ನಮ್ಮ ಅಂತರಾತ್ಮಕ್ಕೆ ಚುಚ್ಚಿ ಹೊರಟು ಹೋದ ಆ ತಂದೆ ಮತ್ತು ತಾಯಿ

0
639

✍️ ಅಮಾನ್ ಕೆ.

ಟಿವಿ ಆನ್ ಮಾಡಿದ್ರೆ ಸಾಕು ಪ್ರಿಯತಮೆಯಿಂದ ಪ್ರಿಯಕರನ ಹತ್ಯೆ, ಪ್ರಿಯಕರನಿಂದ ಪ್ರಿಯತಮೆಯ ಹತ್ಯೆ, ಹಿಂದುವಿನಿಂದ ಮುಸ್ಲಿಂ ಹತ್ಯೆ, ಮುಸ್ಲಿಮನಿಂದ ಹಿಂದೂ ಹತ್ಯೆ, ಇತ್ಯಾದಿ ಸುದ್ದಿಗಳೇ ಸ್ವಾಗತಿಸುತ್ತವೆ. ಪತ್ರಿಕೆಯನ್ನು ತೆರೆದರೂ ಸುಖ ಇಲ್ಲ. ಅದರಲ್ಲೂ ರಾಜಕಾರಣಿಗಳ ತೆವಲುಗಳೇ ಹೈಲೈಟ್ ಆಗಿರುತ್ತದೆ. ನಾವು ಕೂಡ ಇವುಗಳಿಗೆ ಅಡ್ಜಸ್ಟ್ ಆಗಿದ್ದೇವೆ. ಯಾರಾದರೂ ಸಿಕ್ಕರೆ ಮಾಮೂಲಿ ಮಾತುಗಳ ಬಳಿಕ ನಮ್ಮ ಮಾತು ಮತ್ತು ಚರ್ಚೆಗಳೂ ಇವೇ ಹಿಂದೂ ಮುಸ್ಲಿಂ, ಕ್ರೌರ್ಯಗಳ ಸುತ್ತಲೇ ಇರುತ್ತದೆ. ಈ ನಡುವೆ ನಿಜಕ್ಕೂ ನಾವು ಚರ್ಚಿಸಲೇಬೇಕಾದ ಮುಖ್ಯ ಸಂಗತಿಗಳು ಬದಿಗೆ ಸರಿಯುತ್ತವೆ. ಇವುಗಳಲ್ಲಿ ಎರಡು ಮುಖ್ಯ ಸಂಗತಿಗಳನ್ನು ಉಲ್ಲೇಖಸುವೆ.

1.ವೃದ್ಧಾಶ್ರಮದಲ್ಲಿದ್ದ ಬೆಂಗಳೂರಿನ ದೊಡ್ಡ ಕಲ್ಲಸಂದ್ರದ ನಿವಾಸಿ 81 ವರ್ಷದ ಕೃಷ್ಣಮೂರ್ತಿ ಮತ್ತು ಅವರ ಪತ್ನಿ ರಾಧಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2.ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿಲ್ಲ ಎಂಬ ಕಾರಣಕ್ಕೆ ಪ್ರಾಂಶುಪಾಲನಾಗಿರುವ ಮಹಾರಾಷ್ಟ್ರದ ತಂದೆ ದೊಂಡಿರಾಮ್ ಬೋಸಲೆ ಎಂಬವ ತನ್ನ ಮಗಳನ್ನು ಹೊಡೆದು ಸಾಯಿಸಿದ್ದಾನೆ.

ವೃದ್ಧಾಶ್ರಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಆ ಹಿರಿಯರಿಗೆ ವಿಜಯ್ ಎಂಬ ಏಕೈಕ ಮಗನಿದ್ದಾನೆ. ಈತ ಸಾಫ್ಟ್ವೇರ್ ಇಂಜಿನಿಯರ್. ಇವನಿಗೆ ಮಕ್ಕಳೂ ಇದ್ದಾರೆ. ಆದರೆ ಮನೆಯಲ್ಲಿ ಆಗಾಗ ಅತ್ತೆ ಸೊಸೆ ಜಗಳ ನಡೆಯುತ್ತಾ ಇತ್ತು. ಆದ್ದರಿಂದ 5 ವರ್ಷಗಳ ಹಿಂದೆ ಈತ ತನ್ನ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಬೇರೆ ಬೇರೆ ವೃದ್ಧಾಶ್ರಮದಲ್ಲಿದ್ದ ಇವರನ್ನು ಮೇ 18ರಂದು ಕಮಲಮ್ಮ ರಾಮಕೃಷ್ಣಪ್ಪ ಎಂಬ ಬೆಂಗಳೂರಿನ ವೃದ್ಧಾಶ್ರಮಕ್ಕೆ ಸೇರಿಸಿದ. ಪ್ರತಿ ತಿಂಗಳು ಇವರ ಆರೈಕೆಗಾಗಿ 28,000 ರೂಪಾಯಿಯನ್ನು ಪಾವತಿಸಲು ಒಪ್ಪಿಕೊಂಡು ಮುಂಗಡ ಹಣ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಾತೃದೇವೋಭವ ಪಿತೃದೇವೋಭವ ಎಂಬುದಾಗಿ ಈ ಮಣ್ಣಿನ ಸಂಸ್ಕೃತಿ ಹೇಳಿಕೊಳ್ಳುತ್ತದೆ. ವೃದ್ಧ ಹೆತ್ತವರಿಗೆ ಛೆ ಎಂಬ ಪದವನ್ನೂ ಬಳಸಬಾರದು ಎಂದು ಕುರ್ ಆನ್ ಹೇಳಿಕೊಡುತ್ತದೆ. ನೀವೆಷ್ಟೇ ನಮಾಝ್ ಮಾಡಿದರೂ ಉಪವಾಸ ಆಚರಿಸುವವರಾಗಿದ್ದರೂ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳದಿದ್ದರೆ ಸ್ವರ್ಗ ಪ್ರವೇಶಿಸುವುದಿಲ್ಲ ಎಂದು ಮಕ್ಕಳಿಗೆ ಇಸ್ಲಾಂ ಬೋಧಿಸುತ್ತದೆ. ಆದರೆ ಈ ಧಾರ್ಮಿಕ ಮೌಲ್ಯಗಳು ಬರಬರುತ್ತಾ ಹಳ್ಳ ಹಿಡೀತಾ ಇದೆ.

2022 ರಲ್ಲಿ ಹೆಲ್ಪ್ ಏಜ್ ಇಂಡಿಯಾ ಒಂದು ಸಮೀಕ್ಷಾ ವರದಿಯನ್ನ ಪ್ರಕಟಿಸಿತ್ತು. ಬ್ರಿಡ್ಜ್ ದಿ ಗ್ಯಾಪ್ ಎಂಬ ಹೆಸರಲ್ಲಿ ನಡೆಸಿದ ಈ ಸರ್ವೆಯಲ್ಲಿ ಆಘಾತಕಾರಿ ಮಾಹಿತಿಗಳು ಬಹಿರಂಗವಾಗಿತ್ತು. 82 ಶೇಕಡ ವೃದ್ಧ ಹೆತ್ತವರು ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇವರಲ್ಲಿ 35 ಶೇಕಡ ವೃದ್ಧರು ತಮ್ಮ ಮಕ್ಕಳಿಂದ ಹಿಂಸೆಯನ್ನು ಎದುರಿಸುತ್ತಿದ್ದಾರೆ, 21 ಶೇಕಡ ವೃದ್ಧರು ಸೊಸೆಯರಿಂದ ಹಿಂಸೆ ಎದುರಿಸುತ್ತಿದ್ದಾರೆ. ಎರಡು ಶೇಕಡ ವೃದ್ಧರು ತಮ್ಮ ಕೆಲಸಗಾರರಿಂದಲೇ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. 46 ಶೇಕಡ ವೃದ್ಧರಿಗೆ ದೌರ್ಜನ್ಯದ ಬಗ್ಗೆ ದೂರು ಸಲ್ಲಿಸುವ ವ್ಯವಸ್ಥೆಯ ಬಗ್ಗೆ ಗೊತ್ತೇ ಇಲ್ಲ ಎಂದು ಈ ವರದಿ ಹೇಳಿದೆ.

ದಿನದಿಂದ ದಿನಕ್ಕೆ ಈ ದೇಶದಲ್ಲಿ ಧಾರ್ಮಿಕ ಕೇಂದ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಜನರು ಹೆಚ್ಚು ಹೆಚ್ಚು ಮಸೀದಿಗೆ ಮತ್ತು ಮಂದಿರಕ್ಕೆ ಹೋಗುತ್ತಿದ್ದಾರೆ. ಬಲವಂತದಿಂದ ಜೈ ಶ್ರೀರಾಮ್ ಹೇಳಿಸುವ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಿಸುತ್ತಿರುತ್ತೇವೆ. ಧರ್ಮಕ್ಕಾಗಿ ಜೀವ ಕೊಡಲು ಸಿದ್ದ ಇರುವ ಯುವಕರ ದಂಡೇ ಈ ದೇಶದಲ್ಲಿದೆ. ಆದರೆ ಇನ್ನೊಂದು ಕಡೆ ಧರ್ಮ ಅತಿಯಾಗಿ ಗೌರವಿಸಿರುವ ವೃದ್ಧ ಹೆತ್ತವರನ್ನು ವೃದ್ಧಾಶ್ರಮಕ್ಕೆ ಅಟ್ಟಲಾಗುತ್ತದೆ. ಬೀದಿಗೆ ತಂದು ಬಿಡಲಾಗುತ್ತದೆ. ಹೊಡೆತ ಥಳಿತ ಬೈಗುಳಗಳನ್ನ ಸುರಿಸಿ ಅವರನ್ನು ನಿತ್ಯ ಸಂಕಟಕ್ಕೆ ದೂಡಲಾಗುತ್ತದೆ.

ಪ್ರಾಂಶುಪಾಲನಾದ ಅಪ್ಪನೇ ಕಡಿಮೆ ಅಂಕಕ್ಕಾಗಿ ಮಗಳನ್ನು ಕೊಲ್ಲುತ್ತಾನೆಂದರೆ ಅದರ ಆಚೆಗೆ ಹೇಳುವುದಾದರೂ ಏನು? ಮಗ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರೂ ಹೆತ್ತವರನ್ನು ವೃದ್ದಾಶ್ರಮಕ್ಕೆ ಅಟ್ಟುವುದಾದರೆ ಈ ಶಿಕ್ಷಣಕ್ಕೆ ಅರ್ಥವಾದರೂ ಏನು?

ಪ್ರತಿ ಮನೆಯಲ್ಲೂ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿಕೊಡುವ ಗಂಭೀರ ಪ್ರಯತ್ನ ನಡೆಯಬೇಕಿದೆ. ಪ್ರತಿಯೊಂದನ್ನೂ ಲಾಭ ನಷ್ಟದ ಲೆಕ್ಕಾಚಾರದಲ್ಲಿ ನೋಡುವ ಮನಸ್ಥಿತಿಯನ್ನು ಬದಲಿಸಬೇಕಿದೆ.