಧಿಸಿದ್ದೇವೆ, ಇನ್ನೂ ಆರು ಮಂದಿಯನ್ನು ಬಂಧಿಸಲು ಬಾಕಿಯಿದೆ. ಫರಿದಾಬಾದ್ ಲ್ಯಾಬ್ ವರದಿಯ ಪ್ರಕಾರ, ಮಾಂಸ ಹಸುವಿನದಲ್ಲ ಎಂದು ದೃಢಪಟ್ಟಿದ್ದು, ಶೀಘ್ರದಲ್ಲೇ ನಾವು ಪ್ರಕರಣವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ.” ಎಂದು ಡಿಎಸ್ಪಿ ಭರತ್ ಭೂಷಣ್ ಹೇಳಿದರು.