ಸನ್ಮಾರ್ಗ ವಾರ್ತೆ
✍️ಅರಫಾ ಮಂಚಿ
ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆಯು ಭಾರೀ ಹೆಚ್ಚಳವಾಗಿದೆ ಎಂಬ ಪ್ರಚಾರ ಒಂದು ಕಡೆ ಪ್ರಚಲಿತದಲ್ಲಿದೆ. ಸಂಘ ಪರಿವಾರವೇ ಅದರ ಹಿಂದಿರುವುದು. ಹಿಂದುತ್ವ ರಾಷ್ಟ್ರೀಯತೆಯ ಭಾಗವಾಗಿ ಇದನ್ನು ಸಮಾಜದ ನಡುವೆ ಹರಿಯ ಬಿಡಲಾಗಿದೆ ಎಂದು ಇಂದು ಎಲ್ಲರಿಗೂ ಗೊತ್ತು. ಪ್ರಧಾನಿ ಮೋದಿ ಇದನ್ನೇ ತಮ್ಮ ಚುನಾವಣಾ ಪ್ರಚಾರಕ್ಕೂ ಬಳಸಿಕೊಂಡಿದ್ದರು. 2024 ಮೇ ತಿಂಗಳಲ್ಲಿ ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯು (ಇಎಸಿ) ಪ್ರಕಟಿಸಿದ ವರ್ಕಿಂಗ್ ಪೇಪರ್ನಲ್ಲಿ ಮುಸ್ಲಿಂ ಜನಸಂಖ್ಯೆಯ ಲೆಕ್ಕವನ್ನು ಹೆಚ್ಚಿಸಿ ತೋರಿಸಿತು.
ಆದರೆ ನಿಮಗೂ ಗೊತ್ತಿದೆ. ದೇಶ ಈಗ 2025ಕ್ಕೆ ತಲುಪಿರುವಾಗ ಭಾರತದ ಸುಮಾರು 130 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರಿಗೆ ಇಪ್ಪತ್ತುಕೋಟಿ ಜನಸಂಖ್ಯೆಯನ್ನು ತಲುಪಲು ಸಾಧ್ಯವಾಗಿಲ್ಲ. ಆದುದರಿಂದ ನೂರಹತ್ತು ಕೋಟಿ ಹಿಂದೂಗಳಿರುವಲ್ಲಿ ಮುಸ್ಲಿಮರನ್ನು ಮತ್ತು ಅವರ ಜನ ಸಂಖ್ಯೆಯನ್ನು ಒಂದು ಬೆದರಿಕೆಯಾಗಿ ಚಿತ್ರಿಸುವುದಕ್ಕೆ ಅರ್ಥ ಇಲ್ಲ. ಆದರೂ ಪ್ರಧಾನಿಯ ಆರ್ಥಿಕ ಸಲಹಾ ಸಮಿತಿ ಹಾಗೆ ಮಾಡಿದೆ.
ಯಾಕೆಂದರೆ ಇದು ಹಿಂದೂ ರಾಷ್ಟ್ರ, ಹಿಂದುತ್ವ ರಾಷ್ಟ್ರೀಯತೆಯಲ್ಲಿ ಅರ್ಥ ಪಡೆದುಕೊಳ್ಳುತ್ತದೆ ಈ ಹಿಂದುತ್ವ ರಾಷ್ಟ್ರೀಯತೆಯ ಹರಿಕಾರ ಯಾರೆಂದೂ ನಿಮಗೂ ಗೊತ್ತು. ಅದು ಆರೆಸ್ಸೆಸ್. ಆದ್ದರಿಂದ ಹಿಂದೂ ರಾಷ್ಟ್ರ ಮಾಡುವುದಕ್ಕೆ
ಪೂರಕವಾಗಿ ಮುಸ್ಲಿಮರು ಆರ್ಥಿಕವಾಗಿ ದೇಶಕ್ಕೆ ಹೊರೆಯಾಗಲಿದ್ದಾರೆ ಎಂದು ಅದರ ಈ ವರದಿ ಇಂಡೈರಕ್ಟ್ ಸಂದೇಶವನ್ನು ನೀಡುತ್ತಿದೆ.
