ಸನ್ಮಾರ್ಗ ವಾರ್ತೆ
ನವದೆಹಲಿ: ಭಾರತದ ಪ್ರಮುಖ ಮುಸ್ಲಿಂ ಸಂಘಟನೆಗಳಲ್ಲಿ ಒಂದಾದ ಜಮಿಯತ್ ಉಲಮಾ-ಎ-ಹಿಂದ್, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸಿದೆ. ಈ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.
ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ, ದಾಳಿಯಲ್ಲಿ ಹತರಾದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
“ಮುಗ್ಧ ಜನರನ್ನು ಕೊಲ್ಲುವವರು ಮನುಷ್ಯರಲ್ಲ – ಅವರು ರಾಕ್ಷಸರಾಗಿದ್ದಾರೆ. ಇಸ್ಲಾಂನಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಳವಿಲ್ಲ. ಇಂತಹ ಹಿಂಸಾಚಾರದ ವಿರುದ್ಧ ನಿಲ್ಲುವುದು ಪ್ರತಿಯೊಬ್ಬ ಮುಸ್ಲಿಮನ ನೈತಿಕ ಮತ್ತು ಧಾರ್ಮಿಕ ಕರ್ತವ್ಯವಾಗಿದೆ.” ಎಂದು ಹೇಳಿದರು.
‘ಧರ್ಮದ ಹೆಸರಿನಲ್ಲಿ ನಡೆಯುವ ಅಪರಾಧ ಕೃತ್ಯಗಳು ದೇಶ ಮತ್ತು ಸಮಾಜದ ಶಾಂತಿ, ಸ್ಥಿರತೆಗೆ ದೊಡ್ಡ ಅಪಾಯಕಾರಿ ಆಗಿದೆ. ಕಾಶ್ಮೀರದಾದ್ಯಂತ ಮಸೀದಿಗಳು ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಿವೆ. ಕಾಶ್ಮೀರಿ ಮುಸ್ಲಿಮರು ಶಾಂತಿ, ಸಾಮರಸ್ಯ ಮತ್ತು ಏಕತೆಯನ್ನು ಬಯಸುತ್ತಾರೆ,” ಎಂದರು.
ದಾಳಿಯ ಸಮಯದಲ್ಲಿ ಸ್ಥಳೀಯರು ತೋರಿಸಿದ ಧೈರ್ಯ ಮತ್ತು ಮಾನವೀಯತೆಯು ಮೆಚ್ಚುಗೆಗೆ ಪಾತ್ರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಸಾಗಿಸುವ ಮೂಲಕ ಮತ್ತು ಅವರಿಗೆ ಸಹಾಯ ಮಾಡುವ ಮೂಲಕ ಕಾಶ್ಮೀರಿ ನಾಗರಿಕರು ತಮ್ಮ ಧರ್ಮವನ್ನು ಮೀರಿ ಮಾನವೀಯತೆಯನ್ನು ತೋರಿದ್ದಾರೆ ಎಂದು ಅವರು ಶ್ಲಾಘಿಸಿದರು.
ಮಾಧ್ಯಮಗಳು ಜವಾಬ್ದಾರಿಯುತವಾಗಿ ವರದಿ ಮಾಡುವಂತೆ ಮೌಲಾನಾ ಮದನಿ ಮನವಿ ಮಾಡಿದ್ದು, “ಇದು ದ್ವೇಷವನ್ನು ಹರಡುವ ಸಮಯವಲ್ಲ, ಇದು ಒಟ್ಟಾಗಿ ಸೇರಿ ಪೀಡಿತರಿಗೆ ಸಾಂತ್ವನ, ಸಹಕಾರ ನೀಡುವ ಸಮಯವಾಗಿದೆ. ಸಹೋದರತ್ವ, ಪ್ರೀತಿ ಮತ್ತು ಮಾನವೀಯತೆಯ ಮೌಲ್ಯಗಳನ್ನು ಹರಡಲು ಸಮಯವಾಗಿದೆ” ಎಂದರು.
ಈ ಪೈಶಾಚಿಕ ದಾಳಿಯ ಹಿಂದಿರುವ ಅಪರಾಧಿಗಳನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರವನ್ನು ಅವರು ಒತ್ತಾಯಿಸಿದರು.












