ಸನ್ಮಾರ್ಗ ವಾರ್ತೆ
ಕೇಸರಿ ಶಾಲನ್ನು ಧರಿಸಿದ ಸುಮಾರು 6,000 ದಷ್ಟು ಮಂದಿಯ ದೊಡ್ಡ ಗುಂಪು ಒಡಿಸ್ಸಾದ ಕಟಕ್ ನಲ್ಲಿರುವ ಮುಸ್ಲಿಂ ಬಾಹುಳ್ಯದ ದರ್ಗಾ ಬಜಾರ್ಗೆ ನುಗ್ಗಿದೆ. ಅಂಗಡಿಗಳು ವಾಹನಗಳನ್ನು ಬಿದಿರಿನ ಕೋಲು ಇತ್ಯಾದಿ ಆಯುಧಗಳಿಂದ ಧ್ವಂಸ ಮಾಡಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂಗಡಿಗಳನ್ನು ಹೋಟೆಲ್ಗಳನ್ನು ಧ್ವಂಸ ಮಾಡಿದ್ದಷ್ಟೇ ಅಲ್ಲ, ಅಲ್ಲಿಯ ತಿನಿಸುಗಳನ್ನು ಈ ದಾಂದಲೆ ಕೋರರು ತಿನ್ನುವ ವಿಡಿಯೋಗಳು ಕೂಡ ಹರಿದಾಡಿವೆ.
ಈ ಬಗ್ಗೆ ಒಬ್ಸರ್ವರ್ ಪೋಸ್ಟ್ ಪತ್ರಿಕೆ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸಿ ಪ್ರಕಟಿಸಿದೆ.
ಅವರ ಪ್ರಕಾರ ಈ ಪ್ರಕರಣಕ್ಕಿಂತ ಎರಡು ದಿನಗಳ ಮೊದಲು ದುರ್ಗಾ ಮೂರ್ತಿಯ ಮೆರವಣಿಗೆ ನಡೆದಿತ್ತು. ಈ ಸಂದರ್ಭದಲ್ಲಿ ಇಲ್ಲಿನ ದರ್ಗಾದ ಎದುರು ಜೋರಾಗಿ ಡಿಜೆ ಸಂಗೀತವನ್ನು ಹಾಕಲಾಗಿತ್ತು. ಈ ಮೆರವಣಿಗೆಯಲ್ಲಿ ಸಾಗುತ್ತಿದ್ದ ಕೆಲವರು ಓರ್ವ ಮುಸ್ಲಿಂ ಹೆಣ್ಣಿನ ಬಗ್ಗೆ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದರು. ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ಉಂಟು ಮಾಡಿತು. ಇದೇ ವೇಳೆ ಮುಸ್ಲಿಂ ಸಮುದಾಯದ ಕೆಲವರು ಈ ಮೆರವಣಿಗೆಯ ಗುಂಪನ್ನು ಸಂಪರ್ಕಿಸಿದರಲ್ಲದೆ ಸಂಗೀತದ ಧ್ವನಿಯನ್ನು ಕಡಿಮೆಗೊಳಿಸುವಂತೆ ಮತ್ತು ಗೌರವಯುತವಾಗಿ ದರ್ಗಾದ ಮುಂದಿನ ಸಾಗುವಂತೆ ವಿನಂತಿಸಿದ್ದರು. ಆದರೆ ಮೆರವಣಿಗೆ ಕೋರರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮಾತಿನ ಚಕಮುಕಿ ಕೂಡ ನಡೆಯಿತು. ಆ ಬಳಿಕ ಎರಡೂ ಕಡೆಯಿಂದ ಕಲ್ಲೆಸೆತಗಳು ನಡೆದವು.
ಇದರಿಂದ ಐವರು ಪೊಲೀಸರಿಗೆ ಗಾಯವಾಯಿತು. ಆರು ಮಂದಿಯನ್ನು ಬಂಧಿಸಲಾಯಿತು. ಒಳಿಕ ಪೊಲೀಸರು ಎರಡು ಸಮುದಾಯಗಳ ಜೊತೆ ಮಾತಾಡಿ ಘರ್ಷಣೆಯ ಸ್ಥಿತಿಗೆ ಮಂಗಳ ಹಾಡಿದ್ದರು. ಮಾತ್ರವಲ್ಲ ಅಕ್ಟೋಬರ್ ಐದರಂದು ಸಂಜೆ 7 ಗಂಟೆಯಿಂದ ಮರುದಿನ ಸಂಜೆ 7ವರೆಗೆ ಇಂಟರ್ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮರುದಿನ ವಿಶ್ವ ಹಿಂದೂ ಪರಿಷತ್ತು 12 ಗಂಟೆಗಳ ಬಂದ್ ಗೆ ಕರೆ ನೀಡಿತು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಅದು ಹೇಳಿತು. ಮರುದಿನ ಮುಸ್ಲಿಂ ಬಾಹುಳ್ಯ ಪ್ರದೇಶಕ್ಕೆ ನುಗ್ಗಿದ ಗುಂಪು ದಾಂದಲೆ ನಡೆಸಿತು.












