ಸನ್ಮಾರ್ಗ ವಾರ್ತೆ
✍️ಅಮಾನ್ ಕೆ
15 ತಿಂಗಳ ಕಾಲ ಯುದ್ಧ ಮಾಡಿಯೂ ಹಮಾಸನ್ನು ಮಣಿಸಲು ಇಸ್ರೇಲ್ ಗೆ ಸಾಧ್ಯವಾಗಿಲ್ಲ. ತನ್ನ ಸೈನಿಕರನ್ನು ಗಾಝಾಗೆ ನುಗ್ಗಿಸಿಯೂ ತನ್ನ ಒತ್ತೆಯಾಳುಗಳನ್ನ ಬಿಡಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಆಕಾಶದಿಂದ ಬಾಂಬ್ ಸುರಿಸಿ ಇಸ್ರೇಲ್ ಅಸಂಖ್ಯ ಕಟ್ಟಡಗಳನ್ನ ಕೆಡವಿದೆ. ಐವತ್ತು ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಸಾಯಿಸಿದೆ. ಆದರೂ ಹಮಾಸ್ ಬಳಿ ಇದ್ದ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಇಸ್ರೇಲ್ ಗೆ ಯಾಕೆ ಸಾಧ್ಯವಾಗಿಲ್ಲ ಅನ್ನುವ ಚರ್ಚೆ ಜಾಗತಿಕವಾಗಿಯೇ ಇದೆ. ಮಾತ್ರ ಅಲ್ಲ ಹಮಾಸ್ ನ ಸಾಮರ್ಥ್ಯ ಪ್ರಶಂಸೆಗೆ ಒಳಗಾಗುತ್ತಲೂ ಇದೆ.
ಇದೇ ಸಮಯದಲ್ಲಿ ಮತ್ತೊಂದು ಸುದ್ದಿ ಗಾಝಾದಿಂದ ಹೊರ ಬಿದ್ದಿದೆ. ಯಹ್ಯಾ ಸಿನ್ವಾರ್ ಅವರ ಹತ್ಯೆಯ ಬಳಿಕ ತೆರವಾಗಿರುವ ಹಮಾಸ್ ನ ನಾಯಕತ್ವ ಸ್ಥಾನವನ್ನು ಅವರ ಕಿರಿಯ ಸಹೋದರ ಮುಹಮ್ಮದ್ ಸಿನ್ವಾರ್ ವಹಿಸಿಕೊಂಡಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇದೀಗ ಹಮಾಸ್ ನ ಪ್ರಮುಖ ತಂತ್ರಜ್ಞನಾಗಿ ಮುಹಮ್ಮದ್ ಸಿನ್ವಾರ್ ಮುಂಚೂಣಿಗೆ ಬಂದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿಯಲ್ಲಿ ಹೇಳಲಾಗಿದೆ.
ಕಳೆದ 15 ತಿಂಗಳ ಯುದ್ಧದಲ್ಲಿ 17, 000 ದಷ್ಟು ಹಮಾಸ್ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಮಾಸನ್ನು ಮರುಸಂಘಟಿಸಲು ಮತ್ತು ಗಾಝಾದ ನಿಯಂತ್ರಣ ಕೈ ತಪ್ಪದಂತೆ ನೋಡಿಕೊಳ್ಳಲು ಮುಂಚೂಣಿಯಲ್ಲಿ ನಿಂತು ಶ್ರಮಿಸಿದವರೇ ಈ ಸಿನ್ವಾರ್ ಎಂದು ಹೇಳಲಾಗುತ್ತೆ. ಹಮಾಸ್ ನಾಯಕರನ್ನು ಇಸ್ರೇಲ್ ನಿರಂತರ ಟಾರ್ಗೆಟ್ ಮಾಡ್ತಾ ಇದ್ದಾಗ ಅದಕ್ಕೆ ಪ್ರತಿ ತಂತ್ರವನ್ನು ಹೆಣೆಯುವುದಕ್ಕಾಗಿ ಗವರ್ನಿಂಗ್ ಕೌನ್ಸಿಲ್ ಅನ್ನು ಹಮಾಸ್ ಸ್ಥಾಪಿಸಿತ್ತು. ಅದರ ಮುಂಚೂಣಿ ನಾಯಕರಾಗಿ ಇದ್ದುದು ಇದೇ ಮುಹಮ್ಮದ್ ಸಿನ್ವಾರ್
