✍️ ಎಂ.ಎನ್. ಸುಹೈಬ್
ಅಕ್ಟೋಬರ್ ಹದಿನೆಂಟು ಶನಿವಾರ ಅಮೆರಿಕದ ದೊಡ್ಡದಾದ ನಗರಗಳಲ್ಲಿ ಅಮೆರಿಕಕ್ಕೆ ರಾಜರುಗಳು ಬೇಡ ಎಂಬ ಘೋಷಣೆಯೊಂದಿಗೆ ಅಲ್ಲಿನ ಲಕ್ಷಾಂತರ ಜನರು ಪ್ರತಿಭಟಿಸಿದ್ದಾರೆ. ಅಂದು ಕಿಂಗಿಸಂ ಟ್ರಂಪಿಸಂ ವಿರೋಧಿ ರ್ಯಾಲಿಗಳು ನಡೆದವು. ಜನತಾ ಪ್ರತಿಭಟನೆ ಸರ್ವಾಧಿಕಾರಿ ಆಳ್ವಿಕೆಯ ರಿಪಬ್ಲಿಕನ್ನರ ರಾಜ್ಯಗಳ ರಾಜಧಾನಿಗಳಲ್ಲಿ ಬೃಹತ್ತಾದ ಅಲೆಗಳನ್ನು ಸೃಷ್ಟಿಸಿದೆ. ಅಮೆರಿಕದ ಸಂವಿಧಾನ ಮತ್ತು ಜನಹಿತವನ್ನೇ ತುಳಿಯುತ್ತಿರುವ ಟ್ರಂಪ್ರ ಏಕ ಛತ್ರಾಧಿಪತ್ಯದ ಆಳ್ವಿಕೆಯ ವಿರುದ್ಧ ಸಿಡಿದೆದ್ದ ಅಮೆರಿಕನ್ನರಿಂದ ನಡೆದಿರುವ ಈ ದೊಡ್ಡ ರ್ಯಾಲಿಯಲ್ಲಿ ಪ್ರತಿಪಕ್ಷ ಡೆಮಾಕ್ರಾಟರುಗಳಿದ್ದರು ಲಿಬರಲ್ಗಳಿದ್ದರು. ಜೊತೆ ಜೊತೆಗೆ ಟ್ರಂಪ್ರ ರಾಜಾಳ್ವಿಕೆಯನ್ನು ವಿರೋಧಿಸುವ ರಿಪಬ್ಲಿಕನ್ ಪಾರ್ಟಿಯವರು ಕೂಡ ಇದ್ದರೆಂದರೆ! ಇದಕ್ಕೆ ಅಚ್ಚರಿ ಬೇಡ. ಅದು ಅಮೆರಿಕ ಆಗಿದೆ.
ಈಗ ಎಲ್ಲೆಲ್ಲ ರ್ಯಾಲಿಗಳು ನಡೆದವು ಅಂದ್ರೆ-
ಚಿಕಾಗೊ, ನ್ಯೂಯಾರ್ಕ್, ಲಾಸ್ ಏಂಜಲೀಸ್, ರಾಜಧಾನಿ ವಾಷಿಂಗ್ಟನ್ ಮುಂತಾದ ಒಂಬತ್ತು ರಾಜ್ಯಗಳಲ್ಲಿ 2700ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಕರು ನಡೆಸಿದ್ದಾರೆ. ಪ್ರತಿಭಟನೆಯ ಆಕಾರ ಕಾರ್ನಿವಲ್ ತರ ಇತ್ತು. ಸಂಘರ್ಷ ರಹಿತವಾಗಿತ್ತು. ಶಾಂತಿಯುತವಾಗಿತ್ತು. ದೇಶದ್ರೋಹ ಅನ್ನುತ್ತಾ ವಿವಿಧ ರಾಜ್ಯಗಳಲ್ಲಿ ರಿಪಬ್ಲಿಕನ್ ಸರಕಾರದ ಅಧಿಕಾರಿಗಳು ಅಮೆರಿಕನ್ ಜನತಾ ರ್ಯಾಲಿಗಳನ್ನು ತಡೆಯಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ಇದು ಯಾವುದೂ ಕೂಡ ರ್ಯಾಲಿಗೆ ಜನರು ಸೇರುವುದಕ್ಕೆ ಅಡ್ಡಿಯಾಗಲಿಲ್ಲ. ಯಾಕೆಂದರೆ ಅದು ಅಮೆರಿಕ.
