✍️ ಏ. ಕೆ. ಕೆ.
ಗುಜರಾತ್ ಮಾಡೆಲ್, ನೆನಪಿದೆಯಾ? ಮರೆತಿದ್ದೀರಾ? 2014ರಲ್ಲಿ ಗುಜರಾತ್ ಮಾಡೆಲನ್ನು ಬಿಜೆಪಿ ದೇಶಾದ್ಯಂತ ಮಾರಾಟ ಮಾಡಿತ್ತು. ಜನರು ಮುಗಿ ಬಿದ್ದು ಖರೀದಿಸಿದರು. ಗುಜರಾತ್ ಎಂಬುದು ಅದ್ಭುತ ಅಭಿವೃದ್ಧಿಯನ್ನು ಹೊಂದಿದ ರಾಜ್ಯ, ಅಲ್ಲಿಯ ಜನರು ಸುಖ ಸಂಪತ್ತಿನಿಂದ ಬದುಕ್ತಾ ಇದ್ದಾರೆ, ಅಲ್ಲಿ ಏನುಂಟು ಏನಿಲ್ಲ ಎಂಬಂತೆ ಬಿಜೆಪಿ ಪ್ರಚಾರದಲ್ಲಿ ತೊಡಗಿತ್ತು. ಮಾಧ್ಯಮಗಳೂ ಇದಕ್ಕೆ ಪಿಟೀಲು ಬಾರಿಸಿದವು. ಸೋಶಿಯಲ್ ಮೀಡಿಯಾವನ್ನಂತೂ ಕೇಳೋದೇ ಬೇಡ. ಈ ದೇಶದ ಜನರೆಲ್ಲ ನಮಗೂ ಗುಜರಾತ್ ಮಾಡಲೇ ಬೇಕು ಎಂದು ಬಯಸುವಂಥ ವಾತಾವರಣವನ್ನು ಸೃಷ್ಟಿಸಲಾಯಿತು. ಗುಜರಾತನ್ನು ಎತ್ತರಕ್ಕೆ ಕೊಂಡೊಯ್ದ ಮುಖ್ಯಮಂತ್ರಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಬೇಕು ಮತ್ತು ಆ ಮೂಲಕ ಗುಜರಾತ್ ನಂತೆ ಈ ದೇಶವನ್ನು ಮಾರ್ಪಡಿಸಬೇಕು ಎಂಬ ಆಸೆ ದೇಶದ ಜನರಲ್ಲೂ ಹುಟ್ಟಿಕೊಂಡಿತು. ಆ ಬಳಿಕದ ಬೆಳವಣಿಗೆಗಳು ಏನೇನು ಅನ್ನೋದು ನಿಮಗೂ ಗೊತ್ತೇ ಇದೆ. ಇದೀಗ ಕಳೆದ ಒಂದು ವಾರದಿಂದ ಗುಜರಾತ್ ಮಾತಾಡ್ತಾ ಇದೆ, ದೇಶಕ್ಕೆ ಗುಜರಾತ್ ಮಾಡೆಲ್ ನ ಪರಿಚಯ ಮಾಡ್ತಾ ಇದೆ. 2014ರಲ್ಲಿ ಚುನಾವಣೆಯನ್ನು ಗೆದ್ದು ಪ್ರಧಾನಿಯಾದ ನರೇಂದ್ರ ಮೋದಿಯವರು ಆ ಬಳಿಕ ಯಾಕೆ ಗುಜರಾತ್ ಮಾಡೆಲ್ ನ ಬಗ್ಗೆ ಮಾತೇ ಆಡಿಲ್ಲ ಅನ್ನುವುದೂ ಗೊತ್ತಾಗ್ತಾ ಇದೆ.
ಒಂದೇ ಒಂದು ಮಳೆ ಗುಜರಾತನ್ನು ನರಕ ಸದೃಶ ಮಾಡಿದೆ. ಸಾವಿರಕ್ಕಿಂತಲೂ ಅಧಿಕ ಮನೆಗಳು, ಅಂಗಡಿಗಳು ನೀರಿನಿಂದ ಮುಳುಗಿಹೋಗಿವೆ. 20ಕ್ಕಿಂತಲೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ತ್ಯಾಜ್ಯವನ್ನು ಕೊಂಡೊಯ್ಯುವ ಲಾರಿಗಳಲ್ಲಿ ಜನರನ್ನು ತುಂಬಿಸಿ ಅತ್ತಿತ್ತ ಕೊಂಡೊಯ್ಯಲಾಗ್ತಾ ಇದೆ. ನಗರಗಳಲ್ಲಿ ಮೂಲಸೌಕರ್ಯಗಳು ಒಂದಿನಿತೂ ಇಲ್ಲ. ನೀರೆಲ್ಲಾ ಮನೆ, ಅಂಗಡಿ, ರಸ್ತೆಗಳಲ್ಲಿ ನಿಂತು ಕೊಳವಾಗಿ ಮಾರ್ಪಟ್ಟಿದೆ.
