✍️ ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್
ಶಿಕ್ಷಕರು, ಸಾಹಿತಿಗಳು
ರಮಝಾನಿನ ಚಂದ್ರದರ್ಶನದಂತೆ ರಬೀವುಲ್ ಅವ್ವಲ್ ಚಂದ್ರ ದರ್ಶನಕ್ಕೆ ವಿಶೇಷ ಗೌಜಿ ಇಲ್ಲದಿದ್ದರೂ ಸದಕತ್ ಹಾಜಿ, ಖಾಝಿಯಲ್ಲಿ ವಿಚಾರಿಸಿ ಸಫರ್ ತಿಂಗಳ ಕೊನೆಯ ದಿನಾಂಕ ಅಮಾವಾಸ್ಯೆ ಎಲ್ಲವನ್ನೂ ಲೆಕ್ಕ ಮಾಡಿಟ್ಟು ಈ ದಿನಾಂಕದಿಂದ ರಬೀವುಲ್ ಅವ್ವಲ್ ಒಂದು ಆಗ ಬಹುದೆಂದು ಅಂದಾಜು ಮಾಡಿಡುತ್ತಿದ್ದರು. ಬಹುತೇಕ ಅವರ ಲೆಕ್ಕ ಕೂಡ ಕರೆಕ್ಟ್ ಆಗುತ್ತಿತ್ತು.
ರಬೀವುಲ್ ಅವ್ವಲ್ ತಿಂಗಳಲ್ಲಿ ಪೂರ್ತಿ ತಿಂಗಳು ತೋಟಕ್ಕೆ ಸುತ್ತ ಬರುವುದು, ಮಂಗಳೂರಿಗೆ ಹೋಗಿ ಬರುವುದು, ಹಂಚಿನ ಕಾರ್ಖಾನೆಯ ಕೆಲಸ ಕಾರ್ಯಗಳನ್ನು ವಿಚಾರಿಸುವುದು ಬಹುತೇಕ ಕಡಿಮೆಗೊಳಿಸುತ್ತಿದ್ದರು. ಸದಕತ್ ಹಾಜಿಯವರ ಮೇಲ್ನೋಟ ಇಲ್ಲದ ಕಾರಣ ಕಾರ್ಮಿಕರಿಗೆ, ಕೆಲಸದಾಳುಗಳಿಗೆ ಸ್ವಲ್ಪ ನಿರಾಳ. ಪ್ರವಾದಿಯವರ(ಸ) ಜನ್ಮ ಈ ತಿಂಗಳಲ್ಲಿ ಆಗಿರುವುದೆಂದು ಅವರು ವಿಶೇಷ ಗೌರವ ಕೊಡುತ್ತಿದ್ದರು. ಮಸೀದಿಗಳಲ್ಲಿ ಊರ ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ನಡೆಯುವ ಪ್ರವಾದಿ ಸ್ತುತಿಗೀತೆ ಪಾರಾಯಣ ಸಭೆಗಳಲ್ಲಿ ಅವರು ತಪ್ಪದೇ ಭಾಗವಹಿಸುತ್ತಿದ್ದರು. ವಿಶೇಷವಾಗಿ ನಡೆಯುವ ನೇರ್ಚೆಗಳ ಲ್ಲಿಯೂ ಅವರು ಹಾಜರಿರುತ್ತಿದ್ದರು.
