ಇಫ್ತಾರ್ ಕೂಟಗಳು ಕೋಮು ಸೌಹಾರ್ದತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ: ತೇಜಸ್ವಿ ಯಾದವ್

0
407

ಸನ್ಮಾರ್ಗ ವಾರ್ತೆ

ಪಾಟ್ನಾ, ಮಾರ್ಚ್ : ಬಿಹಾರದ ಜಮಾತೆ-ಇ-ಇಸ್ಲಾಮಿ ಹಿಂದ್ (JIH) ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಬಿಹಾರದ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಮತ್ತು ಹಲವು ಗಣ್ಯರು ಭಾಗವಹಿಸಿದ್ದು, ಶಾಂತಿ ಮತ್ತು ಕೋಮು ಸಾಮರಸ್ಯದ ಮಹತ್ವವನ್ನು ಪ್ರತಿಪಾದಿಸಿದರು.

ಇಫ್ತಾರ್ ಕೂಟವನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಯಾದವ್, “ಭಾರತವು ಗಂಗಾ-ಜಮುನ ಸಂಸ್ಕೃತಿಯ ಪ್ರತಿರೂಪವಾಗಿದ್ದು, ಇಲ್ಲಿ ಎಲ್ಲ ಧರ್ಮಗಳ ಜನರು ಸಹಬಾಳ್ವೆಯಲ್ಲಿದ್ದಾರೆ. ಇಫ್ತಾರ್ ಕೂಟಗಳು ಮತ್ತು ರಂಜಾನ್ ಉಪವಾಸವು ಸಾಮಾಜಿಕ ಸೌಹಾರ್ದತೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ” ಎಂದು ಹೇಳಿದರು. ಶಾಂತಿ ಮತ್ತು ಸಹೋದರತ್ವದ ವಾತಾವರಣದಲ್ಲಿ ಮಾತ್ರ ಬಿಹಾರ ಹಾಗೂ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅವರು ಒತ್ತಿ ಹೇಳಿದರು. “ಉಪವಾಸದ ತತ್ವಶಾಸ್ತ್ರ ದುರ್ಬಲರು ಮತ್ತು ಬಡವರಿಗೆ ಸಮಾನ ಅವಕಾಶಗಳನ್ನು ಖಚಿತಪಡಿಸಬೇಕೆಂಬ ಸಂದೇಶವನ್ನು ನೀಡುತ್ತದೆ. ನಾವು ನಮ್ಮ ಜೀವನದಲ್ಲಿ ಈ ತತ್ವಗಳನ್ನು ಪಾಲಿಸಬೇಕು” ಎಂದು ಅವರು ಹೇಳಿದರು.

ಹೋಳಿ ಹಬ್ಬವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಸಹೋದರತ್ವ ಮತ್ತು ಏಕತೆಯ ಅಗತ್ಯವಿದೆ ಎಂದು ಅವರು ನುಡಿದರು.

ಇದೇ ವೇಳೆ, ಬಿಜೆಪಿ ಶಾಸಕ ಅರುಣ್ ಕುಮಾರ್ ಸಿನ್ಹಾ ಮಾತನಾಡಿ, “ದಿವಂಗತ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಇಫ್ತಾರ್ ಕಾರ್ಯಕ್ರಮಗಳಿಂದ ಪ್ರೇರಿತನಾಗಿ, ನಾನು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಧಾವಿಸಿದೆ” ಎಂದು ಹೇಳಿದರು. “ಇಲ್ಲಿಗೆ ಎಲ್ಲಾ ಧಾರ್ಮಿಕ ಪಂಗಡದ ಜನರು ಸೇರಿರುವುದು ಅತ್ಯಂತ ಸಂತೋಷದ ಸಂಗತಿ” ಎಂದೂ ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ JEIH ಬಿಹಾರ ಘಟಕದ ಅಮೀರ್-ಎ-ಹಲ್ಕಾ(ರಾಜ್ಯಾಧ್ಯಕ್ಷ) ಮೌಲಾನಾ ರಿಜ್ವಾನ್ ಅಹ್ಮದ್ ಇಸ್ಲಾಹಿ, “ಭಾರತವು 1.4 ಶತಕೋಟಿ ಜನಸಂಖ್ಯೆಯುಳ್ಳ ದೇಶವಾಗಿದ್ದು, 1,700 ಭಾಷೆಗಳೊಂದಿಗೆ 6,000 ಕ್ಕೂ ಹೆಚ್ಚು ಜಾತಿಗಳು ಮತ್ತು ಸಮುದಾಯಗಳನ್ನು ಹೊಂದಿದೆ. ಇಂತಹ ದೇಶದಲ್ಲಿ ಪ್ರೀತಿ, ಸಹೋದರತ್ವ ಮತ್ತು ಪರಸ್ಪರ ಸಹಕಾರ ಬೆಳೆಸುವುದು ಅತ್ಯಗತ್ಯ” ಎಂದು ಒತ್ತಿ ಹೇಳಿದರು. “ದ್ವೇಷ ಮತ್ತು ತಾರತಮ್ಯ ದೇಶವನ್ನು ದುರ್ಬಲಗೊಳಿಸುತ್ತವೆ, ಹೀಗಾಗಿ ಈದ್, ರಂಜಾನ್, ಹೋಳಿ, ದೀಪಾವಳಿ ಮತ್ತು ಇಫ್ತಾರ್ ಕೂಟಗಳು ಜನರನ್ನು ಹತ್ತಿರ ಮಾಡಬಲ್ಲ ಪ್ರಮುಖ ಸಂದರ್ಭಗಳಾಗಿವೆ” ಎಂದೂ ಅವರು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ನಾಯಕರು, ಧಾರ್ಮಿಕ ಗುರುಗಳು ಮತ್ತು ಸಮಾಜದ ವಿವಿಧ ವರ್ಗದ ಜನರು ಭಾಗವಹಿಸಿದ್ದು, ಇದು ಸಾಮರಸ್ಯದ ಸಂದೇಶವನ್ನು ಮತ್ತಷ್ಟು ಬಲಪಡಿಸಿದೆ.