ಅಸ್ಪೃಶ್ಯರನ್ನು ಸ್ಪೃಶ್ಯರ ವಿರುದ್ಧ ಪ್ರವಾದಿ(ಸ) ಎತ್ತಿ ಕಟ್ಟಲಿಲ್ಲ…

0
2102

ಸನ್ಮಾರ್ಗ ವಾರ್ತೆ

ವಿಶೇಷ ಲೇಖನ

✍️ ಶೈಖ್ ಮುಹಮ್ಮದ್ ಕಾರಕ್ಕುನ್ನು

ಶಹೀದ್ ಸಯ್ಯದ್ ಕುತುಬ್ ಅವರು ತಮ್ಮ ಪ್ರಸಿದ್ಧ ಗ್ರಂಥದಲ್ಲಿ ಇಸ್ಲಾಮಿಕ್ ಕ್ರಾಂತಿಯು ಆದರ್ಶವನ್ನು ಏಕೆ ಆಧರಿಸಿದೆ ಎಂಬುದನ್ನು ‘ಐಡಿಯಲ್ ರೆವೊಲ್ಯೂಶನ್’ ಎಂಬ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಭೌತಿಕ ದೃಷ್ಟಿಕೋನಗಳು ಮತ್ತು ಸಿದ್ಧಾಂತಗಳಂತೆ ಕ್ರಾಂತಿಯ ತಳಹದಿಯನ್ನು ರೂಪಿಸಬಹುದಾದ ಅನೇಕ ಸಾಮಾಜಿಕ ಅಂಶಗಳು ಪ್ರವಾದಿವರ್ಯರ ಕಾಲದಲ್ಲಿ ಅರೇಬಿಯಾದಲ್ಲಿ ಅಸ್ತಿತ್ವದಲ್ಲಿತ್ತು.

ತೀವ್ರ ಹಿಂಸೆ ಮತ್ತು ಮರ್ದನಗಳಿಗೆ ಒಳಗಾದ ಅನೇಕ ಗುಲಾಮರು ಅಲ್ಲಿ ಇದ್ದರು. ಇತಿಹಾಸದ ಅತ್ಯಂತ ಕರಾಳ ದಿನಗಳಂತೆ, ಮನುಷ್ಯರು ಗುಲಾಮರ ಮಾರುಕಟ್ಟೆಗಳಲ್ಲಿ ಜಾನುವಾರುಗಳಂತೆ ಮಾರಾಟವಾದರು. ಅವರು ಎಲ್ಲರಿಗಿಂತಲೂ ಕಡೆಗಣಿಸಲ್ಪಟ್ಟು ಹಗಲು ರಾತ್ರಿ ಕೆಲಸ ಮಾಡಲು ಜನ್ಮವೆತ್ತಿದ್ದರು. ಯಜಮಾನರಿಗೆ ಅವರಿಗೆ ಹೊಡೆಯುವ, ಬಡಿಯುವ, ಕೊಲ್ಲುವ ಸ್ವಾತಂತ್ರ‍್ಯವಿತ್ತು. ಅವರ ನಡಿಗೆ, ಕುಳಿತುಕೊಳ್ಳುವುದು ಮತ್ತು ಮಲಗುವುದು ಮಾತ್ರವಲ್ಲ, ಅವರ ಆಲೋಚನೆಗಳು ಸೇರಿದಂತೆ ಎಲ್ಲವನ್ನೂ ಯಜಮಾನರು ನಿಯಂತ್ರಿಸುತ್ತಿದ್ದರು. ಅವರು ಯೋಚಿಸಲು, ಮಾತನಾಡಲು, ನಗಲು ಅಥವಾ ಅಳಲು ಸ್ವತಂತ್ರರಾಗಿರಲಿಲ್ಲ.