ಬ್ಯಾರಿ ಭಾಷೆಯಲ್ಲಿ ನೇರ್ಚೆ ಎಂದರೆ ಹರಕೆ ಎಂಬ ಅರ್ಥ ಬರುತ್ತದೆ. ನೇರ್ಚೆ ದೊಡ್ಡ ಮಟ್ಟದಲ್ಲಿರುತ್ತದೆ. ಊರಿನಲ್ಲಿ ಮೂರ್ನಾಲ್ಕು ಮನೆತನವದವರು ಮಾತ್ರ ನೇರ್ಚೆ ಮಾಡುತ್ತಿದ್ದರು. ಅವರಲ್ಲಿ ಹಾಜಿಯಾರರೂ ಒಬ್ಬರು. ದೊಡ್ಡ ಗೌಜಿಯ ನೇರ್ಚೆ ಸದಕತ್ ಹಾಜಿಯವರು ಮನೆಯಲ್ಲಿ ಮಾತ್ರ ನಡೆಯುತ್ತದೆ. ಅದಕ್ಕೆ ಪರ ಊರಿಂದಲೂ ಪರ ಗ್ರಾಮದಿಂದಲೂ ಜನ ಬಂದು ಸೇರುತ್ತಾರೆ. ಅದಕ್ಕೆ ವಿಶೇಷ ಆಮಂತ್ರಣ ಬೇಕೆಂದಿಲ್ಲ. ಹಾಜಿಯಾರರ ಮನೆಯಲ್ಲಿ ಈ ದಿನ ನೇರ್ಚೆ ಇದೆಯೆಂದು ಖತೀಬರು ಜುಮಾದ ಬಳಿಕ ತಿಳಿಸಿದರೆ ಸಾಕು. ಎಲ್ಲರೂ ಸರಿಯಾಗಿ ನೆನಪಿಟ್ಟು ಬರುತ್ತಾರೆ. ನೇರ್ಚೆಗೆ ಘಟ್ಟದಿಂದ ಒಂದು ಲಾರಿ ಆಡನ್ನು ತಂದು ಗದ್ದೆಯಲ್ಲಿ ಮೇಯಲು ಬಿಟ್ಟಿರುತ್ತಾರೆ. ಅದನ್ನು ಚೆನ್ನಾಗಿ ಮೇಯಿಸುವ ನೋಡಿಕೊಳ್ಳುವ ಜವಾಬ್ದಾರಿಯ ಘಟ್ಟದವರಿಗೇ ಕೊಟ್ಟಿರುತ್ತಾರೆ. ತುಪ್ಪದೂಟಕ್ಕೆ ಬೇಕಾದ ಅಕ್ಕಿಯನ್ನು ರಾಜಸ್ತಾನದಿಂದ ತರಿಸಿಕೊಳ್ಳುವ ಎಲ್ಲಾ ಮಾತುಕತೆಗಳನ್ನು ಮಾಡಿ ಮುಗಿಸಿಟ್ಟಿರುತ್ತಾರೆ.
ಊಟ ಎಂದರೆ ಹಾಜಿಯವರ ಮನೆಯಲ್ಲಿ ಎಂಬ ಮಾತು ಎಲ್ಲರ ಬಾಯಲ್ಲಿ ದೀರ್ಘ ಕಾಲದ ವರೆಗೆ ಇರಬೇಕೆಂಬ ರೀತಿಯಲ್ಲಿ ನೇರ್ಚೆಯ ತಯಾರಿಯನ್ನು ಮಾಡಿಡುತ್ತಾರೆ. ದೊಡ್ಡ ಪಂಡಿತರ ಖಾಝಿಗಳ ನೇತಾರರ ಭಾಗವಹಿಸುವಿಕೆಯನ್ನು ಖಚಿತ ಪಡಿಸಿದ ಮೇಲೆಯೇ ಖತೀಬರಲ್ಲಿ ನೇರ್ಚೆಯ ದಿನಾಂಕವನ್ನು ತಿಳಿಸಿ ಘೋಷಣೆ ಮಾಡಲು ಹೇಳಿ ಕಳುಹಿಸುತ್ತಿದ್ದರು. ಭಕ್ತರಿಗೆ ಹಾಜಿಯಾರರಿಗೆ ಪ್ರವಾದಿ ಮೇಲೆ ಹೆಚ್ಚು ಪ್ರೀತಿ ಇದೆಯಂತಲೂ, ರಾಜಕಾರಣಿಗಳಿಗೆ ಶಕ್ತಿ ಪ್ರದರ್ಶನವೂ ಪಂಡಿತ ಶಿಖಾಮಣಿಗಳಿಗೆ ಊರಿನಲ್ಲಿ ಹಾಜಿಯಾರರಿಗೆ ಇರುವ ಗೌರವದ ಅರಿವೂ ಆಗುತ್ತದೆ. ನೇರ್ಚೆಯ ಹೆಸರಲ್ಲಿ ಉಚಿತವಾಗಿ ಸಿಗುವ ಗೌರವವನ್ನು ಕಳೆದುಕೊಳ್ಳಲು ಯಾರೂ ತಯಾರಿಲ್ಲದ ಕಾರಣ ಎಲ್ಲಾ ಗಣ್ಯ ವ್ಯಕ್ತಿಗಳು ತಪ್ಪದೇ ಹಾಜರಿರುತ್ತಾರೆ. ಊರಿನವರು ಹಾಜಿಯಾರರನ್ನು ನೆನಪಿನಲ್ಲಿಡುವುದು ಈ ಒಂದೇ ಕಾರ್ಯದಿಂದ ಮಾತ್ರ. ಈ ಕೆಲಸದಿಂದ ಅವರಿಗೆ ಎಲ್ಲವೂ ಒಲಿದು ಬಂದಿದೆಯೆಂದು ಹಾಜಿಯಾರರಿಗೂ ಗೊತ್ತು.
ದೀರ್ಘಕಾಲ ಮಸೀದಿಯ ಅಧ್ಯಕ್ಷರಾಗಿ, ಊರ ನಾಯಕರಾಗಿ, ಸಂಘಸಂಸ್ಥೆಗಳ ಮುಖಂಡನಾಗಿ ಉಳಿದಿರುವುದು ಈ ಕಾರಣದಿಂದ. ಅದಕ್ಕಾಗಿ ನೇರ್ಚೆಗೆ ತಗಲುವ ಖರ್ಚುಗಳನ್ನು ಲೆಕ್ಕ ಹಾಕುವುದಿಲ್ಲ. ಖರ್ಚುಗಳು ಹೆಚ್ಚಾಗುತ್ತಿದೆ ಎಂಬ ಕಾರಣದಿಂದ ನೇರ್ಚೆ ಮಾಡುವುದಿಲ್ಲ ಎಂಬ ತೀರ್ಮಾನ ಕೈಗೊಂಡರೂ ಕಷ್ಟವೇ ಸರಿ. ಊರಿನಲ್ಲಿ ಈಗಾಗಲೇ ಮೂರ್ನಾಲ್ಕು ಹಾಜಿಯಾರರು ತುದಿಗಾಲಲ್ಲಿ ನಿಂತಿದ್ದರು. ಹಾಜಿಯಾರರ ವರ್ಚಸನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿ ಇದ್ದರು. ಇವೆಲ್ಲದರ ಮೇಲೆ ನಿಗಾ ಇಟ್ಟಿರುವ ಸದಕತ್ ಹಾಜಿ ಸಾಲ ಮಾಡಿಯಾದರೂ ನೇರ್ಚೆ ಮಾಡುವ ತೀರ್ಮಾನವನ್ನು ಮಾಡಿದ್ದರು.
ಆದ್ದರಿಂದಲೇ ರಬೀವುಲ್ ಅವ್ವಲ್ ತಿಂಗಳಲ್ಲಿ ತನ್ನೆಲ್ಲಾ ಒತ್ತಡವನ್ನು ಬದಿಗಿಟ್ಟು ನೇರ್ಚೆ ಮಾಡುವ ಕಾರ್ಯಕ್ರಮದಲ್ಲಿ ಹೆಚ್ಚು ತಲ್ಲೀನರಾಗುತ್ತಿದ್ದರು. ಸದಕತ್ ಹಾಜಿ ಪರಂಪರಾಗತವಾಗಿ ಶ್ರೀಮಂತರು. ಲಾಭ ನಷ್ಟದ ಅನುಭವ, ಸಾಲದ ನೋವು ಅವರಿಗಾಗಿದ್ದರೂ ಸಿರಿವಂತಿಕೆಯಿಂದ ಹೊರಬರಲಿಲ್ಲ. ತಾತ ಮುತ್ತಾತಂದಿರ ಕಾಲದಿಂದಲೂ ಅವರು ವ್ಯಾಪಾರಸ್ಥರಾಗಿದ್ದರು.
