ಗಾಝದ ಆಶ್ರಯ ತಾಣಕ್ಕೆ ಇಸ್ರೇಲ್ ದಾಳಿ; ಸುಟ್ಟು ಕರಕಲಾದ ಮಗು,10 ಮಂದಿ ಸಾವು

0
1018

ಸನ್ಮಾರ್ಗ ವಾರ್ತೆ

ಗಾಝ: ಗಾಝ ನಗರದಲ್ಲಿರುವ ಆಶ್ರಯ ತಾಣವೊಂದರ ಮೇಲೆ ಇಸ್ರೇಲಿ ಸೇನೆಯು ನಡೆಸಿದ ಬಾಂಬ್ ದಾಳಿಯಲ್ಲಿ ಮಗು ಸೇರಿದಂತೆ ಕನಿಷ್ಠ 10 ಮಂದಿ ಮೃತರಾಗಿದ್ದಾರೆ. ಮಗು ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಈ ಆಶ್ರಯ ತಾಣವನ್ನು ಯುದ್ಧ ಪರಿಸ್ಥಿತಿಯಲ್ಲಿ ಶಾಲೆಯಾಗಿ ಪರಿವರ್ತಿಸಲಾಗಿತ್ತು. ದಾಳಿಯ ಬಳಿಕ ತಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದು ಇಸ್ರೇಲಿನ ಇತ್ತೀಚಿನ ಭೀಕರ ದಾಳಿಗಳಲ್ಲಿ ಒಂದು. ಇದಕ್ಕೂ ಮುನ್ನ, ಗಾಜಾ ನಗರದ ಎಲ್-ಡೊರಾ ಮಕ್ಕಳ ಆಸ್ಪತ್ರೆ ಮತ್ತು ಹಲವು ರಕ್ಷಣಾ ತಾಣಗಳು ಗುರಿಯಾಗಿದ್ದವು. ಇಸ್ರೇಲಿ ದಾಳಿಗಳಿಂದ ಆಸ್ಪತ್ರೆಗೆ ಹಾನಿಯಾಗಿದ್ದು, ರಕ್ಷಣಾ ಕಾರ್ಯಾಚರಣೆಗಳಲ್ಲಿ ಬಳಸುತ್ತಿದ್ದ ಬುಲ್ಡೋಜರ್‌ಗಳು ಸಹ ನಾಶವಾಗಿದೆ.

ಈ ಸಂದರ್ಭದಲ್ಲಿ ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್‌ರಹ್ಮಾನ್ ಅಲ್ ಥಾನಿ ಮಾತನಾಡಿ, “ಗಾಜಾದ ಯುದ್ಧ ಸ್ಥಿತಿಗೆ ಅಂತ್ಯ ತರಲು ದೋಹಾ ಇನ್ನೂ ಮಧ್ಯವರ್ತಿಗಳೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ತಿಳಿಸಿದ್ದಾರೆ.

2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಆರಂಭವಾದ ಇಸ್ರೇಲ್-ಗಾಜಾ ಯುದ್ಧದಲ್ಲಿ ಈಗಾಗಲೇ ಕನಿಷ್ಠ 51,266 ಪ್ಯಾಲೆಸ್ಟೀನಿಯನ್ನರು ಸಾವಿಗೀಡಾಗಿದ್ದು, 116,991 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್ ವೈದ್ಯಕೀಯ ಮೂಲಗಳು ದೃಢಪಡಿಸಿವೆ.

ಗಾಝ ಸರ್ಕಾರದ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಸಾವಿನ ಅಂಕಿಅಂಶ 61,700 ಕ್ಕೂ ಹೆಚ್ಚು ಇರಬಹುದು ಎಂದು ಶಂಕಿಸಲಾಗಿದೆ. ಹಲವಾರು ಜನರು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ.

ಇತ್ತ 2023ರ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,139 ಮಂದಿ ಸಾವಿಗೀಡಾಗಿದ್ದು, 200 ಕ್ಕೂ ಹೆಚ್ಚು ಜನರನ್ನು ಅಪಹರಿಸಲಾಗಿತ್ತು.