ಇಎಸಿ ಹೊರತಂದ ಪ್ರಕಟಣೆಯಲ್ಲಿ ಭಾರತದ ಮುಸ್ಲಿಮರ ಜನಸಂಖ್ಯೆ 1950ರಲ್ಲಿ ಶೇ. 9.84 ಇತ್ತು. 2015ರಲ್ಲಿ ಶೇ. 14.09ಕ್ಕೇರಿಕೆಯಾಗಿದೆ. ಒಟ್ಟು ಶೇ. 43.15 ಶೇಕಡ ಹೆಚ್ಚಳವಾಗಿದೆ. ಬಹು ಸಂಖ್ಯಾತ ಹಿಂದೂಗಳ ಜನಸಂಖ್ಯೆಯು ಶೇ. 84.09 ರಿಂದ 78.08ಕ್ಕಿಳಿದಿದೆ. ಶೇ. 7.8ರಷ್ಟು ಕಡಿಮೆಯಾಗಿದೆ. ಇದು ಮುಸ್ಲಿಂ ವಿರೋಧಿ ಪ್ರಚಾರದ ಶೈಲಿ. ಇದು ಕೇಂದ್ರ ಸರಕಾರದ ವ್ಯವಸ್ಥಿತ ಅಪಪ್ರಚಾರವಾಗಿದೆ. ಮುಸ್ಲಿಮರನ್ನು ತೋರಿಸಿ ಬಹುಸಂಖ್ಯಾತರಲ್ಲಿ ಹೆದರಿಕೆ ಹುಟ್ಟಿಸುವ ತಂತ್ರ ಇದು. ಆದ್ದರಿಂದ ಮೊದಲೇ ಹೇಳಿದಂತೆ, ಮುಸ್ಲಿಮರ ವಿರುದ್ಧ ಇಂತಹ ತಪ್ಪು ಪ್ರಚಾರಗಳು ಘೋರ ಪಾತಕಕ್ಕೆ ಪ್ರೇರಣೆಯನ್ನು ನೀಡುವಂತಹದ್ದು. ಮುಸ್ಲಿಮರ ವೋಟು ಬ್ಯಾಂಕಿಗೆ ಕಣ್ಣಿಡುವ ಪ್ರತಿಪಕ್ಷಗಳವರು ಬಹಳಷ್ಟು ಮಾತಾಡುತ್ತಾರೆ. ಆದರೆ ಅಧಿಕೃತವಾಗಿ ಯಾವುದೇ ಪಾರ್ಟಿ ಈ ತಪ್ಪು ಲೆಕ್ಕವನ್ನು ಖಂಡಿಸುವ ಗೋಜಿಗೆ ಹೋಗಲಿಲ್ಲ. ಬಿಹಾರದ ಪಕ್ಷೇತರ ಸಂಸದ ಪಪ್ಪು ಯಾದವ್ರು ಮಾತ್ರ ಮಾಧ್ಯಮದೊಂದಿಗೆ 20 ಕೋಟಿ ಮುಸ್ಲಿಮರು 120 ಕೋಟಿ ಹಿಂದುಗಳಿಗೆ ಹೇಗೆ ಬೆದರಿಕೆಯಾಗಿದ್ದಾರೆ ಎಂದು ಪ್ರಶ್ನಿಸಿದನ್ನು ಇಲ್ಲಿ ಸಾಂದರ್ಭಿಕವಾಗಿ ಉದ್ಧರಿಸಬಹುದಾಗಿದೆ.
ಆದ್ದರಿಂದ ಇಂದು ಮುಸ್ಲಿಂ ಹೆಸರಿದ್ದರೆ ವಿರೋಧಿಸಬೇಕಾದವರು ಮತ್ತು ತೊಲಗಿಸಿ ಹಾಕಬೇಕೆಂದವರು ಎಂದು ನಿರ್ಣಯಿಸುವ ಒಂದು ಮನೋಗತಿಯ ವರ್ಗವನ್ನೇ ಇಂತಹ ಅಪಪ್ರಚಾರಗಳು ಸಮಾಜದಲ್ಲಿ ಹುಟ್ಟು ಹಾಕಿತು. ಈ ವರ್ಗ ಎಲ್ಲೂ ಇರಬಹುದು. ಹೇಗೂ ಇರಬಹುದು. ಸರಿಯಾಗಿ ಹೇಳುವುದಾದರೆ ಅದಕ್ಕೆ ಅವರಿವರು ಎಂಬುದೆಂದೇನೂ ಇಲ್ಲ. ನೋಡಿ, ಉತ್ತರ ಪ್ರದೇಶದ ಆಝಂಗಡದಲ್ಲಿ ಪರಶುರಾಂ ವನ್ರಾಜ್ ಎಂಬ ಯುವಕನೊಬ್ಬ ಮುಸ್ಲಿಮರ ವಿರುದ್ಧ ದ್ವೇಷ ಪ್ರಚಾರ ನಡೆಸಿ ಬಂಧನಕ್ಕೊಳಗಾಗಿದ್ದಾನೆ. ಯಾಕೆಂದರೆ, ಫೇಸ್ಬುಕ್ ನಲ್ಲಿ ಈತ ಮುಸ್ಲಿಮರನ್ನು ಹೀಯಾಳಿಸಿ, ಇಸ್ಲಾಮ್ ಮತ್ತು ಪ್ರವಾದಿಯನ್ನು ಅವಹೇಳಿಸಿ ನಿರಂತರ ಬರೆಯುತ್ತಿದ್ದ ಎಂದು ವರದಿಯಾಗಿತ್ತು. ಈಗ ಪವಿತ್ರ ಗ್ರಂಥ ಕುರ್ಆನನ್ನು ಮೋರ್ಪ್ ಮಾಡಿದ ಚಿತ್ರ, ಪ್ರವಾದಿಯ ಕುರಿತು ಇಲ್ಲಸಲ್ಲದ ಮಾತು. ಮುಸ್ಲಿಂ ಸಮುದಾಯವನ್ನು ಹೀನಾಯವಾಗಿ ಬೈದಿದ್ದಾನೆ. ಮುಸ್ಲಿಮರು ಇವನನ್ನೂ ಅಪ ಪ್ರಚಾರದ ಸೃಷ್ಟಿಯೆಂದು ಕ್ಷಮಿಸಬಹುದಾಗಿದೆ. ಹೌದು, ಇವರೆಲ್ಲ ಮುಸ್ಲಿಮರೆಂದರೆ ಉದ್ವಿಘ್ನಗೊಳ್ಳುವ ಮನಸ್ಥಿತಿಯವರು. ಇಂತಹದ್ದೊಂದು ಯುವ ತಲೆಮಾರು ಸೃಷ್ಟಿಯಾಗಿರುವುದು ದೇಶದ ಒಟ್ಟು ಹಿತಕ್ಕೆ ಅಪಾಯಕಾರಿಯಾಗಿದೆ. ಹೇಳಿ, ಪಬ್ಲಿಕ್ ನಡುವೆ ಇರುವ ಇಂತಹವರು ಮುಸ್ಲಿಂ ಎಂದಾದರೆ ಏನು ಮಾಡಲು ತಯಾರಿರುವುದಿಲ್ವಾ? ಮುಸ್ಲಿಮರೆನ್ನುವ ಕಾರಣಕ್ಕೆ ಎಂಬತ್ತು ವರ್ಷದ ಮುದುಕನಿಗೂ ಸಣ್ಣ ಮಕ್ಕಳಿಗೂ ಹೊಡೆಯುತ್ತಿರುವ ಘಟನೆಗಳು ಆಗಾಗ ವರದಿಯಾಗುವುದು ಹೀಗೆ.
ಒಟ್ಟಿನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳಗಳು ತಮ್ಮ ಹಕ್ಕು, ಅಧಿಕಾರ, ಅವಕಾಶಗಳನ್ನು ಕಸಿದುಕೊಳ್ಳುತ್ತದೆ ಎಂದು ನಂಬಿದ ಇಂತಹವರಿಂದ ಮುಸ್ಲಿಮರ ಮೇಲೆ, ಅವರ ಪವಿತ್ರ ಗ್ರಂಥ, ಮಸೀದಿಗಳ ಮೇಲೆ ನೇರ ದಾಳಿ ಮತ್ತು ವೈಚಾರಿಕ ದಾಳಿಗಳು ಕೂಡಾ ನಡೆಯುತ್ತಿವೆ. ಇಂದು ಇಂತಹ ಮುಸ್ಲಿಂ ವಿರೋಧಿಗಳು ಒಂದು ಕೇಡರ್ ರೂಪದಲ್ಲಿ ಬೆಳೆದು ಎಲ್ಲ ಕಡೆ ಹರಡಿಕೊಂಡಿದ್ದಾರೆ. ಭಾವೈಕ್ಯ, ಒಗ್ಗಟ್ಟು, ಸೌಹಾರ್ದ ಇವೆಲ್ಲ ಇವರು ದ್ವೇಷಿಸುವ ಪದಗಳು. ಆದ್ದರಿಂದ ಮುಸ್ಲಿಮರ ವಿರುದ್ಧ ಈ ಕೇಡರ್ಗಳ ಹಲ್ಲೆ, ದಾಳಿಗಳು ಯಾವ ರೂಪದಲ್ಲಿಯೂ ಇರಬಹುದು. ಯಾಕೆಂದರೆ ಮುಸ್ಲಿಮರು ಹೆಚ್ಚುತ್ತಿದ್ದಾರೆ. ಅವರನ್ನು ನಿಯಂತ್ರಿಸಬೇಕೆಂಬುದೊಮದೇ ಇಂತಹ ವರ ತಲೆಯಲ್ಲಿರುತ್ತದೆ, ಅಷ್ಟೇ.
ನೋಡಿ, ಮುಸ್ಲಿಮರ ಜನಸಂಖ್ಯೆಯನ್ನು ಹೇಳುವ ಇವರು ಹಿಂದೂಗಳ ಜನಸಂಖ್ಯೆ ಹೆಚ್ಚಿದ್ದನ್ನು ಹೇಳುವುದಿಲ್ಲ. ಮುಸ್ಲಿಮರ ಜನಸಂಖ್ಯೆ ಇವತ್ತು ನೂರು ಕೋಟಿಗೆ ತಲುಪಿರುವಂತೆ ಮತ್ತು ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುವಂತೆ ಸಂಘಪರಿವಾರದ ಪ್ರಚಾರದ ಭರ ಇರುತ್ತದೆ. ಇಎಸಿಯ ಈ ಲೆಕ್ಕವೊಂದೇ ಅಲ್ಲ. ಮುಸ್ಲಿಂ ವಿರೋಧಿ ಪ್ರಚಾರ ಹಲವು ತರದ್ದು.