ತಾತನಿಗೆ ಟಿಂಬರ್ ವ್ಯಾಪಾರವಿತ್ತು. ಅಪ್ಪನಿಗೆ ಗೇರು ಬೀಜದ ಕಾರ್ಖಾನೆಯಿತ್ತು. ಸದಕತ್ ಹಾಜಿ ಅವರಿಗೆ ಪುತ್ತೂರು, ಬೆಳ್ತಂಗಡಿ, ಮುಲ್ಕಿ, ಬಂಟ್ವಾಳ, ಪುತ್ತಿಗೆ ಕಡೆಗಳಲ್ಲಿ ಎಕ್ಕರೆ ಗಟ್ಟಲೆ ಅಡಿಕೆ, ತೆಂಗು, ಕರಿಮೆಣಸಿನ ತೋಟ ಇತ್ತು. ಮಂಗಳೂರಿನಲ್ಲಿ ಹೆಂಚಿನ ಕಾರ್ಖಾನೆ ಮತ್ತು ಗಿರಣಿ ಅಂಗಡಿಯೂ ಇತ್ತು. ಸಾಮಾನ್ಯವಾಗಿ ಶ್ರೀಮಂತರಲ್ಲಿರುವ ಕಡು ಜಿಪುಣತನ ಅವರಲ್ಲಿತ್ತಾದರೂ ವರ್ಷಕ್ಕೆ ಒಮ್ಮೆ ಮಾಡುವ ಆಂಡ್ ನೇರ್ಚೆ, ರಬೀವುಲ್ ಅವ್ವಲ್ ನೇರ್ಚೆ, ರಾತೀಬು, ರಮಝಾನಿನಲ್ಲಿ ಮಾಡುವ ಇಫ್ತಾರ್ ಕೂಟದಿಂದಾಗಿ ಅವರು ಉದಾರ ದಾನಿಯಂತೆ ಗುರುತಿಸಿಕೊಂಡಿದ್ದರು. ಇಷ್ಟೆಲ್ಲಾ ಕಾರ್ಯಕ್ರಮಕ್ಕೆ ಅವರಿಗೆ ಸುಮಾರು ಐದು ಲಕ್ಷದಷ್ಟು ಖರ್ಚು ಬರುತ್ತಾದರೂ ಅದು ಅವರು ಕೂಡಿಟ್ಟ ಸಂಪತ್ತಿನ ಧೂಳಿಗೆ ಸಮಾನವಾಗಿತ್ತು.
ಖಾಝಿಯವರಲ್ಲಿ ನೇರ್ಚೆಯ ದಿನಾಂಕವನ್ನು ಗೊತ್ತುಪಡಿಸಿ ಎಲ್ಲರ ಆಗಮವನ್ನು ಕನ್ಫರ್ಮ್ ಮಾಡಿ ಜುಮಾ ನಮಾಝ್ನ ಬಳಿಕ ಸದಖತ್ ಹಾಜಿ ಮನೆಗೆ ತಲುಪುವ ಹೊತ್ತಿಗೆ ಮನೆ ಎದುರು ತುಂಬಾ ಜನರು ಜಮಾಯಿಸಿದ್ದರು. ಅವರು ಪರಸ್ಪರ ಗುಸು ಗುಸು ಮಾತುಗಳು, ಮಹಿಳೆಯರ ಕೂಗು ಮಕ್ಕಳ ಓಡಾಟವೆಲ್ಲ ನೋಡುವಾಗ ಡಿ.ಸಿ. ಆಫೀಸಿನ ಮುಂದೆ ಆದಿವಾಸಿಗಳು ನಡೆಸುವ ಹೋರಾಟದಂತೆ ತೋರುತ್ತಿತ್ತು. ಹಾಜಿಯಾರು ಬರುತ್ತಿದ್ದುದನ್ನು ನೋಡಿ.ಹಾಜಿ ಬಂದ್ರು ಹಾಜಿ ಬಂದ್ರು’ ಎಂದು ಎಲ್ಲರೂ ಕೈ ಮುಗಿದು ಕಾಲಿಗೆ ಬಿದ್ದರು. ಹಾಜಿಯಾರರಿಗೆ ಇದು ಹೊಸ ಅನುಭವವಾದರೂ ತೋರ್ಪಡಿಸದೆ ಗಂಭೀರವಾಗಿಯೇ ಇದ್ದರು. ಈ ವರ್ಷ ವಿಪರೀತ ಮಳೆ ಇದ್ದದ ರಿಂದ ನೇರ್ಚೆಗೆ ಶಾಮಿಯಾನದ ಬದಲು ಶೀಟ್ ಹಾಕಿಸಲು ಹೇಳಿದ್ದ ರಿಂದ ಅದರ ಕೆಲಸ ಜೋರಾಗಿ ನಡೆಯುತ್ತಿತ್ತು.
