ವಕ್ಫ್ ತಿದ್ದುಪಡಿ ಮಸೂದೆ ; ಎಲ್ಲರ ಕಣ್ಣು ನಾಯ್ಡು, ನಿತೀಶ್‌‌ರ ಮೇಲೆ – ಏನಿದು ಆತಂಕ, ಪ್ರತಿಭಟನೆ

0
475

ಸನ್ಮಾರ್ಗ ವಾರ್ತೆ

ಲೇಖಕ : ಸೈಯದ್ ಅಲಿ ಮುಜ್ತಬಾ

ವಕ್ಫ್ (ತಿದ್ದುಪಡಿ) ಮಸೂದೆ 2024, ಭಾರತದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖ ಚರ್ಚೆಯ ವಿಷಯವಾಗಲು ಸಿದ್ಧವಾಗಿದೆ. ನವೆಂಬರ್ 25 ರಿಂದ ಡಿಸೆಂಬರ್ 20 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ವಕ್ಫ್ ಆಸ್ತಿಗಳ ಸಮರ್ಥ ನಿರ್ವಹಣೆಯನ್ನು ಮರುರೂಪಿಸುವ ಉದ್ದೇಶದೊಂದಿಗೆ ಈ ಮಸೂದೆ ಮಂಡನೆಯಾಗಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮಸೂದೆಯನ್ನು ಅಂಗೀಕರಿಸಲು ಸಂಕಲ್ಪ ಮಾಡಿದ್ದು, ಈ ಬೆಳವಣಿಗೆಯನ್ನು ರಾಜಕೀಯ ಕುತಂತ್ರದ ಕೇಂದ್ರ ಬಿಂದುವಾಗಿಸಿದೆ. ಮುಖ್ಯವಾಗಿ, ತೆಲುಗು ದೇಶಂ ಪಕ್ಷದ (ಟಿಡಿಪಿ) ಚಂದ್ರಬಾಬು ನಾಯ್ಡು ಮತ್ತು ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್ ಅವರ ನಿಲುವುಗಳು ಈ ಮಸೂದೆಗೆ ಅಗತ್ಯ ಬೆಂಬಲವನ್ನು ಹೊಂದಿಸಲು ಅಥವಾ ಬಲವಾದ ವಿರೋಧವನ್ನು ಎದುರಿಸಲು ಮುಖ್ಯಭೂಮಿಕೆಯನ್ನು ವಹಿಸಬಹುದು.

ವಿವಾದಾತ್ಮಕ ತಿದ್ದುಪಡಿಗಳು

ಜುಲೈ 28 ರಂದು ಮಾನ್ಸೂನ್ ಅಧಿವೇಶನದಲ್ಲಿ ಪರಿಚಯಿಸಲಾದ ವಕ್ಫ್ ತಿದ್ದುಪಡಿ ಮಸೂದೆವು ವಕ್ಫ್ ಆಸ್ತಿಗಳ ನಿಯಂತ್ರಣವನ್ನು ಕೇಂದ್ರ ಸರ್ಕಾರದ ಅಧೀನಕ್ಕೆ ತರುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಸ್ತಾಪವು ರಾಜ್ಯಗಳ ಸ್ವಾಯತ್ತತೆಯನ್ನು ಹಾಗೂ ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ನಿರ್ವಹಣೆಯ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಎಂಬ ತೀವ್ರ ಚರ್ಚೆಗೆ ಕಾರಣವಾಗಿದೆ.

ಮಸೂದೆ, ವಕ್ಫ್ ಆಸ್ತಿಗಳ ನೋಂದಣಿ ಮತ್ತು ಸಮೀಕ್ಷೆಗೆ ಸಂಬಂಧಿಸಿದ ರಾಜ್ಯ ಸರ್ಕಾರಗಳು ಮತ್ತು ವಕ್ಫ್ ಮಂಡಳಿಗಳ ಪ್ರಭಾವವನ್ನು ನಿರ್ಬಂಧಿಸುವ ಮೂಲಕ, ದೇಶದ ಫೆಡರಲ್ ರಚನೆಯನ್ನು ಅಡ್ಡಿಪಡಿಸುತ್ತದೆ ಎಂದು ವಿಮರ್ಶಕರು ಹೇಳುತ್ತಾರೆ.