ಪ್ರವಾದಿ(ಸ)ರಿಗೆ ಆ ಗುಲಾಮರನ್ನು ತಮ್ಮ ಒಡೆಯರ ವಿರುದ್ಧ ಸಂಘಟಿಸಿ ಸ್ವಾತಂತ್ರ‍್ಯ ಹೋರಾಟ ಮತ್ತು ಕ್ರಾಂತಿಯನ್ನು ಸಂಘಟಿಸಬಹುದಿತ್ತು. ಹಾಗೆ ಅವರನ್ನು ತನ್ನ ಹಿಂದೆ ಒಟ್ಟುಗೂಡಿಸಿದ ನಂತರ ಆದರ್ಶವನ್ನು ಬೋಧಿಸಬಹುದಿತ್ತು. ಆದರೆ ಇಸ್ಲಾಮ್ ಅಂತಹ ವಿಧಾನವನ್ನು ಸ್ವೀಕರಿಸಲಿಲ್ಲ. ಅದು ಯಜಮಾನರ ಜೊತೆ ಮಾತನಾಡಿತು. ಅವರಲ್ಲಿ ಅಲ್ಲಾಹ್ ಮತ್ತು ಪರಲೋಕ ಹಾಗೂ ಪ್ರವಾದಿಯ ಮೇಲೆ ವಿಶ್ವಾಸವನ್ನು ಬೆಳೆಸಿ ಅವರನ್ನು ಗೌರವಾನ್ವಿತರೂ ಮಾನವ ಸ್ನೇಹಿಗಳಾಗಿ ಬದಲಾಯಿಸಲಾಯಿತು. ನಂತರ ಆ ಗುಲಾಮರು ತಮ್ಮಂತೆ ಮತ್ತು ಸಹೋದರರಂತೆ ಮನುಷ್ಯರು ಎಂಬ ಭಾವನೆಯನ್ನು ಅವರಲ್ಲಿ ಮೂಡಿಸಿದರು. ಇದರಿಂದ ಅನೇಕ ಗುಲಾಮರನ್ನು ಸೃಷ್ಟಿಕರ್ತನ ಪ್ರೀತಿ ಮತ್ತು ಪ್ರತಿಫಲವನ್ನು ನಿರೀಕ್ಷಿಸಿ ಸ್ವತಂತ್ರಗೊಳಿಸಿದರು. ಉಳಿದವರು ಗುಲಾಮರಿಗೆ ತಾವು ತಿನ್ನುವಂತಹದ್ದೇ ಆಹಾರ, ಪಾನೀಯ, ವಸ್ತ್ರ, ಉತ್ತಮ ವಸತಿಯನ್ನು ನೀಡಿ ಗೌರವಿಸಿದರು. ಕ್ರಮೇಣ ಗುಲಾಮ ಸಂಸ್ಕೃತಿ ಕಡಿಮೆಯಾಗುತ್ತಾ ಬಂತು.

ಪ್ರವಾದಿವರ್ಯರ ಕಾಲದಲ್ಲಿ ಅತ್ಯಂತ ಶ್ರೀಮಂತರು ಮತ್ತು ಕಡುಬಡವರೂ ಇದ್ದರು. ಹಣವಂತರು ಬಡವರನ್ನು ಹಲವು ರೀತಿಗಳಿಂದ ಶೋಷಣೆ ಮಾಡುತ್ತಿದ್ದರು. ಹಾಗಿದ್ದರೂ ಇಸ್ಲಾಮ್ ಬಡವರನ್ನು ಶ್ರೀಮಂತರ ವಿರುದ್ಧ ಸಂಘಟಿಸಿ ಹೋರಾಟ ನಡೆಸಲಿಲ್ಲ. ಬದಲಾಗಿ ಹಣವಂತರನ್ನು ಪ್ರಜ್ಞಾವಂತರನ್ನಾಗಿಸಿತು. ತಮ್ಮ ವಶವಿರುವ ಸಂಪತ್ತಿನ ಒಡೆಯರು ಅವರಲ್ಲವೆಂದೂ, ಬಡವರು, ನಿರ್ಗತಿಕರು, ಅನಾಥರು ಮತ್ತು ತಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿರುವವರಿಗೆ ಅದರಲ್ಲಿ ಹಕ್ಕಿದೆಯೆಂದೂ ಕಲಿಸಿಕೊಡಲಾಯಿತು. ಅದನ್ನು ನೀಡದಿದ್ದರೆ ಮರಣಾನಂತರ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದೂ ಎಚ್ಚರಿಸಲಾಯಿತು. ಶ್ರೀಮಂತರು ತಮ್ಮ ಸಂಪತ್ತನ್ನು ಅದರ ಹಕ್ಕುದಾರರಿಗೆ ಸಂಪೂರ್ಣ ಸಂತೋಷ ಮತ್ತು ಮನಃಪೂರ್ವಕವಾಗಿ ನೀಡಿದರು.