ಹಾಜಿಯಾರರಿಗೆ ಈ ಜನ ಸೇರಿರುವುದು ಏಕೆ ಎಂದು ಗೊತ್ತಾಗಲಿಲ್ಲ. ಅರ್ಯಾರೂ ಈ ಊರಿನವರೂ ಅಲ್ಲ. ನೇರ್ಚೆಯ ದಿನಾಂಕ ಇನ್ನೂ ಕೂಡ ಖತೀಬರು ಹೇಳಲಿಲ್ಲ ಎಂದು ಆಲೋಚಿಸುತ್ತಿರುವಾಗಲೇ ಒಂದು ತಾಯಿ ತನ್ನ ಕಂಕುಳಲ್ಲಿದ್ದ ಮಗುವಿನ ಜೊತೆಗೆ ಹಾಜಿಯಾರರ ಕಾಲಿಗೆ ಬಿದ್ದು, “ದನಿ ನಮ್ಮನ್ನು ನೀವೇ ಕಾಪಾಡಬೇಕು. ಗುಡ್ಡೆ ಜರಿದು ನಮ್ಮ ಮನೆ ಗುಡಿಸಲು, ಮಠ, ತೋಟ, ಗದ್ದೆ ಎಲ್ಲವೂ ಕೊಚ್ಚಿ ಹೋಗಿದೆ. ನಮಗಾರೂ ಇಲ್ಲ. ನೀವೇ ಕಾಪಾಡಬೇಕು. ನಮಗೆ ಸಹಾಯ ಮಾಡಿ ದನಿ. ಸಹಾಯ ಮಾಡಿ ಎಂದು ಕೈ ಮುಗಿದು ಅಂಗಲಾಚಿದಳು.”
ಹಾಜಿಯಾರರಿಗೆ ಇದೊಂದು ಹೊಸ ಅನುಭವ. ಈ ರೀತಿ ಸೇವಾ ಕಾರ್ಯವನ್ನು ಅವರಾಗಲಿ ಅವರ ತಲೆಮಾರಾಗಲಿ ಮಾಡಿರಲಿಲ್ಲ. ಅವರದೇನಿದ್ದರೂ ಮನೆಯಲ್ಲಿ ಹರಕೆ ಮಾಡಿ ಊರವರಿಗೆ ಅನ್ನ ಹಾಕುವ ಸೇವೆಯಲ್ಲದೆ ಬೇರೆ ರೀತಿಯ ಸೇವೆಯ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಜನರು ವರ್ಷಕ್ಕೆ ಒಮ್ಮೆ ನೇರ್ಚೆಗೆ ಹೊಟ್ಟೆ ತುಂಬಾ ತಿಂದು ಸಂತೃಪ್ತರಾಗಿದ್ದಾರೆAದೇ ಅವರ ಭಾವನೆ. ನೆರೆದವರಲ್ಲಿ ಸುಮಾರು ಹತ್ತಾರು ಜನ ನೆಲೆ ಕಳಕೊಂಡಿ ದ್ದರು. ಅವರಿಗೆಲ್ಲ ಸದ್ಯಕ್ಕೆ ನೆರವಾಗಲು ಕನಿಷ್ಠ ಹತ್ತಿಪ್ಪತ್ತು ಲಕ್ಷವಾದರೂ ಕೊಡಬೇಕಾಗುತ್ತದೆ. ಬರಿಗೈಯಲ್ಲಿ ಹಿಂದೆ ಕಳುಹಿಸಿದರೂ ಸಮಸ್ಯೆಯೇ. ಅಪಪ್ರಚಾರಕ್ಕೆಅವಕಾಶ.
ಹಾಜಿಯಾರರು ಚಿಂತಿತರಾದರು. ಮನೆ ಮುಂದೆ ನಿಂತವರೆಲ್ಲ ನಮ್ಮ ಜಾತಿಯವರಲ್ಲ, ಕೊರಗರು. ಅವರನ್ನು ಹಾಗೆ ಕಳುಹಿಸಿದರೆ ಯಾರು ಏನು ಅನ್ನುವುದು ಕೂಡ ಇಲ್ಲ ಎಂಬ ದುರಾಲೋಚನೆ ಸುಳಿದು ಹೋಯಿತು. ಆದರೆ ಅವರ ಆತ್ಮಸಾಕ್ಷಿ ಅದಕ್ಕೆ ಒಪ್ಪಲಿಲ್ಲ. ಅವರ ಲ್ಲಿದ್ದ ಸ್ವಾರ್ಥ ಈ ಸಿಲುಕಿನಿಂದ ಬಚಾವಾಗುವ ಉಪಾಯವನ್ನು ಹುಡುಕುತ್ತಿತ್ತು.