ಇದರಲ್ಲಿ ಗಮನಾರ್ಹವಾಗಿ, ಮುಸ್ಲಿಮೇತರರು ಮತ್ತು ಮುಸ್ಲಿಂ ಮಹಿಳೆಯರನ್ನು ಕೇಂದ್ರೀಯ ವಕ್ಫ್ ಕೌನ್ಸಿಲ್ ಹಾಗೂ ರಾಜ್ಯ ವಕ್ಫ್ ಮಂಡಳಿಗಳಲ್ಲಿ ಸೇರಿಸುವ ನವೀನ ಪ್ರಸ್ತಾಪವನ್ನು ಒಳಗೊಂಡಿದೆ. ಇದಲ್ಲದೆ, ಕನಿಷ್ಠ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಆಚರಿಸಿದವರಿಗೆ ಮಾತ್ರ ವಕ್ಫ್ ಆಸ್ತಿಗಳನ್ನು ಘೋಷಿಸಲು ಅನುಮತಿಸುವ ಕ್ರಮವಿದೆ, ಇದು ಸಮುದಾಯದ ನೇತೃತ್ವದ ಆಡಳಿತದ ವ್ಯಾಪ್ತಿಯನ್ನು ಹೆಚ್ಚಿನ ಮಟ್ಟಕ್ಕೆ ಸೀಮಿತಗೊಳಿಸುತ್ತದೆ.

ಮಸೂದೆವು 1995ರ ವಕ್ಫ್ ಕಾಯ್ದೆಯನ್ನು “ಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ” ಎಂದು ಮರುನಾಮಕರಣ ಮಾಡುತ್ತದೆ. ಆದರೆ ಈ ತಿದ್ದುಪಡಿಗಳು ಸಮುದಾಯದ ಹಿತವನ್ನು ಬಲಿತೆಗೆದು ಆಡಳಿತದ ದಕ್ಷತೆಗೆ ಆದ್ಯತೆ ನೀಡುವ ಪ್ರಯತ್ನ ಎಂದು ವಿಮರ್ಶಕರು ಕಟುವಾಗಿ ಆಕ್ಷೇಪಿಸಿದ್ದಾರೆ.

ವಿರೋಧ ಮತ್ತು ಪ್ರತಿಭಟನೆ

ವಕ್ಫ್ ತಿದ್ದುಪಡಿ ಮಸೂದೆಯು ಅಲ್ಪಸಂಖ್ಯಾತ ಸಂಘಟನೆಗಳು, ನಾಗರಿಕ ಸಮಾಜ ಗುಂಪುಗಳು ಮತ್ತು ವಿರೋಧ ಪಕ್ಷಗಳ ನಾಯಕರ ತೀವ್ರ ವಿರೋಧವನ್ನು ಎದುರಿಸುತ್ತಿದೆ. ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ (ಎಐಎಂಪಿಎಲ್‌ಬಿ) ಮಸೂದೆಯ ಪ್ರಮುಖ ವಿರೋಧಿಯಾಗಿ ಪರಿಣಮಿಸಿದ್ದು, ಅದರ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರೆಹಮಾನಿ “ಯಾವುದೇ ಬೆಲೆ ತೆತ್ತಾದರೂ” ಮಸೂದೆಯನ್ನು ವಿರೋಧಿಸುವುದಾಗಿ ಘೋಷಿಸಿದ್ದಾರೆ.

