ಸನ್ಮಾರ್ಗ ವಾರ್ತೆ
2020ರ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಜೆಎನ್ಯು ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರು ಜಾಮೀನು ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಪೊಲೀಸರು ಈ ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಇವರಿಬ್ಬರು ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸುವ ಉದ್ದೇಶದಿಂದ ಪೂರ್ವ ಯೋಜಿತ ಪಿತೂರಿ ರೂಪಿಸಿದ್ದರು. ವಾಟ್ಸಾಪ್ ಗುಂಪುಗಳ ಮೂಲಕ ಸಂಪರ್ಕದಲ್ಲಿದ್ದರು. ದೇಶದ ಭದ್ರತೆಗೆ ವಿರುದ್ಧವಾಗುವ ರೀತಿಯಲ್ಲಿ ದಿನ ನಿಗದಿಪಡಿಸಿ ಹಾನಿ ಉಂಟುಮಾಡಲು ಯತ್ನಿಸಿದ್ದರು” ಎಂದು ಹೇಳಿದರು.
ಇದೀಗ ಐದು ವರ್ಷ ಕಳೆದರೂ ಖಾಲಿದ್ ಮತ್ತು ಇಮಾಮ್ ರವರ ಮೇಲೆ ಇನ್ನೂ ಸ್ಪಷ್ಟ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಯಾವುದೇ ವಿಚಾರಣೆಯೂ ನಡೆಯಿಲ್ಲ. ಈ ಹಿನ್ನೆಲೆಯಲ್ಲಿ ಅವರು ಜಾಮೀನು ಕೇಳಿದ್ದಾರೆ. ಆದರೆ, “ದೀರ್ಘಕಾಲದ ಬಂಧನವು ಜಾಮೀನಿಗೆ ಆಧಾರವಾಗಬಾರದು. ಇದು ರಾಷ್ಟ್ರವಿರೋಧಿ ಅಪರಾಧವಾಗಿದೆ” ಎಂದು ಪೊಲೀಸರು ವಾದಿಸಿದ್ದಾರೆ.
ಗಲಭೆಯಲ್ಲಿ 53 ಮಂದಿ ಸಾವನ್ನಪ್ಪಿದ್ದು, ಬಲಿಯಾದವರು ಬಹುತೇಕ ಮುಸ್ಲಿಂ ಸಮುದಾಯದವರು. ಈ ಪ್ರಕರಣದಲ್ಲಿ ಯುಎಪಿಎ ಕಾಯ್ದೆ ಪ್ರಯೋಗವಾಗಿದ್ದು, ಇದರ ತೀವ್ರತೆಯನ್ನು ಹಲವರು ಪ್ರಶ್ನಿಸುತ್ತಿದ್ದಾರೆ. ಜಾಮೀನು ನೀಡದಿರುವುದು, ವಿಚಾರಣೆಯ ವಿಳಂಬ ಹಾಗೂ ಯುಎಪಿಎ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ನೀತಿಯ ಮೇಲೆ ತೀವ್ರ ಟೀಕೆಗಳು ಕೇಳಿಬರುತ್ತಿವೆ.












