ಸನ್ಮಾರ್ಗ ವಾರ್ತೆ
ಗಾಝಾ: ಇಸ್ರೇಲ್ ನಡೆಸಿದ ವಾಯು ಹಾಗೂ ಶೆಲ್ ದಾಳಿಗಳಲ್ಲಿ ಭಾನುವಾರ ಕನಿಷ್ಠ 22 ಪ್ಯಾಲೆಸ್ಟೀನಿಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಗಾಝಾ ನಗರ, ಉತ್ತರ ರಫಾ ಮತ್ತು ದೇರ್ ಅಲ್-ಬಲಾಹ್ ಪ್ರದೇಶಗಳಲ್ಲಿ ನಾಗರಿಕರೇ ನೇರವಾಗಿ ಗುರಿಯಾಗಿದ್ದಾರೆ.
ಗಾಝಾ ನಗರದ ಅಲ್-ಹವಾ ನೆರೆಹೊರೆಯಲ್ಲಿನ ವಸತಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದರು. ನಗರದ ಬೇರೆ ಬೇರೆ ಪ್ರದೇಶಗಳ ಮೇಲೆ ನಡೆದ ನಿರಂತರ ದಾಳಿಯಲ್ಲಿ ಐವರು ಮೃತಪಟ್ಟರೆ, 35 ಮಂದಿ ಗಾಯಗೊಂಡಿದ್ದಾರೆ. ಮಾನವೀಯ ನೆರವಿಗಾಗಿ ಕಾಯುತ್ತಿದ್ದ ನಾಲ್ವರು ಉತ್ತರ ರಫಾದಲ್ಲಿ ಬಲಿಯಾದರೆ, ದೇರ್ ಅಲ್-ಬಲಾಹ್ನ ಸ್ಥಳಾಂತರಿತ ಶಿಬಿರದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ಆರು ಮಂದಿ ಸಾವಿಗೀಡಾದರು.
ಉತ್ತರ ಗಾಝಾ ಮತ್ತು ಗಾಝಾ ನಗರದಲ್ಲಿ ಮನೆಗಳನ್ನು ಧ್ವಂಸಗೊಳಿಸುವ ಮೂಲಕ ನಾಗರಿಕರನ್ನು ದಕ್ಷಿಣಕ್ಕೆ ಬಲವಂತವಾಗಿ ಸ್ಥಳಾಂತರಿಸಲು ಇಸ್ರೇಲಿ ಸೇನೆ ಮುಂದಾಗಿದೆ. ಅಕ್ಟೋಬರ್ 2023ರಿಂದ ಈವರೆಗೆ ಗಾಝಾದಲ್ಲಿ 64,800 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಪ್ರಾಣ ಕಳೆದುಕೊಂಡಿದ್ದು, ಪ್ರದೇಶ ಸಂಪೂರ್ಣವಾಗಿ ಧ್ವಂಸವಾಗಿದೆ. ಇಸ್ರೇಲ್ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನರಮೇಧ ಪ್ರಕರಣವೂ ವಿಚಾರಣೆಯಲ್ಲಿದೆ.












