✍️ ಹಾಶಿಮಾ ರಫೀಕ
ಬೇಸಿಗೆ ಹೆಚ್ಚಾದ ಕಾಲದಲ್ಲಿಯೇ ಹಜ್ಜ್ ಯಾತ್ರೆ ನಡೆಯುತ್ತಿದೆ. ಪ್ರಯಾಣದುದ್ದಕ್ಕೂ ಯೋಗ ಕ್ಷೇಮ ನೋಡಿಕೊಳ್ಳಲು ಯಾತ್ರಾರ್ಥಿಗಳಲ್ಲಿ ಕೆಲವು ಮುನ್ನೆಚ್ಚರಿಕೆಗಳು ಅಗತ್ಯ. (ವಿಶೇಷವಾಗಿ ಹಿರಿಯ ಮಹಿಳಾ ಯಾತ್ರಿಕರು).
ಜಗತ್ತಿನ ಎಲ್ಲ ಮುಸ್ಲಿಂ ಬಾಂಧವರು ಹಜ್ಜ್ ಯಾತ್ರೆ ಮಾಡುವ ಬಲವಾದ ಇಚ್ಛೆ ಉಳ್ಳವರಾಗಿರುತ್ತಾರೆ. ಈ ಯಾತ್ರೆ ಎಲ್ಲರಿಗೂ ಕಡ್ಡಾಯವಿಲ್ಲ. ಇದು ಐಚ್ಛಿಕವಾಗಿದೆ. ಯಾರು ಆರ್ಥಿಕವಾಗಿ ಸಬಲರಾಗಿದ್ದಾರೋ ಹಾಗೂ ಆರೋಗ್ಯದಿಂದ ಇದ್ದಾರೋ ಅವರು ಜೀವನದಲ್ಲಿ ಒಂದು ಬಾರಿಯಾದರೂ ಹಜ್ಜ್ ಯಾತ್ರೆಯನ್ನು ಕಡ್ಡಾಯವಾಗಿ ಮಾಡಲೇಬೇಕು. ಆದರೂ ಸಾಮಾನ್ಯ ಮುಸ್ಲಿಂ ಬಾಂಧವರ ಕನಸು ಹಜ್ಜ್ ಯಾತ್ರೆ.
ಈ ಆಧ್ಯಾತ್ಮಿಕ ಯಾತ್ರೆ ವರ್ಷಕ್ಕೊಮ್ಮೆ ಮಕ್ಕಾದಲ್ಲಿ ಜರುಗಿ ಜಗತ್ತಿನ ಸುಮಾರು 15 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಸೇರಿ ಸುಮಾರು ಒಂದು ತಿಂಗಳು ವಿವಿಧ ಬಗೆಯ ಆರಾಧನೆಯಲ್ಲಿ ತೊಡಗುತ್ತಾರೆ. ಈ ಆರಾಧನೆಯ ಬಹುಪಾಲು ದೈಹಿಕ ಚಲನವಲನದಲ್ಲಿಯೇ ಇರುತ್ತದೆ. ಹೀಗಾಗಿ ಯಾತ್ರಾರ್ಥಿಗಳು ಆರೋಗ್ಯವಂತರಾಗಿ ಆರೋಗ್ಯ ಕಾಪಾಡಿಕೊಳ್ಳವುದು ಅಗತ್ಯವಾಗಿರುತ್ತದೆ. ವಿಶೇಷಾಗಿ ಹಿರಿಯ ಮಹಿಳಾ ಹಜ್ಜ್ ಯಾತ್ರಾರ್ಥಿಗಳಿಗೆ ಇದೊಂದು ಮುಖ್ಯ ಸಮಸ್ಯೆ.
ಮಹಿಳಾ ಯಾತ್ರಿಗಳಲ್ಲಿ 60 ವರುಷಕ್ಕೂ ಮೇಲ್ಪಟ್ಟವರೇ ಹೆಚ್ಚು ಇರುತ್ತಾರೆ. ಅದರಲ್ಲಿ ಬಹಳಷ್ಟು ಮಹಿಳೆಯರು ತಮ್ಮ ಸಂಗಡಿಗರೊಂದಿಗೆ ಅಥವಾ ಗುಂಪಿನಲ್ಲಿ ಇರುತ್ತಾರೆ. ಮೊದಲು ಮಹಿಳಾ ಯಾತ್ರಿ ಒಬ್ಬಳೇ ಹಜ್ಜ್ ಮಾಡುವಂತಿರಲಿಲ್ಲ. ಈಗ ಸೌದಿ ಸರ್ಕಾರ ಮಹಿಳೆ ಒಬ್ಬಳೇ ಯಾತ್ರೆ ಕೈಗೊಳ್ಳಲು ಅನುಮತಿ ನೀಡಿದೆ. ಹೀಗಾಗಿ ಮಹಿಳೆ ಒಬ್ಬರೇ ಯಾತ್ರೆ ಕೈಕೊಳ್ಳಬೇಕಾದರೆ ವಿಶೇಷವಾಗಿ ಹಿರಿಯರಿದ್ದರೆ ಅವರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಸಂಗಾತಿಗಳೊಂದಿಗೆ ಇದ್ದರೂ ಗುಂಪಿನಲ್ಲಿ ಇದ್ದರೂ ಮಹಿಳಾ ಯಾತ್ರಿಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮಹಿಳಾ ಯಾತ್ರಿಗಳು ಮೊಟ್ಟ ಮೊದಲು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ ಅದರ ವ್ಯವಸ್ಥೆ ಮಾಡಿ ಕೊಳ್ಳಬೇಕು. ಈ ಕೆಳಗಿನ ಹಲವು ಸಲಹೆಗಳನ್ನು ಗಮನಿಸಬಹುದು.
- ಉದ್ದವಾದ ಸಡಿಲು ಸಡಿಲಾದ ಹಗುರಾದ ಸಾಂಪ್ರದಾಯಿಕ ಉಡುಪನ್ನು ಧರಿಸಬೇಕು, ಹಿಜಾಬಿನಿಂದ ತಲೆ ಕೂದಲನ್ನು ಮುಚ್ಚಿಕೊಳ್ಳಬೇಕು, ನಿಮ್ಮ ದೇಹದ ಹೆಚ್ಚಿನ ಭಾಗವನ್ನು ಆವರಿಸುವ ಹಗುರವಾದ ಸಡಿಲಾದ ಬಟ್ಟೆ ಇರಬೇಕು, ಸೂರ್ಯನ ತೀವ್ರ ಕಿರಣಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಅಗಲವಾದ ಅಂಚುಳ್ಳ ಟೋಪಿ ಹಾಗೂ ಕಪ್ಪು ಕನ್ನಡಕ ಸನ್ ಗ್ಲಾಸ್ ಧರಿಸಬೇಕು.
- ದೈಹಿಕ ಆರಾಧನಾ ವೇಳೆಯಲ್ಲಿ ನಿರಂತರವಾಗಿ ನೀರು, ಪಾನೀಯಗಳನ್ನು ಕುಡಿಯುತ್ತಲೇ ಇರಬೇಕು. ಕೆಫಿನ್, ಸಕ್ಕರೆ ಪಾನೀಯಗಳನ್ನು ಅತಿಯಾಗಿ ಕುಡಿಯಬಾರದು, ಇದರಿಂದ ನಿಮ್ಮ ದೇಹ ಬೇಗನೇ ನಿರ್ಜಲೀಕರಣವಾಗ ಬಹುದು.
- ದೈಹಿಕ ಆರಾಧನೆಯ ಸಮಯದಲ್ಲಿ ನಿಯಮಿತವಾಗಿ ವಿಶ್ರಾಂತಿಯನ್ನು ಪಡೆಯಬೇಕು, ಸಾಧ್ಯವಾದಾಗಲೆಲ್ಲ ನೆರಳಿನಲ್ಲಿ ಇರಲು ಪ್ರಯತ್ನಿಸಬೇಕು. ಹೊರಗೆ ನೇರವಾಗಿ, ಬಿಸಿಲಿಗೆ, ದೇಹವನ್ನು ಒಡ್ಡಿ ಕೊಳ್ಳಬಾರದು. ಮುಸುಕಾದ ಮೋಡಕವಿದ ಪ್ರದೇಶಗಳಲ್ಲಿ ಉಳಿಯಿರಿ, ಕಡ್ಡಾಯವಾಗಿ ಕೊಡೆ ಬಳಸಬೇಕು.