ಹಾಗಿದ್ದರೆ 2014ರಲ್ಲಿ ದೇಶಕ್ಕೆ ಮಾಡೆಲ್ ಎಂದು ಬಿಂಬಿಸಲಾದ ಗುಜರಾತ್ ಯಾಕೆ ಹೀಗಾಯಿತು? ವಿಷಯ ಏನೆಂದರೆ, ಗುಜರಾತ್ ಮಾಡೆಲ್ ಎಂಬುದು ಪ್ರೊಪಗಂಡ ಆಗಿತ್ತು. ಗಾಳಿ ತುಂಬಿಸಿದ ಬಲೂನಾಗಿತ್ತು. ಒಳಗಡೆ ಬರೇ ಟೊಳ್ಳು ಮಾತ್ರವೇ ಇತ್ತು. ಆದ್ದರಿಂದಲೇ 2014ರಲ್ಲಿ ಚುನಾವಣೆಯನ್ನು ಗೆದ್ದ ಬಳಿಕ ನರೇಂದ್ರ ಮೋದಿ ಗುಜರಾತ್ ಮಾಡೆಲ್ ಎಂಬ ಸ್ಲೋಗನನ್ನು ಹೇಳಲೇ ಇಲ್ಲ. ಬಿಜೆಪಿ ಆ ಬಗ್ಗೆ ಮಾತೇ ಆಡಲಿಲ್ಲ. ಯಾಕಂದ್ರೆ ಗುಜರಾತ್ ಮಾಡೆಲ್ ಎಂದು ತೋರಿಸುವುದಕ್ಕೆ 2002ರ ಗುಜರಾತ್ ಹತ್ಯಾಕಾಂಡವನ್ನು ಬಿಟ್ರೆ ಅದರ ಬಳಿ ಬೇರೇನೂ ಇರಲಿಲ್ಲ.
2023ರಲ್ಲಿ ಎನ್ ಡಿ ಟಿವಿ ಒಂದು ಲೇಖನ ಪ್ರಕಟಿಸಿತು. ಗುಜರಾತ್ ಮಾಡೆಲ್: ಗ್ಲಾಸ್ ಹೌಸ್ ಮಾಡೆಲ್ ಎಂಬ ಹೆಸರಲ್ಲಿ ಪ್ರಕಟವಾದ ಈ ಲೇಖನದಲ್ಲಿ ಗುಜರಾತ್ ನ ಇಂಚಿಂಚೂ ದೌರ್ಬಲ್ಯವನ್ನು ಬಹಿರಂಗಕ್ಕೆ ತರಲಾಗಿತ್ತು. ರಾಜ್ಯದ ಜನಸಂಖ್ಯೆಯ ಮೂರರಲ್ಲಿ ಒಂದು ಭಾಗ ಅಥವಾ 31 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಇವೆ ಎಂದು ಈ ಲೇಖನದಲ್ಲಿ ಹೇಳಲಾಗಿತ್ತು. ಇವರಲ್ಲಿ 16 ಲಕ್ಷ ಕುಟುಂಬಗಳು ಅತಿ ತೀವ್ರ ಬಡತನದಲ್ಲಿ ಇವೆ ಎಂದು ಹೇಳಲಾಗಿತ್ತು. 80% ಮಕ್ಕಳು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ, ಪ್ರತಿ ಹತ್ತರಲ್ಲಿ ನಾಲ್ಕು ಮಕ್ಕಳ ಎತ್ತರ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ, ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ತೂಕ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇದೆ, 15 ರಿಂದ 49 ವಯಸ್ಸಿನ ಮಹಿಳೆಯರಲ್ಲಿ 65 ಶೇಕಡ ಮಂದಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ, ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಅತಿ ಹೆಚ್ಚು ಮಕ್ಕಳು ಗುಜರಾತಿನಲ್ಲಿದ್ದಾರೆ.. ಎಂದೆಲ್ಲ ಈ ಲೇಖನದಲ್ಲಿ ಅಂಕಿ ಅಂಶಗಳನ್ನು ನೀಡಲಾಗಿತ್ತು.
