ಮಿಲಾದುನ್ನಬಿ ಫ್ಲಕ್ಸ್ ಕಿತ್ತು ಹಾಕಿದ ಹಿಂದುತ್ವ ಕಾರ್ಯಕರ್ತರು: ಮುಸ್ಲಿಂ ಯುವಕರ ಮೇಲೆಯೇ ಪ್ರಕರಣ ದಾಖಲಿಸಿದ ಉತ್ತರಪ್ರದೇಶದ ಪೊಲೀಸರು

0
504

ಸನ್ಮಾರ್ಗ ವಾರ್ತೆ

ಮಿಲಾದುನ್ನಬಿ ಪ್ರಯುಕ್ತ ಹಾಕಲಾಗಿದ್ದ ಬೋರ್ಡ್ ಅನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ದುಷ್ಕರ್ಮಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ. ಐ ಲವ್ ಮುಹಮ್ಮದ್ ಎಂದು ಬರೆದು ತೂಗುಹಾಕಲಾಗಿದ್ದ ಬೋರ್ಡ್ ಅನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಮುಸ್ಲಿಂ ವಿರೋಧಿ ಘೋಷಣೆಯನ್ನು ಕೂಗುತ್ತಾ ಬಹಿರಂಗವಾಗಿ ಈ ಕೃತ್ಯ ಎಸೆಗಲಾಗಿದೆ ಎಂದು ದೃಕ್ಸಾಕ್ಷಿಗಳು ಹೇಳಿದ್ದಾರೆ.

ಆದರೆ ಬೋರ್ಡನ್ನು ಕಿತ್ತು ಹಾಕಿದ ದುಷ್ಕರ್ಮಿಗಳ ಬದಲು 12 ಮುಸ್ಲಿಂ ಯುವಕರ ವಿರುದ್ಧವೇ ಕೇಸು ದಾಖಲಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಹಾಗೆಯೇ ಗುರುತು ಪತ್ತೆ ಹಚ್ಚಲಾಗದ 15ರಷ್ಟು ಮಂದಿಯ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಸಬ್ ಇನ್ಸ್ಪೆಕ್ಟರ್ ಪಂಕಜ್ ಶರ್ಮ ಅವರ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಸೆಪ್ಟೆಂಬರ್ 4ರಂದು ಸೈಯದ್ ನಗರದಲ್ಲಿ ಮಿಲಾದುನ್ನಭಿ ಪ್ರಯುಕ್ತ ಫ್ಲಕ್ಸ್ ಹಾಕಲಾಗಿತ್ತು. ಐ ಲವ್ ಮುಹಮ್ಮದ್ ಎಂಬ ಫ್ಲಕ್ಸ್ ಅನ್ನು ಸ್ಥಾಪಿಸಿದ ಬಳಿಕ ಹಿಂದುತ್ವ ಗುಂಪು ಇದನ್ನು ತೀವ್ರವಾಗಿ ವಿರೋಧಿಸಿ ರಂಗಕ್ಕಿಳಿಯಿತು. ಇದು ಹೊಸ ರೀತಿಯಾಗಿದೆ ಮತ್ತು ಇಂತಹ ಬೋರ್ಡಿಗೆ ಇಲ್ಲಿ ಅನುಮತಿ ನೀಡುವುದಿಲ್ಲ ಎಂದು ಹೇಳಿ ಮೋಹಿತ್ ಭಾಜಪತಿ ಎಂಬವನ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿಯಿತು. ಹಿಂದುತ್ವ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ವ್ಯಕ್ತಿ ಈತ ಎಂದು ಸ್ಥಳೀಯರು ಹೇಳಿದ್ದಾರೆ.

ಪರಿಸ್ಥಿತಿ ಘರ್ಷಣೆಯ ಹಂತಕ್ಕೆ ತಿರುಗಿದ ಬೆನ್ನಿಗೆ ಭಾರಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಹಲವು ಗಂಟೆಗಳ ಕಾಲ ಘರ್ಷಣೆ ನಡೆಯಿತು ಮತ್ತು ಇದರ ನಡುವೆ ಬೋರ್ಡನ್ನು ಕಿತ್ತು ಹಾಕಲಾಗಿದೆ. ಘರ್ಷಣೆಯನ್ನು ಹುಟ್ಟು ಹಾಕುವುದಕ್ಕಾಗಿ ಹಿಂದುತ್ವ ಶಕ್ತಿಗಳು ನಡೆಸಿದ ಕೃತ್ಯದ ವಿರುದ್ಧ ದೂರು ದಾಖಲಿಸಲಾಗಿದ್ದರೂ ಪೊಲೀಸರು ಅದನ್ನು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ. ಅದರ ಬದಲು ಮುಸ್ಲಿಂ ಯುವಕರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ.