ಅವರು ಆರ್‌ಎಸ್‌ಎಸ್ ಗೀತೆ ಹಾಡುವುದು, ಶಾ ಜೊತೆ ವೇದಿಕೆ ಹಂಚುವುದು ಸರಿ; ಆದರೆ ನಾವು ಮಾತಾಡಿದ್ರೆ ತಪ್ಪು; ಮಾಜಿ ಸಚಿವ ಕೆ.ಎನ್. ರಾಜಣ್ಣ

0
354

ಸನ್ಮಾರ್ಗ ವಾರ್ತೆ

ತುಮಕೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್ ನಾಯಕತ್ವದ ಬಗ್ಗೆ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, “ಅವರು (ಡಿ.ಕೆ. ಶಿವಕುಮಾರ್) ಆರ್.ಎಸ್.ಎಸ್. ಗೀತೆ ಹಾಡಬಹುದು, ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಹುದು. ಆದರೆ, ನಾವು ಏನೂ ಮಾತನಾಡಬಾರದು,” ಎಂದು ವ್ಯಂಗ್ಯವಾಡಿದರು.

ಡಿ.ಕೆ. ಶಿವಕುಮಾರ್ ಅವರ ಕೆಲವು ನಿರ್ಧಾರಗಳನ್ನು ಪ್ರಶ್ನಿಸಿದ ಅವರು, “ಕಾಂಗ್ರೆಸ್ ಸಿದ್ಧಾಂತಕ್ಕೆ ತದ್ವಿರುದ್ಧವಾದ ಆರ್.ಎಸ್.ಎಸ್. ಗೀತೆಯನ್ನು ಅವರು ಸದನದಲ್ಲಿ ಹಾಡುತ್ತಾರೆ. ಒಂದು ಕಡೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಗಂಗೆಯಲ್ಲಿ ಸ್ನಾನ ಮಾಡಿದರೆ ಬಡತನ ನಿವಾರಣೆಯಾಗುವುದಿಲ್ಲ’ ಎಂದು ಹೇಳುತ್ತಾರೆ. ಆದರೆ, ಅವರು(ಡಿಕೆಶಿ) ಹೋಗಿ ಪುಣ್ಯ ಸ್ನಾನ ಮಾಡುತ್ತಾರೆ,” ಎಂದು ಅಸಮಾಧಾನ ಹೊರಹಾಕಿದರು.

ಇದಲ್ಲದೆ, “ಕೋಮುವಾದಿಗಳಿಗೆ ಬೆಂಬಲ ನೀಡುವ ಮುಖೇಶ್ ಅಂಬಾನಿ ಮಗನ ಮದುವೆಗೆ ರಾಹುಲ್ ಗಾಂಧಿ ಹೋಗುವುದಿಲ್ಲ ಎಂದು ನಿರ್ಧರಿಸಿದ್ದರೂ, ಡಿ.ಕೆ. ಶಿವಕುಮಾರ್ ಕುಟುಂಬ ಸಮೇತ ಆ ಮದುವೆಯಲ್ಲಿ ಭಾಗವಹಿಸಿದ್ದಾರೆ,” ಎಂದು ರಾಜಣ್ಣ ಟೀಕಿಸಿದರು.

“ಸದನಕ್ಕೆ ಸಂಬಂಧವಿಲ್ಲದ ವ್ಯಕ್ತಿಗಳು ಶಾಸಕರ ಸಭೆ ನಡೆಸಬಹುದು, ಆದರೆ ನಾವು ನಡೆಸಿದರೆ ಅದು ಅಪರಾಧವಾಗುತ್ತದೆ,” ಎಂದು ಆರೋಪಿಸಿದ ಅವರು, “ಈ ಎಲ್ಲ ವೈರುಧ್ಯಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ,” ಎಂದು ಎಚ್ಚರಿಕೆ ನೀಡಿದರು.

ರಾಜಣ್ಣ ಅವರ ಈ ಹೇಳಿಕೆಗಳು ರಾಜ್ಯ ಕಾಂಗ್ರೆಸ್‌ನಲ್ಲಿನ ಆಂತರಿಕ ಬಿಕ್ಕಟ್ಟನ್ನು ಮತ್ತೊಮ್ಮೆ ಬಹಿರಂಗಪಡಿಸಿವೆ.