ಸನ್ಮಾರ್ಗ ವಾರ್ತೆ
ನವದೆಹಲಿ: ಸಂಘರ್ಷಪೀಡಿತ ಸುಡಾನ್‌ನ ಡಾರ್ಫರ್ ಪ್ರದೇಶದಲ್ಲಿ ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆ (RSF) ಒಬ್ಬ ಭಾರತೀಯ ಯುವಕನನ್ನು ಅಪಹರಿಸಿರುವ ಘಟನೆ ಆತಂಕ ಹುಟ್ಟಿಸಿದೆ. ಸುಡಾನ್ ಸಶಸ್ತ್ರ ಪಡೆಗಳು ಮತ್ತು ಆರ್‌ಎಸ್‌ಎಫ್ ನಡುವಿನ ಕದನ ಏಪ್ರಿಲ್ 2023ರಿಂದ ಮುಂದುವರಿದಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
ಅಪಹರಣಕ್ಕೊಳಗಾದ ವ್ಯಕ್ತಿ ಒಡಿಶಾದ ಜಗತ್ಸಿಂಗ್‌ಪುರ ಜಿಲ್ಲೆಯ ನಿವಾಸಿ ಆದರ್ಶ್ ಬೆಹ್ರಾ (36). ಇವರು 2022ರಿಂದ ಸುಡಾನ್‌ನ ಸುಕಾರತಿ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಖಾರ್ಟೌಮ್‌ನಿಂದ ಸುಮಾರು 1,000 ಕಿಲೋಮೀಟರ್ ದೂರದಲ್ಲಿರುವ ಉತ್ತರ ಡಾರ್ಫರ್‌ನ ರಾಜಧಾನಿ ಎಲ್-ಫಶೇರ್‌ನಲ್ಲಿ ಆರ್‌ಎಸ್‌ಎಫ್ ಅವರನ್ನು ಅಪಹರಿಸಿದ್ದು, ಬಳಿಕ ನೈಲಾ ಪ್ರದೇಶಕ್ಕೆ ಕರೆದೊಯ್ಯಲಾಗಿದೆ ಎಂದು ವರದಿಗಳು ತಿಳಿಸಿವೆ.
ಅರೆಸೇನಾ ಪಡೆ ಬೆಹ್ರಾ ಅವರನ್ನು ವಿಚಾರಣೆ ನಡೆಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಒಂದು ವಿಡಿಯೊದಲ್ಲಿ ಬೆಹ್ರಾ ಇಬ್ಬರು ಶಸ್ತ್ರಸಜ್ಜಿತ ಆರ್‌ಎಸ್‌ಎಫ್ ಸೈನಿಕರ ನಡುವೆ ಕುಳಿತಿದ್ದು, ಅವರಲ್ಲಿ ಒಬ್ಬರು “ನಿಮಗೆ ಶಾರುಖ್ ಖಾನ್ ಗೊತ್ತಾ?” ಎಂದು ಕೇಳುವ ದೃಶ್ಯ ದಾಖಲಾಗಿದೆ. ಇನ್ನೊಂದು ವಿಡಿಯೊದಲ್ಲಿ ಬೆಹ್ರಾ ಕೈಕಟ್ಟಿ ನೆಲದ ಮೇಲೆ ಕುಳಿತಿದ್ದು, ಕಣ್ಣೀರು ತುಂಬಿದ ಕಂಠದಲ್ಲಿ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿದ್ದರು. “ನಾನು ಎಲ್-ಫಶೇರ್‌ನಲ್ಲಿ ಇದ್ದೇನೆ. ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಕಳೆದ ಎರಡು ವರ್ಷಗಳಿಂದ ಬಹಳ ಸಂಕಷ್ಟದಲ್ಲಿದ್ದೇನೆ. ನನ್ನ ಕುಟುಂಬ ಮತ್ತು ಮಕ್ಕಳು ಚಿಂತೆಯಲ್ಲಿ ಇದ್ದಾರೆ. ದಯವಿಟ್ಟು ನನಗೆ ಸಹಾಯಮಾಡಿ,” ಎಂದು ಅವರು ವೀಡಿಯೊದಲ್ಲಿ ಮನವಿ ಮಾಡಿದ್ದಾರೆ.
