ಸನ್ಮಾರ್ಗ ವಾರ್ತೆ
ನದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದ್ದು, ಈ ನಿಷೇಧದ ಕುರಿತು ಆಕ್ಷೇಪದ ನಡುವೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, “ಪಟಾಕಿ ನಿಷೇಧದ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಮಾಲಿನ್ಯದ ದೃಷ್ಟಿಯಿಂದ, ಪಟಾಕಿ ಬದಲು ದೀಪ ಹಚ್ಚಬೇಕು ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತಿಳಿಸಿವೆ. ಬೆಳಕಿನ ಹಬ್ಬವನ್ನು ದೀಪಗಳು, ಮೇಣದಬತ್ತಿಗಳನ್ನು ಬಳಸಿಕೊಂಡು ಆಚರಿಸಿ. ಪಟಾಕಿಗಳನ್ನು ಬಳಸಬೇಡಿ, ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಉಂಟಾಗುತ್ತದೆ” ಎಂದು ಹೇಳಿದರು.

“ಮಾಲಿನ್ಯದಿಂದ ನಮಗೆ ಮತ್ತು ನಮ್ಮ ಮಕ್ಕಳಿಗೆ ಮಾತ್ರ ತೊಂದರೆ ಉಂಟಾಗುತ್ತದೆ. ಇದರಲ್ಲಿ ಹಿಂದೂ, ಮುಸ್ಲಿಂ ಎಂಬ ಬೇಧ ಇಲ್ಲ. ಪ್ರತಿಯೊಬ್ಬರ ಉಸಿರು ಮತ್ತು ಪ್ರಾಣ ಮುಖ್ಯ” ಎಂದು ಅವರು ಅಭಿಪ್ರಾಯ ಪಟ್ಟರು.
ದೆಹಲಿಯಲ್ಲಿ ನಡೆದ ದಾಳಿಯಲ್ಲಿ 19,005 ಕೆಜಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ನಿನ್ನೆ ತಿಳಿಸಿದರು. ನಿಯಮ ಉಲ್ಲಂಘಿಸಿದವರ ವಿರುದ್ಧ ಈಗಾಗಲೇ 79 ಪ್ರಕರಣಗಳು ದಾಖಲಾಗಿವೆ.
ದೀಪಾವಳಿಗೆ ಮುನ್ನ ಕೈಗೊಂಡಿರುವ ಮಾಲಿನ್ಯ ವಿರೋಧಿ ಕ್ರಮಗಳನ್ನು ಪರಿಶೀಲಿಸಲು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಮತ್ತು ಪೊಲೀಸರೊಂದಿಗೆ ಸಭೆ ನಡೆಸಿದ ಗೋಪಾಲ್ ರೈ ಅವರು, ದೆಹಲಿಯಲ್ಲಿ ಪಟಾಕಿ ನಿಷೇಧಿಸಲು 377 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.












