ಬಿಜೆಪಿ ನಾಯಕರು ಮೂರ್ಖರನ್ನಾಗಿ ಮಾಡುತ್ತಿರುವುದು ಯಾರನ್ನು?

0
392

✍️ ಅಮಾನ್ ಕೆ.

ರಾಜ್ಯ ಸರಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ರಾಜ್ಯದ ಯಾರೂ ಈ ಸಮೀಕ್ಷೆಯಲ್ಲಿ ಭಾಗವಹಿಸಬಾರದು, ಮಾಹಿತಿ ಕೊಡಬಾರದು ಎಂದೂ ಅವರು ಕರೆ ನೀಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ಸಮೀಕ್ಷೆಗೆ ಬಂದರೆ ನನ್ನ ಕುಟುಂಬದ ಮಾಹಿತಿ ನೀಡದಿರಲು ನಿರ್ಧರಿಸಿದ್ದೇನೆ ಎಂದೂ ಹೇಳಿದ್ದಾರೆ. ಇನ್ನೊಂದು ಕಡೆ ವಿರೋಧಪಕ್ಷದ ನಾಯಕ ಆರ್ ಅಶೋಕ್ ಕೂಡ ಇದೇ ರೀತಿಯ ಮಾತನಾಡಿದ್ದಾರೆ, ಖಜಾನೆಗೆ ಹಣ ಸಂಗ್ರಹಿಸುವ ಸಮೀಕ್ಷೆ ಇದು, ಜಾತಿಗಣತಿಗೆ ವೈಯಕ್ತಿಕ ವಿವರ ನೀಡಬೇಡಿ ಎಂದು ಹೇಳಿದ್ದಾರೆ

ಈ ತೇಜಸ್ವಿ ಸೂರ್ಯರಿಗೆ, ಪ್ರಹ್ಲಾದ ಜೋಶಿಗೆ, ಆರ್ ಅಶೋಕ್ ಗೆ ಅಥವಾ ಇಂತಹ ಉನ್ನತ ರಾಜಕಾರಣಿಗಳಿಗೆ ಈ ಸಮೀಕ್ಷೆಯ ಅಗತ್ಯವೇ ಇಲ್ಲ. ಸರ್ಕಾರದ ಯಾವುದೇ ಸೌಲಭ್ಯ ಇಲ್ಲದೆ ಯಾವುದೇ ಮೀಸಲಾತಿಯೂ ಇಲ್ಲದೆ ಯಾವುದೇ ಅನುಕೂಲತೆಗಳನ್ನೂ ಪಡೆಯದೆ ಬದುಕಬಹುದಾದಷ್ಟು ಹಣವನ್ನು ಇವರೆಲ್ಲ ಈಗಾಗಲೇ ಕೂಡಿಟ್ಟು ಕೊಂಡಿದ್ದಾರೆ. ಎರಡು ತಲೆಮಾರು ಜೀವಿಸುವಷ್ಟು ಸಂಪತ್ತನ್ನು ಮಾಡಿ ಇಟ್ಟುಕೊಂಡಿದ್ದಾರೆ. ಪ್ರಹ್ಲಾದ್ ಜೋಶಿಯ ಮಕ್ಕಳಾಗಲಿ ಆರ್ ಅಶೋಕ್ ಅವರ ಮಕ್ಕಳಾಗಲಿ ಸರಕಾರಿ ಶಾಲೆಯಲ್ಲಿ ಕರೆಯುತ್ತಿಲ್ಲ.

ಮೀಸಲಾತಿಯ ಬಲದಿಂದ ಇವರಿಗೆ ಉದ್ಯೋಗ ಸಿಗಬೇಕಾಗಿಯೂ ಇಲ್ಲ. ದುಬಾರಿ ಕಾರ್ ಅಲ್ಲಿ ಆರಾಮವಾಗಿ ತಿರುಗಾಡುವ ಇವರಿಗೂ ಮತ್ತು ಇವರ ಮಕ್ಕಳಿಗೂ ಈ ಸಮೀಕ್ಷೆ ಅಗತ್ಯವೇ ಇಲ್ಲ. ಆದರೆ ಬಿಜೆಪಿ ಕಾರ್ಯಕರ್ತರು ಮತ್ತು ಇವರ ಬೆಂಬಲಿಗರೆಲ್ಲ ಇವರಂತೆ ಶ್ರೀಮಂತರು ಅಲ್ವಲ್ಲ. ದಿನದ ಅನ್ನಕ್ಕಾಗಿ ಬಿಸಿಲಲ್ಲೂ ಮಳೆಯಲ್ಲೂ ಮೈಮುರಿದು ದುಡಿಯಬೇಕಾದ ಕೋಟ್ಯಾಂತರ ಕಾರ್ಯಕರ್ತರು ಬಿಜೆಪಿಗಿದ್ದಾರೆ. ಅವರಿಗೆ ಮೀಸಲಾತಿ ಬೇಕಾಗಿದೆ. ಅವರಿಗೆ ಸರಕಾರದ ಸೌಲಭ್ಯಗಳು ಬೇಕಾಗಿದೆ. ವಿವಿಧ ಸರಕಾರಿ ಸವಲತ್ತುಗಳು ಬೇಕಾಗಿದೆ. ಅವು ಬೇಕು ಎಂದಾದರೆ ಅವರು ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲೇ ಬೇಕಾಗಿದೆ. ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಅವರು ಉತ್ತರಿಸಲು ನಿರಾಕರಿಸಿದರೆ ಅದರಿಂದ ಅವರೇ ನಷ್ಟ ಅನುಭವಿಸಬೇಕಾದೀತು. ಅವರ ಸ್ಥಿತಿಗತಿ ಸರಕಾರಕ್ಕೆ ತಿಳಿಯದೇ ಹೋದೀತು. ಆ ಮೂಲಕ ಸಿಗಬಹುದಾದ ಸವಲತ್ತುಗಳಿಂದ ಅವರು ವಂಚಿತವಾಗಬಹುದು.