ಜನಸಂಖ್ಯೆಯ ವಿಚಾರದಲ್ಲಿ ಹೇಳುವುದಾದರೆ ಮನುಷ್ಯನಿಂದ ಮನುಷ್ಯ ಹುಟ್ಟುತ್ತಾನೆ. ನಿಜ, ಆದರೆ ಮನುಷ್ಯನನ್ನು ಮನುಷ್ಯನೇ ಹೆಚ್ಚಿಸುತ್ತಾನೆ ಎಂಬ ಲೋಕದ ಲೆಕ್ಕದಲ್ಲಿ ಮುಸ್ಲಿಮರಿಗೆ ವಿಶ್ವಾಸ ಇಲ್ಲ. ಅದು ದೈವಿಕ. ಆದ್ದರಿಂದ ಜನ ಸಂಖ್ಯೆಯ ಬಗ್ಗೆ ಅವರು ಯೋಚಿಸುವುದಿಲ್ಲ. ಯಾಕೆಂದರೆ ಮುಸ್ಲಿಮನೆಂದೂ ತನ್ನ ಸೃಷ್ಟಿಕರ್ತ ಎಂದು ಮನುಷ್ಯನನ್ನು ಒಪ್ಪಿಕೊಂಡಿಲ್ಲ. ಸೃಷ್ಟಿ ಲಯಗಳಲ್ಲಿ ಭೌತಿಕತೆಗೋ ಭಾವನಾತ್ಮಕತೆಗೋ ಸ್ಥಾನವಿಲ್ಲ. ಅದು ದೇವ ಕಾರ್ಯವಾಗಿದೆ. ಮುಸ್ಲಿಮರ ಜನಸಂಖ್ಯೆಯ ಹೆಚ್ಚಳದ ಬಗ್ಗೆ ಮಾತ್ರವಲ್ಲ ಲೋಕದ ಜನ ಸಂಖ್ಯೆಯ ಕುರಿತು ಭೀತಿ ಸೃಷ್ಟಿಸುವುದು ಖಂಡಿತಾ ಅದೈವಿಕ ಕಾರ್ಯವಾಗಿದೆ.
ವಿಷಯ ಬದಲಿಸೋಣ:
ಇತ್ತೀಚೆಗೆ ಮುಂಬಯಿಯಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ತನ್ನ ಕಾರ್ಯಕರ್ತರಿಗೆ ಆರೆಸ್ಸೆಸ್ ತರ ಕೇಡರ್ ಪಾರ್ಟಿ ಕಟ್ಟಬೇಕು ಎಂದು ಕರೆ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆರೆಸ್ಸೆಸ್ ಬಹುದೊಡ್ಡ ಪಾತ್ರವಹಿಸಿದೆ ಎಂದಿದ್ದರು. ಆರೆಸ್ಸೆಸ್ ಅನ್ನು ಶರದ್ ಪವಾರ್ ಶ್ಲಾಘಿಸಿದ್ದಾರೆ ಎಂದೂ ಮಾಧ್ಯಮದಲ್ಲಿ ವರದಿಯೂ ಬಂದಿತ್ತು. ಜ್ಯೋತಿಬಾ ಪುಲೆ, ಛತ್ರಪತಿ ಸಾಹು ಮಹಾರಾಜ್, ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಯಲ್ಲಿ ದೃಢವಾಗಿರುವ, ಬದ್ಧತೆ ಇರುವ ಆರೆಸ್ಸೆಸ್ಗೆ ಸಮಾಂತರವಾದ ಒಂದು ಕೇಡರ್ ಪಾರ್ಟಿ ಕಟ್ಟಬೇಕೆಂಬುದಾಗಿತ್ತು. ಆ ಸಭೆಯಲ್ಲಿ ಶರದ್ ಪವಾರ್ ಮಾತುಗಳು. ಆರೆಸ್ಸೆಸ್ಗೂ ಶರದ್ ಪವಾರ್ ಪಾರ್ಟಿಗೂ ಅಜಗಜಾಂತರ ವ್ಯತ್ಯಾಸ ಇಲ್ವಾ? ಇದೆ. ಆರೆಸ್ಸೆಸ್ಗೆ ಒಂದು ಆಶಯ ಇದೆ. ಅದು ಮುಸ್ಲಿಮ್ ರಹಿತ ಇಂಡಿಯ ಅಥವಾ ಹಿಂದೂ ದೇಶ. ಆದರೆ ಪವಾರ್ ಆಗಲಿ, ರಾಹುಲ್ ಗಾಂಧಿ ಆಗಲಿ ಇವರೆಲ್ಲ ಜಾತ್ಯತೀತ ಭಾರತದ ವಿಚಾರಧಾರೆ ಯವರಲ್ವ? ಮುಸ್ಲಿಮರನ್ನು ಇವರಿಗೆ ಶತ್ರುಗಳೆಂದು ಬಿಂಬಿಸಲು ಆಗುವುದೂ ಇಲ್ಲ. ಭಾರತದಲ್ಲಿ ಮುಸ್ಲಿಮರನ್ನು ತೋರಿಸಿ ಇತರ ಪಾರ್ಟಿಗಳನ್ನು ಬೆಳೆಯಲು ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಸಂಘ ಪರಿವಾರವು ಸೃಷ್ಟಿಸಿ ಹಾಕಿದೆ. ಮುಸ್ಲಿಂ ವಿರೋಧಿ ನಿಲುವು ಅದಕ್ಕೆ ಬಲಿಷ್ಠ ಕೇಡರ್ ಅನ್ನೇ ಸೃಷ್ಟಿಸಿತ್ತು. ಪವಾರ್ಗೆ ಹೀಗೆ ಸಾಧ್ಯವಾ? ಇಲ್ಲ.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ವಿಚಾರವನ್ನು ಎತ್ತಿಕೊಳ್ಳೋಣ. ಇತ್ತೀಚೆಗೆ ರಾಹುಲ್ ಗಾಂಧಿಯವರು ಆರೆಸ್ಸೆಸ್ ಪ್ರಮುಖ್ ಮೋಹನ್ ಭಾಗವತ್ರು ಭಾರತದ ಸಂವಿಧಾನ ಮತ್ತು ಬ್ರಿಟಿಷರ ವಿರುದ್ಧ ನಡೆದಿರುವ ಹೋರಾಟವೇ ಅಸಿಂಧು ಎಂದು ಹೇಳಿಕೆ ನೀಡಿದ್ದಾರೆ. ಇದು ಅವರ ಅಹಂಕಾರವಾಗಿದೆ ದೇಶದ್ರೋಹವಾಗಿದೆ ಎಂದು ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕೆಂದು ರಾಹುಲ್ ಹೇಳಿದರು. ಮಾತ್ರವಲ್ಲ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವುದು ಪ್ರತಿಯೊಬ್ಬ ಭಾರತೀಯನ ಅವಹೇಳನ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗಿದ್ದರೆ ಈ ಸ್ವಾತಂತ್ರ್ಯವನ್ನು ಆರೆಸ್ಸೆಸ್ ಯಾಕೆ ಒಪ್ಪುವುದಿಲ್ಲ ಎಂದು ರಾಹುಲ್ ಗಾಂಧಿಗೂ ಖಂಡಿತ ಗೊತ್ತಿರಬಹುದು. ಯಾಕೆಂದರೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ವಹಿಸಿದ ಪಾತ್ರ ಅಂಥದ್ದು. ನೋಡಿ, ಬಹುತೇಕ ನಮಗಿವತ್ತು ಮೌಲಾನಾ ಅಬುಲ್ ಕಲಾಂ ಆಝಾದ್ ಇಂತಹ ಒಂದೆರಡು ಮುಸ್ಲಿಮರ ಹೆಸರು ಗೊತ್ತಿರಬಹುದು. ಆದರೆ ವಾಸ್ತವದಲ್ಲಿ ಈ ಸ್ವಾತಂತ್ರ್ಯ ಚಳವಳಿಯಲ್ಲಿ ಜಮ್ಇಯ್ಯತುಲ್ ಉಲೇಮ ಎಂಬ ಮುಸ್ಲಿಂ ವಿದ್ವಾಂಸರ ಸಂಘಟನೆ ಸಂಪೂರ್ಣವಾಗಿ ಭಾಗವಹಿಸಿತ್ತು. ಮುಹಮ್ಮದಲಿ ಜೌಹರ್, ಶೌಕತಲಿ ಜೌಹರ್ ಸ್ವಾತಂತ್ರ್ಯಕ್ಕಾಗಿ ಬಹಿರಂಗ ಹೋರಾಟಕ್ಕಿಳಿದರು. ಉಬೈದುಲ್ಲ ಸಿಂಧಿ, ಮಹಮೂದುಲ್ ಹಸನ್ ದೇವ್ಬಂದಿ, ಮುಂತಾದ ಸಾವಿರಾರು ಸ್ವಾತಂತ್ರ್ಯ ಸೇನಾನಿಗಳಿದ್ದಾರೆ. ಖಿಲಾಫತ್- ಅಸಹ ಕಾರ ಚಳವಳಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ನಡೆದಿತ್ತು. ಬಹುಶಃ ಮುಸ್ಲಿಮ್ ಹೆಸರುಗಳ ಕಾರಣದಿಂದಾಗಿ ಆರೆಸ್ಸೆಸ್ಸಿಗೆ 1947ರಲ್ಲಿ ಭಾರತಕ್ಕೆ ಸಿಕ್ಕಿದ ಸ್ವಾತಂತ್ರ್ಯ ಅಸಿಂಧು ಆಗಿರಬಹುದು. ಏನೇ ಇರಲಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರ ಹಿರಿದು. ಜೊತೆಗೆ ಮುಸ್ಲಿಮರಿಗೂ ದಲಿತರಿಗೂ ಅಂಬೇಡ್ಕರ್ರ ಸಂವಿಧಾನ ಸಮಾನತೆ ಕೊಡುತ್ತಿದೆ. ಆದುದರಿಂದ ಅದು ಕೂಡ ಆರೆಸ್ಸೆಸ್ಸಿಗೆ ಅಸಿಂಧು ಆಗಿರಬಹುದು. ಇರಲಿ,
ವಿಷಯಕ್ಕೆ ಬರೋಣ:
ಬಿಜೆಪಿ ಮುಸ್ಲಿಮರ ಜನಸಂಖ್ಯೆ ಮಾತ್ರ ಹೆಚ್ಚುತ್ತಿದೆ ಎಂದು ಪ್ರಚಾರ ಮಾಡುವ ಇಂಡಿಯದಲ್ಲಿ 2011ರಲ್ಲಿ ಕೊನೆಯ ಬಾರಿ ಜನಗಣತಿ ನಡೆದದ್ದು. ಈ ವಿಚಾರ ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಗೆ ಗೊತ್ತಿಲ್ವೇ. ದಿವಂಗತ ಮನ್ಮೋಹನ್ ಸಿಂಗ್ ಸರಕಾರ ಮಾಡಿದ್ದು. ಮುಸ್ಲಿಮರ ವಿರುದ್ಧ ಪ್ರಚೋದಿಸುವ ರಾಜಕೀಯಕ್ಕೆ ಜನಗಣತಿ, ಜಾತಿ ಜನಗಣತಿಗಳೆಲ್ಲ ಅಗತ್ಯ ಇಲ್ಲ ಅನಿಸಿದ್ದರಿಂದ ಮೋದಿ ಸರಕಾರ ಸೆನ್ಸಸ್ ಮಾಡಿಸದ್ದಾಗಿರಬಹುದು. ಅಲ್ಪಸಂಖ್ಯಾತರು ಹಕ್ಕು ಕಬಳಿಸುವವರೆಂದು ಮನ್ಮೋಹನ್ ಸಿಂಗ್ ಸರಕಾರವನ್ನು ದೂಷಿಸಿ 2024ರ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿ ಪ್ರಚಾರ ಮಾಡಿದ್ದು ನಿಮಗೂ ಗೊತ್ತಿರಬಹುದು. ಇರಲಿ ಒಟ್ಟಿನಲ್ಲಿ ಸಂಘಪರಿವಾರಕ್ಕೆ ಮುಸ್ಲಿಮರನ್ನು ಒಂಟಿಯಾಗಿಸಬೇಕಿದೆ. ಆರೆಸ್ಸೆಸ್ಗೆ ನೂರು ವರ್ಷ ಆಗಿಯೂ ಮುಸ್ಲಿಮ್ ವಿರೋಧಿ ಪ್ರಚಾರ ಸ್ಥಿತಿಯಲ್ಲೇ ಈಗಲೂ ಅದು ಉಳಿದುಕೊಂಡಿದೆ. ಅಲ್ಲ, ಇಂತಹ ಗೂಢೋದ್ದೇಶಕ್ಕೆ ಮನುಷ್ಯರನ್ನು ಅವರ ಧರ್ಮದ ಕಾರಣಕ್ಕಾಗಿ ಅಪಮಾನಿಸುವ ಕೆಲಸಕ್ಕೆ ದೈವಿಕ ಬಲ ಇದೆಯೇ? ಖಂಡಿತ ಇಲ್ಲ.
ಆದ್ದರಿಂದ ಭಾರತದಲ್ಲಿ ಮುಸ್ಲಿಮರ ಅಸ್ತಿತ್ವ ಸಂಘಪರಿವಾರದ ದಾಂಧಲೆಗಳ ನಡುವೆಯೂ ದೃಢವಾಗಿ ಉಳಿದಿರುವುದು ಆ ದೇವ ಬಲದಿಂದ ಎಂದರೆ ಖಂಡಿತ ಭಾವನಾತ್ಮಕ ಮಾತಲ್ಲ.
ಏನಿದ್ದರೂ ನಮ್ಮ ಸೆನ್ಸಸ್ ಡಾಟಗಳು ಕಳೆದ ಮೂವತ್ತು ವರ್ಷಗಳಿಂದ ಮುಸ್ಲಿಮರ ಜನಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಸೂಚಿಸುತ್ತಿವೆ. 1981ರಲ್ಲಿ 32.9 ಶೇಕಡ ಮುಸ್ಲಿಮರಿದ್ದರು. 2001.2011ರಲ್ಲಿ ಮುಸ್ಲಿಮರ ಬೆಳವಣಿಗೆ ದರ 24.6 ಶೇಕಡಕ್ಕೆ ಕುಸಿಯಿತು. ಅಂದರೆ ಈ ಅವಧಿಯಲ್ಲಿ 8.3 ಶೇಕಡ ಮುಸ್ಲಿಮ್ ಜನಸಂಖ್ಯೆಯಲ್ಲಿ ಕಡಿಮೆ ಆಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ ಶೇ. 16.8 ಕಡಿಮೆಯಾಗಿದೆ. ಒಟ್ಟು ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗಿಲ್ಲ. ಬದಲಾಗಿ ಕಡಿಮೆಯಾಗುತ್ತಿದೆ ಎಂದು ಮನವರಿಕೆಯಾಗುತ್ತದೆ.
ಆದ್ದರಿಂದ ಪ್ರಧಾನಿಯ ಆರ್ಥಿಕ ಸಲಹಾ ಸಮಿತಿಯ ವರದಿಯ ಸಿಂಧುತ್ವವೇ ಪ್ರಶ್ನಾರ್ಹಗೊಳ್ಳುತ್ತದೆ. ಮಾತ್ರವಲ್ಲ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು ನೋಡಿ, ಅದು ದೇಶದ ಎಲ್ಲ ಧರ್ಮ ವಿಭಾಗದವರ ಒಟ್ಟು ಜನನ ಸಂಖ್ಯೆಯು ಕಡಿಮೆ ಆಗಿದೆ ಎಂದು ಹೇಳುತ್ತಿದೆ. ಮುಸ್ಲಿಮರ ಪ್ರತ್ಯುತ್ಪಾದನೆ ದರವು 2019-2021ರಲ್ಲಿ ಕೇವಲ ಒಂದು ಶೇಕಡ ಮಾತ್ರ ಇತ್ತು. ಮುಸ್ಲಿಮರಲ್ಲಿ ಪ್ರತ್ಯುತ್ಪಾದನೆ ಕಡಿಮೆ ಆಗಲು ಶಿಕ್ಷಣದ ವೆಚ್ಚ, ಕಡಿಮೆ ಆದಾಯ ಕಾರಣವೆಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಬೆಟ್ಟು ಮಾಡುತ್ತಿದೆ. ಶೇ. ಒಂದು ಎನ್ನುವುದು ದೊಡ್ಡ ಸಂಖ್ಯೆಯಲ್ಲವಲ್ಲ. ಮೋದಿಯ ಆರ್ಥಿಕ ಸಮಿತಿಯು ಯೋಚಿಸಬೇಕಾದ ಪೊಯಿಂಟು ಇದು.
ಆರೆಸ್ಸೆಸ್ ಸಂವಿಧಾನ ಮತ್ತು ಸ್ವಾತಂತ್ರ್ಯವನ್ನು ಅಸಿಂಧು ಎಂದು ಹೇಳುವುದಾದರೆ ನಮಗೆ ಮಾತಾಡಲಿಕ್ಕೆ ಇನ್ನೆಂತ ಇದೆ? ಬಹುಶಃ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿದ್ದ ಸಾಮಾಜಿಕ ವ್ಯವಸ್ಥೆಯನ್ನು ತರಲು ಹೊರಟಿದೆಯಾ? ಹೌದು, ಆರೆಸ್ಸೆಸ್ ಮತ್ತು ಸಂಘಪರಿವಾರದ ಹಿಂದುತ್ವ ರಾಜಕೀಯದ ಮುಂದೆ ಯಾವ ಪಾರ್ಟಿಗೂ ನೆಲೆ ಉಳಿಸಿಕೊಳ್ಳುವುದು ದೇಶದಲ್ಲಿ ಇಂದು ನೆಲೆಸಿದ ಇಂದಿನ ಪರಿಸ್ಥಿತಿಯಲ್ಲಿ ಕಷ್ಟ ಆಗಿದ್ದು ನಿಜ.
ಇಂದು ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಆರೆಸ್ಸೆಸ್ ವಿರುದ್ಧ ಎಷ್ಟೇ ತೀಕ್ಷ್ಣ ದಾಳಿ ಮಾಡಲಿ ಆದರೆ ಅದಕ್ಕೆ ಅವರ ಕಾಂಗ್ರೆಸ್ ಪಾರ್ಟಿಯೊಳಗೆಯೇ ಸಹಮತ ಇದ್ದೀತಾ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಜೊತೆಗೆ ಇಂದಿನ ಕಾಂಗ್ರೆಸ್ಸಿಗರ ಸಿದ್ಧಾಂತ ಯಾವುದು ಎಂಬ ಪ್ರಶ್ನೆಯನ್ನೂ ಜನರು ಕೇಳಬೇಕಾಗಿದೆ. ರಾಹುಲ್ರಿಗೆ ಕೇವಲ ಆರೆಸ್ಸೆಸ್ ವಿರೋಧವನ್ನು ತನ್ನ ಪಾರ್ಟಿಯೊಳಗೆ ಒಂದು ಆಶಯ ರೂಪದಲ್ಲಿ ಕಟ್ಟಿ ಬೆಳೆಸಲು ಸಾಧ್ಯವಿಲ್ಲ. ಶರದ್ ಪವಾರ್ ರಂತಹ ಅಪ್ಪಟ ಮರಾಠ ನಾಯಕರು ಕೂಡ ಆರೆಸ್ಸೆಸ್ ಕೆಲಸದ ಶೈಲಿಗೆ ಮಾರು ಹೋಗುತ್ತಾರೆ ಎಂಬಲ್ಲಿಗೆ ಇಂದಿನ ಸ್ಥಿತಿ ಬಂದು ನಿಂತಿದೆ. ಇದು ರಾಹುಲ್ರಂತಹವರಿಗೂ ಅರ್ಥವಾಗುವ ಮಾತು.
