ಗಾಝಾಕ್ಕೆ ಮರಳಿದ ನಾಗರಿಕರು

0
269

ಸನ್ಮಾರ್ಗ ವಾರ್ತೆ

ಎರಡು ವರ್ಷಗಳಿಂದ ದಿಕ್ಕು ದೆಸೆ ಇಲ್ಲದೆ ಮತ್ತು ಜೀವವನ್ನು ಕೈಯಲ್ಲಿಟ್ಟು ಓಡಾಡಿದ ಜನರೆಲ್ಲ ಇದೀಗ ಗಾಝಾ ಕ್ಕೆ ಮರಳುತ್ತಿದ್ದಾರೆ. ಬೇರೆ ಬೇರೆ ಕಡೆಯಲ್ಲಿದ್ದ ಗಾಝಾದ ಮಂದಿ ಮರಳಿ ತಮ್ಮ ಊರಿಗೆ ಹಿಂತಿರುಗುತ್ತಿರುವ ವಿಹಂಗಮ ನೋಟವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಇವರು ಹಿಂತಿರುಗುತ್ತಿರುವುದು ಬರೀ ಕೈಯಲ್ಲಿ. ಅವರನ್ನು ಸ್ವಾಗತಿಸುವ ಗಾಝಾ ಕೂಡ ಖಾಲಿಯಾಗಿ ನಿಂತಿದೆ. ಹೀಗೆ ಹಿಂತಿರುಗುವವರಲ್ಲಿ ಬಹುತೇಕ ರ ಪರಿಸ್ಥಿತಿ ಹೇಗೆಂದರೆ ಅವರ ಕುಟುಂಬದ ಯಾರಾದರೊಬ್ಬರನ್ನು ಇಸ್ರೇಲ್ ಈಗಾಗಲೇ ಬಲಿ ಪಡೆದಿದೆ.

ಎರಡು ವರ್ಷಗಳಲ್ಲಿ ಹತ್ತು ಹಲವು ಹಿಂಸಾತ್ಮಕ ಅನುಭವಗಳನ್ನು ಗಾಝಾದ ಜನರು ಎದುರಿಸಿದರೂ ತಲೆಬಾಗಿಸದೆ ಮರಳಿ ಗಾಝಾ ಕ್ಕೆ ಜನರು ಬರುತ್ತಿರುವುದಕ್ಕೆ ಜಾಗತಿಕವಾಗಿ ಅಚ್ಚರಿ ಮತ್ತು ಶ್ಲಾಘನೆ ವ್ಯಕ್ತವಾಗುತ್ತಿದೆ. ಗಾಝಾದ ನಾಗರಿಕರ ಧೈರ್ಯ, ಬದುಕುವ ಛಲ ಮತ್ತು ಜೀವನ ಪ್ರೀತಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ದಿನದ ಹಿಂದೆ ಕದನ ವಿರಾಮ ಒಪ್ಪಂದಕ್ಕೆ ಹಮಾಸ್ ಮತ್ತು ಇಸ್ರೇಲ್ ಸಹಿ ಹಾಕಿತ್ತು . ಟ್ರಂಪ್ ಅವರ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಅನ್ವಯ ಇದೀಗ ಮೊದಲ ಹಂತದ ಕದನ ವಿರಾಮ ಒಪ್ಪಂದ ಜಾರಿಯಾಗಿದೆ. ಈ ಒಪ್ಪಂದಕ್ಕೆ ಕತರ್ ಬಹು ಮುಖ್ಯ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಿತ್ತು.

ಬಿಡುಗಡೆಗೊಳಿಸಬೇಕಾದ ಒತ್ತೆಯಾಳುಗಳು ಮತ್ತು ಫೆಲಸ್ತೀನಿ ಕೈದಿಗಳ ವಿವರವುಳ್ಳ ಪಟ್ಟಿಯನ್ನು ಹಮಾಸ್ ಮತ್ತು ಇಸ್ರೇಲ್ ಪರಸ್ಪರ ಹಂಚಿಕೊಂಡಿತ್ತು. ಇದೇ ವೇಳೆ ಇಸ್ರೇಲ್ ಆಕ್ರಮಣದಲ್ಲಿ ಹತ್ಯೆಗೀಡಾದ ಹಮಾಸ್ ನಾಯಕ ಯಹ್ಯಾ ಸಿನ್ವಾರ್ ಮತ್ತು ಅವರ ಸಹೋದರ ಮೊಹಮ್ಮದ್ ಸಿನ್ವಾರ್ ಅವರ ಮೃತ ದೇಹಗಳನ್ನು ಇಸ್ರೇಲ್ ಮರಳಿಸಲಾರದು ಎಂದು ಮಾಧ್ಯಮ ಮಾಹಿತಿಗಳು ಹೇಳುತ್ತಿವೆ.