ಶೇಮ್ ಆನ್ ಯು ಎಂದು ಕೂಗಿದ ಇಸ್ರೇಲಿ ನಾಗರಿಕರು: ಭಾಷಣ ನಿಲ್ಲಿಸಿದ ಪ್ರಧಾನಿ ನೇತನ್ಯಾಹು

0
358

ಸನ್ಮಾರ್ಗ ವಾರ್ತೆ

ಇಸ್ರೇಲಿ ನಾಗರಿಕರ ಭಾರಿ ಪ್ರತಿಭಟನೆಯಿಂದಾಗಿ ಪ್ರಧಾನಿ ನೆತನ್ಯಾಹು ತನ್ನ ಭಾಷಣವನ್ನೇ ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ. 2023 ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಗೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ನೇತನ್ಯಾಹು ಭಾಷಣ ಮಾಡುತ್ತಿದ್ದರು. ಆದರೆ ಸಂತ್ರಸ್ತ ಕುಟುಂಬ ಅವರ ವಿರುದ್ಧ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ ಕಾರಣ ಅವರು ಭಾಷಣವನ್ನು ಸ್ವಲ್ಪ ಸಮಯ ನಿಲ್ಲಿಸಬೇಕಾಗಿ ಬಂತು.

ಈ ಪ್ರತಿಭಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ. ನನ್ನ ತಂದೆ ಹತ್ಯೆಗೀಡಾಗಿದ್ದಾರೆ, ನಿಮ್ಮ ಬಗ್ಗೆ ನಮಗೆ ನಾಚಿಕೆಯಾಗುತ್ತಿದೆ ಎಂದು ನೇತನ್ಯಾಹು ಅವರ ಭಾಷಣದ ನಡುವೆ ಯುವಕನೋರ್ವ ಘೋಷಣೆ ಕೂಗುವುದು ವಿಡಿಯೋದಲ್ಲಿ ಕಾಣಿಸುತ್ತಿದೆ. ಈ ಸಭೆಯಲ್ಲಿ ಭಾಷಣ ಮಾಡಲು ನೇತನ್ಯಾಹು ಎದ್ದು ನಿಲ್ಲುತ್ತಿರುವಾಗಲೇ ಶೇಮ್ ಆನ್ ಯು ಎಂಬ ಘೋಷಣೆ ದೊಡ್ಡ ಮಟ್ಟದಲ್ಲಿ ಕೇಳಿಸಿತು.

ಇಸ್ರೇಲಿ ನಾಗರಿಕರಿಗೆ ರಕ್ಷಣೆ ಒದಗಿಸುವಲ್ಲಿ ನೇತನ್ಯಾಹು ವಿಫಲರಾಗಿದ್ದಾರೆ, ಹಮಾಸ್ ಒತ್ತೆಯಳಾಗಿ ಇಟ್ಟುಕೊಂಡವರನ್ನು ಬಿಡಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಝಾದ ಮೇಲಿನ ಧಾಳಿಗೆ ಒಂದು ವರ್ಷ ಕಳೆದಿದೆ, ಆದರೆ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಸೆಪ್ಟೆಂಬರ್ 7ರಂದು ಇಸ್ರೆಲ್ ಮೇಲೆ ಹಮಾಸ್ ದಾಳಿ ನಡೆಸಿತು. ಆದರೆ ಆ ದಾಳಿಯನ್ನು ತಡೆಯುವುದಕ್ಕೆ ಮತ್ತು ಸಾವಿರಕ್ಕಿಂತಲೂ ಅಧಿಕ ಮಂದಿಯ ಸಾವನ್ನು ತಡೆಯುವುದಕ್ಕೆ ನೇತನ್ಯಾಹು ಅವರಿಂದ ಸಾಧ್ಯವಾಗಿಲ್ಲ, ಇದು ಗಂಭೀರ ವೈಫಲ್ಯ ಎಂದು ಪ್ರತಿಭಟನಾಕಾರರು ದೂಷಿಸಿದ್ದಾರೆ