ಪ್ರವಾದಿಯವರ ಆಗಮನ ಕಾಲದಲ್ಲಿ ಬಣ್ಣ, ಜಾತಿ, ವರ್ಗ, ಗೋತ್ರ, ಕುಟುಂಬದ ಆಧಾರದಲ್ಲಿ ಬಹಳ ತಾರತಮ್ಯವಿತ್ತು. ಆದರೂ ಪ್ರವಾದಿಯವರು ಜನಾಂಗೀಯವಾದಿಗಳು ಮತ್ತು ಗೋತ್ರಗಳ ನಾಯಕರು, ಕುಟುಂಬ ಮೇಲ್ಮೆಯನ್ನು ಪ್ರದರ್ಶಿಸಿ ಅಹಂಕಾರ ತೋರುತ್ತಿದ್ದವರ ವಿರುದ್ಧ ಬಲಿಪಶುಗಳನ್ನು ಸಂಘಟಿಸಲಿಲ್ಲ. ಕುಲ, ವರ್ಗ, ಬಣ್ಣ, ಗೋತ್ರದ ಮುಖ್ಯಸ್ಥರೊಂದಿಗೆ ಮಾತನಾಡಿದರು. ಅವರಲ್ಲಿ ಮಾನವೀಯತೆ, ಭ್ರಾತೃತ್ವ ಮತ್ತು ಸಮಾನತೆಯ ಏಕತೆಯ ಭಾವವನ್ನು ಮೂಡಿಸಿದರು. ಹೀಗೆ ಎಲ್ಲ ರೀತಿಯ ತಾರತಮ್ಯವನ್ನೂ ಕೊನೆಗೊಳಿಸಲಾಯಿತು. ಇದರ ಫಲವಾಗಿ ಕರಿಯ, ಪರಕೀಯ ಗುಲಾಮರಾಗಿದ್ದ ಬಿಲಾಲ್ ಮತ್ತು ಅವರಂತಹವರು ಸಮಾಜದ ಉನ್ನತ ಸ್ಥರದಲ್ಲಿ ಸ್ಥಾನ ಪಡೆಯಲು ಸಾಧ್ಯವಾಯಿತು.

ಪ್ರವಾದಿ(ಸ)ರ ಆಗಮನದ ಸಮಯದಲ್ಲಿ ಮಹಿಳೆಯರಿಗೆ ಯಾವುದೇ ಸ್ವಾತಂತ್ರ‍್ಯವಿರಲಿಲ್ಲ. ಪ್ರತಿ ಹಂತದಲ್ಲೂ ಅವರು ಶೋಷಣೆ ಮತ್ತು ತುಳಿತಕ್ಕೊಳಗಾಗಿದ್ದರು. ಆಗಲೂ ಇಸ್ಲಾಮ್ ಧರ್ಮವು ಮಹಿಳೆಯರಲ್ಲಿ ಪುರುಷ ದ್ವೇಷವನ್ನು ಹುಟ್ಟು ಹಾಕಲಿಲ್ಲ ಅಥವಾ ಮಹಿಳೆಯರನ್ನು ಅವರ ವಿರುದ್ಧ ತಿರುಗಿಸಲಿಲ್ಲ. ಬದಲಾಗಿ, ಮಹಿಳೆಯರಲ್ಲಿ ಸ್ವಾತಂತ್ರ‍್ಯ ಮತ್ತು ಶ್ರೇಷ್ಠತೆಯ ಭಾವವನ್ನು ತುಂಬಿತು. ಮತ್ತು ಅದರೊಂದಿಗೆ ಪುರುಷರ ಮನೋಭಾವದಲ್ಲಿ ಮಹಿಳೆಯ ಕುರಿತು ಆಮೂಲಾಗ್ರ ಬದಲಾವಣೆಯನ್ನು ಸೃಷ್ಟಿಸಿತು. ಅವರಲ್ಲಿ ದೃಢವಿಶ್ವಾಸವನ್ನು ಬೆಳೆಸಿ, ಮಹಿಳೆಯರ ಮೇಲೆ ಗೌರವ, ಆದರ, ಅವರ ಹಕ್ಕುಗಳನ್ನು ಪರಿಗಣಿಸುವವರಾಗಿ ಪರಿವರ್ತಿಸಿತು.

ಹೀಗೆ ಮಹಿಳೆಗೆ ಸಮಾಜದಲ್ಲಿ ಹೆಚ್ಚಿನ ಗೌರವ, ಸ್ಥಾನಮಾನ ಲಭಿಸಿತು. ಲಿಂಗ ತಾರತಮ್ಯ ಇಲ್ಲದಂತಾಯಿತು. ಇಸ್ಲಾಮ್ ಧರ್ಮವು ಎಲ್ಲ ಸಾಮಾಜಿಕ ಅನಿಷ್ಟಗಳನ್ನು ಅಲ್ಲಾಹ್ ಮತ್ತು ಪರಲೋಕದ ಮೇಲೆ ವಿಶ್ವಾಸವನ್ನು ಬೆಳೆಸಿ ನಿರ್ಮೂಲನಗೊಳಿಸಿತು. ಇಸ್ಲಾಮ್ ಅಧಿಕಾರ ಲಭಿಸಿದೊಡನೆ ಸಕಲ ಸಾಮಾಜಿಕ ಕೆಡುಕುಗಳು, ಸಾಂಸ್ಕೃತಿಕ ಅವನತಿ, ಆರ್ಥಿಕ ಶೋಷಣೆಯ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸಿತು. ಆಗಲೂ ಅದಕ್ಕೆ ಆದರ್ಶ ಪರಿವರ್ತನೆಗೆ ವಿಧೇಯರಾದ ವ್ಯಕ್ತಿಗಳು ಹಾಗೂ ಸಮೂಹವು ನೇತೃತ್ವವನ್ನು ನೀಡಿತ್ತು.

