ಟ್ರಂಪ್ ಅನ್ನು ತಕ ತಕ ಕುಣಿಸುತ್ತಿರುವ ಝಿಯೊನಿಸಂ ಜನಾಂಗೀಯವಾದ

0
178

✍️ ಅರಫಾ ಮಂಚಿ

ಇರಾನನ್ನು ಮಣಿಸುವ ಹಟದ ಹಿಂದೆ ಅಮೆರಿಕ-ಇಸ್ರೇಲ್‌ಗಳ ಜನಾಂಗೀಯತೆ ವಿಜೃಂಭಿಸುತ್ತಿದೆ ಎಂಬುದನ್ನು ಜಗತ್ತು ಗುರುತಿಸತೊಡಗಿದೆ. ಇದು ಉತ್ತಮ ಬೆಳವಣಿಗೆಯಾಗಿ ನಮೂದಿಸಬಹುದು. ಮೂಲತಃ ಝಿಯೊನಿಸಂ ಎಂಬುದು ಅಪ್ಪಟ ರೇಸಿಸಂ. ಜನಾಂಗೀಯ ಶ್ರೇಷ್ಠತಾವಾದ. ಇರಾನ್-ಇಸ್ರೇಲ್‌ಗಳ ನಡುವೆ ಕಳೆದ ವರ್ಷ ಜೂನ್‌ನಲ್ಲಿ 12 ದಿನಗಳ ನೇರ ಯುದ್ಧ ನಡೆದಿತ್ತು. ರೆಜಿಮ್ ಪಲ್ಟಿ ಆಗಲಿಲ್ಲ. ಇದೇ ವರ್ಷ ಫೆಬ್ರುವರಿ 28ರಿಂದ ಅಮೆರಿಕ-ಇಸ್ರೇಲ್‌ಗಳು ನೇರ ದಾಳಿ ನಡೆಸುತ್ತಿದೆ. ಒಂದಷ್ಟು ಮನುಷ್ಯ ಜೀವಗಳನ್ನು ಕೊಂದದ್ದರ ಹೊರತು ಸುಮಾರು ಒಂದು ವರ್ಷ ನಾಲ್ಕು ತಿಂಗಳ ಯುದ್ಧ ಸ್ಥಿತಿಯಲ್ಲಿ ಅಮೆರಿಕಕ್ಕೆ ಯಾವ ಗಂಟೂ ಸಿಕ್ಕಿಲ್ಲ. ಇರಾನಿನಲ್ಲಿರುವ ಯುರೇನಿಯಂ ನಾಶಪಡಿಸಲು ಸಾಧ್ಯವಾಗಿಲ್ಲ. ಅಮೆರಿಕ-ಇಸ್ರೇಲ್‌ಗಳು ಕೆದರಿದ ಈ ಯುದ್ಧ ಒಟ್ಟಾರೆ ಜಗತ್ತಿನ ಆರ್ಥಿಕತೆಯನ್ನು ಹೀನಾಯ ಸ್ಥಿತಿಗೆ ತಂದಿದೆ. ಯುದ್ಧ ಈಗಲೂ ಮುಂದುವರಿಯುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ವಿಶ್ವಸಂಸ್ಥೆ, ಇತರ ಜಾಗತಿಕ ದೇಶಗಳಿಂದ ಏನೂ ಮಾಡಲಾಗದ ಸ್ಥಿತಿ ಇದೆ.

ಮಿಡ್‌ಲೀಸ್ಟ್ ಮತ್ತು ಹುರ್ಮುಝ್ ಜಲಸಂಧಿ:

ಟೆಹ್ರಾನ್ ಮುಂದಿಟ್ಟ ಏಳು ದಿನಗಳ ಯೋಜನೆಯನ್ನು ಅಮೆರಿಕ ಒಪ್ಪಿಕೊಳ್ಳದಿರುವವರೆಗೆ ಹುರ್ಮುಝ್ ಜಲಸಂಧಿ ಮುಚ್ಚಲಾಗುತ್ತದೆ ಎಂದು ಇರಾನ್ ಹೇಳಿದೆ. ಯುದ್ಧ ಶುರುವಾದ ನಂತರ  ಅಮೆರಿಕದ ತೈಲಬಳಕೆದಾರರು ಒಟ್ಟು 121 ಬಿಲಿಯನ್ ಡಾಲರ್ (ಒಂದು ಕುಟುಂಬವು ಯಥಾಪ್ರಕಾರ ಹೆಚ್ಚುವರಿಯಾಗಿ 900 ಡಾಲರ್‌ಗಳನ್ನು) ವಿನಿಯೋಗಿಸಿದ್ದಾರೆ. ತೈಲ ಖರೀದಿಸಲು ಕೊಟ್ಟಿದ್ದಾರೆ ಎಂದು ಮೂಡೀಸ್ ಅನಲಿಟಿಕ್ಸ್ ಲೆಕ್ಕ ಹಾಕಿದೆ. ಅಮೆರಿಕದ ಸಂಶೋಧನಾ ಸಂಸ್ಥೆ ಇಪ್‌ಸೋಸ್ ಕೆಲವು ತಿಂಗಳ ಹಿಂದೆ ಜನಾಭಿಮತ ಪ್ರಕಟಿಸಿತ್ತು. ಹತ್ತು ಮಂದಿಯಲ್ಲಿ ಆರು ಮಂದಿ ಅಮೆರಿಕನ್ನರು ಯುದ್ಧವನ್ನು ವಿರೋಧಿಸಿದ್ದಾರೆ. ಯುದ್ಧ ತಮ್ಮ ಸ್ವಂತ ಬಜೆಟ್‌ಗೆ ಹೆಚ್ಚಿನ ಖರ್ಚು ತರುತ್ತಿದೆ ಎಂದು ಎಲ್ಲರೂ ಹೇಳಿದ್ದಾರೆ. ಟ್ರಂಪ್‌ಗೆ ಯುದ್ಧ ಬೇಕು. ಇರಾನಿನ ಪರಮೋಚ್ಚ ಸುರಕ್ಷತಾ ಮುಖ್ಯಸ್ಥ ಮುಹ್ಸಿನ್ ರಿಸಾವಿ, ನಿಮ್ಮ ಒತ್ತಡ-ಬೆದರಿಕೆಗಳ ತಂತ್ರ ನಿಮಗಿರಲಿ, ಹುರ್ಮುಝ್ ಕಡಲ್ಗಾಲುವೆ ತೆರೆಯುವುದಿಲ್ಲ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿರುವುದು ಇತ್ತೀಚೆಗಿನ ಹೊಸ ಬೆಳವಣಿಗೆಗಳಲ್ಲಿ ಒಂದಾಗಿದೆ. ಹುರ್ಮುಝ್ ತೆರೆಯುವುದಿಲ್ಲ. ಹಡಗುಗಳ ಸಂಚಾರ ಸುಗಮಗೊಳ್ಳುವುದಿಲ್ಲ. ಜಗತ್ತಿನ ಆರ್ಥಿಕ ಸ್ಥಿತಿ ಈ ಕಾರಣದಿಂದ ಬಿಕ್ಕಟ್ಟಿನಲ್ಲೇ ಮುಂದುವರಿಯಬೇಕಾಗಿದೆ.

