ಸನ್ಮಾರ್ಗ ವಾರ್ತೆ
ಟೋಕಿಯೋ: ಜೂನ್ 13 ರಂದು ಇರಾನ್ನ ಪರಮಾಣು ನೆಲೆಗಳ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಜಪಾನ್ ತೀವ್ರವಾಗಿ ಖಂಡಿಸಿದೆ. ಪರಿಸ್ಥಿತಿಯನ್ನು ಶಮನಗೊಳಿಸಿ, ಗರಿಷ್ಠ ಸಂಯಮ ತಾಳುವಂತೆ ಸಂಬಂಧಪಟ್ಟ ಎಲ್ಲಾ ಪಕ್ಷಗಳಿಗೆ ಜಪಾನ್ ವಿದೇಶಾಂಗ ಸಚಿವ ಇವಾಯಾ ತಕೇಶಿ ಕರೆ ನೀಡಿದ್ದಾರೆ.
“ಮಧ್ಯಪ್ರಾಚ್ಯದ ಶಾಂತಿ ಮತ್ತು ಸ್ಥಿರತೆಯು ಜಪಾನ್ಗೆ ಅತ್ಯಂತ ಮುಖ್ಯವಾಗಿದೆ. ಜಪಾನಿನ ನಿವಾಸಿಗಳನ್ನು ರಕ್ಷಿಸಲು ಮತ್ತು ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಜಪಾನ್ ಸರ್ಕಾರವು ಅಗತ್ಯವಿರುವ ಎಲ್ಲಾ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸುತ್ತದೆ.
” ಎಂದು ಅವರು ತಿಳಿಸಿದ್ದಾರೆ. ಇರಾನ್ ಪರಮಾಣು ಸಮಸ್ಯೆಗೆ ರಾಜತಾಂತ್ರಿಕ ಪರಿಹಾರವಿರುವಾಗ ಮಿಲಿಟರಿ ಕಾರ್ಯಾಚರಣೆ ಆಯ್ಕೆ ಮಾಡಿರುವುದು ವಿಷಾದಕರ ಎಂದಿದ್ದಾರೆ.
‘ಆಪರೇಷನ್ ರೈಸಿಂಗ್
ಲಯನ್’ ಎಂಬ ಮಿಲಿಟರಿ ಕಾರ್ಯಾಚರಣೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ಇರಾನ್ನ ಪರಮಾಣು ಶಸ್ತ್ರಾಸ್ತ್ರ ಭೀತಿಯನ್ನು ತಡೆಯುವುದೇ ಇದರ ಮುಖ್ಯ ಉದ್ದೇಶ ಎಂದು ಇಸ್ರೇಲ್ ಹೇಳಿದೆ.
ಇರಾನ್ನ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಕತಾರ್ ಕೂಡ ಖಂಡಿಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಹೇಳಿದೆ. “ಇದು ಇರಾನ್ನ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವ ಪ್ರಕ್ರಿಯೆಯಾಗಿದೆ. ಸಂಘರ್ಷ ತಡೆಯಲು ವಿಶ್ವ ಸಮುದಾಯ ತಕ್ಷಣ ಮಧ್ಯಪ್ರವೇಶಿಸಬೇಕು” ಎಂದು ಕತಾರ್ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ
ಸಿಂಗಾಪುರ್ ಸರ್ಕಾರವೂ ಈ ಪ್ರದೇಶದಲ್ಲಿ ಶಾಂತಿಯನ್ನು ಸ್ಥಾಪಿಸಲು ಕರೆ ನೀಡಿದ್ದು, ಪ್ರಸ್ತುತ, ಇಸ್ರೇಲ್ ಅಥವಾ ಇರಾನ್ನಲ್ಲಿ ವಾಸಿಸುತ್ತಿರುವ ಸಿಂಗಾಪುರ ಪ್ರಜೆಗಳು ಗಾಯಗೊಂಡಿರುವ ಬಗ್ಗೆ ಯಾವುದೇ ವರದಿಗಳಿಲ್ಲ. ಅಸ್ಥಿರ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಸ್ರೇಲ್ ಮತ್ತು ಇರಾನ್ಗೆ ಯಾವುದೇ ಪ್ರಯಾಣವನ್ನು ಮಾಡದಂತೆ ಸಿಂಗಾಪುರ ಪ್ರಜೆಗಳಿಗೆ ಸೂಚಿಸಲಾಗಿದೆ. ಇಸ್ರೇಲ್ ಮತ್ತು ಇರಾನ್ನಲ್ಲಿರುವ ಸಿಂಗಾಪುರದವರು ಮನೆಯೊಳಗೆ ಇರಲು, ಎಚ್ಚರಿಕೆ ನೀಡಿದಾಗ ಸುರಕ್ಷಿತ ಆಶ್ರಯಕ್ಕೆ ಹೋಗಲು, ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಸ್ಥಳೀಯ ಸರ್ಕಾರದ ಸಲಹೆಯನ್ನು ಪಾಲಿಸಲು ಸೂಚಿಸಲಾಗಿದೆ. ದಯವಿಟ್ಟು ಎಲ್ಲಾ ಸಮಯದಲ್ಲೂ ಜಾಗರೂಕರಾಗಿರಿ,” ಎಂದು ಸಿಂಗಾಪುರದ ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.