ಇನ್ನು ಪ್ರವಾದಿ ಮೂಸಾ(ಅ)ರನ್ನು ನಿಯೋಗಿಸಿದ ಸಮಯದಲ್ಲಿ ತೀವ್ರ ವಂಶೀಯವಾದಿಗಳಾದ ಕೋಪ್ಟ್ಗಳ ಆಡಳಿತವಿತ್ತು. ಅವರು ಇಸ್ರಾಈಲರನ್ನು ಕ್ರೂರವಾಗಿ ಹಿಂಸಿಸಿದರು ಮತ್ತು ತೀವ್ರ ವಂಶ ತಾರತಮ್ಯಕ್ಕೆ ಗುರಿಪಡಿಸಿದರು. ಮರ್ದಕರು ಬಹುದೇವ ವಿಶ್ವಾಸಿಗಳು, ಪಶುಪೂಜಕರು ಆಗಿದ್ದರು. ಆಡಳಿತವನ್ನು ಸರ್ವಾಧಿಕಾರಿಗಳಾದ ಫರೋವರು ನಡೆಸುತ್ತಿದ್ದರು. ಪವಿತ್ರ ಕುರ್‌ಆನ್ ಪರಿಚಯಪಡಿಸಿದ 25 ಪ್ರವಾದಿಗಳಲ್ಲಿ ಸ್ವಂತ ಸಮುದಾಯದ ವಿಮೋಚನೆಗಾಗಿ ನಿಯೋಗಿಸಲ್ಪಟ್ಟ ಏಕ ಪ್ರವಾದಿಯಾಗಿದ್ದರು ಹ. ಮೂಸಾ(ಅ).

ಆದರೆ, ಅವರು ಫರೋವನ ವಿರುದ್ಧ ಇಸ್ರಾಈಲರನ್ನು ಸಂಘಟಿಸಿ ಹೋರಾಟ ಮಾಡಿರಲಿಲ್ಲ. ಬದಲಾಗಿ ಇಸ್ರಾಈಲರನ್ನು ವಿಮೋಚಿಸಲು ಫರೋವನೊಂದಿಗೆ ವಿನಂತಿಸಿದ್ದರು. ಆಗಲೂ ಮಾತನಾಡುವ ಭಾಷೆಯು ಸೌಮ್ಯವಾಗಿರಬೇಕೆಂದು ಅಲ್ಲಾಹನ ಆದೇಶವಿತ್ತು. (20: 43,44) ಅಲ್ಲಾಹ್ ಮತ್ತು ಪರಲೋಕವನ್ನು ನೆನಪಿಸುತ್ತಾ ಮೂಸಾ(ಅ) ಫರೋವನೊಂದಿಗೆ ಇಸ್ರಾಈಲರ ವಿಮೋಚನೆಗೆ ಆಗ್ರಹಿಸಿದರು. ಅಥವಾ ಇಸ್ಲಾಮೀ ಬೋಧನೆಗಳಿಗೆ ಒತ್ತು ನೀಡಿ ಅವರ ಹೋರಾಟ ನಡೆದಿತ್ತು. (20: 47-52)

ಇಸ್ರಾಈಲರ ವಿಮೋಚನೆಯು ಅಲ್ಲಾಹನ ವಿಶೇಷ ಹಸ್ತಕ್ಷೇಪದಿಂದ ಸಾಧ್ಯವಾಯಿತು. ಅದು ಇಸ್ಲಾಮಿನ ಸಂದೇಶ ಪ್ರಚಾರದ ಹೊಣೆಗಾರಿಕೆ ಪೂರ್ಣಗೊಂಡ ಬಳಿಕ ಸಾಧ್ಯವಾಯಿತು.