ಹೌದು. ಟ್ರಂಪ್ ವಂಶೀಯವಾದದ ದೇಶವು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಅದನ್ನು ರಿಪೇರಿ ಮಾಡಲು ಟ್ರಂಪ್ ಶ್ರಮಿಸುವುದು ಕೂಡ ಇಲ್ಲ. ಸರಕಾರಿ ಸೇವೆಗೆ ಅಕ್ಟೋಬರ್ನಿಂದ ಈಚೆಗೆ ಫಂಡ್ಗಳು ಕೊಡಿಸುವ ಮಸೂದೆಯೇ ಪಾಸು ಆಗಿಲ್ಲ. ಯಾಕೆಂದರೆ ಪಾಸು ಮಾಡಿಸಲು ಡೆಮಾಕ್ರಾಟರ ಬೆಂಬಲ ಅಗತ್ಯವಿದೆ. ಅವರೊಂದಿಗೆ ಟ್ರಂಪ್ ಸರಕಾರಕ್ಕೆ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಇದು ಕೂಡ ಜನರನ್ನು ಅಮೆರಿಕದಲ್ಲಿ ರೊಚ್ಚಿಗೆಬ್ಬಿಸಿದೆ.
ಅಮೆರಿಕನ್ ಕಾಂಗ್ರೆಸ್ನ ಎರಡು ಜನ ಪ್ರತಿನಿಧಿ ಸಭೆಗಳಲ್ಲಿ ರಿಪಬ್ಲಿಕನ್ನರಿಗೆ ಬಹುಮತ ಇದೆ. ಆದರೆ ಮಸೂದೆ ಪಾಸು ಮಾಡಲು ಅರುವತ್ತು ವೋಟುಗಳು ಅವರಿಗೆ ಕಡಿಮೆ ಆಗುತ್ತದೆ. ಜನಸಾಮಾನ್ಯರಿಗೆ ತುರ್ತು ಸೇವೆ ಒದಗಿಸುವ ಆರೋಗ್ಯ ಸುರಕ್ಷೆಗೆ ಹಣ ಕೊಡುವುದು ನಷ್ಟ ಅಂತ ಟ್ರಂಪ್ ಆಡಳಿತ ಲೆಕ್ಕ ಹಾಕಿದೆ. ಅದಕ್ಕೆ ಬೇಕಿರುವ ಆರ್ಥಿಕ ನೆರವನ್ನೇ ಖರ್ಚು ಕಡಿಮೆ ಮಾಡುವ ಪ್ರಯುಕ್ತ ಟ್ರಂಪ್ ಆಡಳಿತ ಕಡಿತಗೊಳಿಸಿತು. ಇದು ಕೂಡ ಜನರನ್ನು ರೊಚ್ಚಿಗೆಬ್ಬಿಸಿತು. ಇದನ್ನು ಪುನಃ ಮೊದಲಿದ್ದಂತೆ ಮಾಡಬೇಕು. ಎಂದು ಜನ ಆಗ್ರಹಿಸುತ್ತಾ ಬಂದಿದ್ದಾರೆ. ಅದರೆ ಇದನ್ನು ಟ್ರಂಪ್ ಕ್ಯಾರೇ ಮಾಡುತ್ತಿಲ್ಲ.
