ಸನ್ಮಾರ್ಗ ವಾರ್ತೆ
✍️ ಏ.ಕೆ.ಕುಕ್ಕಿಲ
ಗ್ರೀಷ್ಮ ಎಂಬ 24 ವರ್ಷದ ಯುವತಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಕೇರಳದ ಜಿಲ್ಲಾ ಆಡಿಷನಲ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಎಂ ಬಶೀರ್ ಅವರು ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾನ್ಯವಾಗಿ ಶಿಕ್ಷೆ ನೀಡಿದ ನ್ಯಾಯಾಧೀಶರಿಗಿಂತ ಶಿಕ್ಷೆಗೊಳಗಾದ ಅಪರಾಧಿಯೇ ಚರ್ಚೆಗಳಾಗುವುದು ಹೆಚ್ಚು. ಆದರೆ ಈ ನ್ಯಾಯಾಧೀಶ ಇದಕ್ಕಿಂತ ವ್ಯತಿರಿಕ್ತವಾಗಿದ್ದಾರೆ. ಇದಕ್ಕೆ ಕಾರಣ ಕಳೆದ 8 ತಿಂಗಳಲ್ಲಿ ಇವರು ನಾಲ್ಕು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿರುವುದು. ವಿಶೇಷ ಏನೆಂದರೆ ಹೀಗೆ ಶಿಕ್ಷೆಗೊಳಗಾದವರಲ್ಲಿ ಇಬ್ಬರು ಮಹಿಳೆಯರು.
ತಮಿಳುನಾಡಿನ ಖಾಸಗಿ ಕಾಲೇಜ್ ಯಲ್ಲಿ ಶರೋನ್ ರಾಜ್ ಮತ್ತು ಈ ಗ್ರೀಷ್ಮ ಜೊತೆಯಾಗಿ ಕಲೀತಾ ಇದ್ರು. ಆಕೆ ಸಾಹಿತ್ಯದ ವಿದ್ಯಾರ್ಥಿ. ಈತ ಬಿಎಸ್ಸಿ ರೇಡಿಯಾಲಜಿಯ ಅಂತಿಮ ವರ್ಷದ ವಿದ್ಯಾರ್ಥಿ. ಇವರಿಬ್ಬರ ನಡುವೆ ಆತ್ಮೀಯ ಗೆಳೆತನ ಇತ್ತು. ಇಬ್ಬರೂ ಪ್ರೀತಿಸ್ತಾ ಇದ್ರು. ಈ ನಡುವೆ ಈ ಗ್ರೀಷ್ಮಾಗೆ ಮದುವೆ ಮಾಡಲು ಹೆತ್ತವರು ಹುಡುಗನನ್ನ ಗೊತ್ತು ಮಾಡಿದ್ರು. ಈಗ ಗ್ರೀಷ್ಮ ಸಂಕಟಕ್ಕೆ ಸಿಲುಕಿದ್ಲು. ಕೊನೆಗೆ ಈ ಶರೋನ್ ರಾಜ್ ನನ್ನು ಕೈ ಬಿಟ್ಟು ಹೆತ್ತವರು ನಿರ್ಧರಿಸಿದ ಯುವಕನೊಂದಿಗೆ ಮದುವೆಯಾಗಲು ತೀರ್ಮಾನಿಸಿದಳು. ಆದರೆ ಅದಕ್ಕಾಗಿ ಈ ಶರೋನ್ ರಾಜ್ ನನ್ನು ಹತ್ಯೆ ಮಾಡುವುದಕ್ಕೂ ಪ್ಲಾನ್ ಮಾಡಿದ್ಲು. ಈಕೆಯ ಜೊತೆ ಈಕೆಯ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್ ಮತ್ತು ಆಕೆಯ ತಾಯಿ ಸೇರಿಕೊಂಡರು.
ಹೀಗೆ ಈ ಗ್ರೀಷ್ಮ ಗೆಳೆಯ ಶರೋನ್ ರಾಜ್ ನನ್ನು ತನ್ನ ರೂಮ್ಗೆ ಕರೆಸಿಕೊಂಡಳು. ಅಲ್ಲಿ ವಿಷ ಬೆರೆಸಿದ ಜ್ಯೂಸನ್ನು ಆತನಿಗೆ ಕುಡಿಯಲು ಕೊಟ್ಳು. ಕುಡಿಯುತ್ತಾ ಆತನಿಗೆ ಏನೋ ಅನುಮಾನ ಬಂತು. ಆತ ಅದನ್ನು ರೆಕಾರ್ಡ್ ಮಾಡಿಕೊಂಡ. ಆಗ ಆಕೆ ಬೇಡ ಬೇಡ ಯಾಕೆ ರೆಕಾರ್ಡ್ ಮಾಡ್ತಿ ಎಂದು ಆತನನ್ನು ತಡೆಯುವುದಕ್ಕೂ ಪ್ರಯತ್ನಿಸಿದ್ಲು. ಜ್ಯೂಸ್ ಕುಡಿದ ಬಳಿಕ ಆತ ತೀವ್ರ ಅಸೌಖ್ಯಕ್ಕೆ ಒಳಗಾದ. ಅಂಗಾಂಗ ವೈಫಲ್ಯಕ್ಕೆ ತುತ್ತಾದ ಮತ್ತು 2022 ಅಕ್ಟೋಬರ್ 25ರಂದು ಆತ ಸಾವಿಗೀಡಾದ. ಹೀಗೆ ಸಾಯೋದಕ್ಕಿಂತ ಮೊದಲು 11 ದಿನಗಳ ಕಾಲ ಆತ ಆಸ್ಪತ್ರೆಯಲ್ಲಿ ನರಕ ಯಾತನೆ ಅನುಭವಿಸಿದ್ದ.
