ಸನ್ಮಾರ್ಗ ವಾರ್ತೆ
ಬಿಹಾರದ ಪಾಟ್ನಾ ಜಿಲ್ಲೆಯ ಮೊಕಾಮಾ ಸರ್ಕಾರಿ ಶಾಲೆಯಲ್ಲಿ ತಯಾರಿಸಿದ ಅನ್ನ ಮತ್ತು ಆಲೂಗಡ್ಡೆ ಪದಾರ್ಥದಲ್ಲಿ ಹಾವು ಸತ್ತಿರುವುದು ಕಂಡುಬಂದಿದ್ದು, ಊಟ ಮಾಡಿದ 200ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸುಮಾರು 12 ಮಕ್ಕಳು ಆಹಾರವನ್ನು ಗಮನಿಸಿ ತಿನ್ನಬಾರದೆಂದು ಎಚ್ಚರಿಸಿದರು. ಆದರೆ ಶಾಲಾ ಸಿಬ್ಬಂದಿಗಳು ಮಕ್ಕಳಿಗೆ ಊಟ ಮಾಡುವಂತೆ ಒತ್ತಾಯಿಸಿದರು. ಊಟ ಮಾಡಿದ 500ಕ್ಕೂ ಹೆಚ್ಚು ಮಕ್ಕಳ ಪೈಕಿ 50ಕ್ಕಿಂತ ಹೆಚ್ಚು ಮಕ್ಕಳು ಅಸ್ವಸ್ಥರಾದರು. ಜನರು ಜಮಾವಣೆ ಆಗುತ್ತಿರುವುದನ್ನು ಮನಗಂಡ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದರು. ಬಳಿಕ, ಇನ್ನೂ 150 ಮಕ್ಕಳಿಗೂ ರೋಗಲಕ್ಷಣಗಳು ಕಾಣಿಸಿಕೊಂಡವು. ಒಬ್ಬ ಮಗುವಿನ ಸ್ಥಿತಿ ಗಂಭೀರವಾಗಿದ್ದರೂ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ತಿಳಿದ ಕೂಡಲೇ ಪೋಷಕರು ಮತ್ತು ಸ್ಥಳೀಯರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಆಗಮಿಸಿ ಸೂಕ್ತ ಕ್ರಮ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದ್ದು, ನಂತರ ಪ್ರತಿಭಟನೆಯನ್ನು ಕೊನೆಗೊಳಿಸಿದರು. ಪ್ರಕರಣದ ತನಿಖೆ ಪ್ರಾರಂಭವಾಗಿದೆ ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ತಿಳಿಸಿದ್ದಾರೆ.