ಡೆಮಾಕ್ರಾಟ್ಗಳ ಅಸಹಕಾರಕ್ಕೆ ಇದು ಕೂಡಾ ಒಂದು ಕಾರಣವಾಗಿದೆ. ಅವರದ್ದೂ ಕೂಡ ರಾಜಕಾರಣವೇ ತಾನೆ. ಬಜೆಟ್ ವಿವಾದದಿಂದ ಅಮೆರಿಕದ ಸಾರ್ವಜನಿಕರು ತತ್ತರಿಸುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ನೋಡಿ, ಕಳೆದ ಮೂರು ತಿಂಗಳಿನಿಂದೀಚೆಗೆ ಅಮೆರಿಕದಲ್ಲಿ ವಿವಿಧ ಸೇವಾ ಕ್ಷೇತ್ರಗಳ ಸಿಬ್ಬಂದಿಗಳು, ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದು ಇತ್ಯಾದಿಗಳನ್ನು ಸರಕಾರ ಜಾರಿಗೊಳಿಸುತ್ತಿದೆ. ಈಗ ಹದಿನಾಲ್ಕು ಲಕ್ಷ ಸರಕಾರಿ ಉದ್ಯೋಗಿಗಳು ಶೂನ್ಯ ವೇತನ ಅವಧಿ ಅಥವಾ ಸಂಬಳ ಇಲ್ಲದೆ ಕೆಲಸ ಮಾಡಬೇಕಾಗಿದೆ. ಬಜೆಟ್ ವಿವಾದ ಹಿಂದಿನ ಸರಕಾರದ ಆಡಳಿತ ಸಮಯದಲ್ಲಿಯೂ ಇತ್ತು. ಆದರೆ ಈ ಹಟಮಾರಿ ಟ್ರಂಪ್ರ ಪ್ರತೀಕಾರ ಹಂಬಲ ಏನೆಲ್ಲ ಅಹಿತಗಳಿಗೆ ಅವರನ್ನು ಮುಂದಾಗುವಂತೆ ಮಾಡುತ್ತದೋ ಎಂದು ಜನರಿಗೆ ಮಾತ್ರವಲ್ಲ ಅವರದೇ ಪಾರ್ಟಿಯವರಿಗೂ ಗ್ಯಾರಂಟಿಯಿಲ್ಲ. ಟ್ರಂಪ್ ಒಬ್ಬ ವಿಕ್ಷಿಪ್ತ ಮನಸ್ಥಿತಿ ವ್ಯಕ್ತಿ. ಇನ್ನೊಮ್ಮೆ ಜೋಕರ್ ತರವೂ ವರ್ತಿಸುತ್ತಾರೆ.
ಕೋರ್ಟು ಈಗ ಅಮೆರಿಕದಲ್ಲಿ ಸಾಮೂಹಿಕವಾಗಿ ನಾಲ್ಕು ಸಾವಿರ ನೌಕರರನ್ನು ಕೆಲಸದಿಂದ ತೆಗೆದು ಹಾಕಿರುವುದರ ವಿರುದ್ಧ ತೀರ್ಪು ಕೊಟ್ಟಿದೆ. ಮೇಲ್ಮನವಿಗೆ ಹೋಗಿಲ್ಲ. ಸರಕಾರ ಮುಚ್ಚುಗಡೆ ಮಾಡುವ ಬೆದರಿಕೆಯೊಡ್ಡಿ ಮುಂದುವರಿದಿದ್ದಾರೆ. ಸಾವಿರ ಸಾವಿರ ವಿಮಾನ ಸೇವೆಗಳಿಗೆ ಈ ಬಿಸಿತಟ್ಟಿದೆ. ಈಗ ಅಮೆರಿಕದ ಸೈನಿಕರಿಗೂ ಸಂಬಳ ಅತಂತ್ರ ವಾಗಿದೆ. ಸರಕಾರಿ ಏಜೆನ್ಸಿಗಾಗಿ ಕೆಲಸ ಮಾಡುವ ಕಾಂಟ್ರಾಕ್ಟ್ರಿಗೂ ಹಣ ಕೊಟ್ಟಿಲ್ಲ. ರಾಷ್ಟ್ರೀಯ ಆರೋಗ್ಯ ಇನ್ಸಿಟಿಟ್ಯೂಟ್ಗಳು ಮತ್ತು ಆರೋಗ್ಯ ರಕ್ಷಣಾ ರಂಗದಲ್ಲಿ ರೋಗ ಪ್ರತಿರೋಧಕ ಕೇಂದ್ರಗಳಲ್ಲಿ ಸರಕಾರಿ ಆಹಾರ ವಿತರಣೆ ಯೋಜನೆ ನಿಂತು ಹೋಗಿದೆ. ಅಂದರೆ ಟ್ರಂಪ್ ಆಡಳಿತದಲ್ಲಿ ಹಣ ಇಲ್ಲ. ಜನರು ಕೇಳ್ಬೇಕಲ್ಲ. ಬೀದಿಗಿಳಿದರು ಅಷ್ಟೇ.