ಶುಕ್ರವಾರ ಜುಮಾ ಬಳಿಕ ಭೂರಿ ಭೋಜನ ಮಾಡಿ ಚಾವಡಿಯ ಕಸಾಲೆಯಲ್ಲಿ ಸಣ್ಣ ನಿದ್ರೆ ಹೂಡುವ ಹಾಜಿಯಾರರು ಇನ್ನೂ ಊಟ ಮಾಡದೆ ಗಾಢ ಚಿಂತೆಯಲ್ಲಿರುವುದನ್ನು ಅವರ ಹೆಂಡತಿ ನೋಡಿ ವಿಚಾರಿಸಿದರು.
“ನೋಡಿ ಇದು ದೊಡ್ಡ ಚಿಂತೆ ಮಾಡುವ ವಿಷಯವಲ್ಲ. ಆಂಡ್, ನೇರ್ಚೆ, ಇಫ್ತಾರ್ ಅಂತ ನೀವು ಎಷ್ಟು ಖರ್ಚು ಮಾಡುತ್ತೀರಿ. ಅದ ರಲ್ಲಿ ಊರವರಲ್ಲಿ ಹೊಟ್ಟೆ ತುಂಬಾ ತಿಂದು ಅಕ್ಕಿ ಬೇಯಲಿಲ್ಲ, ಉಪ್ಪು ಸರಿಯಾಗಲಿಲ್ಲ, ಮಾಂಸ ಗಟ್ಟಿಯಿತ್ತು ಎಂದು ಬಯ್ಯುವವರೇ ಜಾಸ್ತಿ. ಅದಕ್ಕೆ ನಿಮಗೆ ಒಂದಿಷ್ಟು ಪ್ರಚಾರ ಸಿಗಬಹುದು. ಪ್ರವಾದಿಯ ಪ್ರೀತಿ ಸಿಗಲು ಸಾಧ್ಯವೇ? ಈ ವರ್ಷಕ್ಕೆ ಈ ಎಲ್ಲಾ ಖರ್ಚು ಮಾಡದೆ ಅದಕ್ಕಿಟ್ಟ ಹಣ ನಮ್ಮ ಮನೆಯ ಮುಂದೆ ಆಸರೆಗಾಗಿ ನಿಂತವರಿಗಾಗಿ ನೀಡುವ” ಎಂದು ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದರು.
ಹೆಂಡತಿಯ ಮಾತು ಆಳವಾಗಿ ಅವರ ಹೃದಯದೊಳಗೆ ತಿವಿದ ಅನುಭವವಾಗಿ ಹಾಜಿಯಾರರು ಮೌನವಾಗಿ ಜಗಲಿ ಇಳಿದರು. ನೇರ ಮಸೀದಿ ದಾರಿ ಹಿಡಿದರು. ಖತೀಬರು ಆಗಷ್ಟೇ ಊಟ ಮುಗಿಸಿ ನಿದ್ರೆಯ ಮಂಪರಿನಲ್ಲಿದ್ದು, ಖಾಝಿ ಕುರ್ಆನ್ ಪಾರಾಯಣದಲ್ಲಿದ್ದರು. ಹಾಜಿಯಾರರ ದಿಢೀರ್ ಆಗಮವನ್ನು ಕಂಡು ಖತೀಬರು ನಿದ್ದೆಯಿಂದ ಎದ್ದು ಕೂತರು. ನೇರ್ಚೆಯ ದಿನವನ್ನು ಬದಲಿಸಿದರೋ ಎಂದು ಸಂಶಯ ಕಾಡಿತು. ಹಾಜಿಯಾರರ ಮುಖದಲ್ಲಿ ಗಂಭೀರತೆಯನ್ನು ಕಂಡು ಬೇರೆ ಏನೋ ಇರಬೇಕೆಂದು ಖಾಝಿಗಳಿಗೆ ತೋಚಿತು. ಅವರಿಬ್ಬರನ್ನೂ ಕುಳ್ಳಿರಿಸಿ ಹಾಜಿಯಾರ್ ವಿಷಯವೆಲ್ಲವನ್ನೂ ತಿಳಿಸಿದರು. ಕೊನೆಯದಾಗಿ ಹೆಂಡತಿ ಹೇಳಿದ ವಿಚಾರವನ್ನು ತಿಳಿಸಿದರು.
