ಸನ್ಮಾರ್ಗ ವಾರ್ತೆ
ಸೌದಿಯಲ್ಲಿ ವೇತನ ಸಿಗುವುದು ವಿಳಂಬವಾದರೆ ಕಾರ್ಮಿಕರು ಸ್ಪೋನ್ಸರ್ ಶಿಪ್ ಅನ್ನು ಬದಲಾಯಿಸಿಕೊಳ್ಳುವುದಕ್ಕೆ ಮತ್ತು ಬಾಕಿ ಹಣವನ್ನು ಪಡಕೊಳ್ಳುವುದಕ್ಕಾಗಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ವೇತನ ನೀಡದಿದ್ದರೆ ನ್ಯಾಯಾಲಯಕ್ಕೆ ಹೋಗದೆಯೇ ಕಾರ್ಮಿಕರಿಗೆ ಅನುಕೂಲತೆಯನ್ನು ಈ ನಿಯಮ ಒದಗಿಸಲಿದ್ದು ಅನಿವಾಸಿ ಭಾರತೀಯರಲ್ಲಿ ಸಂತಸವನ್ನು ಹೆಚ್ಚಿಸಿದೆ.
ಈ ನಿಯಮದಂತೆ ಸೌದಿಯ ಉದ್ಯೋಗಿ ಮತ್ತು ಉದ್ಯೋಗದಾತರು ತಾವು ಮಾಡಿಕೊಂಡಿರುವ ಒಪ್ಪಂದವನ್ನು ಸರಕಾರದ ಫ್ಲ್ಯಾಟ್ ಫಾರ್ಮ್ ಆಗಿರುವ ಕಿವಾಯಿಯಲ್ಲಿ ಅಪ್ಲೋಡ್ ಮಾಡ ಬೇಕಾಗುತ್ತದೆ. ಈ ಒಪ್ಪಂದಕ್ಕೆ ಇಬ್ಬರೂ ಸಹಿ ಹಾಕ ಬೇಕಾಗುತ್ತದೆ. ಆದ್ದರಿಂದ ಒಪ್ಪಂದದಲ್ಲಿ ಎಷ್ಟು ವೇತನವನ್ನು ನೀಡುವುದಾಗಿ ಹೇಳಲಾಗಿದೆಯೋ ಅಷ್ಟನ್ನು ನೀಡುವುದು ಉದ್ಯೋಗದಾತನ ಹೊಣೆಗಾರಿಕೆ ಆಗಿರುತ್ತದೆ.
ಪ್ರತಿ ತಿಂಗಳು ವೇತನ ನೀಡುವುದಕ್ಕಿಂತ ಮೊದಲೇ ಪೇ ಸ್ಲಿಪ್ ಕಾರ್ಮಿಕ ಸಚಿವಾಲಯದ ಮುಧದ್ ಫ್ಲಾಟ್ ಫಾರ್ಮಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ನಿಗದಿತ ಸಮಯದಲ್ಲೇ ವೇತನ ನೀಡಲಾಗುತ್ತದೆ ಎಂಬುದನ್ನು ದೃಢೀಕರಿಸುವುದಕ್ಕಾಗಿ ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ಹೊಸ ಕಾನೂನು ಎರಡೂ ಫ್ಲಾಟ್ ಫಾರ್ಮನ್ನು ಕಾನೂನು ಸಚಿವಾಲಯದೊಂದಿಗೆ ಜೋಡಿಸುತ್ತದೆ. ಇದರಿಂದಾಗಿ ಕಾರ್ಮಿಕ ಒಪ್ಪಂದಗಳೆಲ್ಲವೂ ನ್ಯಾಯಾಲಯದ ಕಣ್ಗಾವಲಿನ ಒಳಗೆ ಬರುತ್ತದೆ. ವೇತನ ಒಂದು ತಿಂಗಳು ವಿಳಂಬವಾದರೆ ಕಾರ್ಮಿಕ ಇನ್ನು ಮುಂದೆ ನ್ಯಾಯಾಲಯಕ್ಕೆ ಹೋಗಬೇಕಾಗಿಲ್ಲ. ದೂರು ನೀಡಿದ್ರೆ ನ್ಯಾಯಾಲಯ ತನ್ನಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ. ಮೂರು ಹಂತಗಳಲ್ಲಿ ಇನ್ನು ಮುಂದೆ ಈ ನಿಯಮವ ಜಾರಿಗೆ ಬರಲಿದೆ.
ಸೌದಿ ಸರಕಾರದ ಈ ನಿಯಮವು ಅನಿವಾಸಿ ಭಾರತೀಯರಲ್ಲಿ ಹರ್ಷ ತಂದಿದೆ ಹೊಸ ನಿಯಮದಂತೆ ವೇತನವನ್ನು ಬ್ಯಾಂಕ್ ಅಕೌಂಟಿಗೆ ಜಮೆ ಮಾಡಬೇಕಾಗುತ್ತದೆ. ಆದ್ದರಿಂದ ವೇತನ ನೀಡಲು ವಿಳಂಬವಾದರೆ ಅಥವಾ ನೀಡದಿದ್ದರೆ ಅದಕ್ಕೆ ಬ್ಯಾಂಕ್ ಅಕೌಂಟೆ ದಾಖಲೆಯಾಗುತ್ತದೆ.
ಸೌದಿಯಲ್ಲಿ ಸ್ಪೋನ್ಸರ್ಶಿಪ್ ನಿಂದ ಆಗುವ ತೊಂದರೆಗಳನ್ನು ಕೊನೆಗೊಳಿಸುವುದಕ್ಕಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಮೊದಲು ಮೂರು ತಿಂಗಳ ಕಾಲ ವೇತನ ನೀಡದಿದ್ದರೆ ಅಥವಾ ಇಕಾಮ ಕಾಲಾವಧಿ ಮುಗಿದಿದ್ದರೆ ಮಾತ್ರ ಕಾರ್ಮಿಕನಿಗೆ ತನ್ನ ಉದ್ಯೋಗವನ್ನು ಬದಲಾಯಿಸುವುದಕ್ಕೆ ಅವಕಾಶ ಇತ್ತು. ಇದೀಗ ಈ ನಿಯಮವು ಕಾರ್ಮಿಕರ ಪಾಲಿಗೆ ಇನ್ನಷ್ಟು ಸಹಾಯಕವಾಗಿದೆ.












