ಸನ್ಮಾರ್ಗ ವಾರ್ತೆ
ಕಳೆದ ಐದು ವರ್ಷಗಳಿಂದ ವಿಚಾರಣೆಯನ್ನೇ ಎದುರಿಸದೆ ಜೈಲಲ್ಲಿರುವ ಉಮರ್ ಖಾಲಿದ್ ಅವರ ಜಾಮೀನು ಕೋರಿಕೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದ ದಿನದಂದೇ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಸ್ವ ಘೋಷಿತ ದೇವಮಾನವ ಅಸರಾಮ್ ಬಾಪುವಿನ ಪ್ರಕರಣ ಗುಜರಾತ್ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು ವಿಚಾರಣೆ ನಡೆಸಿದ ಹೈಕೋರ್ಟು ಈತನ ಮೇಲಿನ ಶಿಕ್ಷೆಯನ್ನು ಆರು ತಿಂಗಳಿಗೆ ಅಮಾನತುಗೊಳಿಸಿದೆ. ಉಮರ್ ಖಾಲಿದ್ ಅವರ ಜಾಮೀನು ಕೋರಿಕೆಯ ಅರ್ಜಿಯನ್ನು ನವೆಂಬರ್ ಹತ್ತರಂದು ಸುಪ್ರೀಂ ಕೋರ್ಟ್ ಪರಿಗಣಿಸಲಿದೆ. ಈ ಸಂದರ್ಭದಲ್ಲಿ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸಂಚು ಆರೋಪಿಸಿ ಅವರ ಜಾಮೀನು ಕೋರಿಕೆಯನ್ನು ದೆಹಲಿ ಪೊಲೀಸ್ ಪರ ವಕೀಲರು ವಿರೋಧಿಸಿ ವಾದಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದಲ್ಲಿ ಉಮರ್ ಖಾಲಿದ್ ವಿರುದ್ಧ ಈವರೆಗೆ ಯಾವ ಸಾಕ್ಷಾಧಾರವನ್ನು ಮಂಡಿಸಲೂ ದೆಹಲಿ ಪೊಲೀಸರಿಗೆ ಸಾಧ್ಯವಾಗಿಲ್ಲ. ಹಾಗಿದ್ದರೂ ಕಳೆದ ಐದು ವರ್ಷಗಳಿಂದ ಖಾಲಿದ್ ಜೈಲಲ್ಲಿದ್ದಾರೆ.
ಕಳೆದ ತಿಂಗಳು ರಾಜಸ್ಥಾನ ಹೈಕೋರ್ಟು ಆಸಾರಾಮ್ ಬಾಪುವಿನ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತ್ತು. ಈತನ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಮತ್ತು ಜೈಲಲ್ಲಿ ಈತನಿಗೆ ಚಿಕಿತ್ಸೆ ಕೊಡುವ ಸೌಲಭ್ಯ ಇಲ್ಲದೆ ಇರುವುದನ್ನು ಗುರುತಿಸಿ ಈ ಜಾಮೀನು ನೀಡಲಾಗಿತ್ತು.
2013ರಲ್ಲಿ ತನ್ನ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಗೈದ ಪ್ರಕರಣದಲ್ಲಿ 2018 ಏಪ್ರಿಲ್ ನಲ್ಲಿ ಜೋಧಪುರ್ ಸೆಷನ್ಸ್ ನ್ಯಾಯಾಲಯವು ಅಸರಾಂಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.
ಇದೀಗ ಗುಜರಾತ್ ಹೈಕೋರ್ಟಿನ ನ್ಯಾಯಾಧೀಶ ಇಲೇಶ್ ಜೆ ವೊರಾ ಮತ್ತು ಆರ್ ಟಿ ವಚ್ಚಾನಿ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಶಿಕ್ಷೆಯನ್ನು ಅಮಾನತುಗೊಳಿಸಿದ ರಾಜಸ್ಥಾನ್ ಹೈಕೋರ್ಟಿನ ತೀರ್ಪು ಆರು ತಿಂಗಳವರೆಗೆ ಮುಂದುವರೆಯಲಿದೆ ಮತ್ತು ಆ ಬಳಿಕ ಇದರಲ್ಲಿ ಮಾರ್ಪಾಟು ಮಾಡಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.