“ಅನಾಥರನ್ನು ಮತ್ತು ನಿರಾಶ್ರಿತರನ್ನು ಸಂರಕ್ಷಿಸುವುದಕ್ಕಿಂತ ಶ್ರೇಷ್ಠ ಕೆಲಸ ಯಾವುದೂ ಇಲ್ಲ. ಅದುವೇ ಪ್ರವಾದಿಗೆ ನಾವು ತೋರುವ ದೊಡ್ಡ ಗೌರವ. ನಿಮ್ಮ ಪತ್ನಿ ಸರಿಯಾಗಿ ಹೇಳಿದ್ದಾರೆ. ಹಾಗೆ ಮಾಡಿ” ಖಾಝಿ ಹೇಳಿದರು. ಪ್ರವಾದಿಗೆ ಸ್ತುತಿಗೀತೆ ನಾವು ಮನೆಯಲ್ಲಿ ಹೇಳಿದರೆ ಸಾಕು. ಸಂಭ್ರಮ ಸಡಗರ ಎಲ್ಲ ಬೇಕಾಗಿಲ್ಲ. ಆ ಹೆಸರಲ್ಲಿ ಹೆಚ್ಚು ದುಂದುವೆಚ್ಚಗಳು ನಡೆಯುತ್ತಿವೆ. ಶ್ರೀಮಂತರ ಪೈಪೋಟಿ ಕಂಡು ಬಡವರು ಕೂಡ ಸಾಲ ಮಾಡಿ ನೇರ್ಚೆ ಮಾಡಲು ಪ್ರಾರಂಭಿಸಿದ್ದಾರೆ. ಹಸಿದವನಿಗೆ ಅನ್ನ ಹಾಕಲು ಪ್ರವಾದಿ ಹೇಳಿದ್ದಾರೆ. ಆದರೆ ಇಂದು ಪ್ರವಾದಿಯವರ(ಸ) ಆ ಉದ್ದೇಶ ಪೂರ್ತಿಗೊಳ್ಳುತ್ತಿಲ್ಲ. ಬರುವ ಖುತುಬದ ಬಳಿಕ ಜನರಿಗೆ ಮನದಟ್ಟಾಗುವ ಹಾಗೆ ತಿಳಿಸಬೇಕೆಂದು ಬಯಸಿದ್ದೆ ಎಂದ ಖತೀಬರು ಕೂಡ ಮಾತು ಸೇರಿಸಿದರು.
“ನೀವು ನೇರ್ಚೆಗೆ ವ್ಯಯಿಸುವ ಹಣವನ್ನು ನಿರಾಶ್ರಿತರಾದ ಕೊರಗರಿಗೆ ನೀಡಿ. ಅವರ ನಾಶ-ನಷ್ಟಕ್ಕೆ ನಿಮ್ಮ ಸೇವೆಯಾಗಲಿ. ಪ್ರವಾದಿಗೆ ಅದಕ್ಕಿಂತ ದೊಡ್ಡ ಸಂತೋಷ ಬೇರೆ ಇಲ್ಲ” ಎಂದು ಕಾಝಿ ಹಾಜಿಯಾರರ ಬೆನ್ನು ತಟ್ಟಿ ಹೇಳಿದರು.
ಹಾಜಿಯಾರರು ಎದ್ದು ನಿಂತರು, “ಖತೀಬರೇ ಬರುವ ವಾರ ಜುಮಾಅದ ಬಳಿಕ ನನ್ನ ಮನೆಯಲ್ಲಿ ನಡೆಯುವ ನೇರ್ಚೆಯ ದಿನಾಂಕವನ್ನು ಘೋಷಿಸಬೇಡಿ.”
“ಮನೆಬಾಗಿಲಿಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸಿದರೆ ಪ್ರವಾದಿ ಮಾದರಿ ಪಾಲಿಸಿದಂತಾಗುತ್ತದೆಯೇ?” ಎಂದು ತನಗೆ ತಾನೇ ಪ್ರಶ್ನಿಸಿ ಮಸೀದಿ ಇಳಿದು ಹೋದರು.
ಮಸೀದಿಯಲ್ಲಿ ಅಸರ್ ಬಾಂಗ್ ಮೊಳಗಿತು. ಹಾಜಿಯಾರ್ ಇನ್ನೂ ಉಟ ಮಾಡಿರಲಿಲ್ಲ.