ಆದರೆ ಬಿಜೆಪಿ ನಾಯಕರಿಗೆ ಈ ಬಗ್ಗೆ ಗಮನವೇ ಇಲ್ಲ. ತಮ್ಮ ಮಾತನ್ನು ಕಾರ್ಯಕರ್ತರು ಅನುಸರಿಸಬಹುದು ಮತ್ತು ಅದರಿಂದಾಗಿ ದೊಡ್ಡಮಟ್ಟದ ಅವಕಾಶದಿಂದ ಅವರು ವಂಚಿತವಾಗುವುದಕ್ಕೆ ಅದು ಕಾರಣವಾಗಬಹುದು ಎಂಬ ಚಿಂತನೆಯನ್ನೇ ಅವರು ಮಾಡಿಲ್ಲ. ಕಾರ್ಯಕರ್ತರ ಬಗ್ಗೆ ನಾಯಕರು ಇಷ್ಟೊಂದು ನಿಷ್ಕಾಲಜಿ ಮತ್ತು ನಿರ್ಲಜವಾಗಿರುವುದಕ್ಕೆ ಏನೆನ್ನ ಬೇಕು? ಬಡವರಾದ ತನ್ನ ಪಕ್ಷದ ಕಾರ್ಯಕರ್ತರನ್ನು ಬಾವಿಗೆ ದೂಡುವ ಇಂತಹ ರಾಜಕೀಯ ದಿಂದ ಏನು ಲಾಭ ಇದೆ? ತನ್ನ ಹಿತಾಸಕ್ತಿಯನ್ನು ಮಾತ್ರ ನೋಡಿಕೊಂಡು ನೀಡುವ ಈ ಹೇಳಿಕೆ ಕಾರ್ಯಕರ್ತರ ಮೇಲೆ ಬೀರುವ ಪರಿಣಾಮ ಏನು ಅನ್ನೋದನ್ನಾದರೂ ಇವರು ಆಲೋಚಿಸಿದ್ದಾರಾ?

ಆದ್ದರಿಂದ ಬಿಜೆಪಿ ಬೆಂಬಲಿಗರು ಮತ್ತು ಕಾರ್ಯಕರ್ತರು ಈ ನಾಯಕರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದಿರುವುದೇ ಒಳ್ಳೆಯದು. ಒಂದು ವೇಳೆ ಇವರ ಮಾತನ್ನು ಕೇಳಿ ಸಮೀಕ್ಷೆಗೆ ಸಹಕಾರ ನೀಡಲು ಹಿಂಜರಿದರೆ ಅದರಿಂದ ಈ ನಾಯಕರು ಏನnnoo ಕಳ್ಕೊಳ್ಳುವುದಿಲ್ಲ. ಆದರೆ ನಿರಾಕರಿಸಿದ ಬಡವರೆಲ್ಲ ಸರಕಾರಿ ಸವಲತ್ತುಗಳಿಂದ ಮತ್ತು ಮೀಸಲಾತಿಯಿಂದ ವಂಚಿತವಾಗುವ ಸಾಧ್ಯತೆ ಇದೆ. ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ತಮ್ಮ ನಾಯಕರನ್ನು ಪ್ರಶ್ನಿಸಲಿ. ತಮ್ಮನ್ನು ಬಾವಿಗೆ ದೂಡಿ ನೀವು ಯಾಕೆ ಆರಾಮವಾಗಿ ಬದುಕುವ ಆಲೋಚನೆ ಮಾಡಿದ್ದೀರಿ ಎಂದು ಪ್ರಶ್ನಿಸಲಿ.