- ಕಾಬಾದ ಪ್ರದಕ್ಷಿಣೆ, ಸಫಾ-ಮರ್ವಾ, ಶೈತಾನನಿಗೆ ಕಲ್ಲು ಹೊಡೆಯುವುದು ಮುಂತಾದ ಇನ್ನೂ ಹಲವು ಕಡೆಗಳಲ್ಲಿ ಹೆಚ್ಚಾಗಿ ನಡೆದುಕೊಂಡೇ ಹೋಗಬೇಕಾಗುತ್ತದೆ, ಆಗ ಮೆಲ್ಲನೆ ಸಾಗಬೇಕು, ಬೇಗ ಬೇಗ ಧಾವಿಸಬಾರದು, ಹೆಚ್ಚು ಭಾವುಕರಾಗಿ ದೈಹಿಕ ಆರಾಧನೆ ಮಾಡಬಾರದು.
- ಯಾತ್ರೆಯುದ್ದಕ್ಕೂ ಉತ್ತಮವಾದ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಕೈಗಳನ್ನು ಆಗಾಗ ಸಾಬೂನು ನೀರಿನಿಂದ ತೊಳೆಯಬೇಕು. ಅದರ ಸೌಲಭ್ಯ ಇಲ್ಲದಿದ್ದಾಗ ಸ್ಯಾನಿಟೈಜರ್ಗಳನ್ನು ಬಳಸಬೇಕು. ಎಲ್ಲರೂ ಮುಖವಾಡ (ಮಾಸ್ಕ್) ಧರಿಸಬೇಕು.
- ಕಿಕ್ಕಿರಿದ ಪ್ರದೇಶಗಳಿಗೆ ಹೋಗಬಾರದು. ಸಾಂಕ್ರಾಮಿಕ ರೋಗದ ಭಯದ ಕಾರಣ ಸಾಧ್ಯವಾದಷ್ಟು ಜನ ದಟ್ಟಣೆ ಇರುವ ಸ್ಥಳಗಳನ್ನು ತಪ್ಪಿಸಬೇಕು. ಅತೀಯಾದ ಪರಿಶ್ರಮ ಪಡದೆ ಅಗತ್ಯವಿದ್ದಾಗ ಮಾತ್ರ ನಡೆಯಬೇಕು. ನಡೆಯುವಾಗಲೂ ಆಗಾಗ ವಿಶ್ರಾಂತಿ ಪಡೆಯಬೇಕು.
- ದೇಹದ ಉಷ್ಣತೆಯನ್ನು ನಿಯಂತ್ರಿಸಲು ಹಸಿ ಟಾವೆಲ್ಲಿನಿಂದ ಅಥವಾ ಮಿಸ್ಟಿಂಗ್ ಫ್ಯಾನ್ಗಳಂತಹ ತಂಪಿನ ವಿಧಾನಗಳನ್ನು ಬಳಸಿ ಸಮಯ ಸಿಕ್ಕಾಗಲೆಲ್ಲ ತಂಪಾದ ನೀರನ್ನು ಬಳಸಿರಿ. (ಸ್ನಾನ ಮಾಡಿದರೂ ಅಡ್ಡಿಯಿಲ್ಲ.)
- ವಾಶ್ರೂಮನ್ನು ಆಗಾಗ ಬಳಸುತ್ತಿರಬೇಕು. ಅದರ ತೀವ್ರತೆಯ ಬಗ್ಗೆ ಕಾಯಬಾರದು. ವಾಶ್ರೂಮ್ ಲಭ್ಯವಿದ್ದಾಗ ಬಳಸಿರಿ.
- ಉತ್ತಮ ಆರೋಗ್ಯ ಪ್ರಮುಖವಾಗಿದ್ದು ಯಾತ್ರಾರ್ಥಿಗಳು ಆರೋಗ್ಯವನ್ನು ಕಾಪಾಡಿಕೊಂಡು ತಾಳ್ಮೆಯಿಂದ, ಭಕ್ತಿ, ಶ್ರದ್ಧೆಯಿಂದ ಈ ಧಾರ್ಮಿಕ ಯಾತ್ರೆಯನ್ನು ಮುಗಿಸಿ ಮನೆಗೆ ಮರಳಿಬಂದು ಮಕ್ಕಳು, ಮೊಮ್ಮಕ್ಕಳು ಬಂಧು-ಬಾಂಧವರೊಂದಿಗೆ ಕೂಡಿರಿ.