ಬೆಹ್ರಾ ಅವರ ಪತ್ನಿ ಸುಷ್ಮಿತಾ ಅವರು ಎನ್‌ಡಿಟಿವಿಗೆ ನೀಡಿದ ಹೇಳಿಕೆಯಲ್ಲಿ, ಪತಿಯು ಸುಡಾನ್‌ನ ಅಶಾಂತಿಯ ಕುರಿತು ಹೇಳಿದ್ದರೂ ಇಂತಹ ಘಟನೆ ಸಂಭವಿಸಲಿದೆ ಎಂದು ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ ಎಂದರು. ದಂಪತಿಗೆ ಎಂಟು ಮತ್ತು ಮೂರು ವರ್ಷದ ಇಬ್ಬರು ಗಂಡು ಮಕ್ಕಳು ಇದ್ದಾರೆ.
ಕುಟುಂಬವು ಒಡಿಶಾ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯವನ್ನು ತಕ್ಷಣ ಕ್ರಮ ಕೈಗೊಳ್ಳುವಂತೆ ವಿನಂತಿಸಿದೆ. ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಹ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು, “ಒಡಿಶಾದ ಜಗತ್ಸಿಂಗ್‌ಪುರದ ಆದರ್ಶ್ ಬೆಹ್ರಾ ಅವರನ್ನು ಆರ್‌ಎಸ್‌ಎಫ್ ಅಪಹರಿಸಿದೆ ಎಂಬ ಸುದ್ದಿ ಅತ್ಯಂತ ಕಳವಳಕಾರಿಯಾಗಿದೆ. ಭಾರತ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸಿ ಅವರ ಸುರಕ್ಷಿತ ಬಿಡುಗಡೆಗಾಗಿ ಸುಡಾನ್ ಅಧಿಕಾರಿಗಳೊಂದಿಗೆ ಚರ್ಚಿಸಬೇಕು,” ಎಂದು ಮನವಿ ಮಾಡಿದ್ದಾರೆ.
ಭಾರತದಲ್ಲಿರುವ ಸುಡಾನ್ ರಾಯಭಾರಿ ಡಾ. ಮೊಹಮ್ಮದ್ ಅಬ್ದುಲ್ಲಾ ಅಲಿ ಎಲ್ಟಮ್ ಅವರು, ಡಾರ್ಫರ್‌ನ ಪರಿಸ್ಥಿತಿ ಅನಿರೀಕ್ಷಿತ ಮತ್ತು ಅಪಾಯಕಾರಿಯಾಗಿದೆ ಎಂದು ತಿಳಿಸಿದ್ದಾರೆ. “ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ,” ಎಂದು ಅವರು ಭರವಸೆ ನೀಡಿದ್ದಾರೆ.
ಇತ್ತೀಚೆಗೆ 18 ತಿಂಗಳ ಮುತ್ತಿಗೆಯ ನಂತರ, ಆರ್‌ಎಸ್‌ಎಫ್ ಸುಡಾನ್ ಸೇನೆಯ ಕೊನೆಯ ಭದ್ರಕೋಟೆಯಾಗಿದ್ದ ಎಲ್-ಫಶೇರ್ ನಗರವನ್ನು ವಶಪಡಿಸಿಕೊಂಡಿತ್ತು, ಇದರ ಪರಿಣಾಮವಾಗಿ ನಾಗರಿಕರ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಈಗ ಆದರ್ಶ್ ಬೆಹ್ರಾ ಅವರ ಅಪಹರಣ ಘಟನೆ ಅಂತರರಾಷ್ಟ್ರೀಯ ಮಾನವೀಯ ಸಂಕಟದ ಹೊಸ ಮುಖವನ್ನು ತೋರಿಸುತ್ತಿದೆ.
🇸🇩🇮🇳 Sudan–India: RSF militants have abducted Adarsh Behera (36), an Indian from Odisha, forcing him to perform “Namaste” and other humiliating acts while laughing at him like a circus clown. His whereabouts are still unknown. pic.twitter.com/fk7uezqCW0
— Militant Tracker (@MilitantTracker) November 4, 2025












