ಬಿಜೆಪಿ 10 ವರ್ಷಗಳಿಂದ ಅಧಿಕಾರದಲ್ಲಿದ್ದೂ ಹಿಂದೂ ಅಪಾಯದಲ್ಲಿರುವುದೇಕೆ?

0
242

ಸನ್ಮಾರ್ಗ ಸಂಪಾದಕೀಯ

ಬಿಜೆಪಿ ಮತ್ತು ಅವರ ಬೆಂಬಲಿಗ ಪಡೆ ಹರಡುತ್ತಾ ಇರುವ ಸುಳ್ಳುಗಳು ಸಮಾಜದ ಮೇಲೆ ಯಾವ ರೀತಿಯಲ್ಲಿ ಪ್ರಭಾವ  ಬೀರುತ್ತಿದೆ ಅನ್ನುವುದಕ್ಕೆ ವಿಜಯಪುರ ಜಿಲ್ಲೆಯ ಹೊನವಾಡ ಗ್ರಾಮವೇ ಸಾಕ್ಷಿ. ಈ ಗ್ರಾಮದ 15 ಸಾವಿರ ಎಕ್ರೆ ಭೂಮಿಯನ್ನು ಸರಕಾರ ವಕ್ಫ್ ಇಲಾಖೆಗೆ ಬರೆದು ಕೊಡಲು ಹೊರಟಿದೆ ಎಂಬ ಸುಳ್ಳನ್ನು ಸಂಸದ ತೇಜಸ್ವಿ ಸೂರ್ಯ, ಶಾಸಕ  ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಇತರರು ಹಬ್ಬಿಸಿದ್ದಾರೆ. ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಈ  ವಿಜಯಪುರಕ್ಕೆ ಭೇಟಿ ಕೊಟ್ಟು ವಕ್ಫ್ ಅದಾಲತ್‌ನಲ್ಲಿ ಭಾಗಿಯಾದುದು ಮತ್ತು ವಕ್ಫ್ ಭೂಮಿಯ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನೇ ಬಿಜೆಪಿ ನಾಯಕರು ತಮ್ಮ ಸುಳ್ಳಿನ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ. ಇದನ್ನು  ನಂಬಿದ ಸ್ಥಳೀಯ ರೈತರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಕಂದಾಯ ಇಲಾಖೆಯಿಂದ ನೋಟೀಸು ಬಂದಿದ್ದು, ಅದರಲ್ಲಿ ವಕ್ಫ್ ಬೋರ್ಡ್ ಬೆಂಗಳೂರು ಎಂದು ಬರೆದಿರುವುದಾಗಿ ಅವರು ಹೇಳಿದ್ದಾರೆ. ರೈತರನ್ನು ಹೀಗೆ  ಪ್ರಚೋದಿಸಿದ ಬಿಜೆಪಿ, ಸರಣಿ ಹೇಳಿಕೆಗಳನ್ನೂ ನೀಡಿ ರೈತರ ಭೂಮಿ ವಕ್ಫ್ ಪಾಲಾಗಲಿದೆ ಎಂಬ ಭೀತಿಯನ್ನು ಹುಟ್ಟು  ಹಾಕಿದೆ. ಇದಾದ ಬಳಿಕ ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ. ‘ಯಾವುದೇ ರೈತರಿಗೆ ಸರಕಾರ ನೋಟೀಸು ನೀಡಿಲ್ಲ’  ಎಂದು ಅವರು ಹೇಳಿದ್ದಾರೆ. ಕಂದಾಯ ಇಲಾಖೆಗೆ ಜಮೀನು ವರ್ಗಾವಣೆ ಮಾಡುವ ಅಧಿಕಾರವೇ ಇಲ್ಲ ಎಂದೂ ಅವರು  ಹೇಳಿದ್ದಾರೆ. ಇನ್ನು, ಯಾರಿಗೇ ಆಗಲಿ ನೋಟೀಸು ಬರುವುದು ಅಪರಾಧ ಅಲ್ಲ, ನಿಮ್ಮಲ್ಲಿರುವ ದಾಖಲೆಯನ್ನು ಮಂಡಿಸಿ  ಭೂಮಿಯ ಒಡೆತನವನ್ನು ಜಾಹೀರುಪಡಿಸಿದರೆ ಎಲ್ಲವೂ ಮುಗಿಯುತ್ತದೆ…  ಎಂದವರು ಹೇಳಿದ್ದಾರೆ. ಇದರ ಬೆನ್ನಿಗೇ ಸಚಿವ  ಎಂ.ಬಿ. ಪಾಟೀಲ್ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಹೊನವಾಡದಲ್ಲಿ 11 ಎಕ್ರೆ ವಕ್ಫ್ ಭೂಮಿ ಮಾತ್ರವೇ ಇದ್ದು, ಇದರ ಪೈಕಿ 10  ಎಕ್ರೆ ಜಾಗದಲ್ಲಿ ಕಬರಸ್ತಾನ ಮತ್ತು ಮಸೀದಿಗಳಿವೆ ಎಂದೂ ಅವರು ಹೇಳಿದ್ದಾರೆ.