ಅಂತೂ ಈಗ ಸಂಘಪರಿವಾರದ ದೊಣ್ಣೆ ಶರದ್ ಪವಾರ್ರ ಹಿತ್ತಲನ್ನು ಪ್ರವೇಶಿಸಿದ್ದು ಆರೆಸ್ಸೆಸ್ನ ಕಾರ್ಯ ಶೈಲಿಯೂ ಅವರ ಮೇಲೆ ಪ್ರಭಾವ ಬೀರಿದ್ದಕ್ಕೆ ಕಾರಣವಾಗಿರಬಹುದು. ಎನ್ಸಿಪಿ ಇಂದು ಒಡೆದ ಮನೆ ಅಲ್ವೆ?
ಸಂಘಪರಿವಾರದ ಮುಸ್ಲಿಂ ವಿರೋಧಿ ಪ್ರಚಾರ ತೀವ್ರಗೊಳ್ಳುವಾಗ ಮೊದಲೆಲ್ಲ ದೇಶದ ರಾಜಕೀಯ ಪಾರ್ಟಿಗಳು ಅದು ಮುಸ್ಲಿಮರದ್ದಲ್ಲವೇ ಎಂದು ಯೋಚಿಸುತ್ತಿದ್ದುವು. ಆದರೆ ದೊಣ್ಣೆ ಈಗ ಎಡ ಪಂಥೀಯ ವಿಚಾರಧಾರೆಯವರೆಡೆಗೆ, ಜಾತ್ಯತೀತ ಪ್ರತಿಪಾದಕರೆಡೆಗೆ, ಸಂವಿಧಾನ ಬುನಾದಿಯೆಡೆಗೆ ಬಂದು ತಲುಪಿದೆ. ಸಂಘ ಪರಿವಾರದ ಈ ಅಜೆಂಡವನ್ನು ತಡೆದು ನಿಲ್ಲಿಸುವ ಶಕ್ತಿ ಇವತ್ತು ಬಿಜೆಪಿಯೇತರ ಪಾರ್ಟಿಗಳಿಗೂ ಇಲ್ಲ. ಸಂಘಟನೆಗಳಿಗೂ ಇಲ್ಲ. ಯಾಕೆಂದರೆ ಅವುಗಳಲ್ಲಿ ಬಲಿಷ್ಠ ವೈಚಾರಿಕ ಟೂಲ್ಗಳೇ ಇಲ್ಲ. ನೈತಿಕ ನೆಲೆಗಟ್ಟಿನಲ್ಲಿ ಭಾವೈಕ್ಯದ ವಿಚಾರಧಾರೆಯಡಿಯಲ್ಲಿ ಜನಮನಸ್ಸನ್ನು ಹದ ಮಾಡುವುದು ಸಂವಿಧಾನ ಪ್ರಜಾಪ್ರಭುತ್ವ, ದೇಶದ ಜಾತ್ಯತೀತೆಯನ್ನು ಉಳಿಸಿಕೊಳ್ಳಲು ಇರುವ ಏಕೈಕ ಉಪಾಯವಾಗಿದೆ. ಆದರೆ ಈ ಮಹತ್ತರ ಕೆಲಸ ಸ್ವಾರ್ಥಿಕಗಳಿಂದ, ಸಮಯ ಸಾಧಕರಿಂದ ಅವಕಾಶ ಇದ್ದೆಡೆಗೆ ತೂರುವವರಿಂದ ಸಾಧ್ಯವಿಲ್ಲ. ನಿಸ್ವಾರ್ಥಿಗಳಿಂದ ಆಗುವಂತಹದ್ದು ಇದು. ಮುಸ್ಲಿಮ್ ಜನಸಂಖ್ಯೆ ಹೆಚ್ಚುತ್ತಿವೆ ಎಂಬ ಅಪಪ್ರಚಾರಕ್ಕೆ ಮಾರು ಹೋಗುವ ಮೊದಲು ಎಲ್ಲರೂ ಯೋಚಿಸಬೇಕಾದದ್ದು.












