ಪಾಕಿಸ್ತಾನ ಪರ ಬೇಹುಗಾರಿಕೆ ಆರೋಪ; ಡಿಆರ್‌ಡಿಒ ಗೆಸ್ಟ್‌ಹೌಸ್ ವ್ಯವಸ್ಥಾಪಕ ಮಹೇಂದ್ರ ಪ್ರಸಾದ್ ಬಂಧನ

0
430

ಸನ್ಮಾರ್ಗ ವಾರ್ತೆ

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯ ಅತಿಥಿ ಗೃಹ ವ್ಯವಸ್ಥಾಪಕ ಮಹೇಂದ್ರ ಪ್ರಸಾದ್ ಅವರನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಗೆ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ರಾಜಸ್ಥಾನ ಪೊಲೀಸ್ ಸಿಐಡಿ ಗುಪ್ತಚರ ಇಲಾಖೆ ಬಂಧಿಸಿದೆ. ಉತ್ತರಾಖಂಡದ ಅಲ್ಮೋರಾ ಜಿಲ್ಲೆಯವರಾದ ಪ್ರಸಾದ್, ಜೈಸಲ್ಮೇರ್‌ನ ಚಂದನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ದೇಶವಿರೋಧಿ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದ ಸಂದರ್ಭದಲ್ಲಿ ಬಂಧನ ನಡೆದಿದೆ ಎಂದು ಸಿಐಡಿ (ಭದ್ರತಾ) ಐಜಿ ಡಾ. ವಿಷ್ಣುಕಾಂತ್ ತಿಳಿಸಿದ್ದಾರೆ.

ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದ ಒಬ್ಬ ಗುಪ್ತಚರ ಅಧಿಕಾರಿಯೊಂದಿಗೆ ಪ್ರಸಾದ್ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತನಿಖೆಯಲ್ಲಿ, ಪ್ರಸಾದ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಆ ಅಧಿಕಾರಿಯೊಂದಿಗೆ ಸಂಪರ್ಕ ಸಾಧಿಸಿ, ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿರುವುದು ಬಹಿರಂಗವಾಗಿದೆ. ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಸೇನಾ ಅಧಿಕಾರಿಗಳು ಕಾರ್ಯತಂತ್ರದ ರಕ್ಷಣಾ ಸಾಧನಗಳನ್ನು ಪರೀಕ್ಷಿಸಲು ಫೈರಿಂಗ್ ರೇಂಜ್‌ಗೆ ಭೇಟಿ ನೀಡುವ ಬಗ್ಗೆ ಮಾಹಿತಿ ನೀಡಿರುವುದು ಪತ್ತೆಯಾಗಿದೆ.

ಬಂಧನದ ನಂತರ ಪ್ರಸಾದ್ ಅವರ ಫೋನ್ ಪರಿಶೀಲನೆ ನಡೆಸಲಾಗಿದ್ದು, ಪಾಕಿಸ್ತಾನದಲ್ಲಿರುವ ವ್ಯಕ್ತಿಗೆ ಕಾರ್ಯಾಚರಣೆಯ ಸಂಬಂಧಿತ ಮಾಹಿತಿಯನ್ನು ರವಾನಿಸಿರುವುದು ದೃಢಪಟ್ಟಿದೆ. ಅವರು ದೊಡ್ಡ ಬೇಹುಗಾರಿಕೆ ಜಾಲದ ಭಾಗವಾಗಿದ್ದಾರೆಯೇ ಎಂಬುದನ್ನು ತಿಳಿಯಲು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.