ಪ್ರಧಾನಿ ಮೋದಿಯ ವಿರುದ್ಧ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಲೇವಡಿ

0
288

ಸನ್ಮಾರ್ಗ ವಾರ್ತೆ

ಪ್ರಧಾನಿ ನರೇಂದ್ರ ಮೋದಿಯವರು ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಎಂಬ ಪ್ರಹಸವನ್ನು ಶುರು ಮಾಡಿರುವ ರಾಜ್ಯದ ಬಿಜೆಪಿ ನಾಯಕರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಮೋದಿ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ, ಏಕೆಂದರೆ ಕೇಂದ್ರ ಸರಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರನ್ನು ಲೂಟಿ ಹೊಡೆಯುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ ಜನಾಕ್ರೋಶ ಯಾತ್ರೆಗೆ ಚಾಲನೆಯನ್ನು ನೀಡಿರುವ ಬಿಜೆಪಿಯು ರಾಜ್ಯ ಸರಕಾರದ ವಿರುದ್ಧ ಹಲವು ಆರೋಪಗಳನ್ನ ಹೊರಿಸಿದೆ. ಹಾಲಿಗೆ ಮತ್ತು ಪೆಟ್ರೋಲ್ ಡೀಸೆಲ್ ಗೆ ಬೆಲೆ ಏರಿಸಿರುವ ಸಿದ್ದರಾಮಯ್ಯ ಸರಕಾರ ಬದುಕಿದ್ದು ಸತ್ತಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ.

ಹೆಣ ಮತ್ತು ಹಣ ಇವು ಬಿಜೆಪಿಯವರ ಅತ್ಯಂತ ಪ್ರೀತಿ ಪಾತ್ರವಾದ ವಿಷಯಗಳು. ಬಿಜೆಪಿಯವರು ಹಲವು ಸಾವುಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದರು. ರಾಜ್ಯದ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಎಲ್ಲ ಪ್ರಕರಣಗಳ ಅಸಲಿ ಸತ್ಯ ಹೊರಬಂದು ಬಿಜೆಪಿ ಮುಖಭಂಗ ಅನುಭವಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಶಿವಮೊಗ್ಗದ ಹರ್ಷ, ಮಂಗಳೂರಿನ ಪ್ರವೀಣ್ ನೆಟ್ಟಾರು, ಕಾರವಾರದ ಪರೇಶ್ ಮೇಸ್ತ, ತೀರ್ಥಹಳ್ಳಿಯ ನಂದಿತ, ಬೀದರ್ ಶಿವು ಉಪ್ಪಾರ, ಮೂಡಿಗೆರೆಯ ಧನ್ಯಶ್ರೀ, ಕರಾವಳಿಯ ಪ್ರಕಾಶ್ ಕುಲಾಯಿ, ಕೇಶವಶೆಟ್ಟಿ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ, ಪ್ರತಾಪ ಪೂಜಾರಿ ಇವರೆಲ್ಲ ಬಿಜೆಪಿಯ ಕೊಳಕು ರಾಜಕೀಯಕ್ಕೆ ಬಲಿಯಾಗಿದ್ದಾರೆ. ಬಿಜೆಪಿಯವರೇ ನಿಮಗೆ ಇವರೆಲ್ಲ ನೆನಪಿದೆಯೇ ಎಂದವರು ಪ್ರಶ್ನಿಸಿದ್ದಾರೆ.

ಇವರೆಲ್ಲರ ಮನೆಗೆ ಬಿಜೆಪಿಗರು ಈಗಲೂ ಭೇಟಿ ನೀಡುತ್ತಾ ಕಷ್ಟ ಸುಖ ವಿಚಾರಿಸುತ್ತಿದ್ದಾರೆಯೇ? ಇವರೆಲ್ಲರ ಕುಟುಂಬಸ್ಥರ ಸ್ಥಿತಿಗತಿಗಳ ಬಗ್ಗೆ ಬಿಜೆಪಿಯವರು ಈಗಲೂ ಕಾಳಜಿ ವಹಿಸುತ್ತಿದ್ದಾರೆಯೇ? ಈಗ ಮಡಿಕೇರಿಯ ವಿನಯ್ ಸೋಮಯ್ಯ ಆತ್ಮಹತ್ಯೆಯ ಪ್ರಕರಣದಲ್ಲೂ ಬಿಜೆಪಿ ತನ್ನ ಹಳೆಯ ಕುತಂತ್ರದ ರಾಜಕೀಯವನ್ನು ಮುಂದುವರಿಸಿದೆ. ಈ ಪ್ರಕರಣದಲ್ಲೂ ಸತ್ಯ ಹೊರಬಂದು ಬಿಜೆಪಿಯ ನಾಟಕ ಬಯಲಾಗುವುದು ನಿಶ್ಚಿತ ಎಂದವರು ಹೇಳಿದ್ದಾರೆ.