ಅಂದಹಾಗೆ, ಹೊನವಾಡ ಎಂಬ ಗ್ರಾಮದಲ್ಲಿ 15 ಸಾವಿರ ಎಕರೆ ಭೂಮಿ ಇರುವುದೇ ಅನುಮಾನ. ಯಾವುದೇ ಗ್ರಾಮ 15  ಸಾವಿರ ಎಕರೆಯಷ್ಟು ವಿಸ್ತಾರವಾಗುವುದಕ್ಕೆ ಸಾಧ್ಯವೂ ಇಲ್ಲ. ಇನ್ನು, ಅಕ್ಕಪಕ್ಕದ ಪ್ರದೇಶಗಳನ್ನೆಲ್ಲ ಸೇರಿಸಿಕೊಂಡೇ ಈ ಹೊನವಾಡ ಗ್ರಾಮವನ್ನು ಲೆಕ್ಕ ಹಾಕಿದರೂ 15 ಸಾವಿರ ಎಕ್ರೆ ಭೂಮಿ ಇರುವುದು ಕಷ್ಟಸಾಧ್ಯ. ಬಿಜೆಪಿಯ ಆರೋಪಗಳು  ಎಂದೂ ವಾಸ್ತವವನ್ನು ಆಧರಿಸಿ ಇರುವುದಿಲ್ಲ ಅನ್ನುವುದಕ್ಕೆ ಇದೊಂದು ಸಾಕ್ಷ್ಯ  ಅಷ್ಟೇ. ಈಗಿನ ಸಿದ್ದರಾಮಯ್ಯ ಸರಕಾರಕ್ಕಿಂತ  ಮೊದಲು ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು. ಆಗಲೂ ಈ ಹೊನವಾಡ ಗ್ರಾಮ ಇತ್ತು ಮತ್ತು ವಕ್ಫ್ ಇಲಾಖೆ, ಕಂದಾಯ  ಇಲಾಖೆ ಮತ್ತು ಜಿಲ್ಲಾಧಿಕಾರಿ ಕಚೇರಿಯೂ ಇತ್ತು. ಅಲ್ಲದೇ, ಹೊನವಾಡದಲ್ಲಿ ಎಷ್ಟು ವಕ್ಫ್ ಭೂಮಿ ಇದೆ ಎಂಬ ಬಗ್ಗೆ  ಆಗಲೇ ಗಜೆಟೆಡ್ ವರದಿಯೂ ಇತ್ತು. ಒಂದುವೇಳೆ, ರೈತರ ಭೂಮಿಯನ್ನು ವಕ್ಫ್ ಇಲಾಖೆ ಕಬಳಿಸುತ್ತಿದೆ ಎಂದಾದರೆ,  ಅದನ್ನು ಆಗಲೇ ತಡೆಯಬಹುದಿತ್ತಲ್ಲವೇ? ಹೊನವಾಡ ಸಹಿತ ಇಡೀ ವಿಜಯಪುರದಲ್ಲಿ ಎಷ್ಟು ವಕ್ಫ್ ಭೂಮಿಯಿದೆಯೋ  ಅವು ಯಾವುವೂ ಸಿದ್ದರಾಮಯ್ಯ ಸರಕಾರ ಬಂದ ಬಳಿಕ ದಿಢೀರನೇ ಉದ್ಭವವಾಗಿರುವುದೇನಲ್ಲವಲ್ಲ. ರಾತ್ರಿ  ಬೆಳಗಾಗುವುದರೊಳಗಾಗಿ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಘೋಷಿಸಲು ಸಾಧ್ಯವೂ ಇಲ್ಲವಲ್ಲ. ಒಂದು ಆಸ್ತಿ  ವಕ್ಫ್ ಆಸ್ತಿಯಾಗಿ ನೋಂದಾಯಿತವಾಗಬೇಕಾದರೆ ನಿರ್ದಿಷ್ಟ ಕಾನೂನು ನಿಯಮಗಳಿವೆ. ಯಾರೇ ಆಗಲಿ, ಒಂದು ಜಮೀನಿನಲ್ಲಿ ನಿಂತು, ಇದು ವಕ್ಫ್ ಜಮೀನು ಅಂದರೆ ಅದು ವಕ್ಫ್ ಆಸ್ತಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಹೀಗಿರುವಾಗ,

 2019ರಿಂದ  2023ರ ವರೆಗೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಗೆ ಹೊನವಾಡದ ಸಂಗತಿ ಗೊತ್ತಿರಲಿಲ್ಲವೇ? ಅಲ್ಲಿ 15 ಸಾವಿರ ಎಕ್ರೆ  ಭೂಮಿಯಿದೆ ಎಂದು ವಕ್ಫ್ ಇಲಾಖೆ ಹೇಳುತ್ತಿದೆಯೆಂದಾಗಿದ್ದರೆ ಮತ್ತು ಈ ಭೂಮಿಯೆಲ್ಲಾ ರೈತರದ್ದು ಎಂದಾಗಿದ್ದರೆ  ಯಾಕೆ ಬೊಮ್ಮಾಯಿ ಆಗಲಿ ಯಡಿಯೂರಪ್ಪರಾಗಲಿ ಕ್ರಮ ಕೈಗೊಳ್ಳಲಿಲ್ಲ? ಆಗ ಇಲ್ಲದೇ ಇರುವ ಸಮಸ್ಯೆ ಈಗ ದಿಢೀರನೇ  ಹುಟ್ಟಿಕೊಂಡದ್ದು ಹೇಗೆ?

ನಿಜವಾಗಿ, ಬಿಜೆಪಿ ಭಾವನಾತ್ಮಕ ವಿಷಯದ ಕೊರತೆಯಿಂದ ಬಳಲುತ್ತಿದೆ. ಈ ಮೊದಲು ಬಾಬರಿ ಮಸೀದಿಯಿತ್ತು. ಅದು  ಮುಕ್ತಾಯಗೊಂಡ ಬಳಿಕ ಇಡೀ ಭಾರತವನ್ನು ಏಕಪ್ರಕಾರವಾಗಿ ಪ್ರಭಾವಿಸಬಲ್ಲ ಭಾವನಾತ್ಮಕ ವಿಷಯದ ಕೊರತೆ ಅದಕ್ಕೆ  ಎದುರಾಯಿತು. ಉತ್ತರ ಭಾರತದಲ್ಲಿ ಒಂದೆರಡು ಮಸೀದಿಗಳನ್ನು ಆ ಬಳಿಕ ಮುನ್ನೆಲೆಗೆ ತರಲಾಯಿತು. ಆದರೆ,  ಅದು ಬಾಬರಿ ಮಸೀದಿ ರೀತಿಯಲ್ಲಿ ದೇಶದ ಜನರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದರಲ್ಲಿ  ಸೋಲುಂಡಿತು.  ಬಹುತೇಕ ಉತ್ತರ ಭಾರತದ ಸ್ಥಳೀಯ ಸಂಗತಿಯಾಗಿ ಅದು ಮಾರ್ಪಟ್ಟ ಕಾರಣ ಬಿಜೆಪಿ ಅನ್ಯ ಸಂಗತಿಗಳತ್ತ ಕೈ  ಹಾಕಲೇಬೇಕಾಯಿತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗಾದ ಹಿನ್ನಡೆಯು, ಇನ್ನು ಮುಂದೆ ಮಂದಿರ  ಮಸೀದಿಗಳು ಮತ ತಂದುಕೊಡಲ್ಲ ಅನ್ನುವುದನ್ನು ಬಿಜೆಪಿಗೆ ಮನವರಿಕೆ ಮಾಡಿಸಿತು. ಆದರೆ, ಹಿಂದೂಗಳನ್ನು ಸದಾ  ಭಯದ ನೆರಳಲ್ಲಿ ಉಳಿಸುವುದರಲ್ಲೇ  ತಮ್ಮ ಅಧಿಕಾರದ ಗುಟ್ಟು ಇದೆ ಎಂಬುದು ಬಿಜೆಪಿಗೆ ಗೊತ್ತು. ಮುಸ್ಲಿಮರನ್ನು  ಹಿಂದೂಗಳ ವೈರಿಗಳು ಎಂದು ಬಿಂಬಿಸುವುದನ್ನೇ ಬಿಜೆಪಿ ರಾಜಕೀಯ ತಂತ್ರವಾಗಿಸಿಕೊಂಡಿದೆ. ಆದ್ದರಿಂದಲೇ, ಈ ವಕ್ಫ್  ವಿಷಯವನ್ನು ಅದು ಮುನ್ನೆಲೆಗೆ ತಂದಿದೆ. ವಕ್ಫ್ ಆಸ್ತಿ ಎಂಬುದು ಮುಸ್ಲಿಮರು ಎಲ್ಲೆಲ್ಲ ಇದ್ದಾರೋ ಅಲ್ಲೆಲ್ಲಾ  ಇರುವುದರಿಂದ ಬಾಬರಿ ಮಸೀದಿಯಂತೆ ಇಡೀ ದೇಶವನ್ನೇ ಈ ವಿಷಯದ ಮೂಲಕ ಪ್ರಭಾವಿಸಬಹುದು ಎಂದು ಅದು  ಭಾವಿಸಿದಂತಿದೆ. ಇದು ಮುಗಿದರೆ ಸಮಾನ ನಾಗರಿಕ ಸಂಹಿತೆಯನ್ನು ಬಿಜೆಪಿ ಎತ್ತಿಕೊಳ್ಳುವ ಸಾಧ್ಯತೆಯೂ ಇದೆ.

