ಇರಾನ್, ಅಮೆರಿಕ ನಡುವೆ ಯುದ್ಧ ಸನ್ನದ್ಧ ಸ್ಥಿತಿ: ಆರು ತಿಂಗಳ ಆಹಾರ ಪೇರಿಸಿಟ್ಟ ಕುವೈಟ್!

0
1247

ಕುವೈಟ್ ಸಿಟಿ,ಮೇ 11: ಅಮೆರಿಕ- ಇರಾನ್ ಘರ್ಷಣೆ ಸಾಧ್ಯತೆಯ ಹಿನ್ನೆಲೆಯಲ್ಲಿ ಆರು ತಿಂಗಳ ಆಹಾರ ದಾಸ್ತಾನಿರಿಸಿಕೊಳ್ಳಲಾಗಿದೆ. ಎರಡು ದೇಶಗಳ ನಾಯಕರ ಮಾತುಕತೆಗಳು ಯುದ್ಧಕ್ಕೆ ದಾರಿ ಮಾಡಿದರೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ದೇಶದ ಆಹಾರ ವಸ್ತು ಸಹಿತ ಅಗತ್ಯ ವಸ್ತುಗಳ ಸಂಗ್ರಹ ದೃಢಪಡಿಸುವ ಕ್ರಮವನ್ನು ಆರಂಭಿಸಲಾಗಿದೆ ಎಂದು ಸಂಬಂಧಿಸಿದ ಮೂಲಗಳನ್ನು ಉದ್ಧರಿಸಿ ಪ್ರಾದೇಶಿಕ ಪತ್ರಿಕೆಯಲ್ಲಿ ವರದಿಯಾಗಿದೆ. ಆರು ತಿಂಗಳಿಗೆ ಅಗತ್ಯವಾದ ಆಹಾರ ಸಂಗ್ರಹ ಈಗ ಇದೆ ಎಂದು ಅಧಿಕಾರಿಗಳು ತಿಳಿಸಿದ್ದು ಹುರ್ಮುಸ್ ಸಮುದ್ರ ಕಾಲುವೆಯನ್ನು ಇರಾನ್ ಮುಚ್ಚಿದರೆ ವಸ್ತುಗಳನ್ನು ತರಿಸಿಕೊಳ್ಳಲು ಕಷ್ಟವಾಗಬಹುದು ಎಂಬ ಶಂಕೆ ಅಧಿಕಾರಿಗಳಲ್ಲಿದೆ. ಈಗಿನ ಪರಿಸ್ಥಿತಿಯಲ್ಲಿ ನೀರು ಕ್ಷಾಮದ ವಿಷಯದಲ್ಲಿ ಆತಂಕಗಳಿಲ್ಲ. 3529 ದಶಲಕ್ಷ ಗ್ಯಾಲನ್ ನೀರು ದೇಶದಲ್ಲಿ ಸಂಗ್ರಹಿಸಿಡಲಾಗಿದೆ. ಘರ್ಷಣೆ ವಲಯಕ್ಕೆ ವ್ಯಾಪಿಸಿದರೆ ಸುರಕ್ಷಾ ಕ್ರಮಗಳಿಗಾಗಿ ಸಂಬಂಧಪಟ್ಟ ಎಲ್ಲ ವಿಭಾಗಗಳಿಗೆ ಸೂಚನೆ ನೀಡಲಾಗುವುದು. ನೆರೆಯ ದೇಶಗಳ ಸಹಕಾರದಲ್ಲಿ ಅಣು ಸೋರಿಕೆ ಸಹಿತ ಯಾವುದೇ ರೀತಿಯಲ್ಲಿರುವ ಅಪಾಯಗಳನ್ನು ಎದುರಿಸಲು ಸಿದ್ಧತೆ ನಡೆಯುತ್ತಿದೆ. ಈ ನಡುವೆ, ವಿಶೇಷ ಪರಿಸ್ಥಿತಿಯನ್ನು ಚರ್ಚಿಸಲು ವಿಶೇಷ ಪಾರ್ಲಿಮೆಂಟ್ ಸೇರಬೇಕೆಂದು ಹಲವು ಸಂಸತ್ ಸದಸ್ಯರು ಆಗ್ರಹಿಸುತ್ತಿದ್ದಾರೆ ಎಂದು ಪ್ರಾದೇಶಿಕ ಪತ್ರಿಕೆಗಳು ವರದಿ ಮಾಡಿವೆ.