ಇದಾದ ಬಳಿಕ ಅಕ್ಟೋಬರ್ 31ರಂದು ಈ ಗ್ರೀಷ್ಮಾಳನ್ನು ಅರೆಸ್ಟ್ ಮಾಡಲಾಯಿತು.
ತಾನು ಹೆತ್ತವರಿಗೆ ಏಕೈಕ ಮಗಳು, ತನ್ನದಿನ್ನೂ ಸಣ್ಣ ವಯಸ್ಸು. ತಾನು ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದೇನೆ ಮತ್ತು ಈ ಮೊದಲು ತಾನು ಯಾವುದೇ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿಲ್ಲ, ಆದ್ದರಿಂದ ತನಗೆ ಶಿಕ್ಷೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಈ ಗ್ರೀಷ್ಮ ನ್ಯಾಯಾಧೀಶರಲ್ಲಿ ವಿನಂತಿಸಿದಳು. ಆದರೆ ನ್ಯಾಯಾಧೀಶ ಎ ಎಂ ಬಶೀರ್ ಅವರು ಈಕೆಯ ಕೋರಿಕೆಯನ್ನು ಮನ್ನಿಸಲಿಲ್ಲ. ನಿನ್ನ ಮೇಲೆ ವಿಶ್ವಾಸವಿಟ್ಟು ಬಳಿಗೆ ಬಂದವನನ್ನ ಅತ್ಯಂತ ಅಮಾನುಷವಾಗಿ ಕೊಂದಿದ್ದಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸಲು ನೀನು ಯತ್ನಿಸಿದ್ದಿ ಎಂದು ನ್ಯಾಯಾಧೀಶರು ಶಿಕ್ಷೆಯ ವೇಳೆ ಅಭಿಪ್ರಾಯ ಪಟ್ಟರು. ಮಾತ್ರವಲ್ಲ ಈ ಸಂಚಿನಲ್ಲಿ ಭಾಗಿಯಾದ ನಿರ್ಮಲ ಕುಮಾರನ್ ನಾಯರ್ ಎಂಬ ಚಿಕ್ಕಪ್ಪನಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನೂ ಘೋಷಿಸಿದರು.
ನ್ಯಾಯಾಧೀಶ ಎಎಂ ಬಶೀರ್ ಅವರು 2024 ಮೇಯಲ್ಲಿ ಮೂರು ಮಂದಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದ್ದರು. ಅದರಲ್ಲಿ ಓರ್ವ ಮಹಿಳೆ, ಅವರ ಮಗ ಮತ್ತು ಇನ್ನೊಬ್ಬರು ಸೇರಿದ್ದರು. ಶಾಂತಕುಮಾರಿ ಎಂಬವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಈ ಗಲ್ಲು ಶಿಕ್ಷೆಯನ್ನ ಅವರು ವಿಧಿಸಿದ್ದರು. ಇದೀಗ ಗ್ರೀಷ್ಮಳಿಗೆ ಅವರು ಗಲ್ಲು ಶಿಕ್ಷೆಯನ್ನು ವಿಧಿಸಿದ್ದಾರೆ.
ನ್ಯಾಯಾಧೀಶ ಬಶೀರ್ ಅವರು ಸಾಹಿತಿಯೂ ಹೌದು. ಎಂಟಕ್ಕಿಂತಲೂ ಅಧಿಕ ಪುಸ್ತಕಗಳನ್ನ ಇವರು ಪ್ರಕಟಿಸಿದ್ದಾರೆ. ಅದರಲ್ಲಿ ಕಥಾ ಸಂಕಲನ ಇದೆ. ಜರ್ನಿ ಅನುಭವ ಇದೆ. ಮತ್ತು ಇನ್ನಿತರ ವೈಚಾರಿಕ ಕೃತಿಗಳೂ ಇವೆ. ಇದೀಗ ತನ್ನ ಖಡಕ್ ನಿಲುವಿನಿಂದ ಅವರು ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿದ್ದಾರೆ.












