ವಿಟ್ಲ: ಹಿಂದೂ ಯುವಕನೋರ್ವ ತನ್ನ ಮದುವೆಯ ಔತಣಕೂಟದ ಅಂಗವಾಗಿ ಮಸೀದಿಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸಿದ ಘಟನೆ ಬಂಟ್ವಾಳ ತಾಲೂಕಿನ ಕೋಡಪದವು ಸಮೀಪದ ಕುಕ್ಕಿಲ ಎಂಬಲ್ಲಿ ನಡೆದಿದೆ.
ಕೋಡಪದವಿನ ಕುಕ್ಕಿಲದ ನಿವಾಸಿ, ಧನಂಜಯ್ ಎಂಬವರು ಶುಕ್ರವಾರ ಕುಕ್ಕಿಲದ ಬದ್ರಿಯಾ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿದ್ದರು. ಈ ಸಂದರ್ಭದಲ್ಲಿ ಕೋಡಪದವು ಹಾಗೂ ಕುಕ್ಕಿಲ ಜಮಾಅತ್ನ ಸುಮಾರು 150 ಮಂದಿ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
ಕುಕ್ಕಿಲದ ನಿವಾಸಿ ಜತ್ತನ್ನ (ಜತ್ತು ಮೇಸ್ತ್ರೀ) ಅವರ ಪುತ್ರ ಧನಂಜಯ್ ರಿಗೆ ವಿಟ್ಲ ಪೆರ್ಲದ ಮಾಲತಿ ಎಂಬವರ ಜೊತೆ ಮೇ 8ರಂದು ವಿಟ್ಲ ಶ್ರೀರಾಮ ಮಂದಿರಲ್ಲಿ ಮದುವೆ ನಡೆದಿತ್ತು. ಈ ಸಂದರ್ಭ ಊರಿನ ಮುಸ್ಲಿಮರು ಮದುವೆಗೆ ಬಂದು ಶುಭ ಹಾರೈಸಿ ತೆರಳಿದ್ದು, ರಮಝಾನ್ ಉಪವಾಸದ ಕಾರಣ ಮದುವೆಯ ಔತಣ ಕೂಟದಲ್ಲಿ ಭಾಗವಹಿಸಿರಲಿಲ್ಲ. ಈ ನಿಟ್ಟಿನಲ್ಲಿ ಕುಕ್ಕಿಲದ ಬದ್ರಿಯಾ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದೆವು ಎಂದು ಧನಂಜಯ್ ತಿಳಿಸಿದ್ದಾರೆ.
ಅವರ ಈ ಇಫ್ತಾರ್ ಪಾರ್ಟಿಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಬಾಬರಿ ಮಸೀದಿ ಒಡೆದ ಸಮಯದಲ್ಲಿ ಇದೇ ಕುಕ್ಕಿಲದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕರ್ಫ್ಯು ವಿಧಿಸಲಾಗಿತ್ತು. ಇದೇ ಜತ್ತನ್ನ ಮೇಸ್ತ್ರಿಯವರು ಅಯೋಧ್ಯೆಗೆ ಕರಸೇವೆಗೂ ತೆರಳಿದ್ದರು. ಆದರೆ, ಮುಸ್ಲಿಮರೊಂದಿಗೆ ಇದ್ದ ಅವಿನಾಭಾವ ಸಂಬಂಧವು ಹಾಗೆಯೇ ಉಳಿದಿತ್ತು. ಅಂದಿನಿಂದ ಇಂದಿನ ತನಕವೂ ಅವರು ಮತ್ತು ಅವರ ಕುಟುಂಬ ಪರಿವಾರದ ಸಂಬಂಧ ಅನ್ಯೋನ್ಯವಾಗಿದೆ.