ಪವಿತ್ರ ಕುರ್‌ಆನ್‌ನ ಅಧ್ಯಾಯ 79ರ 15-26ನೇ ಸೂಕ್ತಗಳ ವ್ಯಾಖ್ಯಾನದಲ್ಲಿ ಸಯ್ಯದ್ ಅಬುಲ್ ಆಲಾ ಮೌದೂದಿ ಬರೆಯುತ್ತಾರೆ, “ಕೆಲವರು ಯೋಚಿಸುವಂತೆ, ಮೂಸಾ(ಅ) ಇಸ್ರಾಈಲರನ್ನು ಫರೋವನಿಂದ ಮುಕ್ತಗೊಳಿಸಲು ಮಾತ್ರ ನೇಮಿಸಲ್ಪಟ್ಟ ಪ್ರವಾದಿಯಾಗಿರಲಿಲ್ಲ. ಅವರ ಪ್ರಥಮ ಗುರಿ ಫರೋವನಿಗೆ ಮತ್ತು ಆ ಸಮೂಹಕ್ಕೆ ಮಾರ್ಗದರ್ಶನ ಮಾಡುವುದಾಗಿತ್ತು. ಫರೋವಾ ಸನ್ಮಾರ್ಗ ಸ್ವೀಕರಿಸದಿದ್ದರೆ ಇಸ್ರಾಈಲರನ್ನು (ಅದು ಒಂದು ಮುಸ್ಲಿಮ್ ಸಮೂಹವಾಗಿತ್ತು) ಅವನ ದಾಸ್ಯತನದಿಂದ ಮುಕ್ತಗೊಳಿಸಿ ಈಜಿಪ್ಟ್ನಿಂದ ಹೊರತರುವುದಾಗಿತ್ತು.” ಈ ಆಶಯ ಈ ಸೂಕ್ತಗಳಲ್ಲಿ ಸ್ಪಷ್ಟವಾಗಿದೆ. “ಕೆಲವರು ತಪ್ಪು ತಿಳಿದಿರುವಂತೆ, ಮೂಸಾ(ಅ) ಮತ್ತು ಹಾರೂನ್(ಅ)ರ ಉದ್ದೇಶ ಅವರ ಸಮುದಾಯವನ್ನು ದಾಸ್ಯತನದಿಂದ ಬಿಡುಗಡೆಗೊಳಿಸುವುದು ಮಾತ್ರ ಆಗಿದ್ದರೆ ಈ ಘಟನೆಯನ್ನು ಐತಿಹಾಸಿಕ ಉದಾಹರಣೆಯಾಗಿ ಹೇಳುವುದು ಸೂಕ್ತವಲ್ಲ. ಆ ಎರಡು ಪ್ರವಾದಿಗಳ ಧ್ಯೇಯದ ಒಂದು ಭಾಗವೆಂದರೆ ಬನೂ ಇಸ್ರಾಈಲ್ (ಮುಸ್ಲಿಮ್ ಜನತೆ) ಸತ್ಯನಿಷೇಧಿಗಳಾದ ವಿಭಾಗದ (ಅವರು ತಪ್ಪು ನೀತಿಯಲ್ಲಿ ದೃಢವಾಗಿದ್ದರೆ) ಆಧಿಪತ್ಯದಿಂದ ವಿಮೋಚಿಸುವುದಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅದು ಪ್ರಥಮ ಗುರಿಯಾಗಿರಲಿಲ್ಲ. ಭೂಮಿಗೆ ಬಂದ ಎಲ್ಲ ಪ್ರವಾದಿಗಳ ಉದ್ದೇಶವೇನಾಗಿತ್ತೋ ಅದುವೇ ಮೂಸಾ(ಅ)ರ ಲಕ್ಷ್ಯವೂ ಆಗಿತ್ತು.

