ಅರ್ಚಕನಿಂದ 5 ವರ್ಷದ ದಲಿತ ಬಾಲಕಿಯ ಅತ್ಯಾಚಾರ; ತ್ವರಿತ ಶಿಕ್ಷೆ ವಿಧಿಸಿದ ನ್ಯಾಯಾಲಯ

0
373

ಸನ್ಮಾರ್ಗ ವಾರ್ತೆ

ಅಲೀಗಢ: 5 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ದೇವಾಲಯದ ಅರ್ಚಕ, 50 ವರ್ಷ ವಯಸ್ಸಿನ ಜಮುನಾ ದಾಸ್‌ಗೆ 20 ವರ್ಷಗಳ ಜೈಲು ಶಿಕ್ಷೆಯನ್ನು ಅಲೀಗಢ ಸ್ಥಳೀಯ ನ್ಯಾಯಾಲಯ ವಿಧಿಸಿದೆ.

ಸೆಪ್ಟೆಂಬರ್ 25 ರಂದು ಔಪಚಾರಿಕ ಆರೋಪಗಳನ್ನು ಸಲ್ಲಿಸಿದ ನಂತರ ಕೇವಲ 30 ದಿನಗಳಲ್ಲಿ ತ್ವರಿತ ನ್ಯಾಯವನ್ನು ನೀಡಲಾಗಿದ್ದು, ಮಾತ್ರವಲ್ಲದೆ ನ್ಯಾಯಾಲಯವು ಅಪರಾಧಿಗೆ ರೂ. 50,000 ದಂಡ ವಿಧಿಸಿದೆ.

ಜುಲೈ 3 ರಂದು ಸಂತ್ರಸ್ತ ಮಗುವಿನ ಅಜ್ಜ ಎಫ್‌ಐಆರ್ ದಾಖಲಿಸಿದ್ದು, ಅದರಲ್ಲಿ 5 ವರ್ಷದ ಬಾಲಕಿ ತನ್ನ 8 ವರ್ಷದ ಸಹೋದರನೊಂದಿಗೆ ಅರ್ಚಕನ ನಿವಾಸದ ಹತ್ತಿರದ ದೇವಸ್ಥಾನಕ್ಕೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಬಾಲಕಿಯನ್ನು ಗಮನಿಸಿದ ಅರ್ಚಕ, 10 ರೂ. ನೀಡುವ ಆಮಿಷವೊಡ್ಡಿ ಆಕೆಯನ್ನು ತನ್ನ ಕೋಣೆಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಬಾಲಕಿಯ ಸಹೋದರ ಈ ಘಟನೆಯನ್ನು ತನ್ನ ಕುಟುಂಬಕ್ಕೆ ತಿಳಿಸಿದ್ದು, ಇದರಿಂದ ಕುಟುಂಬವು ಗ್ರಾಮಸ್ಥರೊಂದಿಗೆ ಅರ್ಚಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.

ನಂತರ, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು ಆರೋಪಿಯನ್ನು ಬಂಧಿಸಿ, ಭಾರತೀಯ ದಂಡ ಸಂಹಿತೆ, ಮಕ್ಕಳ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಂತೆ ಕಠಿಣ ಕಾನೂನುಗಳ ಅಡಿಯಲ್ಲಿ ಆರೋಪಗಳನ್ನು ಸಾದರಪಡಿಸಲಾಯಿತು.

ನ್ಯಾಯಾಲಯವು ಸಾಕ್ಷ್ಯಗಳನ್ನು ಕೇಳಿ, ಒಂದು ತಿಂಗಳಲ್ಲಿ ಅವುಗಳನ್ನು ಪರಿಶೀಲಿಸುವ ಮೂಲಕ ವಿಚಾರಣೆಯನ್ನು ತ್ವರಿತವಾಗಿ ಮುಗಿಸಿತು. “ಚಾರ್ಜ್‌ಶೀಟ್‌ ಆಧರಿಸಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಪೋಕ್ಸೊ) ಸುರೇಂದ್ರ ಮೋಹನ್ ಸಹಾಯ್ ಅವರು ಆರೋಪಗಳನ್ನು ಸಾದರಪಡಿಸಿದ್ದು, ತ್ವರಿತ ವಿಚಾರಣೆ ನಡೆಸಿದರು” ಎಂದು ವಿಶೇಷ ಸಾರ್ವಜನಿಕ ವಕೀಲ ಮಹೇಶ್ ಸಿಂಗ್ TOI ಗೆ ತಿಳಿಸಿದರು.