ಗ್ಯಾನ್‌ವಾಪಿಯಿಂದ ಅಜ್ಮೀರ್ ದರ್ಗಾದ ವರೆಗೆ: ಸಮೀಕ್ಷೆಯ ಹೆಸರಲ್ಲಿ ನಡೆಯುತ್ತಿರುವುದೇನು?

0
2286

ಏ.ಕೆ. ಕುಕ್ಕಿಲ

1. ವಾರಣಾಸಿ ಗ್ಯಾನ್‌ವಾಪಿ ಮಸೀದಿ
2. ಮಥುರಾ ಶಾಹಿ ಈದ್ಗಾ ಮಸೀದಿ
3. ಮಧ್ಯಪ್ರದೇಶದ ಕಮಲ್ ಮೌಲಾ ಮಸೀದಿ
4. ಉತ್ತರದ ಪ್ರದೇಶದ ಸಂಭಾಲ್ ಜಾಮಾ ಮಸೀದಿ

ಅಷ್ಟಕ್ಕೂ, 1991 ಸೆಪ್ಟೆಂಬರ್ 18ರಂದು ‘ಆರಾಧನಾ ಕೇಂದ್ರ ಗಳ ಸಂರಕ್ಷಣಾ ಕಾಯ್ದೆ’ಯನ್ನು ಪಾರ್ಲಿಮೆಂಟ್ ಅಂಗೀಕರಿಸಿರುವುದರ ಹೊರತಾಗಿಯೂ ಈ ಮೇಲಿನ ಎಲ್ಲ ಮಸೀದಿಗಳ ಸರ್ವೇ ನಡೆಸುವುದಕ್ಕೆ ನ್ಯಾಯಾಲಯಗಳು ಹೇಗೆ ಅನುಮತಿ  ನೀಡಿದುವು ಅನ್ನುವ ಪ್ರಶ್ನೆ ಹುಟ್ಟಿಯೇ ಹುಟ್ಟುತ್ತದೆ.

ಪಿ.ವಿ. ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದ ವೇಳೆ ಈ ‘ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಯನ್ನು ಜಾರಿ  ಗೊಳಿಸಲಾಗಿತ್ತು. ಈ ಕಾಯ್ದೆಯನ್ನು ಪಾರ್ಲಿಮೆಂಟಲ್ಲಿ ಮಂಡಿಸಿದ್ದು ಆಗಿನ ಗೃಹಸಚಿವ ಎಸ್.ಬಿ. ಚೌಹಾಣ್. ‘1947 ಆಗಸ್ಟ್  15ರಂದು ಈ ದೇಶದ ಆರಾಧನಾ ಕೇಂದ್ರಗಳು ಹೇಗಿತ್ತೋ ಅವುಗಳನ್ನು ಹಾಗೆಯೇ ಉಳಿಸಿಕೊಳ್ಳುವುದು ಮತ್ತು ಅವುಗಳ  ಸ್ವರೂಪದಲ್ಲಿ ಯಾವುದೇ ಬದಲಾವಣೆಗೆ ಆಸ್ಪದ ನೀಡದಿರುವುದನ್ನು…’ ಈ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಅಂದರೆ,
1947 ಆಗಸ್ಟ್ 15ರಂದು ಈ ದೇಶದ ಮಸೀದಿ, ಮಂದಿರ, ಚರ್ಚ್, ಸ್ತೂಪ, ಗುರುದ್ವಾರ, ಬಸದಿಗಳೂ ಸೇರಿದಂತೆ ಎಲ್ಲ  ಧಾರ್ಮಿಕ ಕೇಂದ್ರಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು ಎಂಬುದಾಗಿ ಕಾಯ್ದೆಯಲ್ಲಿ ಹೇಳಲಾಗಿತ್ತು. ಆದರೆ, ಬಾಬರಿ  ಮಸೀದಿಯನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಹೀಗೆ ಈ ಕಾಯ್ದೆ ಜಾರಿಯಾಗಿ ಎರಡೇ ತಿಂಗಳಲ್ಲಿ  ಬಾಬರಿ ಮಸೀದಿಯನ್ನು ಉರುಳಿಸಲಾಯಿತು. ಆದರೆ,