ಭಾರತದ ವಿಚಾರದಲ್ಲಿ ಚರ್ಚಿಸುವುದಾದರೆ, ಅಡುಗೆ ಅನಿಲದಿಂದ ಹಿಡಿದು ದಿನನಿತ್ಯದ ಬಳಕೆಯ ಆಹಾರವಸ್ತುಗಳ ರೇಟ್ ಹೆಚ್ಚಳಕ್ಕೂ ಕಚ್ಚಾ ತೈಲ ದುಬಾರಿಯಾಗುತ್ತಿರುವುದು ಒಂದು ಕಾರಣ. ಈ ಬಿದ್ದ ಸ್ಥಿತಿಯಿಂದ ಚೇತರಿಕೆಯಾಗಲು ಯುದ್ಧ ನಿಂತು ಶಾಂತಿ ಮರಳಬೇಕು. ಅದು ಆಗಬೇಕಾದರೆ ಇರಾನಿನ ಮೇಲೆ ಅಮೆರಿಕ-ಇಸ್ರೇಲ್‌ಗಳು ದಾಳಿಗಿಳಿಯುವುದು ನಿಲ್ಲಿಸಬೇಕು. ಮಾತುಕತೆಗೆ ಬಗ್ಗದೆ ದಾಳಿಯನ್ನೇ ಮುಂದುವರಿಸುತ್ತಿರುವ ಅಮೆರಿಕ-ಇಸ್ರೇಲ್ ಜಗತ್ತನ್ನು ದುಸ್ತರ ಸ್ಥಿತಿಗೆ ತಂದ ಅಕ್ಷಮ್ಯ ಅಪರಾಧಿಗಳಾಗಿದ್ದಾರೆ.

ಭಾರತ ರೇಸಿಸಂ ಒಪ್ಪಿಕೊಂಡಿತೇ?

ಮಧ್ಯಪ್ರಾಚ್ಯದ ಯುದ್ಧಕ್ಕೆ ನಿಜವಾದ ಕಾರಣ ರೇಸಿಸಂ ಚಿಂತನೆಯ ಝಿಯೊನಿಸ್ಟ್ ವಾದ. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ನಮ್ಮ ನಾಯಕರು ಮಾತ್ರ ಇಸ್ರೇಲ್ ನಂಟನ್ನು ದೂರ ಇಟ್ಟಿದ್ದಕ್ಕೆ ಇಸ್ರೇಲಿನ ಈ ರೇಸಿಸಂ ಒಂದು ಪ್ರಮುಖ ಕಾರಣವಾಗಿತ್ತು. ನರಸಿಂಹರಾವ್ ಪ್ರಧಾನಿಯಾಗುವವರೆಗೆ ಇಸ್ರೇಲಿನೊಂದಿಗೆ ರಾಜತಾಂತ್ರಿಕ ಸಂಬಂಧ ಇರಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಫಾದರ್‌ಲ್ಯಾಂಡ್‌ ಇಸ್ರೇಲಿನೊಂದಿಗೆ ಮಿತ್ರತ್ವ ಮೇರು ಸ್ಥಿತಿಯಲ್ಲಿದೆ. ಯುದ್ಧದ ನಡುವೆ ಮೋದಿ ಇಸ್ರೇಲಿಗೆ ಹೋಗಿದ್ದರು. ಈಗ ಭಾರತಕ್ಕೂ ಝಿಯೊನಿಸ್ಟ್ ರೇಸಿಸಂ ಪ್ರಿಯವೆನಿಸಿದೆ. ಇರಾನ್ ಮಿತ್ರನಾಗಿದ್ದರೂ ಟ್ರಂಪ್ ತಡೆಯಿಂದಾಗಿ ತೈಲ ಖರೀದಿಸುವ ಸ್ಥಿತಿಯಲ್ಲಿ ಭಾರತ ಇಲ್ಲ. ಭಾರತ ಟ್ರಂಪ್‌ಗೆ ತಕ್ಕಂತೆ ನಡೆದುಕೊಳ್ಳುವುದು ವಿಕಟ ಸತ್ಯ. ಪರಿಣಾಮವಾಗಿ ಟ್ಯಾಕ್ಸ್, ಬೆಲೆಏರಿಕೆ ಇಂತಹ ಹತ್ತು ಹಲವು ಸಹಿಸಲಾಗದ ದುಬಾರಿಗಳನ್ನು ಭಾರತೀಯರು ವಹಿಸಿಕೊಳ್ಳಬೇಕಾಗಿದೆ. ವಿಮಾನ ಪ್ರಯಾಣದರ, ಬಸ್-ಟ್ಯಾಕ್ಸಿಗಳ ಪ್ರಯಾಣದರ ಹೆಚ್ಚುತ್ತಿದೆ. ಯುದ್ಧ ಅಂದರೆ ಕೆಲವು ದೇಶಗಳ ಮಟ್ಟಿಗೆ ದುರಂತ. ಆರ್ಥಿಕ ಡೋಲಾಯಮಾನ ಸ್ಥಿತಿಗೆ ಇರಾನಿಗೆ ಗುದ್ದಿದವರು ಮಾತ್ರವಲ್ಲ, ಗುದ್ದಿದ್ದನ್ನು ಸುಮ್ಮನೆ ನೋಡುತ್ತಾ ನಿಂತವರು ಮತ್ತು ದೂರ ಉಳಿದ ತಟಸ್ಥರು ಎಲ್ಲರೂ ಸಮನಾಗಿ ಕಷ್ಟಕ್ಕೆ ಸಿಕ್ಕಿದ್ದಾರೆ. ಅಮೆರಿಕದ ಮಿತ್ರತ್ವಕ್ಕಾಗಿ ಹಂಬಲಿಸುವುದರಿಂದಾಗಿ ಭಾರತ ಈ ಸ್ಥಿತಿಗೆ ಬಿತ್ತು. ಇಲ್ಲಿ ಜನರು ತಮ್ಮ ದುರ್ದೆಸೆ ಹೇಳಿಕೊಂಡು ಕೂಗು ಹಾಕಿದರೂ ನಮ್ಮ ಸರಕಾರದ ಅಮೆರಿಕ-ಇಸ್ರೇಲ್ ಮಮತೆ ಮುಂದುವರಿಯುತ್ತಿದೆ. 