ಸೂರಃ ಅನ್ನಿಸಾದ 17-19 ಸೂಕ್ತಗಳಲ್ಲಿ ಆ ವಿಷಯವನ್ನು ಸ್ಪಷ್ಟಪಡಿಸಲಾಗಿದೆ. “ಫಿರ್‌ಔನ್‌ನ ಬಳಿ ಹೋಗಿರಿ. ಅವನು ಧಿಕ್ಕಾರಿಯಾಗಿದ್ದಾನೆ. ಅವನೊಂದಿಗೆ ಹೇಳಿರಿ, ನೀನು ಪರಿಶುದ್ಧನಾಗಲು ಸಿದ್ಧನಿರುವೆಯಾ? ನಾನು ನಿನ್ನನ್ನು ಪ್ರಭುವಿನ ಬಳಿಗೆ ಕರೆಯುತ್ತೇನೆ. ಹಾಗೆ ನೀನು ಅಲ್ಲಾಹನನ್ನು ಭಯಪಡುವವನಾಗುವಿ. ಆದರೆ ಫಿರ್‌ಔನ್ ಆ ಉಪದೇಶವನ್ನು ಸ್ವೀಕರಿಸಲಿಲ್ಲ. ಆದ್ದರಿಂದ ಕೊನೆಗೆ ವಿಶ್ವಾಸಿಗಳಾದ ತನ್ನ ಜನತೆಯನ್ನು ಫಿರ್‌ಔನ್‌ನ ಆಧಿಪತ್ಯದಿಂದ ರಕ್ಷಿಸಬೇಕಾಯಿತು. ಆದ್ದರಿಂದ ಅವರ ದೌತ್ಯದ ಈ ಭಾಗವನ್ನು ಚರಿತ್ರೆಯಲ್ಲಿ ತೋರಿಸಲಾಗಿದೆ. ಕುರ್‌ಆನಿನ ವಿವರಣೆಗಳನ್ನು ಸರಿಯಾಗಿ ಅರ್ಥೈಸಿದರೆ ಪ್ರವಾದಿಯವರ(ಸ) ಆಗಮನ ಉದ್ದೇಶ ಒಂದು ಜನತೆಯ ಸ್ವಾತಂತ್ರ‍್ಯವಾಗಿತ್ತೆಂದೂ ಸತ್ಯಧರ್ಮದ ಬೋಧನೆಯು ಉಪಲಕ್ಷ್ಯವಾಗಿತ್ತೆಂದೂ ತಪ್ಪು ತಿಳಿಯಲಾರರು. (ತಫ್ಹೀಮುಲ್ ಕುರ್‌ಆನ್ ಭಾಗ-2)

“ಅವರು ಹೇಳಿದರು, ನಮ್ಮ ಪೂರ್ವಿಕರು ಯಾವ ಮಾರ್ಗದಲ್ಲಿದ್ದರೋ ಅದರಿಂದ ನೀನು ನಮ್ಮನ್ನು ದಾರಿ ತಪ್ಪಿಸಿ ಬಿಡಲು ಇಲ್ಲಿಗೆ ಬಂದದ್ದಾ? ಭೂಮಿಯಲ್ಲಿ ನಿಮ್ಮ ಪ್ರಭುತ್ವವನ್ನು ಸ್ಥಾಪಿಸುವ ಉದ್ದೇಶವೇ? ಹಾಗಿದ್ದರೆ ನಮ್ಮಲ್ಲಿ ಒಬ್ಬರೂ ನಿಮ್ಮೀರ್ವರಲ್ಲಿ ವಿಶ್ವಾಸವಿರಿಸುವುದಿಲ್ಲ” (10:78) ಎಂಬ ಸೂಕ್ತದ ವಿವರಣೆಯಲ್ಲಿ ಮೌದೂದಿ ಬರೆಯುತ್ತಾರೆ, “ಮೂಸಾ (ಅ) ಮತ್ತು ಹಾರೂನ್(ಅ)ರ ಮೂಲಭೂತ ಅಗತ್ಯ ಇಸ್ರಾಈಲ್ ವಂಶದ ಸ್ವಾತಂತ್ರ್ಯವೆಂದಾಗಿದ್ದರೆ, ಇಬ್ಬರೂ ಸಂದೇಶವನ್ನು ಈಜಿಪ್ಟ್ ನಲ್ಲಿ ಪ್ರಚಾರ ಮಾಡಿದರೆ ಈಜಿಪ್ಟ್‌ ಧರ್ಮವೇ ಬದಲಾಗಬಹುದೆಂದೂ ನಮ್ಮ ಅಧಿಕಾರದ ಬದಲು ಅವರ ಆಧಿಪತ್ಯ ಬರುವುದೆಂದೂ ಫಿರ್‌ಔನ್ ಮತ್ತು ಅಧಿಕಾರಿಗಳು ಆತಂಕ ಪಡುತ್ತಿರಲಿಲ್ಲ. ಮೂಸಾ(ಅ) ಈಜಿಪ್ಟ್ ನವರನ್ನು ನೈಜ ದೇವನೆಡೆಗೆ ಆಹ್ವಾನಿಸುತ್ತಿದ್ದರು. ಇದು ಬಹುದೇವತ್ವ ವ್ಯವಸ್ಥೆಯಲ್ಲಿ ಆಧಾರಿತವಾಗಿರುವ ಫರೋವನ ಸರ್ವಾಧಿಕಾರಕ್ಕೆ, ಅಧಿಕಾರ ವರ್ಗದ ನಾಯಕತ್ವಕ್ಕೆ ಮತ್ತು ಧಾರ್ಮಿಕ ಪುರೋಹಿತರ ಪೌರೋಹಿತ್ಯಕ್ಕೂ ಅಪಾಯವನ್ನುಂಟು ಮಾಡುತ್ತದೆಯೆಂದು ಅವರು ಅರಿತುಕೊಂಡರು. ಅದು ಅವರ ಆತಂಕಕ್ಕೆ ಕಾರಣ.” (ತಫ್ಹೀಮುಲ್ ಕುರ್‌ಆನ್ ಭಾಗ-2) ಮರ್ದಿತರ ವಿಮೋ ಚನೆಯ ಹೋರಾಟವನ್ನು ಕೂಡಾ ಇಸ್ಲಾಮ್ ತನ್ನ ಬೋಧನೆಗಳೊಂದಿಗೆ ಮತ್ತು ಪರಲೋಕದೊಂದಿಗೆ ಜೋಡಿಸಿದೆಯೆಂದು ಇವೆಲ್ಲಾ ಸ್ಪಷ್ಟಪಡಿಸುತ್ತದೆ.