ಹೀಗೆ ಜನರಿಗಾಗಿರುವ ಸೇವೆಗಳು ಮುಚ್ಚುಗಡೆ ಆಗುವಾಗ ಗಡಿ ರಕ್ಷಣೆ, ಸೇನಾ ವಿಭಾಗಗಳು, ಇಮಿಗ್ರೇಶನ್, ಕಸ್ಟಂಸ್ ಎನ್ಫೋರ್ಸ್ ಮೆಂಟ್ ಏಜೆನ್ಸಿಗಳು, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಿಂದಿನಂತೆ ಕೆಲಸವೆಸಗುತ್ತಿದೆ. ಇದು ಹೇಗೆ ಯಾಕೆ ಅಂದರೆ ವಂಶೀಯ ದ್ವೇಷ, ಉರಿಸುತ್ತಿರುವ ವಲಸಿಗರು, ನುಸುಳುಕೋರರನ್ನು ದೇಶದಿಂದ ಹೊರದಬ್ಬುವ ಟ್ರಂಪ್ಗಾಗಿ. ಇದು ಅವರ ಒಂದು ಆಡಳಿತ ಸುಧಾರಣೆಯಾಗಿದೆ. ಅದಕ್ಕಾಗಿ ಈ ಇಲಾಖೆಗಳಿಗೆ ತೊಂದರೆ ಆಗಿಲ್ಲ. ಹೀಗೆ ದೇಶವು ಮತ್ತು ಜನರು ತಮ್ಮ ಜೀವನ ಸಮಸ್ಯೆಗಳಲ್ಲಿ ಕಷ್ಟ ಎದುರಿಸುವಾಗ ಅದಕ್ಕೆ ರಿಪೇರಿ ತರುವ ಬದಲು ವಲಸಿಗರನ್ನು ಹೊರತಳ್ಳುವ ಶಿಥಿಲ ರಾಜಕೀಯ ತಂತ್ರ ಟ್ರಂಪ್ ಕಂಡು ಹಿಡಿದಿರುವ ಪರಿಹಾರ ಆಗಿದೆ. ಇದನ್ನು ಜನ ಒಪ್ಪಿಲ್ಲ. ಅವರು ರೊಚ್ಚಿಗೆದ್ದರು. ಬೀದಿಗಿಳಿದಿದ್ದಾರೆ.
ಟ್ರಂಪ್ ಬಿಳಿವಾದಿ. ಆದುದರಿಂದ ಅವರಿಗೆ ಅಮೆರಿಕದ ಬಿಳಿಯರ ಸಾರ್ವಭೌಮತ್ವ ವಾದಿಸುವ ಬಿಳಿಯ ಬಲಪಂಥೀಯ ಅಜೆಂಡ ಜಾರಿಗೊಳಿಸುವುದಕ್ಕಾಗಿ ದೇಶದಲ್ಲಿ ಚಕ್ರವರ್ತಿಯಾಗಿರಲು ಬಯಸುತ್ತಿದ್ದಾರೆ. ಅದಕ್ಕೆ ತನ್ನನ್ನು ಸ್ವಯಂ ಪಟ್ಟಾಭಿಷೇಕ ಮಾಡಿಸಿಕೊಳ್ಳಲು ಟ್ರಂಪ್ ಹೊರಟಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನ ತನಗೆ ಬಾಧಕವೇ ಅಲ್ಲ ಎಂದು ತೋರ್ಪಡಿಸಿ ಸ್ವಹಿತ ಜಾರಿಗೊಳಿಸುವ ರಾಜಾಳ್ವಿಕೆಯ ದಾರಿಯನ್ನು ಟ್ರಂಪ್ ಹುಡುಕುತ್ತಿದ್ದಾರೆ. ಇದನ್ನೇ ಪ್ರತಿಭಟಿಸಿ ನೋ ಕಿಂಗ್ ಪ್ರಕ್ಷೋಭೆಗೆ ಜನ ಇಳಿದರು. ಧಾರೆಧಾರೆಯಾಗಿ ಬೃಹತ್ ನಗರ ಬೀದಿಗಳಿಗೆ ಹರಿದು ಬಂದರು.
ಕಳೆದ ಜೂನ್ ಹದಿನಾಲ್ಕಕ್ಕೆ ಅಮೆರಿಕದ ಸೇನೆಯ 250ನೇ ವರ್ಷ. ಇದನ್ನೇ ತನ್ನ 79ನೇ ಜನ್ಮದಿನ ವಾರ್ಷಿಕವಾಗಿ ಟ್ರಂಪ್ ಆಚರಿಸಿದರು. ಅಂದೇ ರಾಜರುಗಳು ನಮಗೆ ಬೇಡ ಎಂಬ ಪ್ರತಿಭಟನೆಯು ದೇಶ ವಿಡೀ ಶುರುವಾಗಿದ್ದು. ಸಾವಿರಾರು ಜನರು ರ್ಯಾಲಿಗಳಿಗೆ ಬಂದರು. ಆ ರ್ಯಾಲಿಗಳು ಟ್ರಂಪ್ರ ಜನ್ಮದಿನ ಆಚ ರಣೆಯನ್ನೇ ಮಂಕುಗೊಳಿಸಿತು. ನೋ ಕಿಂಗ್.