ಬ್ರಿಟನ್‌ನ ಗ್ರೀನ್ ಪಾರ್ಟಿ ಮತ್ತು ಇಸ್ರೇಲ್:

ಇಸ್ರೇಲಿನ ಝಿಯೊನಿಸಂ ವಿರೋಧದ ಅಲೆ ಬ್ರಿಟನ್‌ನಲ್ಲಿ ಎದ್ದಿದೆ ಎಂಬುದು ಹೊಸ ಬೆಳವಣಿಗೆ. ಅಲ್ಲಿ ಗ್ರೀನ್ ಪಾರ್ಟಿಯ ಮೀಟಿಂಗ್‌ನಲ್ಲಿ ಝಿಯೊನಿಸಂ ಜನಾಂಗವಾದ ಆಗಿದೆ ಎಂದು ಘೋಷಿಸುವ ಕುರಿತಂತೆ ನಡೆದ ಮತದಾನದಲ್ಲಿ ಬಹುಮತ ದೊರಕಿರುವುದನ್ನು ಹೀಗೆ ಕಾಣಬಹುದು. ಗ್ರೀನ್ ಪಾರ್ಟಿಯ ಈ ಅನಿರೀಕ್ಷಿತ ಕ್ರಮ ಇಸ್ರೇಲಿಗೆ ಕಪಾಳಮೋಕ್ಷಕ್ಕೆ ಸಮ. ಇದಕ್ಕೆ ಪ್ರತಿಯಾಗಿ ಗ್ರೀನ್ ಪಾರ್ಟಿ ನಾಯಕ ಜ್ಯಾಕ್ ಪೊಲನ್ಸ್ಕಿಯನ್ನು ಬಹಿಷ್ಕರಿಸಿದೆ. ಗ್ರೀನ್ ಪಾರ್ಟಿ ಫೆಲಸ್ತೀನ್-ಇಸ್ರೇಲ್ ಎಂಬ ದ್ವಿರಾಷ್ಟ್ರವಾದವನ್ನು ತಿರಸ್ಕರಿಸಿ ಪ್ರಸ್ತಾವ ತಂದಿದೆ. ಎಲ್ಲರಿಗೂ ಸಮಾನ ಹಕ್ಕಿರುವ ಒಂದೇ ಫೆಲಸ್ತೀನ್ ದೇಶ ಇರಬೇಕೆಂದು ಅದು ಹೇಳುತ್ತಿದೆ. ಜನಾಂಗೀಯವಾದಿ ಝಿಯೊನಿಸಂ ಘೋಷಣೆಯನ್ನು 1,022 ಮಂದಿ ಬೆಂಬಲಿಸಿದ್ದಾರೆ. 813 ಮಂದಿ ವಿರೋಧಿಸಿದ್ದಾರೆ. ಜ್ಯಾಕ್ ಪೊಲನ್ಸ್ಕಿ ವೋಟಿನಲ್ಲಿ ಭಾಗವಹಿಸಿಲ್ಲ. ಗ್ರೀನ್ ಪಾರ್ಟಿ ಬ್ರಿಟನ್‌ನ ಲೆಫ್ಟ್ ವಿಂಗ್ ಪೊಲಿಟಿಕಲ್ ಪಾರ್ಟಿ.

