ಉತ್ತರ ಪ್ರದೇಶ; ದಲಿತ ಇಂಜಿನಿಯರ್‌ ಮೇಲೆ ಹಲ್ಲೆ- ಬಿಜೆಪಿ ಕಾರ್ಯಕರ್ತನ ಬಂಧನ

0
333

ಸನ್ಮಾರ್ಗ ವಾರ್ತೆ

​ಬಲಿಯಾ (ಉತ್ತರ ಪ್ರದೇಶ): ಕಚೇರಿಯೊಳಗೆ ನುಗ್ಗಿ ದಲಿತ ಇಂಜಿನಿಯರ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಉತ್ತರ ಪ್ರದೇಶದ ಬಲಿಯಾದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ವೈರಲ್ ಆದ ವಿಡಿಯೋದಲ್ಲಿ, ವಿದ್ಯುತ್ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಲಾಲ್ ಸಿಂಗ್ ಅವರನ್ನು ಕೆಲವು ವ್ಯಕ್ತಿಗಳು ಸುತ್ತುವರೆದು ಥಳಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅವರಲ್ಲಿ ಒಬ್ಬ ವ್ಯಕ್ತಿ ಶೂನಿಂದ ಲಾಲ್ ಸಿಂಗ್ ಅವರಿಗೆ ಹೊಡೆಯುತ್ತಿರುವುದು ದಾಖಲಾಗಿದೆ.

​ಪೊಲೀಸರ ಪ್ರಕಾರ, ಈ ಪ್ರಕರಣದ ಪ್ರಮುಖ ಆರೋಪಿ ಮುನ್ನಾ ಬಹದ್ದೂರ್ ಆಗಿದ್ದು, ಈತ ಬಿಜೆಪಿಯ ಕಾರ್ಯಕರ್ತ ಹಾಗೂ ಮಾಜಿ ಪದಾಧಿಕಾರಿ ಎಂದು ಗುರುತಿಸಲಾಗಿದೆ.

ಮುನ್ನಾ ಬಹದ್ದೂರ್ ಮತ್ತು ಆತನ ಸಹಚರರು ಕಚೇರಿಗೆ ಬಲವಂತವಾಗಿ ನುಗ್ಗಿ, ಜಾತಿ ನಿಂದನೆ ಮಾಡುವುದರ ಜೊತೆಗೆ ದೈಹಿಕ ಹಲ್ಲೆ ನಡೆಸಿ, ಕಡತಗಳನ್ನು ಹರಿದುಹಾಕಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಇಂಜಿನಿಯರ್ ಲಾಲ್ ಸಿಂಗ್ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

​ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ವರಿಷ್ಠಾಧಿಕಾರಿ ಓಂವೀರ್ ಸಿಂಗ್, “ಭಾರತೀಯ ನ್ಯಾಯ ಸಂಹಿತೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮುನ್ನಾ ಬಹದ್ದೂರ್ ಅವರನ್ನು ಬಂಧಿಸಲಾಗಿದೆ ಮತ್ತು ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ.

​ಬಂಧನಕ್ಕೂ ಮುನ್ನ, ಮುನ್ನಾ ಬಹದ್ದೂರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮ ಪ್ರದೇಶದ ವಿದ್ಯುತ್ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲು ಕಚೇರಿಗೆ ಹೋಗಿದ್ದಾಗ ವಾಗ್ವಾದ ನಡೆದಿದೆ. ಅಲ್ಲದೆ, ವಾಗ್ವಾದದ ವೇಳೆ ತನಗೂ ಗಾಯಗಳಾಗಿವೆ ಎಂದು ಹೇಳಿಕೊಂಡಿದ್ದಾನೆ.

​ಘಟನೆಯು ರಾಜಕೀಯ ತಿರುವು ಪಡೆದಿದ್ದು, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಅಧಿಕಾರದ ಅರ್ಥ ಹಿಂಸೆ ನೀಡುವುದಲ್ಲ,” ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.

ಮುನ್ನಾ ಬಹದ್ದೂರ್ ಪಕ್ಷದ ಕಾರ್ಯಕರ್ತ ಮತ್ತು ಮಾಜಿ ಪದಾಧಿಕಾರಿ ಎಂಬುದನ್ನು ಬಿಜೆಪಿ ಬಲಿಯಾ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಒಪ್ಪಿಕೊಂಡಿದ್ದು, ಈ ಕುರಿತು ಹಿರಿಯ ನಾಯಕರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.