ಅದರ ಮುಂದುವರಿದ ಭಾಗ ಕಳೆದ ವಾರ ದೊಡ್ಡ ರೀತಿಯಲ್ಲಿ ಬೃಹತ್ ನಗರಗಳಲ್ಲಿ ನಡೆದ ನೋ ಕಿಂಗ್ಸ್ ರ್ಯಾಲಿಗಳಾಗಿದ್ದುವು. ವಲಸೆ ಬಂದ ಜನರ ಹುಟ್ಟನ್ನು ಹುಟ್ಟಿದೂರನ್ನು ಪ್ರಶ್ನಿಸಿ ದಾಳಿ ಮಾಡುವ ಚಿಲ್ಲರೆ ಕೆಲಸ, ಚುನಾವಣೆಯನ್ನು ಬುಡ ಮೇಲು ಗೊಳಿಸುವ ವಂಚನೆ ಆರೋಗ್ಯ ಸುರಕ್ಷೆ, ಶಿಕ್ಷಣ, ಪರಿಸರ ಇತ್ಯಾದಿ ಮೂಲ ಅವಶ್ಯಕತೆಗಳ ವೆಚ್ಚದಲ್ಲಿ ಕಡಿತ ಮಾಡಿದ ಟ್ರಂಪ್ ವಿರುದ್ಧ ಜನ ಮುನಿದರು. ಇದರ ಜೊತೆಗೆ ಸಾಮಾನ್ಯ ಶತಕೋಟಿ ಧಣಿಗಳೊಂದಿಗೆ ಬಂಡವಾಳವಾದಿ ಸ್ನೇಹಕೂಟಕ್ಕಾಗಿ ಜನರಿಗೆ ಉಪದ್ರವಿಸುವ ನೀತಿ ಕಾರ್ಯಕ್ರಮಗಳೇ ರೂಪಿಸಿದ ಟ್ರಂಪ್ ವಿರುದ್ಧ ಜನ ಸಿಡಿದೆದ್ದರು. ಅಮೆರಿಕದ ಜನರು ಒಟ್ಟಾಗಿ ಗುಂಪಾಗಿ ಟ್ರಂಪ್ ಆಡಳಿತದ ವಿರುದ್ಧ ಪ್ರತಿಭಟನೆಗಿಳಿದರು.
ಪ್ರಜಾಪ್ರಭುತ್ವ, ಬಹುಸಂಖ್ಯಾತ ಆಧಿಪತ್ಯದಲ್ಲಿ ಸರ್ವಾಧಿಕಾರವಾಗಿ ಬದಲುಗೊಳ್ಳುತ್ತಿರುವ ಈಗಿನ ಹೊಸ ಲೋಕ ಕ್ರಮದಲ್ಲಿ ಕಿರೀಟ, ಸಿಂಹಾಸನ ಬೇಡ. ರಾಜರು ಬೇಡ ಎಂಬ ಘೋಷಣೆಯೊಂದಿಗೆ ಬಲ, ವಂಶೀಯವಾದಿ, ಶೋಷಕ ಬಂಡವಾಳಿಗರ ವಿರುದ್ಧ ಅದರ ಮರ್ಮ ಕರ್ಮ ಸ್ಥಳದಲ್ಲೇ ಧ್ವನಿ ಎದ್ದದ್ದು ಹೀಗೆ. ಕೆಟ್ಟದ್ದನ್ನು ಅಳಿಸಲು ಒಳ್ಳೆಯದು ಮುಂದೆ ಬಂದೇ ಬರುತ್ತದೆ. ಜನರ ಸಿಡಿದೇಳುವಿಕೆಯ ಈ ಎಚ್ಚರಿಕೆ ಬರೇ ಈ ಟ್ರಂಪ್ಗೆ ಮಾತ್ರ ಅಲ್ವೇ ಅಲ್ಲ. ಆ ಸರ್ವಾಧಿಪತಿಯ ಭಕ್ತರಿಗೂ ಟ್ರಂಪಿಸಂ ಅನುಸರಿಸಲು ಹಂಬಲಿಸುವ ಎಲ್ಲರಿಗೂ ಖಂಡಿತ ಮುನ್ನೆಚ್ಚರಿಕೆಯಾಗಿದೆ.












