ಸನ್ಮಾರ್ಗ ವಾರ್ತೆ
ಗಾಜಾ ಮೇಲಿನ ಇಸ್ರೇಲ್ ದಿಗ್ಬಂಧನವನ್ನು ವಿರೋಧಿಸಿ ರಫಾ ಗಡಿಯತ್ತ ಸಾಗುತ್ತಿದ್ದ ಮತ್ತು ಶಾಂತಿಯುತ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹಲವಾರು ಮಾನವ ಹಕ್ಕು ಕಾರ್ಯಕರ್ತರು ಮತ್ತು ಪತ್ರಕರ್ತರನ್ನು ಈಜಿಪ್ಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮಕ್ತೂಬ್ ಮಾಧ್ಯಮದ ಪತ್ರಕರ್ತೆ ನಿಕಿತಾ ಜೈನ್ ಕೂಡ ಇದ್ದಾರೆ.
ವಿವಿಧ ದೇಶಗಳ ನಿಯೋಗಗಳನ್ನು ಇಸ್ಮಾಯಿಲಿಯಾ ನಗರದಲ್ಲಿ ತಡೆಹಿಡಿಯಲಾಯಿತು. ರಫಾ ಗಡಿಯತ್ತ ಶಾಂತಿಯುತ ಮೆರವಣಿಗೆ ಮೂಲಕ ಹೋಗುತ್ತಿದ್ದವರ ಪಾಸ್ಪೋರ್ಟ್ಗಳನ್ನು ಈಜಿಪ್ಟ್ ಅಧಿಕಾರಿಗಳು ವಶಪಡಿಸಿಕೊಂಡರು ಎಂದು ಪತ್ರಕರ್ತೆ ನಿಕಿತಾ ಜೈನ್ ವಿಡಿಯೋ ಮೂಲಕ ತಿಳಿಸಿದ್ದಾರೆ.
ಪತ್ರಕರ್ತರು ಸೇರಿದಂತೆ ಹಲವರ ಪಾಸ್ಪೋರ್ಟ್ಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿದರು. ಈ ಸಂದರ್ಭದಲ್ಲಿ ವೀಡಿಯೋ ಚಿತ್ರೀಕರಣವನ್ನು ಪೊಲೀಸರು ನಿರ್ಬಂಧಿಸಿದ್ದು, ಸುಮಾರು 70 ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತರನ್ನು ಗಡೀಪಾರು ಮಾಡುವ ಬಗ್ಗೆ ವದಂತಿಗಳು ಹರಡಿವೆ. ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಲಾಗಿದ್ದು, ಈ ಕುರಿತು ಮುಂದೇನಾಗಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಇಸ್ಮಾಯಿಲಿಯಾ ಹಾಸ್ಟೆಲ್ಗಳಲ್ಲಿ ಕೆಲವರನ್ನು ತಾತ್ಕಾಲಿಕವಾಗಿ ಬಂಧಿಸಲಾಗಿದೆ. ನೂರಾರು ವಾಹನಗಳನ್ನು ಈಜಿಪ್ಟ್ ಅಧಿಕಾರಿಗಳು ಮೊದಲ ಎರಡು ಪ್ರಮುಖ ಚೆಕ್ಪೋಸ್ಟ್ಗಳಲ್ಲಿ ತಡೆ ಹಿಡಿದು ನಿಲ್ಲಿಸಿದ್ದು, ಅಲ್ಲಿ ಅವರ ಪಾಸ್ಪೋರ್ಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ತಡೆದ ಸ್ಥಳಗಳಲ್ಲಿ ಶಿಬಿರಗಳು ಸ್ಥಾಪನೆಯಾಗುತ್ತಿವೆ. ಅವರ ಮುಂದಿನ ಗತಿ ಏನೆಂಬುದರ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಅವರನ್ನು ಗಡೀಪಾರು ಮಾಡಬಹುದೇ ಅಥವಾ ಈಜಿಪ್ಟ್ನ ಜೈಲುಗಳಲ್ಲಿ ಇರಿಸಲಾಗುತ್ತದೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.