ಟ್ರಂಪ್ ದುಸ್ಸಾಹಸ:

ಇರಾನ್ ಈಗ ತನ್ನ ಎಲ್ಲ ಕ್ಷೇತ್ರಗಳಲ್ಲಿ ಪತನದ ಸ್ಥಿತಿಗೆ ಬಂದು ತಲುಪಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಇನ್ನೊಂದು ಕಡೆ ಪಾಕಿಸ್ತಾನಕ್ಕೆ ಬಂದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಚರ್ಚೆ ಮಾಡಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ ಎನ್ನುತ್ತಿದ್ದಾರೆ. ಹೀಗಾಗಿ ಅಮೆರಿಕ-ಇಸ್ರೇಲ್‌ಗಳ ಯುದ್ಧದಲ್ಲಿ ನ್ಯಾಟೋ ಇಲ್ಲ. ಯುರೋಪಿಲ್ಲ. ಜಗತ್ತಿನ ದೇಶಗಳು ನೇರ ಭಾಗವಹಿಸಿಲ್ಲ. ಇನ್ನೊಂದು ಕಡೆ ಅಮೆರಿಕ ಇಸ್ರೇಲಿಗೆ ಹೆಚ್ಚು ಹೆಚ್ಚು ಸೈನಿಕರು ಮತ್ತು ಯುದ್ಧವಿಮಾನಗಳನ್ನು ಕಳುಹಿಸುತ್ತಿದೆ ಎಂಬ ವರದಿ ಬಂದಿದೆ. ಇಸ್ರೇಲಿನ ಮಾಧ್ಯಮವೊಂದರ ವರದಿ ಪ್ರಕಾರ 3,000 ಅಮೆರಿಕನ್ ಅಧಿಕಾರಿಗಳು ಇಸ್ರೇಲಿನಲ್ಲಿದ್ದಾರೆ. ವಾಯು ರಕ್ಷಣೆ ಮಿಸೈಲ್ ಬ್ಯಾಟರಿಗಳನ್ನು ನೋಡಿಕೊಳ್ಳುವುದು, ಪ್ಲೇಟ್ ಆಪರೇಷನ್‌ಗಳನ್ನು ಮಾಡುವುದು, ಲಾಜಿಸ್ಟಿಕ್ ಬೆಂಬಲ ನೀಡುವುದು, ಸೈನಿಕ ಕೇಂದ್ರಗಳಿಗೆ ಇದನ್ನು ಸಂಪರ್ಕಿಸುವಂತೆ ಮಾಡುವುದು ಇವರಿಗಿರುವ ಕೆಲಸ. ಇನ್ನೂ ಬಹಳಷ್ಟು ಸೈನಿಕರು ಮತ್ತು ಯುದ್ಧವಿಮಾನಗಳು ಬರುತ್ತವೆ. ಅಮೆರಿಕದ ಆರ್ಥಿಕತೆ ಬಿದ್ದುಹೋದರೆ, ಜನರು ಬೆಲೆ ಏರಿಕೆಯಿಂದ, ತೊಂದರೆಯಿಂದ ಬವಣೆಗೊಳಗಾದರೂ ಟ್ರಂಪ್‌ಗೆ ಯುದ್ಧ ಯುದ್ಧವೇ. ತನ್ನ ಪ್ರಾಕ್ಸಿ ಇಸ್ರೇಲನ್ನು ಬಲಪಡಿಸಿ ಇರಾನನ್ನು ಮುಗಿಸುವುದು ಗುರಿ. ಇಸ್ರೇಲ್‌ನಲ್ಲಿ ಆಡಳಿತದಲ್ಲಿರುವ ಝಿಯೊನಿಸಂ (ಮುಸ್ಲಿಮರ ಸರ್ವನಾಶವಾದದ) ತನ್ನದೇ ಜಾಲದಲ್ಲಿ ಸಿಕ್ಕುಬಿದ್ದಿದೆ. 