ವಕ್ಫ್ ಕಾಯ್ದೆಯ ಬಗ್ಗೆ ಮತ್ತು ವಕ್ಫ್ ಟ್ರಿಬ್ಯೂನಲ್ ಬಗ್ಗೆ ಈಗಾಗಲೇ ಬಿಜೆಪಿ ರಾಷ್ಟ್ರಾದ್ಯಂತ ತನ್ನ ಐಟಿ ಸೆಲ್ ಮೂಲಕ  ಸುಳ್ಳುಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡುತ್ತಿದೆ. ವಕ್ಫ್ ಟ್ರಿಬ್ಯೂನಲ್‌ನ ಅಗತ್ಯ ಏನು ಎಂದು ಅದು ಪ್ರಶ್ನಿಸುತ್ತಿದೆ. ಜಮೀನು ವಿವಾದವನ್ನು ಸಾಮಾನ್ಯ ಸಿವಿಲ್ ಕೋರ್ಟ್ ಗಳಲ್ಲೇ  ಪರಿಹರಿಸಬಾರದೇ ಎಂದೂ ಜನರನ್ನು ಗೊಂದಲಕ್ಕೆ ದೂಡುತ್ತಿದೆ. 

ಅಂದಹಾಗೆ, ಆರಂಭದಲ್ಲಿ ವಕ್ಫ್ ವಿವಾದವು ಸಾಮಾನ್ಯ ಸಿವಿಲ್ ನ್ಯಾಯಾಲಯಗಳಲ್ಲೇ  ವಿಚಾರಣೆಗೆ ಒಳಗಾಗುತ್ತಿತ್ತು. ಆದರೆ, ನ್ಯಾಯ  ವಿತರಣೆಯಲ್ಲಾಗುವ ವಿಳಂಬವನ್ನು ಪರಿಗಣಿಸಿ ಸರಕಾರಗಳೇ ವಕ್ಫ್ ಟ್ರಿಬ್ಯೂನಲ್ ಅನ್ನು ರಚಿಸಿವೆ. ಇದರ ನ್ಯಾಯಾಧೀಶರು ಮುಸ್ಲಿಂ ಧರ್ಮಗುರುಗಳೋ ಕಾಜಿಗಳೋ ಅಲ್ಲ.  ಹೈಕೋರ್ಟು ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರೇ ಇಲ್ಲೂ ನ್ಯಾಯಾಧೀಶರಾಗಿರುತ್ತಾರೆ. ಹಾಗಂತ, ಈ ಟ್ರಿಬ್ಯೂನಲ್‌ನಲ್ಲಿ  ಯಾವ ತೀರ್ಪು ಬರುತ್ತೋ ಅದುವೇ ಅಂತಿಮವಲ್ಲ. ಅಲ್ಲಿಂದ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ಗೆ  ಹೋಗುವ  ಅವಕಾಶ ಕಕ್ಷಿದಾರರಿಗೆ ಇದ್ದೇ  ಇದೆ. ಆದರೆ ಬಿಜೆಪಿ ಈ ಸತ್ಯವನ್ನು ಅಡಗಿಸಿಟ್ಟು ಅಪಪ್ರಚಾರದಲ್ಲಿ ನಿರತವಾಗಿದೆ. ಈ ದೇಶದಲ್ಲಿ ಟ್ರಿಬ್ಯೂನಲ್ ಎಂಬುದು ವಕ್ಫ್ ಗೆ  ಸಂಬಂಧಿಸಿ ಮಾತ್ರವೇ ಇದೆ ಎಂಬಂತೆ  ಬಿಂಬಿಸುತ್ತಿದೆ. ನಿಜವಾಗಿ, ಅಸ್ಸಾಮ್‌ನ ಲ್ಲಿರುವ ಫಾರಿನರ್ಸ್ ಟ್ರಿಬ್ಯೂನಲ್ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ಟ್ರಿಬ್ಯೂನಲ್‌ಗಳಿವೆ. ಕಾನೂನು ಪ್ರಕ್ರಿಯೆ  ಸುಲಭ ಮತ್ತು ಶೀಘ್ರಗೊಳಿಸುವುದಕ್ಕಾಗಿ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ಮಾಡಲಾಗುವ ವ್ಯವಸ್ಥೆ ಇದುವೇ ಹೊರತು  ಮುಸ್ಲಿಮರಿಗೆ ಮಾತ್ರ ರಚಿಸಲಾದ ವ್ಯವಸ್ಥೆ ಇದಲ್ಲ.