ಇಸ್ರೇಲಿ ಅಧಿಕಾರಿಗಳ ಮಧ್ಯ ಇವರಿಗೆ ನೆರಳು ಎಂಬ ಅಡ್ಡ ಹೆಸರಿದೆ. 1975ರಲ್ಲಿ ಖಾನ್ ಯೂನಿಸ್ ನಿರಾಶ್ರಿತ ಶಿಬಿರದಲ್ಲಿ ಹುಟ್ಟಿದ ಮುಹಮ್ಮದ್ ಸಿನ್ವಾರ್ ಇತ್ತೀಚೆಗೆ ನಾಲ್ಕು ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸುವ ವೇಳೆ ಗಮನ ಸೆಳೆದಿದ್ದರು. ಹಮಾಸ್ ಮೇಲೆ ಅವರಿಗಿರುವ ನಿಯಂತ್ರಣ ಗಮನವನ್ನು ಸೆಳೆದಿತ್ತು. ಹಮಾಸ್ ಹೋರಾಟಗಾರರು ತಮ್ಮ ಯೂನಿಫಾರ್ಮಲ್ಲಿ ನಾಲ್ಕು ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಪೆರೇಡ್ ನಡೆಸಿದ್ದರು. ಬಿಡುಗಡೆಯ ವೇಳೆ ಈ ಹಮಾಸ್ ಹೋರಾಟಗಾರರು ಸಂಭ್ರಮಪಟ್ಟಿದ್ದರು. 15 ತಿಂಗಳ ಕಾಲ ಯುದ್ಧ ಮಾಡಿಯೂ ಹಮಾಸನ್ನು ನಿಗ್ರಹಿಸಲು ಸಾಧ್ಯವಾಗಿಲ್ಲ ಎಂಬುದು ಈ ಪೆರೇಡ್ ಮತ್ತು ಆ ಸಂದರ್ಭದಲ್ಲಿ ಹಮಾಸ್ ಹೋರಾಟಗಾರರು ವ್ಯಕ್ತಪಡಿಸಿದ ಸಂಭ್ರಮ ಸಾಕ್ಷಿಯಾಗಿದೆ ಎಂದು ಅಸಂಖ್ಯ ಮಂದಿ ಅಭಿಪ್ರಾಯ ಪಟ್ಟಿದ್ದರು. ಹೀಗೆ ಹಮಾಸನ್ನು ಒಂದುಗೂಡಿಸುವಲ್ಲಿ ದೊಡ್ಡ ಪಾತ್ರ ಈ ಸಿನ್ವಾರ್ ಗೆ ಇದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
ಭಯೋತ್ಪಾದನೆಯ ಆರೋಪದೊಂದಿಗೆ 1991ರಲ್ಲಿ ಇಸ್ರೇಲ್ ಈ ಮುಹಮ್ಮದ್ ಸಿನ್ಮಾರ್ ರನ್ನ ಬಂಧಿಸಿತ್ತು ಎಂದು ಜೆರುಸಲೇಮ್ ಪೋಸ್ಟ್ ವರದಿ ಮಾಡಿದೆ. 2006ರಲ್ಲಿ ಇಸ್ರೇಲ್ ಯೋಧ ಗಿಲಾದ್ ಶಾಲಿತ್ ನನ್ನ ಹಮಾಸ್ ಹೋರಾಟಗಾರರು ಬಂಧಿಸಿದ್ದರು. ಆ ಬಳಿಕ ಮುಹಮ್ಮದ್ ಸಿನ್ವಾರ್ ಹಮಾಸ್ ನಲ್ಲಿ ಹೆಚ್ಚು ಮುನ್ನೆಲೆಗೆ ಬಂದರು. ಬಳಿಕ ಒಪ್ಪಂದದಂತೆ 2011ರಲ್ಲಿ ಈ ಯೋಧನನ್ನು ಹಮಾಸ್ ಬಿಡುಗಡೆಗೊಳಿಸಿತ್ತು ಮತ್ತು ಅದಕ್ಕೆ ಪ್ರತಿಯಾಗಿ 1027 ಕೈದಿಗಳನ್ನು ಇಸ್ರೇಲ್ ಬಿಡುಗಡೆ ಗೊಳಿಸಿತ್ತು.
ಯಹ್ಯಾ ಸಿನ್ವಾರ್ ರಂತೆ ಈ ಮುಹಮ್ಮದ್ ಸಿನ್ವಾರ್ ರ ಚಟುವಟಿಕೆಗಳು ಬಹಿರಂಗವಾಗಿ ನಡೆಯುತ್ತಿದ್ದದು ಕಡಿಮೆ. ಅವರು ತೆರೆ ಮರೆಯಲ್ಲಿಯೇ ನಿಂತು ಕೆಲಸ ಮಾಡುತ್ತಿದ್ದರು ಎಂದು ಇಸ್ರೇಲಿ ತಜ್ಞರು ಹೇಳುತ್ತಾರೆ. ಇವೇನೇ ಇದ್ದರೂ ಚದುರಿಹೋಗಿರುವ ಹಮಾಸನ್ನು ಈ ಮುಹಮ್ಮದ್ ಸಿನ್ವಾರ್ ಮತ್ತೆ ಕಟ್ಟಲು ಸಮರ್ಥರಾಗುತ್ತಾರಾ ಅನ್ನುವ ಪ್ರಶ್ನೆ ಎಲ್ಲರ ಮುಂದಿದೆ.