ಇನ್ನು ಮುಂದೆ ಮಂದಿರವೆಂದು ಹೇಳಿ ಯಾವುದೇ ಮಸೀದಿಯ ಮೇಲೆ ಯಾರಿಗೇ ಆಗಲಿ ಹಕ್ಕು ಸ್ಥಾಪಿಸಲು ಸಾಧ್ಯವೇ  ಇಲ್ಲ ಎಂದೇ ನಂಬಲಾಗಿತ್ತು ಮತ್ತು ಹಾಗೆಯೇ ವಾದಿಸಲಾಗುತ್ತಿತ್ತು. ಅಲ್ಲದೇ, ಬಾಬರಿ ಮಸೀದಿಗೆ ಸಂಬಂಧಿಸಿ 2019ರಲ್ಲಿ  ಐವರು ನ್ಯಾಯಾಧೀಶರ ಪೀಠ ನೀಡಿದ ತೀರ್ಪಿನಲ್ಲೂ ಈ ಕಾಯ್ದೆಯ ಅಗತ್ಯ, ಮಹತ್ವ ಮತ್ತು ಪ್ರಯೋಜನದ ಬಗ್ಗೆ  ವಿಸ್ತ್ರತವಾಗಿ ವಿವರಿಸಲಾಗಿತ್ತು. ಈ ಕಾಯ್ದೆಯು ಭಾರತದ ಜಾತ್ಯತೀತ ಸ್ವರೂಪದ ಅನಿವಾರ್ಯ ಭಾಗವಾಗಿದ್ದು, ಬಾಬರಿ  ಮಸೀದಿಯಂಥ ವಿಷಯಗಳು ರಾಜಕೀಯ ಲಾಭಕ್ಕಾಗಿ ಬಳಕೆ ಆಗಬಾರದು ಮತ್ತು ಕೋಮುಗಲಭೆಗಳಿಗೆ ಆಸ್ಪದ  ನೀಡಬಾರದಾಗಿ ತೀರ್ಪಿನಲ್ಲಿ ಒತ್ತಿ ಹೇಳಲಾಗಿತ್ತು. ಆದರೆ,

ಬಾಬರಿ ಮಸೀದಿ ಉರುಳಿದ 3 ದಶಕಗಳ ಬಳಿಕ ಮತ್ತು ಅಯೋಧ್ಯೆಯ ಬಾಬರಿ ಮಸೀದಿ ತೀರ್ಪಿನ ಮೂರು ವರ್ಷಗಳ  ಬಳಿಕ ಅದೇ ಸುಪ್ರೀಮ್ ಕೋರ್ಟ್ ಅಚ್ಚರಿಯ ಮತ್ತು ಆಘಾತಕಾರಿ ತೀರ್ಪು ನೀಡಿತು. 2019ರಲ್ಲಿ ಬಾಬರಿ ಮಸೀದಿಯ  ಬಗ್ಗೆ ಅಂತಿಮ ತೀರ್ಪು ನೀಡುವಾಗ ‘1991ರ ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಯನ್ನು ಹೊಗಳಿದ್ದ ಮತ್ತು ಅದರ  ಅನಿವಾರ್ಯತೆಯನ್ನು ಒತ್ತಿ ಹೇಳಿದ್ದ ನ್ಯಾಯಾಧೀಶರ ತಂಡದ ಸದಸ್ಯರಾಗಿದ್ದ ಚಂದ್ರಚೂಡ್ ಅವರೇ, ಗ್ಯಾನ್‌ವಾಪಿ  ಮಸೀದಿಗೆ ಸಂಬಂಧಿಸಿ ‘1991ರ ಆರಾಧನಾ ಕೇಂದ್ರಗಳ ಕಾಯ್ದೆ’ಗೆ ವಿಭಿನ್ನ ವ್ಯಾಖ್ಯಾನ ನೀಡಿದರು. ಈ ಕಾಯ್ದೆಯ ಸೆಕ್ಷನ್  3 ಮತ್ತು 4ರ ಪ್ರಕಾರ, ‘ಆರಾಧನಾ ಕೇಂದ್ರಗಳ ಸ್ವರೂಪವನ್ನು ಬದಲಾಯಿಸುವುದಕ್ಕೆ ನಿಷೇಧ ಹೇರಲಾಗಿದೆಯೇ ಹೊರತು  ಆರಾಧನಾ ಕೇಂದ್ರಗಳ ಸಮೀಕ್ಷೆಗೆ ನಿಷೇಧ ಹೇರಲಾಗಿಲ್ಲ…’ ಎಂದವರು