ಜನರನ್ನು ಭಾವನಾತ್ಮಕವಾಗಿ ಪೀಡಿಸುವುದೇ ಬಿಜೆಪಿಯ ರಾಜಕೀಯ ಮಂತ್ರ. ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು  ಸದಾ ಬಿಂಬಿಸುತ್ತಾ ಬರುವುದೇ ಅದರ ರಾಜಕೀಯ ತಂತ್ರ. ನಿಜವಾಗಿ, 20%ದಷ್ಟೂ ಇಲ್ಲದ ಸಮುದಾಯವೊಂದು  80%ದಷ್ಟಿರುವ ಬೃಹತ್ ಸಮುದಾಯದ ಪಾಲಿಗೆ ಅಪಾಯಕಾರಿಯಾಗಿದೆ ಎಂದು ಹೇಳುವುದೇ  80%ದಷ್ಟಿರುವ  ಸಮುದಾಯಕ್ಕೆ ಮಾಡುವ ಬಹುದೊಡ್ಡ ಅವಮಾನ. ಹೀಗೆ ಭಯವನ್ನು ಬಿತ್ತಿಯೇ ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ  ಬಿಜೆಪಿ ಅಧಿಕಾರದಲ್ಲಿದೆ. ಆದರೂ ಇನ್ನೂ ಭಯ ಹೊರಟು ಹೋಗಿಲ್ಲ ಎಂದರೆ, ಈ ಭಯ ವಾಸ್ತವವಲ್ಲ ಎಂದೇ ಅರ್ಥ.  ಇದು ರಾಜಕೀಯ ಲಾಭಕ್ಕಾಗಿ ಕೃತಕವಾಗಿ ಸೃಷ್ಟಿ ಮಾಡಲಾದ ಭಯ. ನಿಜಕ್ಕೂ ಈ ದೇಶದಲ್ಲಿ ಭಯದಲ್ಲಿ ಇರಬೇಕಾದವರು  ಮುಸ್ಲಿಮರು. ಯಾಕೆಂದರೆ, ಆಡಳಿತದಲ್ಲಿರುವ ಪಕ್ಷವೇ ಅವರ  ವಿರುದ್ಧ ಬಹಿರಂಗವಾಗಿಯೇ ನಿಂತಿರುವಾಗಲೂ ಅವರು ಭಯವನ್ನು ಹಂಚದೇ ಸುಮ್ಮನಿದ್ದಾರೆ. ಇದು ರಾಜಕೀಯ  ತಂತ್ರವೆಂದು  ಅವರಿಗೆ ಗೊತ್ತಿದೆ. ಆದರೆ ಬಿಜೆಪಿ ಹಿಂದೂಗಳನ್ನು ಪದೇ ಪದೇ ಮೂರ್ಖರನ್ನಾಗಿಸುವ ಪ್ರಯತ್ನ ನಡೆಸುತ್ತಲೇ  ಇದೆ.