ಧಾರ್ಮಿಕ ಪ್ರಚಾರಕಿ ಜಯ ಕಿಶೋರಿ ಕೈಯಲ್ಲಿ 2 ಲಕ್ಷ ರೂ. ಮೌಲ್ಯದ ಬ್ಯಾಗ್‌ ; ಹಸುವಿನ ಚರ್ಮದ ಬ್ಯಾಗ್ ಎಂದ ನೆಟ್ಟಿಗರು

0
365

ಸನ್ಮಾರ್ಗ ವಾರ್ತೆ

ದೇಶದ ಖ್ಯಾತ ಆಧ್ಯಾತ್ಮಿಕ ಪ್ರಚಾರಕಿ(spiritual preacher) ಮತ್ತು ಗಾಯಕಿ ಜಯ ಕಿಶೋರಿ ಇತ್ತೀಚಿನ ದಿನಗಳಲ್ಲಿ ತಮ್ಮ ಬ್ರಾಂಡೆಡ್ ಬ್ಯಾಗ್‌‌ನಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ.

ಸಾಂಸಾರಿಕ ತ್ಯಾಗ ಮತ್ತು ಭೌತಿಕ ಪ್ರಪಂಚದಿಂದ ದೂರವಿರುವಂತೆ ಉಪದೇಶ ನೀಡುವ ಜಯ ಕಿಶೋರಿ, ಕೆಲವು ದಿನಗಳ ಹಿಂದೆ, ಸುಮಾರು 2 ಲಕ್ಷ ರೂ. ಮೌಲ್ಯದ ‘ಕಸ್ಟಮೈಸ್‌ಡ್ ಡಿಯೊರ್ ಬ್ಯಾಗ್‌’ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ವಸ್ತ್ರಧಾರಣೆ ಮತ್ತು ಆಭರಣಗಳು ಗಮನ ಟೀಕೆಗೆ ಒಳಗಾಗಿದೆ. ಅವರ 2 ಲಕ್ಷದ ಮೌಲ್ಯದ ಬ್ಯಾಗ್ ಹಸುವಿನ ಚರ್ಮದಿಂದ ತಯಾರಿಸಲಾಗಿದೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಜಯ ಕಿಶೋರಿ ಅವರ ಐಷಾರಾಮಿ ಚೀಲ ಬಳಕೆಯ ವಿಡಿಯೋ ಚರ್ಚೆಯ ವಿಷಯವಾಗಿದ್ದು, ಇದೀಗ ಅವರು ವಿಡಿಯೋ ತೆಗೆದು ಹಾಕಿದ್ದಾರೆ .

X ಬಳಕೆದಾರ ವೀಣಾ ಜೈನ್ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾ, “ಜಯ ಕಿಶೋರಿ ತಮ್ಮ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿದ್ದಾರೆ. ಅವರು ಸ್ವತಃ ಅಭೌತಿಕತೆಯನ್ನು ಪ್ರಚಾರ ಮಾಡುತ್ತಿದ್ದು ಶ್ರೀಕೃಷ್ಣನ ಭಕ್ತ ಎಂದು ತೋರಿಸುತ್ತಿದ್ದರು. ಇನ್ನೊಂದು ವಿಷಯ, ಡಿಯೋರ್ ಬ್ಯಾಗ್ ಹಸುವಿನ ಚರ್ಮದಿಂದ ತಯಾರಿಸುತ್ತಾರೆ “ಎಂದು ಬರೆದುಕೊಂಡಿದ್ದಾರೆ.

“ಜಯ ಕಿಶೋರಿ ಭೌತಿಕತೆಯಿಂದ ದೂರವಿರಿ ಎಂದು ಬೋಧಿಸುತ್ತಾರೆ, ಆದರೆ ಸ್ವತಃ 2 ಲಕ್ಷ ಮೌಲ್ಯದ ಐಷಾರಾಮಿ ಚೀಲವನ್ನು ಬಳಸುತ್ತಾರೆ. ಬೋಧಕರು ಧರ್ಮವನ್ನು ಹಣ ಸಂಪಾದನೆಗೆ ಬಳಸುತ್ತಿದ್ದು, ಐಶಾರಾಮಿ ಜೀವನ ನಡೆಸುತ್ತಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರ ಟೀಕಿಸಿದ್ದಾರೆ.

ಈ ವಸ್ತ್ರಧಾರಣಾ ವಿವಾದದ ಹಿನ್ನೆಲೆಯಲ್ಲಿ, ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಜಯ ಕಿಶೋರಿ ಅವರ ಬೋಧನೆ ಮತ್ತು ವ್ಯಕ್ತಿತ್ವದ ನಡುವಿನ ವೈರುದ್ಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.