ಅಭಿಪ್ರಾಯಪಟ್ಟರು. ಮಂದಿರವನ್ನು ಕೆಡವಿ 16ನೇ  ಶತಮಾನದಲ್ಲಿ ಔರಂಗಝೇಬ್ ಈ ಗ್ಯಾನ್‌ವಾಪಿ ಮಸೀದಿಯನ್ನು ಕಟ್ಟಿದ್ದಾನೆ ಮತ್ತು ಆ ಬಗ್ಗೆ ಸರ್ವೇ ನಡೆಸಬೇಕು ಎಂದು  ಈ ಮೊದಲು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಗೆ  ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಪುರಸ್ಕರಿಸಿದ  ಕೋರ್ಟು ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಪುರಾತತ್ವ ಇಲಾಖೆಗೆ ಆದೇಶ ನೀಡಿತ್ತು. ಈ ಆದೇಶವನ್ನು  ಮಸೀದಿ ಆಡಳಿತ ಸಮಿತಿ ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿತ್ತು. 1991ರ ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆಯ  ಪ್ರಕಾರ, ಇಂಥದ್ದೊಂದು ಸಮೀಕ್ಷೆಗೆ ಅವಕಾಶ ಇಲ್ಲ..  ಎಂದು ಮಸೀದಿ ಸಮಿತಿ ವಾದಿಸಿತ್ತು. ಈ ವಾದವನ್ನು ಆಲಿಸುತ್ತಾ  ಚಂದ್ರಚೂಡ್ ಅವರು 2022 ಮೇ 14ರಂದು ಮೇಲಿನಂತೆ ವ್ಯಾಖ್ಯಾನಿಸಿದ್ದರು. ಆ ಬಳಿಕ 2023 ಆಗಸ್ಟ್ 4ರಂದು  ಪೂರ್ಣ ಪ್ರಮಾಣದ ತೀರ್ಪನ್ನು ನೀಡಿದರು. ಗ್ಯಾನ್‌ವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವುದಕ್ಕೆ ತಡೆ ಹೇರಲು  ನಿರಾಕರಿಸಿದರು. ಈ ಮೂಲಕ ವಿವಿಧ ಮಸೀದಿ ಗಳನ್ನು ಮಂದಿರಗಳೆಂದು  ವಾದಿಸಿ ನ್ಯಾಯಾಲಯಕ್ಕೆ ಅರ್ಜಿ ಹಾಕುವ  ಪ್ರಕ್ರಿಯೆಗೆ ಅವರು ಹಸಿರು ನಿಶಾನೆಯನ್ನು ತೋರಿದರು. ಇದರ ಬೆನ್ನಿಗೇ,

ಮಂದಿರವನ್ನು ಒಡೆದು ಮಸೀದಿ ಕಟ್ಟಲಾಗಿದೆ ಎಂದು ದೂರಿ ನ್ಯಾಯಾಲಯಗಳಿಗೆ ಪದೇ ಪದೇ ಅರ್ಜಿ ಹಾಕುವ ಪ್ರಕ್ರಿಯೆ  ನಡೆಯತೊಡಗಿತು. ಇದರಲ್ಲಿ ಮಥುರಾದ ಶಾಹಿ ಈದ್ಗಾ ಮಸೀದಿಯೂ ಒಂದು. ಶ್ರೀಕೃಷ್ಣ ಮಂದಿರವನ್ನು ಒಡೆದು 16ನೇ  ಶತಮಾನದಲ್ಲಿ ಔರಂಗಝೇಬ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ  ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಮಸೀದಿಯ ಸರ್ವೇ ನಡೆಸುವಂತೆ 2023 ಡಿಸೆಂಬರ್‌ನಲ್ಲಿ ಅಲಹಾಬಾದ್  ಹೈಕೋರ್ಟ್ ಆದೇಶ ನೀಡಿತು. ಈ ನಡುವೆ ಮಧ್ಯಪ್ರದೇಶದ ಬೋಜ್‌ಶಾಲಾದಲ್ಲಿರುವ ಕಮಲ್ ಮೌಲಾ ಮಸೀದಿಯ  ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ಇದು ಸರಸ್ವತಿ ಮಂದಿರವಾಗಿತ್ತು ಎಂದು ವಾದಿಸಲಾಯಿತು.  ಮಸೀದಿಯ ವೈಜ್ಞಾನಿಕ ಸರ್ವೇಗೆ ನ್ಯಾಯಾಲಯ ಅನುಮತಿ ನೀಡಿತು. ಪ್ರಕರಣ ಸುಪ್ರೀಮ್ ಕೋರ್ಟಿನ  ಮೆಟ್ಟಲೇರಿತಾದರೂ ಹೈಕೋರ್ಟ್ ಆದೇಶಕ್ಕೆ ಸುಪ್ರೀಮ್ ಕೋರ್ಟು ತಡೆ ಹೇರಲಿಲ್ಲ. ಆದರೆ, ಸರ್ವೇಯ ಫಲಿತಾಂಶದ  ಆಧಾರದಲ್ಲಿ ತನ್ನ ಅನುಮತಿಯ ಹೊರತು ಯಾವುದೇ ಕ್ರಮ ಕೈಗೊಳ್ಳಬಾರದೆಂದು ನಿರ್ದೇಶನ ನೀಡಿತು. ಈ ಹಿನ್ನೆಲೆಯಲ್ಲಿ  ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸರ್ವೇ ನಡೆಸಿದರು. ಜೊತೆಗೇ, 2023 ಎಪ್ರಿಲ್ 7ರಂದು ಒಂದು  ರೀತಿಯ ರಾಜಿ ಪಂಚಾತಿಕೆಯನ್ನೂ ಮಾಡಿದರು. ಪ್ರತಿ ಮಂಗಳ ವಾರದಂದು ಕಮಲ್ ಮೌಲಾ ಮಸೀದಿಯ ಆವರಣದಲ್ಲಿ  ಹಿಂದೂಗಳು ಪೂಜೆ ಸಲ್ಲಿಸಬೇಕು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ನಮಾಝï ಮಾಡಬೇಕು ಎಂದು ಎರಡೂ  ವಿಭಾಗಕ್ಕೂ ಸೂಚಿಸಿದರು. ಇದರ ಬಳಿಕ,

ಕಳೆದವಾರ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಜಾಮಾ ಮಸೀದಿ ವಿವಾದಕ್ಕೆ ತುತ್ತಾಗಿದೆ. ವಿಶೇಷ ಏನೆಂದರೆ, ಈ ಜಾಮಾ  ಮಸೀದಿಯೂ ಸೇರಿದಂತೆ ಬಾಬರಿ ಮಸೀದಿ, ಗ್ಯಾನ್‌ವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯ  ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ವ್ಯಕ್ತಿಗಳೆಂದರೆ, ಹರಿಶಂಕರ್ ಜೈನ್ ಮತ್ತು ಅವರ ಮಗ ಸುಪ್ರೀಮ್ ಕೋರ್ಟ್  ನ್ಯಾಯ ವಾದಿ ವಿಷ್ಣುಶಂಕರ್ ಜೈನ್ ಎಂಬ ತಂದೆ ಮತ್ತು ಮಗ. ಇವರು ಜಾಮಾ ಮಸೀದಿಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ  ನಡೆಸ    ಬೇಕು ಎಂದು ಸಂಭಾಲ್‌ನ ಸಿವಿಲ್ ನ್ಯಾಯಾಲಯದಲ್ಲಿ ನವೆಂಬರ್ 19ರಂದು ಅರ್ಜಿ ಹಾಕುತ್ತಾರೆ. ಮಂದಿರವನ್ನು ಒಡೆದು ಈ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದು ಅವರ ಆರೋಪ. ಅಚ್ಚರಿ ಏನೆಂದರೆ, ಅರ್ಜಿ ಸ ಲ್ಲಿಸಲಾದ ನವೆಂಬರ್ 19ರಂದೇ ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳುತ್ತದೆ ಮತ್ತು ಅಷ್ಟೇ ತುರ್ತಾಗಿ  ಸಮೀಕ್ಷೆಗೆ ಅನುಮತಿ ನೀಡುತ್ತದೆ. ಇಷ್ಟು ಮಾತ್ರವಲ್ಲ, ಹೀಗೆ ಅನುಮತಿ ಸಿಕ್ಕ ಒಂದೇ ಗಂಟೆಯೊಳಗೆ ಅಧಿಕಾರಿಗಳ ತಂಡ  ಮಸೀದಿಗೆ ತೆರಳಿ ಸಮೀಕ್ಷೆ ಕೈಗೊಳ್ಳುತ್ತದೆ. ಇನ್ನೂ ಒಂದು ಅಚ್ಚರಿ ಏನೆಂದರೆ, ಈ ಸಮೀಕ್ಷೆಗೆ ಆದೇಶ ಕೊಡುವ ಮೊದಲು  ಮಸೀದಿ ಆಡಳಿತ ಸಮಿತಿಯ ವಾದವನ್ನು ನ್ಯಾಯಾಲಯ ಆಲಿಸಿಯೇ ಇರಲಿಲ್ಲ. ಹೀಗೆ ಮೊದಲ ಸಮೀಕ್ಷೆ ನಡೆದು 4 ದಿನಗಳಾದ ಬಳಿಕ ನವೆಂಬರ್ 25ರಂದು ಮತ್ತೊಂದು ಸುತ್ತಿನ ಸಮೀಕ್ಷೆಗೆ ಅಧಿಕಾರಿಗಳು ಬಂದಾಗ ಜನರು ಅನುಮಾನಿಸಿದ್ದಾರೆ. ನವೆಂಬರ್ 19ರಂದು ಸಮೀಕ್ಷೆಗೆ ಅನುಮತಿ ನೀಡುವ ಸಂದರ್ಭದಲ್ಲಿ ಮಸೀದಿ ಪರ ವಾದವನ್ನು ನ್ಯಾಯಾಲಯ  ಆಲಿಸಿರಲಿಲ್ಲ ಎಂಬುದು ಅದಾಗಲೇ ಸ್ಥಳೀಯ ಮುಸ್ಲಿಮರಲ್ಲಿ ಆಕ್ರೋಶ ಮತ್ತು ಸಂದೇಹ ವನ್ನು ಹುಟ್ಟು ಹಾಕಿತ್ತು.  ನ್ಯಾಯಾಲಯ ಪಕ್ಷಪಾತಿಯಾಗಿ ವರ್ತಿಸಿದೆ ಎಂಬ ಭಾವ ವ್ಯಾಪಕವಾಗಿತ್ತು. ಈ ಆಕ್ರೋಶ ಇನ್ನೂ ಜೀವಂತ ಇರುವಂತೆಯೇ  ಸಾರ್ವಜನಿಕರಿಗೆ ಯಾವುದೇ ಸುಳಿವೂ  ನೀಡದೇ ಮತ್ತು ಸರಿಯಾಗಿ ಮಸೀದಿ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ  ನವೆಂಬರ್ 25ರಂದು ಮತ್ತೊಂದು ಸುತ್ತಿನ ಸಮೀಕ್ಷೆಗೆ ಅಧಿಕಾರಿಗಳು ಮಸೀದಿ ಪ್ರವೇಶಿಸಿದರು. ಜನರ ಅನುಮಾನಕ್ಕೆ ಈ  ಸಮೀಕ್ಷೆ ಇನ್ನಷ್ಟು ಪುಷ್ಠಿಯನ್ನು ನೀಡಿತು. ಈ ಅಧಿಕಾರಿಗಳು ಮಸೀದಿಯನ್ನು ಉರುಳಿಸುವ ಉದ್ದೇಶ ವನ್ನು ಹೊಂದಿದ್ದಾರೆ  ಎಂಬ ವದಂತಿ ಹಬ್ಬಿತು. ಅದಕ್ಕೆ ಪೂರಕವಾಗಿ ವುಝೂಖಾನ ಅಥವಾ ಅಂಗಸ್ನಾನ ಮಾಡುವ ಕೊಳದ ನೀರನ್ನು ಅಧಿಕಾರಿಗಳು ಪಂಪ್ ಬಳಸಿ ಖಾಲಿ ಮಾಡತೊಡಗಿದರು. ವುಝೂಖಾನದಲ್ಲಿ ಶಿವಮಂದಿರದ ಕುರುಹು ಇದೆ ಎಂಬ  ಆರೋಪದ ಹಿನ್ನೆಲೆಯಲ್ಲಿ ಈ ನೀರು ಖಾಲಿ ಮಾಡುವ ಪ್ರಯತ್ನ ನಡೆಯಿತು. ಮಸೀದಿಯಿಂದ ಹೊರಗೆ ನೀರು  ಹರಿಯಲು ಪ್ರಾರಂಭಿಸಿದಂತೆಯೇ ಜನರು ತಮ್ಮ ಅನುಮಾನವೇ ದೃಢವಾಗುತ್ತಿದೆಯೆಂದು ಅಂದುಕೊಂಡರು. ಸಮೀಕ್ಷೆಗೆ  ಅಡ್ಡಿಪಡಿಸಿದರು. ಇದರ ಬೆನ್ನಿಗೇ,

ನವೆಂಬರ್ 27ರಂದು ರಾಜಸ್ಥಾನದ ಸಿವಿಲ್ ನ್ಯಾಯಾಲಯವೊಂದು ಅಜ್ಮೀರ್‌ನ ಖ್ವಾಜಾ ಮುಈನುದ್ದೀನ್ ಚಿಶ್ತಿ ದರ್ಗಾಕ್ಕೆ  ಸಂಬಂಧಿಸಿ ಅಜ್ಮೀರ್ ದರ್ಗಾ ಕಮಿಟಿ, ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ, ಭಾರತೀಯ ಪುರಾತತ್ವ ಇಲಾಖೆಗೆ  ನೋಟೀಸು ರವಾನಿಸಿದೆ. ಅಜ್ಮೀರ್ ದರ್ಗಾವು ಮೊದಲು ಶಿವಮಂದಿರವಾಗಿತ್ತು ಎಂದು ನ್ಯಾಯಾಲಯಕ್ಕೆ ಅರ್ಜಿ ಸ ಲ್ಲಿಸಿರುವ ವಿಷ್ಣು ಗುಪ್ತಾ ವಾದಿಸಿದ್ದಾರೆ. ಈಗಿನ ಅಜ್ಮೀರ್‌ನ ಮೂಲ ಹೆಸರು ಅಜಯ್ ಮೆರು ಎಂದಾಗಿತ್ತು ಮತ್ತು  ಮುಹಮ್ಮದ್ ಘೋರಿಯೊಂದಿಗೆ ಮುಈನುದ್ದೀನ್ ಚಿಶ್ತಿಯವರು ಭಾರತಕ್ಕೆ ಬಂದರು, ಈ ದರ್ಗಾವನ್ನು ಮಂದಿರ ಒಡೆದು  ಕಟ್ಟಲಾಗಿದೆ ಮತ್ತು ಈ ಬಗ್ಗೆ ದೃಢೀಕರಣಕ್ಕಾಗಿ ಸರ್ವೇ ನಡೆಸಬೇಕೆಂದು ಅವರು ಕೋರಿದ್ದಾರೆ. ಈ ಅರ್ಜಿಯನ್ನು  ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯ ಸಂಬಂಧಿಸಿದವರಿಗೆ ನೋಟೀಸು ಜಾರಿಗೊಳಿಸಿದೆ. ಅಂದಹಾಗೆ,