“ಇದು ನಮಗೆ ಬದುಕು ಮತ್ತು ಸಾವಿನ ಪ್ರಶ್ನೆಯಾಗಿದೆ” ಎಂದು ರೆಹಮಾನಿ ಉಲ್ಲೇಖಿಸಿದ್ದು, ಮುಸ್ಲಿಂ ಸಮುದಾಯದ ಜನರನ್ನು ಉದ್ದೇಶಿತ ಕಾನೂನನ್ನು ವಿರೋಧಿಸಲು ಒತ್ತಾಯಿಸಿದರು. ಮಸೀದಿಗಳು, ಸಮುದಾಯ ಕಬರ್‌ಸ್ಥಾನ ಮತ್ತು ಇತರ ವಕ್ಫ್ ಆಸ್ತಿಗಳನ್ನು ಸಂರಕ್ಷಿಸುವ ಬದ್ಧತೆಯನ್ನು ಪ್ರಶ್ನಿಸಿದ ಅವರು, ಮುಸ್ಲಿಮೇತರರಿಗೆ ವಕ್ಫ್ ಆಸ್ತಿಗಳನ್ನು ನಿರ್ವಹಿಸಲು ಅವಕಾಶ ನೀಡಿದರೆ ಇದರಿಂದ ಭೀಕರ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಸೂದೆ ಸುಧಾರಣೆಯ ಹೆಸರಿನಲ್ಲಿ ವಕ್ಫ್ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ರೆಹಮಾನಿ, ಈ ತಿದ್ದುಪಡಿಯನ್ನು ಅಸಂವಿಧಾನಿಕ ಮತ್ತು ಭಾರತದ ಬಹುತ್ವ ತತ್ವಗಳಿಗೆ ಅಪಾಯಕಾರಿಯಾಗಿದೆ ಎಂದು ಬಣ್ಣಿಸಿದ್ದು, ಅಗತ್ಯವಿದ್ದರೆ, ನಾವು ನಮ್ಮ ಪ್ರಾಣವನ್ನೂ ತ್ಯಾಗ ಮಾಡಲು ಹಿಂಜರಿಯುವುದಿಲ್ಲ” ಎಂದು ಅವರು ಘೋಷಣೆ ಮಾಡಿದರು.

ಜಂಟಿ ಸಂಸದೀಯ ಸಮಿತಿಯ ಪರಿಶೀಲನೆ

ಪ್ರಸ್ತುತ ವಿವಾದಾತ್ಮಕ ವಕ್ಫ್ ತಿದ್ದುಪಡಿ ಮಸೂದೆ, 2024, ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ನೀಡಲಾಗಿದ್ದು, ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ಅವರ ನೇತೃತ್ವದ ಸಮಿತಿಯು ಮಸೂದೆಯ ತಾತ್ಪರ್ಯ ಮತ್ತು ಪರಿಣಾಮಗಳನ್ನು ಗಮನಿಸಿ, ಪ್ರಸ್ತಾಪಿತ ಶಾಸನದ ಕುರಿತು ಈಗಾಗಲೇ 27 ಸಭೆಗಳನ್ನು ನಡೆಸಿದ್ದು, ನವೆಂಬರ್ 29ರೊಳಗೆ ತನ್ನ ಅಂತಿಮ ವರದಿ ಸಲ್ಲಿಸುವ ನಿರೀಕ್ಷೆಯಿದೆ.

ಆದರೂ, ವಿರೋಧ ಪಕ್ಷದ ಸದಸ್ಯರು ಪರಿಶೀಲನೆಗೆ ಸಮರ್ಪಕ ಸಮಯವಿಲ್ಲ ಎಂದು ಹೇಳಿ ಸಮಿತಿಯ ಕಾರ್ಯಾವಧಿ ವಿಸ್ತರಣೆಯನ್ನು ಕೋರಿದ್ದಾರೆ. ಸಮಿತಿಯ ಚರ್ಚೆಗಳು ಆರಂಭದಿಂದಲೇ ಉದ್ವಿಗ್ನತೆಯ ನಡುವೆ ಸಾಗುತ್ತಿದ್ದು, ಅಕ್ಟೋಬರ್ 22 ರಂದು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ಮತ್ತು ಬಿಜೆಪಿ ಸಂಸದ ಅಭಿಜಿತ್ ಗಂಗೋಪಾಧ್ಯಾಯ ನಡುವಿನ ತೀವ್ರ ವಾಗ್ವಾದ ಮತ್ತಷ್ಟು ನಾಟಕೀಯ ಬೆಳವಣಿಗೆಗೆ ಕಾರಣವಾಯಿತು. ಬ್ಯಾನರ್ಜಿ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿ ಗಾಜಿನ ನೀರಿನ ಬಾಟಲಿಯನ್ನು ಒಡೆದಿದ್ದು, ಪರಿಣಾಮವಾಗಿ ಅವರಿಗೆ ಒಂದು ದಿನದ ಅಮಾನತು ವಿಧಿಸಲಾಯಿತು.