2020ರಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಗುಜರಾತ್ ಗೆ ಬಂದಾಗ ಅಹಮದಾಬಾದ್ ಬಸ್ತಿಗೆ ಗೋಡೆಯನ್ನು ಎಬ್ಬಿಸಿದ್ದು ನಿಮಗೆ ಗೊತ್ತಿರಬಹುದು. ಇದರ ಆಚೆ 700 ಕುಟುಂಬಗಳು ವಾಸಿಸುತ್ತಿದ್ದು, ಈ ಬಡ ಕುಟುಂಬಗಳು ಟ್ರಂಪ್ ಕಣ್ಣಿಗೆ ಬೀಳದಿರಲಿ ಎಂದು ಈ ಗೋಡೆಯನ್ನು ಎಬ್ಬಿಸಲಾಗಿತ್ತು.
ಕವಿ ಮತ್ತು ಸಾಹಿತಿ ಮೆಹುಲ್ ದೇವಕಾಲ ಎಂಬವರು 2024ರಲ್ಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಒಂದು ಲೇಖನ ಬರೆದರು. ಗುಜರಾತ್ ಮಾಡೆಲ್ ಎಂಬ ಸುಳ್ಳನ್ನು ಬೆತ್ತಲೆ ಮಾಡಲು ಜನರಿಗಿದು ಸಕಾಲ ಎಂಬ ಶೀರ್ಷಿಕೆಯಲ್ಲಿ ಬರೆದ ಆ ಲೇಖನದಲ್ಲಿ ಗುಜರಾತ್ ಮಾಡೆಲ್ ನ ಮಿತ್ ಗಳನ್ನು ಅವರು ಎಣಿಸಿ ಎಣಿಸಿ ಹೇಳಿದ್ದರು
ಕಳೆದ ಮೂರು ದಶಕಗಳಿಂದ ಗುಜರಾತಿನಲ್ಲಿ ಪಾಟಿದಾರ್ ಸಮುದಾಯ ಬಿಜೆಪಿಯನ್ನು ಬೆಂಬಲಿಸ್ತಾ ಬಂದಿದೆ. ಆದರೆ ಈ ಸಮುದಾಯದ ದೊಡ್ಡದೊಂದು ಸಂಖ್ಯೆ ಅಲ್ಲಿ ವಾಸಿಸಲು ಬಯಸುವುದಿಲ್ಲ, ಅವರು ಕೆನಡಾ ಅಮೆರಿಕ ಯುಕೆಗೆ ವಲಸೆ ಹೋಗ್ತಾರೆ, ಅಲ್ಲಿ ಉದ್ಯೋಗ ಮಾಡುತ್ತಾರೆ ಎಂದು ಅವರು ಬರೆದಿದ್ದರು.
ಗುಜರಾತಿನಲ್ಲಿ ಜಾತಿ ಆಧಾರಿತ ತಾರತಮ್ಯ ದೊಡ್ಡ ಮಟ್ಟದಲ್ಲಿದೆ. ಜಾತಿ ದೌರ್ಜನ್ಯ ಇದೆ. ಶಿಕ್ಷಣ ಉದ್ಯೋಗ ಕೃಷಿ ಸಹಿತ ಪ್ರಮುಖ ಕ್ಷೇತ್ರಗಳಲ್ಲಿ ತೀರದ ಸಮಸ್ಯೆಗಳಿವೆ ಎಂದವರು ಬರೆದಿದ್ದರು. ದಲಿತ ವರ ಕುದುರೆಯ ಮೇಲೇರಿ ಹೋಗುವುದಕ್ಕೂ ಅವಕಾಶ ಇಲ್ಲದ್ದನ್ನು ಅವರು ಬರೆದಿದ್ದರು.
ಅಂತೂ ಈಗ ಗುಜರಾತ್ ಮಾಡೆಲ್ ಅನ್ನು ಬಿಜೆಪಿ ಮರೆತಿದೆ. ನರೇಂದ್ರ ಮೋದಿಯವರೂ ಮರೆತಿದ್ದಾರೆ. ಮಾಧ್ಯಮಗಳೂ ಮರೆತಿವೆ. ಸೋಶಿಯಲ್ ಮೀಡಿಯಾಕ್ಕೆ ನೆನಪೇ ಇಲ್ಲ. ಆದರೆ ಪ್ರಕೃತಿ ಮಾತ್ರ ಮರೆಯದೇ ಆಗಾಗ ಇದನ್ನು ದೇಶಕ್ಕೆ ನೆನಪಿಸುತ್ತಿದೆ
ಅಂದಹಾಗೆ, ಸುಳ್ಳಿನ ಮೇಲೆ ಕಟ್ಟಲಾದ ಗೋಪುರಕ್ಕೆ ದೀರ್ಘಾಯುಷ್ಯ ಇರಲು ಸಾಧ್ಯವಿಲ್ಲವಲ್ಲ.