ಇರಾನಿನ ಸಿದ್ಧತೆ:

ಅಮೆರಿಕ ಹೇಳುವಂತೆ ಭೂಯುದ್ಧ ಆದ್ರೆ ಏನಾಗಬಹುದು? ಈಗ ಟೆಹ್ರಾನ್‌ನ ಸೆಂಟ್ರಲ್ ಸ್ಕ್ವೇರ್‌ನಲ್ಲಿರುವ ಸೈನಿಕ ತರಬೇತಿ ಕೇಂದ್ರಗಳಲ್ಲಿ ಹಲವಾರು ಮಹಿಳೆಯರು ಬಂದೂಕು ಚಲಾಯಿಸುವ ಅಭ್ಯಾಸದಲ್ಲಿ ತೊಡಗಿದ್ದಾರೆ ಎಂದು ವರದಿ ತಿಳಿಸುತ್ತಿದೆ. ಇಮಾಮ್ ಹುಸೈನ್ ಸ್ಕ್ವೇರ್‌ನ ತರಬೇತಿ ಕೇಂದ್ರದಲ್ಲಿ ಸೈನಿಕಾಧಿಕಾರಿಗಳ ಮೇಲ್ನೋಟದಲ್ಲಿ ತರಬೇತಿ ನಡೆಯುತ್ತಿದೆ. ಹಫ್ತಿ ತಿರ್ ಸ್ಕ್ವೇರ್‌ನಲ್ಲಿಯೂ ತರಬೇತಿ ನೀಡಲಾಗುತ್ತಿದೆ. ಇದೇ ತರ ಸಾಮಾನ್ಯ ನಾಗರಿಕರಿಗೆ ಸೈನಿಕ ತರಬೇತಿ ಕೇಂದ್ರವನ್ನು ಇರಾನ್ ತೆರೆಯುತ್ತಿದೆ. ಇಸ್ರೇಲ್-ಅಮೆರಿಕ ಭೂಯುದ್ಧಕ್ಕೆ ಬಂದರೆ ಅದನ್ನು ತಡೆಯಲು ಎಲ್ಲ ಸಿದ್ಧತೆ ನಡೆಯುತ್ತಿದೆ. ಇರಾನ್ ಸೇನೆಯ ಕಮಾಂಡರ್ ಮೇಜರ್ ಜನರಲ್ ಅಮಿರ್ ಹತಾಮಿ, ನಮ್ಮ ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಮಣಿಯದಿರುವವರನ್ನು ಮಣಿಸುವುದು ಹೇಗೆ? ಇರಾನಿನಲ್ಲಿ ಜನಸಾಮಾನ್ಯರು ಶಸ್ತ್ರಾಸ್ತ್ರ ತರಬೇತು ಪಡೆದು ಸೈನಿಕರಾಗಲು ಮುಂದೆ ಬರುತ್ತಿದ್ದಾರೆ. ಇರಾನಿನ ಒಟ್ಟು ಪಾಪ್ಯುಲೇಶನ್ 93.5 ಮಿಲಿಯನ್ ಇದೆ, ಒಂಬತ್ತು ಕೋಟಿ ಮೂವತ್ತು ಲಕ್ಷ. ಅರ್ಧದಷ್ಟು ನಾಗರಿಕರು ಯುದ್ಧಕ್ಕಿಳಿದು ಬಂದರೆ ರಕ್ತದೋಕುಳಿ ಆದೀತು. ಇವೆಲ್ಲ ಅಮೆರಿಕ-ಇಸ್ರೇಲ್‌ಗಳ ರೇಸಿಸಂನ ರೇಜಿಗೆಗಳು. 