ಸಾಮಾಜಿಕ ಹಸ್ತಕ್ಷೇಪ
ಸಾಮಾಜಿಕ ಅನಿಷ್ಟಗಳು ಅಸ್ತಿತ್ವದಲ್ಲಿದ್ದ ಕಡೆಗಳಿಗೆ ನಿಯೋಜಿಸಲ್ಪಟ್ಟ ಎಲ್ಲ ಪ್ರವಾದಿಗಳು ಅವುಗಳ ನಿರ್ಮೂಲನಕ್ಕೆ ನಿರಂತರ ಪ್ರಯತ್ನಿಸುತ್ತಿದ್ದರು. ಪ್ರವಾದಿ ನೂಹ್(ಅ), ಹೂದ್(ಅ), ಸ್ವಾಲಿಹ್(ಅ), ಶುಐಬ್(ಅ), ಲೂತ್(ಅ) ಮೊದಲಾದ ಪ್ರವಾದಿಗಳೆಲ್ಲರೂ ಹೀಗೆ ತಮ್ಮ ಕಾಲದಲ್ಲಿದ್ದ ಕೆಡುಕಿನ ವಿರುದ್ಧ ದೃಢ ನಿಲುವು ತಳೆದಿದ್ದರು. ಅವುಗಳಿಂದ ತಮ್ಮ ಸಮೂಹವನ್ನು ರಕ್ಷಿಸಲು ನಿರಂತರ ಪ್ರಯತ್ನಿಸಿದ್ದರು. ಆದರೆ ಅವರ ಕಾರ್ಯಚಟುವಟಿಕೆಗಳು, ವಿಮೋಚನಾ ಹೋರಾಟಗಳು ಅಲ್ಲಾಹ್ ಮತ್ತು ಪರಲೋಕ ವಿಶ್ವಾಸವನ್ನು ಕೇಂದ್ರೀಕರಿಸಿತ್ತು. ಇಸ್ಲಾಮ್‌ನ ಸಂದೇಶವು ಎಲ್ಲ ರೀತಿಯ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂಬುದನ್ನು ಜನರ ಮುಂದೆ ಸಾಬೀತುಪಡಿಸಿದರು. ಅಳತೆ, ತೂಕದಲ್ಲಿ ವಂಚನೆ ಮಾಡುವುದೂ ಸೇರಿದಂತೆ ಹಲವು ಆರ್ಥಿಕ ಕೆಡುಕುಗಳು, ಬಡ, ದರಿದ್ರ ಅನಾಥರ ನಿರ್ಲಕ್ಷ್ಯ, ಹೆಣ್ಣು ಮಕ್ಕಳನ್ನು ಜೀವಂತ ಹೂಳುವುದು, ಹೆತ್ತವರ ಹಕ್ಕುಗಳಲ್ಲಿ ನಿರ್ಲಕ್ಷ್ಯ, ಅಪಹಾಸ್ಯ, ಪರನಿಂದೆ, ಅನೈತಿಕತೆ ಮೊದಲಾದ ಎಲ್ಲ ಕೆಡುಕುಗಳನ್ನು ಪವಿತ್ರ ಕುರ್‌ಆನ್ ತೀಕ್ಷ್ಣವಾಗಿ ಮಾತನಾಡುತ್ತದೆ. ಅವೆಲ್ಲವುಗಳಿಂದ ಸಮಾಜವನ್ನು ರಕ್ಷಿಸಲು ಶಕ್ತವಾಗಿ ತಾಕೀತು ಮಾಡುತ್ತದೆ. ಆದರೆ ಬಲಿಪಶುಗಳನ್ನು ಮರ್ದಕರ ವಿರುದ್ಧ, ಸಜ್ಜನರನ್ನು ದುರ್ಜನರ ವಿರುದ್ಧವೂ ಸಂಘಟಿಸಲಿಲ್ಲ. ಬದಲಾಗಿ ಅಪರಾಧಿಗಳಲ್ಲಿ ಅಲ್ಲಾಹ್ ಮತ್ತು ಪರಲೋಕದ ವಿಶ್ವಾಸವನ್ನು ಬೆಳೆಸಿ, ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಯುವಂತೆ ಮಾಡಿ, ಅವರ ಮನಸ್ಸನ್ನು ಬದಲಾಯಿಸಲಾಗಿತ್ತು. ಆದ್ದರಿಂದ ಬಹಿರಂಗವಾಗಿ ಮಾತ್ರವಲ್ಲ, ಗುಪ್ತವಾಗಿ ಮಾಡುತ್ತಿದ್ದ ಕೆಡುಕುಗಳೂ ಸಂಪೂರ್ಣ ಕೊನೆಗೊಂಡಿತು. ಅಧಿಕಾರ, ಆಡಳಿತ ಲಭಿಸುವವರೆಗೂ ಪ್ರವಾದಿ(ಸ)ರು ಇದೇ ನಿಲುವನ್ನು ತೆಗೆದುಕೊಂಡರು. ಅಧಿಕಾರ ಲಭಿಸಿದ ಬಳಿಕ ಕಾನೂನಿನ ಮೂಲಕ ಜಾರಿಗೊಳಿಸಿದರು. ಸತ್ಯವಿಶ್ವಾಸ ಸ್ವೀಕರಿಸಿ, ಆದರ್ಶವನ್ನು ಬದಲಾಯಿಸಿದ ಮತ್ತು ಸಾರ್ವಜನಿಕ ಜೀವನವನ್ನು ವಿಶ್ವಾಸಕ್ಕೆ ವಿಧೇಯಗೊಳಿಸಿದವರನ್ನು ಅದಕ್ಕಾಗಿ ಬಳಸಿಕೊಂಡಿತು.

