ಸನ್ಮಾರ್ಗ ವಾರ್ತೆ
ಬಿಹಾರದ ಮುಸ್ಲಿಂ ಬಾಹುಳ್ಯದ ಧಾಕ ವಿಧಾನಸಭಾ ಕ್ಷೇತ್ರದಿಂದ ರಾಣಾ ರಂಜಿತ್ ಸಿಂಗ್ ಎಂಬ ರಾಜಪೂತ ವ್ಯಕ್ತಿಯನ್ನು ಕಣಕ್ಕಿಳಿಸುವ ಮೂಲಕ ಅಸದುದ್ದೀನ್ ಓವೈಸಿ ಪಕ್ಷ ಎಲ್ಲರ ಗಮನ ಸೆಳೆದಿದೆ. ಈ ಮೂಲಕ ಮುಸ್ಲಿಂ ಪಕ್ಷ ಎಂಬ ಹಣೆ ಪಟ್ಟಿಯಿಂದ ಹೊರಬರಲು ಓವೈಸಿ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ನಾಮಪತ್ರವನ್ನು ಸಲ್ಲಿಸಲು ಚುನಾವಣಾ ಅಧಿಕಾರಿಗಳ ಕಚೇರಿಗೆ ಬರುವಾಗ ಈ ರಂಜಿತ್ ಸಿಂಗ್ ಅವರು ಮುಸ್ಲಿಂ ಸಮುದಾಯ ಧರಿಸುವ ಟೋಪಿಯನ್ನು ಧರಿಸಿದ್ದರು ಮತ್ತು ಹಣೆಗೆ ತಿಲಕವನ್ನು ಹಾಕಿದ್ದರು.
ನಾನು ಐ ಲವ್ ಮುಹಮ್ಮದ್ ಮತ್ತು ಜೈ ಶ್ರೀರಾಮ್ ಎರಡರಲ್ಲೂ ನಂಬಿಕೆ ಇಟ್ಟಿದ್ದೇನೆ ಎಂದು ನಾಮಪತ್ರ ಸಲ್ಲಿಸಿದ ಬಳಿಕ ರಂಜಿತ್ ಸಿಂಗ್ ಹೇಳಿದ್ದಾರೆ.
ಇವರ ಕುಟುಂಬಕ್ಕೂ ರಾಜಕೀಯಕ್ಕೂ ಹತ್ತಿರದ ಸಂಬಂಧ ಇದೆ. ಇವರ ಸಹೋದರ ರಾಣಾ ರಣಧೀರ್ ಸಿಂಗ್ ಅವರು ಬಿಹಾರದ ಬಿಜೆಪಿ ಶಾಸಕರಾಗಿದ್ದಾರೆ. ಇವರ ತಂದೆ ಈ ಹಿಂದೆ ಸಂಸದರಾಗಿದ್ದರು. ಬಿಜೆಪಿ ವಿಚಾರಧಾರೆಯನ್ನು ಪ್ರತಿನಿಧಿಸುತ್ತಿರುವ ಕುಟುಂಬದ ವ್ಯಕ್ತಿ ಯೋರ್ವರನ್ನು ಮುಸ್ಲಿಂ ಬಾಹುಳ್ಯ ಕ್ಷೇತ್ರದಲ್ಲಿ ಓವೈಸಿ ಕಣಕ್ಕಿಳಿಸಿರುವ ಬಗ್ಗೆ ವ್ಯಾಪಕ ಅಚ್ಚರಿ ವ್ಯಕ್ತವಾಗಿದೆ.
ಈ ಬಾರಿ ವಿಧಾನಸಭಾ ಚುನಾವಣೆಗೆ 32 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಓವೈಸಿ ಹೇಳಿದ್ದಾರೆ. ಇವುಗಳಲ್ಲಿ ಹೆಚ್ಚಿನವು ಕೂಡ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳಾಗಿವೆ. ಇಂಡಿಯಾ ಒಕ್ಕೂಟಕ್ಕೆ ಸೇರುವುದಕ್ಕೆ ಓವೈಸಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಅವರ ಕೋರಿಕೆಯನ್ನು ಇಂಡಿಯಾ ಒಕ್ಕೂಟದ ನಾಯಕರು ಪರಿಗಣಿಸಿರಲಿಲ್ಲ.
ದಾಖ ಕ್ಷೇತ್ರವು ಮುಸ್ಲಿಂ ಬಾಹುಳ್ಯ ಪ್ರದೇಶವಾಗಿದ್ದರೂ ಇಲ್ಲಿ ಹಿಂದುಗಳು ನಿರ್ಣಾಯಕ ಸ್ಥಿತಿಯಲ್ಲಿದ್ದಾರೆ. ಇಂಥ ಕ್ಷೇತ್ರದಲ್ಲಿ ಸಿಂಗ್ ಅವರನ್ನು ಕಣಕ್ಕೆ ಇಳಿಸುವ ಮೂಲಕ ಹೊಸ ರಾಜಕೀಯ ಚಿಂತನೆಗೆ ಓವೈಸಿ ಪ್ರಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.