ರಾಜಕೀಯ ಜಟಿಲತೆ

ಮಸೂದೆಯು ಭಾರತದ ಸಾಮಾಜಿಕ-ರಾಜಕೀಯದಲ್ಲಿ ವಿಶಾಲವಾದ ಪರಿಣಾಮಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಸ್ತಾವಿತ ಯೂನಿಫಾರ್ಮ್ ಸಿವಿಲ್ ಕೋಡ್ (UCC) ಜೊತೆಗೆ, ಆಡಳಿತವನ್ನು ಕೇಂದ್ರೀಕರಿಸಲು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮರುವ್ಯಾಖ್ಯಾನಿಸಲು ಒಂದು ದೊಡ್ಡ ಕಾರ್ಯಸೂಚಿಯ ಭಾಗವಾಗಿ ಶಾಸನವನ್ನು ಅನೇಕರು ಎದುರು ನೋಡುತ್ತಿದ್ದಾರೆ.

ಮಸೂದೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ನಿಲುವು ವಿಶೇಷವಾಗಿ ಮಹತ್ವದ್ದಾಗಿದೆ. ಇಬ್ಬರೂ ನಾಯಕರು ಬಿಜೆಪಿ ನೇತೃತ್ವದ ಸರ್ಕಾರ ಮತ್ತು ವಿರೋಧ ಪಕ್ಷದ ಮೈತ್ರಿಗಳೊಂದಿಗೆ ಸಂಕೀರ್ಣ ಸಂಬಂಧಗಳನ್ನು ಹೇಗೆ ನಿಭಾಯಿಸುವರು ಎಂಬುದು ಮುಖ್ಯವಾಗಿದೆ. ಮಸೂದೆಯನ್ನು ಬೆಂಬಲಿಸುವ ಅಥವಾ ವಿರೋಧಿಸುವ ಬಗ್ಗೆ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ತೆಗೆದುಕೊಳ್ಳುವ ನಿರ್ಧಾರವು ಅವರ ಪಕ್ಷಗಳ ಭವಿಷ್ಯ ಮತ್ತು ಅವರ ಪ್ರಾತಿನಿಧ್ಯ ವಹಿಸುವ ಸಮುದಾಯಗಳ ರಾಜಕೀಯ ಹಿತಾಸಕ್ತಿಗಳ ಮೇಲೆ ಶಾಶ್ವತವಾದ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಯಿದೆ.

ತಳಮಟ್ಟದ ಸಿದ್ದತೆ ಮತ್ತು ಕಾರ್ಯವಿಧಾನ

ಪ್ರಸ್ತಾವಿತ ತಿದ್ದುಪಡಿಗಳು ತಳಮಟ್ಟದಲ್ಲಿ ತೀವ್ರ ವಿರೋಧವನ್ನು ಉಂಟುಮಾಡಿವೆ. JPC ಮುಸ್ಲಿಮರಿಂದ ಸಾವಿರಾರು ಇಮೇಲ್‌ಗಳನ್ನು ಸ್ವೀಕರಿಸಿದ್ದು, ಈ ಮೂಲಕ ಅಸಮಾಧಾನವನ್ನು ಸ್ವೀಕರಿಸಿದೆ. AIMPLB ಮತ್ತು ಇತರ ಸಂಘಟನೆಗಳು ಹಮ್ಮಿಕೊಂಡ ಪ್ರತಿಭಟನಾ ರ‌್ಯಾಲಿಗಳು ಹಾಗೂ ಸಾರ್ವಜನಿಕ ಸಭೆಗಳು ಭಿನ್ನಾಭಿಪ್ರಾಯವನ್ನು ಇನ್ನಷ್ಟು ಹೆಚ್ಚಿಸಿದೆ.