ಈ ಎಲ್ಲ ಅರ್ಜಿಗಳಲ್ಲಿ ಒಂದು ಸಾಮ್ಯತೆ ಇದೆ. ಅದೇನೆಂದರೆ, ಮಸೀದಿಯನ್ನು ಮಂದಿರವೆಂದು ವಾದಿಸುವುದು ಮತ್ತು  ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ಕೋರುವುದು. 1997ರ ಸುಮಾರಿಗೆ ಗ್ಯಾನ್‌ವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ  ನೀಡಬೇಕೆಂದು ಸಿವಿಲ್ ನ್ಯಾಯಾಲಯದಲ್ಲಿ ವಾದಿಸಲಾಗಿತ್ತು. ಆದರೆ, ‘1991ರ ಆರಾಧನಾ ಕೇಂದ್ರಗಳ ಸಂರಕ್ಷಣಾ  ಕಾಯ್ದೆ’ಯನ್ನು ಉಲ್ಲೇಖಿಸಿ ನ್ಯಾಯಾಲಯ ಆ ಕೋರಿಕೆಯನ್ನು ತಳ್ಳಿ ಹಾಕಿತ್ತು. ಇದರಿಂದ ಎಚ್ಚೆತ್ತುಕೊಂಡ ಈ ನಿರ್ದಿಷ್ಟ  ಗುಂಪು ಅರ್ಜಿಯಲ್ಲಿ ಹೊಸದೊಂದು ತಂತ್ರವನ್ನು ಪ್ರಯೋಗಿಸತೊಡಗಿತು. ಪೂಜೆಗೆ ಅವಕಾಶ ಕೇಳುವ ಬದಲು ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಕೋರುವುದನ್ನು ಪ್ರಾರಂಭಿಸಿತು. ಮಂದಿರವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ  ಮತ್ತು ಇದನ್ನು ಕಂಡುಕೊಳ್ಳುವುದಕ್ಕಾಗಿ ವೈಜ್ಞಾನಿಕ ಸರ್ವೇ ನಡೆಸಬೇಕು ಎಂದು ಅರ್ಜಿ ಹಾಕತೊಡಗಿತು. ಈ ಕೋರಿಕೆಗೆ  ಕಾನೂನು ಮಾನ್ಯತೆಯನ್ನು ನೀಡಿದ ಚಂದ್ರಚೂಡ್. ‘1947 ಆಗಸ್ಟ್ 15ರಂದು ಯಾವುದೇ ಧಾರ್ಮಿಕ ಕೇಂದ್ರ ಹೇಗಿತ್ತೋ  ಹಾಗೆಯೇ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕೆಂದು 1991ರ ಧಾರ್ಮಿಕ ಕೇಂದ್ರ ಸಂರಕ್ಷಣಾ ಕಾಯ್ದೆ ಹೇಳುತ್ತದೆಯೇ  ಹೊರತು ಸಮೀಕ್ಷೆ ನಡೆಸುವುದನ್ನು ಈ ಕಾಯ್ದೆ ನಿಷೇಧಿಸುವುದಿಲ್ಲ’ ಎಂದವರು ತೀರ್ಪು ನೀಡಿದರು. ನಿಜವಾಗಿ,

