ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ವಿದೇಶಿ ಪ್ರವಾಸಿಗರು ಸೇರಿದಂತೆ ಹಲವಾರು ಅಮಾಯಕರ ಪ್ರಾಣಹಾನಿ ಸಂಭವಿಸಿದ ಘಟನೆಯನ್ನು ಜಮಾಅತೆ ಇಸ್ಲಾಮಿ ಹಿಂದ್ (JIH) ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ ತೀವ್ರವಾಗಿ ಖಂಡಿಸಿದ್ದಾರೆ.
ಈ ದುರ್ಘಟನೆಯ ಬಗ್ಗೆ ಆಳವಾದ ಸಂತಾಪ ವ್ಯಕ್ತಪಡಿಸಿದ ಅವರು, ಪೀಡಿತರಿಗೆ ತಕ್ಷಣದ ನ್ಯಾಯ ಸಿಗಬೇಕು ಹಾಗೂ ಇಂತಹ ಅಮಾನವೀಯ ಘಟನೆಗಳು ಪುನರಾವರ್ತನೆ ಆಗದಂತೆ ತಡೆಯಲು ತಕ್ಷಣದ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
“ಪಹಲ್ಗಾಮ್‌ನಲ್ಲಿ ನಡೆದ ದಾಳಿ ಅತ್ಯಂತ ಅಮಾನವೀಯ, ಇದರಲ್ಲಿ ವಿದೇಶಿ ಪ್ರವಾಸಿಗರು ಮತ್ತು ಸ್ಥಳೀಯ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಬಹಳ ದುಃಖದ ವಿಷಯ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಯ್ಯದ್ ಸಅದತುಲ್ಲ ಹುಸೇನಿ ಹೇಳಿದರು.
“ಹಿಂಸೆಗೆ ಕಾರಣ ಯಾವುದೇ ಆಗಿರಲಿ, ಅದು ರಾಜಕೀಯವಾಗಿರಲಿ ಅಥವಾ ಸೈದ್ಧಾಂತಿಕವಾಗಿರಲಿ – ಇಂತಹ ಕ್ರೂರ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ಭದ್ರತಾ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು, ದುರ್ಬಲ ಸಮುದಾಯಗಳ ರಕ್ಷಣೆಗಾಗಿ ದೃಢ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಉದ್ದೇಶಿಸಿ ಅವರು ಒತ್ತಾಯಿಸಿದರು.
ನಾಗರಿಕ ಸಮಾಜ, ಧಾರ್ಮಿಕ ನಾಯಕರು ಮತ್ತು ಮಾಧ್ಯಮಗಳು ಈ ಸಂದರ್ಭದಲ್ಲಿ ಬಹಳ ಜವಾಬ್ದಾರಿಯುತವಾಗಿ ವರ್ತಿಸಬೇಕು. ಉದ್ವಿಗ್ನತೆಯನ್ನು ಹೆಚ್ಚಿಸುವ, ಅಥವಾ ನಿರ್ದೋಷಿಗಳನ್ನು ಗುರಿಯಾಗಿಸುವ ವರದಿಗಳಿಂದ ದೂರವಿರಬೇಕು,” ಎಂದು ಅವರು ಹೇಳಿದರು.