ಜಾರ್ಖಂಡ್‌ನಲ್ಲಿ, ಮುಖ್ಯಮಂತ್ರಿ ಹೇಮಂತ್ ಸೊರೆನ್ AIMPLB ನಿಯೋಗವನ್ನು ಭೇಟಿಯಾಗಿ ಮಸೂದೆಗೆ ತಮ್ಮ ವಿರೋಧವನ್ನು ದೃಢಪಡಿಸಿದರು. AIMPLB ಅವರು ಈ ನಿಲುವನ್ನು ಶ್ಲಾಘಿಸಿದ್ದು, ಮಸೂದೆಗೆ ವಿರುದ್ಧ ರಾಜಕೀಯ ಬೆಂಬಲದ ಅಗತ್ಯತೆಯನ್ನು ಹೈಲೈಟ್ ಮಾಡಿದೆ.

ಅ

ವಕ್ಫ್ (ತಿದ್ದುಪಡಿ) ಮಸೂದೆ, 2024, ಕಾನೂನು ಪರಿಷ್ಕರಣೆಗಿಂತ ಹೆಚ್ಚಾಗಿ, ಭಾರತದಲ್ಲಿ ರಾಜ್ಯ ನಿಯಂತ್ರಣ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ನಡುವೆ ಸಮತೋಲನವನ್ನು ಬಗೆಹರಿಸುವ ಪ್ರಮುಖ ಚರ್ಚೆಯನ್ನು ಪ್ರತಿಬಿಂಬಿಸುತ್ತದೆ. ವಕ್ಫ್ ನಿರ್ವಹಣೆಯನ್ನು ಕೇಂದ್ರೀಕರಿಸುವ ಮೂಲಕ, ಸರ್ಕಾರವು ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ತನ್ನ ಗುರಿಯನ್ನು ಸಾಧಿಸಲು ಉದ್ದೇಶಿಸಿದೆ ಎಂದು ವಾದಿಸುತ್ತದೆ. ಆದರೆ ವಿಮರ್ಶಕರು, ಈ ಕ್ರಮಗಳು ಸಮುದಾಯದ ಸ್ವಾಯತ್ತತೆಯನ್ನು ಹಾನಿ ಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾಕೆಂದರೆ ವಕ್ಫ್ ಆಸ್ತಿಗಳು ಮುಸ್ಲಿಮರ ಧಾರ್ಮಿಕ ಆಚರಣೆಗಳು ಮತ್ತು ಪರಂಪರೆಗಳಿಗೆ ಸಂಬಂಧಿಸಿದೆ.

ಮುಂಬರುವ ವಾರಗಳು ಈ ಮಸೂದೆಯ ಭವಿಷ್ಯವನ್ನು ನಿರ್ಧರಿಸಲು ನಿರ್ಣಾಯಕವಾಗಿವೆ. ಚಳಿಗಾಲದ ಅಧಿವೇಶನವು ಪ್ರಾರಂಭವಾಗುತ್ತಿದ್ದಂತೆ, ಪ್ರಮುಖ ರಾಜಕೀಯ ನಾಯಕರುಾದ ನಾಯ್ಡು ಮತ್ತು ನಿತೀಶ್ ಕುಮಾರ್ ಅವರ ಹೆಜ್ಜೆಗಳನ್ನು ಗಮನಿಸಿ, ಅವರ ನಿರ್ಧಾರಗಳಿಂದ ಈ ಮಸೂದೆಯು ಅಂಗೀಕಾರ ಪಡೆಯುತ್ತದೆಯೇ ಅಥವಾ ಮತ್ತಷ್ಟು ಭಿನ್ನಾಭಿಪ್ರಾಯವನ್ನು ಹುಟ್ಟಿಸುತ್ತವೆಯೇ ಎಂಬುದರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ.

ಲೇಖಕ ಸೈಯದ್ ಅಲಿ ಮುಜ್ತಬಾ, ಚೆನ್ನೈ ಮೂಲದ ಪತ್ರಕರ್ತ. ಅವರನ್ನು [email protected] ನಿಂದ ತಲುಪಬಹುದು.

ಇಂಗ್ಲಿಷ್ ಮೂಲ : ಮುಸ್ಲಿಂ ಮಿರರ್
ಕನ್ನಡಕ್ಕೆ : ಸನ್ಮಾರ್ಗ ಡೆಸ್ಕ್