ಸನ್ಮಾರ್ಗ ವಾರ್ತೆ
ವಾರಣಾಸಿ; ಉತ್ತರ ಪ್ರದೇಶದ ವಾರಣಾಸಿ ಜಿಲ್ಲೆಯಲ್ಲಿ ಹೋಳಿ ಹಬ್ಬದ ದೇಣಿಗೆ ಸಂಗ್ರಹದ ವೇಳೆ, ಹಿಂದುತ್ವವಾದಿ ಗುಂಪೊಂದು ಇಬ್ಬರು ಮುಸ್ಲಿಂ ಸಹೋದರರ ಮೇಲೆ ಹಲ್ಲೆ ನಡೆಸಿದ ಘಟನೆ ಆಕ್ರೋಶಕ್ಕೆ ಕಾರಣವಾಗಿದೆ. ದಾಳಿಕೋರರು ‘ಜೈ ಶ್ರೀ ರಾಮ್’ ಘೋಷಣೆ ಕೂಗಲು ಬಲವಂತಪಡಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ನಡೆಯುತ್ತಿದೆ.
ದಿನದಯಾಳ್ಪುರ ಗ್ರಾಮದಲ್ಲಿ ದಾಳಿ
ಕ್ರೂರ ಹಲ್ಲೆಗೆ ಗುರಿಯಾದವರು ನಿಯಾಜ್ ಅಹ್ಮದ್ ಮತ್ತು ಖುರ್ಷಿದ್ ಅಹ್ಮದ್, ಇಬ್ಬರೂ ಸಹೋದರರು. ಹತ್ತಿರದ ಮಸೀದಿಯಲ್ಲಿ ತರಾವೀಹ್ ಪ್ರಾರ್ಥನೆ ಸಲ್ಲಿಸುತ್ತಿದ್ದ ನಿಯಾಜ್ ಅವರ ಮನೆಗೆ ಹಿಂತಿರುಗುತ್ತಿದ್ದಾಗ, ಹೋಳಿ ದೇಣಿಗೆ ಸಂಗ್ರಹಿಸಲು ಬಂದಿದ್ದ ಗುಂಪು ಅವರ ಮನೆಗೆ ಬಂದು ಹಣ ಕೇಳಿತು. ವಾಗ್ವಾದದ ನಂತರ, ನಿಯಾಜ್ ಅವರ ಮೇಲೆ ಹಿಂದಿನಿಂದ ಹಲ್ಲೆ ನಡೆಸಲಾಯಿತು. ಅವರ ತಲೆ, ಭುಜ ಮತ್ತು ಬೆನ್ನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಅವರು ಪ್ರಜ್ಞೆ ತಪ್ಪಿ ಬಿದ್ದರು.
ಈ ದಾಳಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಿಯಾಜ್ ತಲೆಗೆ ಬ್ಯಾಂಡೇಜ್ ಹಾಕಿರುವುದು ಮತ್ತು ಅವರ ಶರ್ಟ್ ರಕ್ತದ ಕಲೆಗಳಿಂದ ಕೂಡಿದೆ. ವೀಡಿಯೊದಲ್ಲಿ ಅವರು “ದಾಳಿಕೋರರನ್ನು ನಾನು ಗುರುತಿಸಿದ್ದೇನೆ, ಆದರೆ ಅವರೊಂದಿಗೆ ನನಗೆ ವೈಯಕ್ತಿಕ ವೈಷಮ್ಯವಿಲ್ಲ” ಎಂದು ಹೇಳಿದ್ದಾರೆ.
ಹಲ್ಲೆ ತಡೆಯಲು ಬಂದ ಸಹೋದರನಿಗೂ ಥಳಿಸಿ
ನಿಯಾಜ್ ಅವರ ಮೇಲೆ ಹಲ್ಲೆ ನಡೆಯುತ್ತಿದ್ದಾಗ, ಅವರ ಕಿರಿಯ ಸಹೋದರ ಖುರ್ಷಿದ್ ಮಧ್ಯಪ್ರವೇಶಿಸಿ ಅವರನ್ನು ರಕ್ಷಿಸಲು ಮುಂದಾದರು. ಆದರೆ, ಖುರ್ಷಿದ್ ಅವರನ್ನೂ ತೀವ್ರವಾಗಿ ಥಳಿಸಲಾಗಿದ್ದು, ಅವರ ತಲೆ ಮತ್ತು ಭುಜಕ್ಕೆ ಗಂಭೀರ ಗಾಯಗಳಾಗಿವೆ. ಸಹೋದರರನ್ನು “ಜೈ ಶ್ರೀ ರಾಮ್” ಘೋಷಿಸಲು ಒತ್ತಾಯಿಸಲಾಯಿತ್ತಾದರೂ, ಅವರು ನಿರಾಕರಿಸಿದಾಗ ಮರದ ಕೋಲುಗಳಿಂದ ಹೊಡೆದರು ಎಂದು ವರದಿಯಾಗಿದೆ.
ಸಮಾಜದಲ್ಲಿ ಆಕ್ರೋಶ – ಪೊಲೀಸ್ ತನಿಖೆ ಆರಂಭ
ಈ ದಾಳಿ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಲವಾರು ಸಾಮಾಜಿ ಬಳಕೆದಾರರು ವಾರಣಾಸಿ ಪೊಲೀಸರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ರನ್ನು ಟ್ಯಾಗ್ ಮಾಡಿ ತ್ವರಿತ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವರುಣಾ ವಲಯದ ಉಪ ಪೊಲೀಸ್ ಆಯುಕ್ತರು ಸಾರನಾಥ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಘಟನೆ ಅಲ್ಪಸಂಖ್ಯಾತರ ಭದ್ರತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಕೆಲವರು ಯೋಗಿ ಆದಿತ್ಯನಾಥ್ ಸರ್ಕಾರವನ್ನು ಟೀಕಿಸಿ, “ಹೋಳಿ ಹಬ್ಬದ ಸಮಯದಲ್ಲಿ ಮುಸ್ಲಿಮರು ಮನೆಯೊಳಗೆ ಇರಬೇಕೆಂದು ಅಧಿಕಾರಿಯೊಬ್ಬರು ಸಲಹೆ ನೀಡಿದ್ದರು. ಆದರೆ ತಮ್ಮ ಸ್ವಂತ ಮನೆಯೊಳಗೆ ಇರಲು ಸಹ ಅವರಿಗೆ ಸುರಕ್ಷಿತವಾಗಿಲ್ಲ” ಎಂದು ಪ್ರಶ್ನಿಸಿದ್ದಾರೆ.