ಅಮೆರಿಕಕ್ಕೆ ನ್ಯೂಕ್ಲಿಯರ್ ವೆಪನ್ ಸಿಕ್ಕಿತೇ?

ಕೊನೆಯದಾಗಿ ಹೇಳುವುದಾದರೆ, 2005 ಜೂನ್‌ನಲ್ಲಿ ಇರಾನಿನಲ್ಲಿ ಅಮೆರಿಕ ಬಾಂಬಿಂಗ್‌ನಲ್ಲಿ ನೂರಾರು ಶಾಲೆ ಮಕ್ಕಳ ಹತ್ಯೆ ನಡೆಸಿದ ನಂತರ ಮಧ್ಯಪ್ರಾಚ್ಯ ಘರ್ಷಣೆ ಅತೀ ತೀವ್ರ ಸ್ವರೂಪಕ್ಕೆ ಹೊರಳಿತು. ಕೆಲ ದಶಕಗಳಿಂದ ಅಂದರೆ 1985ರಿಂದ ಇರಾನ್-ಅಮೆರಿಕ-ಇಸ್ರೇಲ್‌ಗಳ ನಡುವೆ ತೀವ್ರ ಹಗೆತನ ಇದೆ. ಇಸ್ಲಾಮಿಕ್ ಕ್ರಾಂತಿಯ ಮೂಲಕ ಇರಾನಿನ ರೇಝಾ ಶಾ ಪಹ್ಲವಿ ಸರಕಾರ ಕೆಳಗಿಳಿಸಿ ಇಸ್ಲಾಮಿಕ್ ಆಡಳಿತ ವಹಿಸಿಕೊಂಡಾಗ ಅದನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನವನ್ನು ಮಾಡಿದಂತೆ ಕೈಗೊಂಬೆಯಾಗಿ ಬಳಸಿಕೊಳ್ಳಲು ಅಮೆರಿಕ ಹೊರಟಿತ್ತು. ಅಮೆರಿಕದ ಈ ರೇಸಿಸಂಗೆ (ದೊಡ್ಡಣ್ಣನಾಗುವ ಟ್ರ್ಯಾಕ್) ಇರಾನ್ ಕ್ರಾಂತಿಯ ಪರಮೋಚ್ಚ ನಾಯಕ ಆಯತುಲ್ಲಾ ರೊಹುಲ್ಲಾ ಖುಮೈನಿ ಮತ್ತು ಐಆರ್‌ಜಿಸಿ ಅಡ್ಡಕಾಲು ಹಾಕಿತು. ಅಮೆರಿಕದ ಕಣ್ಣಿಗೆ ಇರಾನ್ ಭಯೋತ್ಪಾಕನಾದ ಕಾರಣ ಇದು. ನಂತರ, ಇರಾನಿನಲ್ಲಿ ಪರಮಾಣು ವೆಪನ್ ತಯಾರಿಸಲಾಗುತ್ತಿದೆ ಎಂದು ಸುಳ್ಳು ನೆಪ ಸೃಷ್ಟಿಸಲಾಯಿತು.

ಹಣ ಇಲ್ಲದವರನ್ನು(ಆರ್ಥಿಕ ಹಿಂಜರಿತಗೊಂಡ ದೇಶಗಳನ್ನು) ತನ್ನ ಅಂಡರ್‌ಗೆ (ಆಶ್ರಯಕ್ಕೆ) ತರಬಹುದು ಎಂಬ ದುರುದ್ಧೇಶವು ಯುದ್ಧ ಮುಂದುವರಿಸುವುದರ ಹಿಂದಿದೆ. ಇದು ಅಪ್ಪಟ ರೇಸಿಸಂ. ಈ ಝಿಯೊನಿಸಂ ಜನಾಂಗೀಯವಾದದ ಅಪಾಯ ಇದು. ಇಂದಿನ ಜಗತ್ತಿಗೆ ಇದು ಮನವರಿಕೆ ಆಗುತ್ತಿದೆ.