ಸನ್ಮಾರ್ಗ ವಾರ್ತೆ
ಇರಾನ್ ಮೇಲಿನ ಇಸ್ರೇಲ್ ದಾಳಿಯನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಅಧ್ಯಕ್ಷ ಸಯ್ಯದ್ ಸಆದತುಲ್ಲಾ ಹುಸೇನಿ ಖಂಡಿಸಿದ್ದಾರೆ. ಇಸ್ರೇಲಿನ ಅಪ್ರಚೋದಿತ ದಾಳಿಯು ವಿಶ್ವಸಂಸ್ಥೆಯ ನಿಯಮಾವಳಿಗಳು ಮತ್ತು ಅಂತಾರಾಷ್ಟ್ರೀಯ ನಿಯಮಗಳ ನಗ್ನ ಉಲ್ಲಂಘನೆಯಾಗಿದೆ. ಒಂದು ಸಾರ್ವಭೌಮ ರಾಷ್ಟ್ರದ ಮೇಲೆ ಈ ಬಗೆಯ ದಾಳಿ ನಡೆಸುವುದು ಭಯೋತ್ಪಾದನೆಯಾಗಿದೆ. ನಾಗರಿಕ ಪ್ರದೇಶಗಳು, ಮಿಲಿಟರಿ ಮತ್ತು ಅಣುಸ್ಥಾವರಗಳನ್ನು ಗುರಿಯಾಗಿಸಿ ನಡೆಸಿದ ಈ ದಾಳಿಯು ಯುದ್ಧ ಪ್ರಚೋದನೆಯಾಗಿದೆ ಎಂದವರು ಹೇಳಿದ್ದಾರೆ.
ಈ ಬೆಳವಣಿಗೆಯು ಜಾಗತಿಕವಾಗಿಯೇ ಸಮಸ್ಯೆಯನ್ನು ಸೃಷ್ಟಿಸಲಿದೆ, ಮಧ್ಯೇಶ ಇನ್ನೊಂದು ಯುದ್ಧವನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಜಗತ್ತಿನ ಪ್ರಬಲ ರಾಷ್ಟ್ರಗಳ ಮೌನವು ಆಶ್ಚರ್ಯಕರವಾಗಿದೆ ಎಂದವರು ಹೇಳಿದ್ದಾರೆ.
ಇರಾನ್ ನ ಅಣ್ವಸ್ತ್ರ ಕೇಂದ್ರಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ಆದರೆ ತನ್ನ ಅಣ್ವಸ್ತ್ರ ಯೋಜನೆಯು ಶಾಂತಿಯುತ ಉದ್ದೇಶಕ್ಕಾಗಿದೆ ಎಂದು ಇರಾನ್ ಹೇಳುತ್ತಲೇ ಬಂದಿದೆ. ಒಂದು ವೇಳೆ ಈ ಬಗ್ಗೆ ಅನುಮಾನಗಳಿದ್ದರೆ ಅದನ್ನು ನಿಭಾಯಿಸಬೇಕಾದದ್ದು ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗವೇ ಹೊರತು ಯಾವುದಾದರೂ ಒಂದು ರಾಷ್ಟ್ರವಲ್ಲ. ಇಸ್ರೇಲ್ ಜಗತ್ತಿನ ನ್ಯಾಯಾಧೀಶ ಅಲ್ಲ. ಅದು ನ್ಯಾಯಾಲಯವೂ ಅಲ್ಲ. ಜಗತ್ತು ಇಸ್ರೇಲ್ ನ ವಿರುದ್ಧ ನಿರ್ಬಂಧವನ್ನು ಹೇರಬೇಕು. ಇಸ್ರೆಲ್ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದರೆ ಅದು ಜಾಗತಿಕ ಯುದ್ಧಕ್ಕೆ ಕಾರಣವಾದೀತು ಎಂದವರು ಹೇಳಿದ್ದಾರೆ.












