ಮನೆ ಧ್ವಂಸ: ಯುಪಿ ಸರ್ಕಾರದ ಅಮಾನವೀಯ ಕ್ರಮಕ್ಕೆ ಸುಪ್ರೀಂ ಕೋರ್ಟ್ ತರಾಟೆ; ₹10 ಲಕ್ಷ ಪರಿಹಾರಕ್ಕೆ ಆದೇಶ

0
501

ಸನ್ಮಾರ್ಗ ವಾರ

ನವದೆಹಲಿ: ಉತ್ತರ ಪ್ರದೇಶ ಸರ್ಕಾರ ಮತ್ತು ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರವು ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮನೆಗಳನ್ನು ನೆಲಸಮಗೊಳಿಸಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿದೆ.

ಈ ಕ್ರಮ ಅಮಾನವೀಯ ಮತ್ತು ಕಾನೂನುಬಾಹಿರ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಅಭಿಪ್ರಾಯ ಪಟ್ಟಿದೆ.

ನ್ಯಾಯಾಲಯವು, ದೇಶದಲ್ಲಿ ಕಾನೂನು ಸುವ್ಯವಸ್ಥೆ ಇದೆ ಮತ್ತು ನಾಗರಿಕರ ಮನೆಗಳನ್ನು ಹೀಗೆ ಧ್ವಂಸ ಮಾಡಲಾಗದು ಎಂದು ತಿಳಿಸಿದೆ. ಪ್ರತಿಯೊಬ್ಬರಿಗೂ ವಸತಿ ಹಕ್ಕಿದೆ ಮತ್ತು ಸರಿಯಾದ ಪ್ರಕ್ರಿಯೆ ಅನುಸರಿಸದೇ ಈ ರೀತಿಯ ಕ್ರಮ ಕೈಗೊಳ್ಳುವುದು ಅಸಹ್ಯಕರವಾಗಿದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ನೆಲಸಮಗೊಂಡ ಪ್ರತಿ ಮನೆಯ ಮಾಲೀಕರಿಗೆ ಆರು ತಿಂಗಳೊಳಗೆ ₹10 ಲಕ್ಷ ಪರಿಹಾರ ಪಾವತಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. ವಕೀಲ ಜುಲ್ಫಿಕರ್ ಹೈದರ್ ಮತ್ತು ಪ್ರೊಫೆಸರ್ ಅಲಿ ಅಹ್ಮದ್ ಅವರ ಮನೆಗಳು ಈ ಧ್ವಂಸದ ಭಾಗವಾಗಿದ್ದು, ಅವರು ಸಲ್ಲಿಸಿದ ಮೇಲ್ಮನವಿ ಆಲಿಸುವ ವೇಳೆ ನ್ಯಾಯಾಲಯವು ಈ ನಿರ್ಧಾರ ಕೈಗೊಂಡಿದೆ.

ಪ್ರಯಾಗ್‌ರಾಜ್‌ನಲ್ಲಿ ಮನೆಗಳ ಧ್ವಂಸ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠವು ಈ ಹಿಂದೆ ಟೀಕಿಸಿತ್ತು. ಇದೀಗ, ಸಂತ್ರಸ್ತ ಮನೆಮಾಲಿಕರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.