ಅರ್ಜಿದಾರರಿಗೆ ಇದುವೇ ಬೇಕಾಗಿತ್ತು. ಯಾವುದೇ ಮಸೀದಿಯನ್ನು ಮೊದಲು ಮಂದಿರ ಎಂದು ಘೋಷಿಸುವುದು, ಬಳಿಕ  ಅದನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಿ ವಿವಾದಾತ್ಮಕ ಮಸೀದಿಯಾಗಿ ಬಿಂಬಿಸುವುದು, ಬಳಿಕ ನ್ಯಾಯಾಲಯದಿಂದ  ವೈಜ್ಞಾನಿಕ ಸಮೀಕ್ಷೆಗೆ ಅನುಮತಿ ಪಡಕೊಳ್ಳುವುದು, ಅದರ ವರದಿಯನ್ನು ನ್ಯಾಯಾಲಯ ಬಹಿರಂಗಪಡಿಸುವುದಕ್ಕಿಂತ   ಮೊದಲೇ ಮಂದಿರ ಒಡೆದು ಮಸೀದಿ ಕಟ್ಟಿರುವುದಕ್ಕೆ ಪುರಾವೆ ಸಿಕ್ಕಿದೆ ಎಂದು ಹೇಳಿ ಪ್ರಚಾರ ಮಾಡುವುದು, ಆ ಮೂಲಕ  ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಲಾಭ ಸಿಗುವಂತೆ ನೋಡಿಕೊಳ್ಳುವುದು…  ಇದುವೇ ಆ ಗುಂಪಿನ ಉದ್ದೇಶವಾಗಿತ್ತು. ಗ್ಯಾನ್‌ವಾಪಿ ಮಸೀದಿಯ ಸಮೀಕ್ಷೆಯ ವೇಳೆ ಶಿವಲಿಂಗದ ಕುರುಹು ಸಿಕ್ಕಿದೆ  ಎಂದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿರುವುದನ್ನೇ ಇಲ್ಲಿ ಇದಕ್ಕೆ ಪುರಾವೆಯಾಗಿ ಎತ್ತಿಕೊಳ್ಳಬಹುದು.  ಅಷ್ಟಕ್ಕೂ,

‘1991ರ ಆರಾಧನಾ ಕೇಂದ್ರಗಳ ಸಂರಕ್ಷಣಾ ಕಾಯ್ದೆ’ಯನ್ನು ಪಾರ್ಲಿಮೆಂಟ್ ಅನೂರ್ಜಿತಗೊಳಿಸದ ಹೊರತು ಯಾವುದೇ  ಮಸೀದಿಯನ್ನು ಮಂದಿರವಾಗಿ ಪರಿವರ್ತಿಸಲು ಇವತ್ತು ಸಾಧ್ಯವಿಲ್ಲ. ಮಂದಿರ ಅಥವಾ ಮಸೀದಿಯ ಯಥಾಸ್ಥಿತಿಗೆ ಭಂಗ  ಬರುವುದಕ್ಕೆ ಈ ಕಾಯ್ದೆ ತಡೆಯಾಗಿ ನಿಂತಿದೆ. ಆದರೆ, ಹಿಂದೂ-ಮುಸ್ಲಿಮರನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದಕ್ಕೆ  ಮತ್ತು ಮುಸ್ಲಿಮರನ್ನು ದೇಗುಲ ಭಂಜಕರು ಎಂದು ಬಿಂಬಿಸಿ ಅಪರಾಧಿ ಸ್ಥಾನದಲ್ಲಿ ಸದಾ ನಿಲ್ಲಿಸುವುದನ್ನು ತಡೆಯುವುದಕ್ಕೆ  ಈ ಕಾಯ್ದೆಯಿಂದ ಸಾಧ್ಯವಾಗದು ಎಂಬುದು ಸ್ಪಷ್ಟ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಸೀದಿಗಳು ಈ ಸಮೀಕ್ಷೆಯ ವ್ಯಾಪ್ತಿಗೆ  ಬರಲಿದೆ ಎಂಬುದೂ ದಿಟ. ಈ ಎಲ್ಲ ಬೆಳವಣಿಗೆಯ ಹೊಣೆಯನ್ನು ಚಂದ್ರಚೂಡ್ ಅವರೇ ಹೊತ್ತುಕೊಳ್ಳಬೇಕು.