ಸನ್ಮಾರ್ಗ ವಾರ್ತೆ
ಹೊಸ ವಕ್ಫ್ ಕಾಯ್ದೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರವು ವಕ್ಫ್ ಆಸ್ತಿಯ ನೋಂದಣಿಗೆ ಹೊಸ ನಿರ್ದೇಶನಗಳನ್ನು ನೀಡಿದ್ದು ಇನ್ನು ಮುಂದೆ ವಕ್ಫ್ ಆಸ್ತಿಯ ರಿಜಿಸ್ಟ್ರೇಷನ್ ಕಠಿಣವಾಗಲಿದೆ ಎಂದು ಹೇಳಲಾಗಿದೆ. ವಕ್ಫ್ ಆಸ್ತಿಯಾಗಿ ನೋಂದಣಿಯಾಗಬೇಕಾದ ಭೂಮಿಯು 1952ರ ಕಂದಾಯ ದಾಖಲೆಗಳಂತೆ ಪಟ್ಟಿ ಮಾಡಬೇಕಾಗಿರುವುದು ಕಡ್ಡಾಯವಾಗಿದೆ. ಅಲ್ಲದೆ ಯಾರು ಆಸ್ತಿಯನ್ನು ವಕ್ಫ್ ಮಾಡಿದ್ದಾರೋ ಅವರ ಹೆಸರು ಕೂಡ ಆ ಪಟ್ಟಿಯಲ್ಲಿ ಇರಬೇಕಾದದ್ದು ಕಡ್ಡಾಯವಾಗಿದೆ.
ಈ ಕಾರಣದಿಂದ ತಹಶೀಲ್ದಾರರು ಹೊಸ ನೋಟಿಸುಗಳನ್ನು ಕಳುಹಿಸಿ ಕೊಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. 1952ರ ಕಂದಾಯ ದಾಖಲೆಗಳ ಪ್ರಕಾರ ವಕ್ಫ್ ಆಸ್ತಿಗಳ ನೋಂದಣಿಯ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಹೇಳಲಾಗುತ್ತಿದೆ.
ಶಿಯಾ ಮತ್ತು ಸುನ್ನಿ ವಕ್ಫ್ ಬೋರ್ಡ್ ಗಳ ಪ್ರಕಾರ ಈಗ 1,32,140 ಎಕರೆ ವಕ್ಫ್ ಆಸ್ತಿ ಇದೆ. ಆದರೆ ಇವುಗಳಲ್ಲಿ ನೋಂದಣಿಯಾಗಿರುವುದು ಬರೆ 2528 ಆಸ್ತಿಗಳು ಮಾತ್ರ. ಆದ್ದರಿಂದ ಹೊಸ ನೋಟಿಫಿಕೇಶನ್ ಪ್ರಕಾರ ಉಳಿದವುಗಳನ್ನು ನೋಂದಾಯಿಸಿಕೊಳ್ಳುವುದು ಕಷ್ಟಕರವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೆ ಅನೇಕಾರು ಮಸೀದಿಗಳು ದರ್ಗಾಗಳು ಮತ್ತು ಮ್ಯೂಸಿಯಂ ಗಳು ಸರಕಾರಿ ಜಾಗದಲ್ಲಿವೆ ಎಂದು ಸರ್ಕಾರ ಹೇಳುತ್ತಿದೆ. ಇದಕ್ಕೆ ಭಿನ್ನವಾಗಿ ಹೆಚ್ಚಿನ ಮಸೀದಿಗಳು ದರ್ಗಾಗಳು ಮತ್ತು ಇನ್ನಿತರ ಮುಸ್ಲಿಂ ಕಟ್ಟಡಗಳು ಸ್ವಾತಂತ್ರ್ಯ ಪೂರ್ವದಲ್ಲಿಯೇ ಈ ಹಿಂದಿನ ನಿಯಮಗಳ ಪ್ರಕಾರ ಕಟ್ಟಿರುವುದರಿಂದ ಈಗ ಅದನ್ನು ಸರಕಾರಿ ಭೂಮಿ ಎಂದು ಹೇಳುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಇದೆ.
ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ ಸರಕಾರದ ಈಗಿನ ಕ್ರಮವು ಇನ್ನೊಂದು ವಿವಾದಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.