ಎಲ್ಲಾ ಸಾಮಾಜಿಕ ಹಸ್ತಕ್ಷೇಪವು ಪರಲೋಕ ಕೇಂದ್ರೀಕರಿಸಿ, ಇಸ್ಲಾಮೀ ಬೋಧನೆಯಂತೆ ಇರಬೇಕೆಂದು ಪವಿತ್ರ ಕುರ್‌ಆನನ್ನು ಅಭ್ಯಸಿಸುವ ಪ್ರತಿಯೊಬ್ಬನಿಗೂ ಅರ್ಥವಾಗುತ್ತದೆ. ಸ್ಥಿರವಾದ ಸಾಮಾಜಿಕ ಬದಲಾವಣೆಗೆ ಮತ್ತು ಸಮಾಜವು ಕೈಬಿಟ್ಟ ಹಲವು ಕೆಡುಕುಗಳು ಮರಳಿ ಬರದಿರಲು ಅದು ಅನಿವಾರ್ಯ. ಆದರೆ ಇಸ್ಲಾಮೀ ಸರಕಾರ ಇಲ್ಲದಿದ್ದರೂ ಸಮಾಜದಲ್ಲಿರುವ ಕೆಡುಕುಗಳ ನಿರ್ಮೂಲನಕ್ಕೆ ಜನಾಂದೋಲನ, ಒತ್ತಡ, ರಾಜಕೀಯ ಪ್ರಭಾವವನ್ನು ಉಪಯೋಗಿಸಬಹುದು. ಅದಕ್ಕೆ ಸಂಘಟಿತ ಪ್ರಯತ್ನ ಅನಿವಾರ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಆದರೆ ಇಸ್ರಾಈಲಿ ಸಮೂಹದ ವಿಮೋಚನೆಯಲ್ಲಿ ಮೂಸಾ(ಅ) ಸ್ವೀಕರಿಸಿದಂತೆ ಅದು ಇಸ್ಲಾಮೀ ಸಮೂಹದ ಗುರಿಯಾಗಬಾರದು. ಜನರಿಗೆ ದೇವನ ಸಂದೇಶವನ್ನು ತಿಳಿಯಪಡಿಸುವುದು ಮುಖ್ಯವಾಗಿರಬೇಕು. ದೇವ ಸಂದೇಶವನ್ನು ಅಮೂಲಾಗ್ರವಾಗಿ ಭೂಮಿಯ ಮೇಲೆ ಪಸರಿಸಿದರೆ ತನ್ನಿಂತಾನೇ ಸಮಾಜದಲ್ಲಿರುವ ಕೆಡುಕುಗಳು ಮಾಯವಾಗಲು ಸಾಧ್ಯ.