2013ರ ಭಾಷಣವನ್ನು ಪ್ರಧಾನಿ ಮೋದಿ ಮತ್ತೊಮ್ಮೆ ಆಲಿಸಲಿ

0
373

✍️ ಏ.ಕೆ.ಕೆ

ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರು 2013 ಆಗಸ್ಟ್‌ನಲ್ಲಿ ಮಾಡಿದ ಭಾಷಣ ನೆನಪಿದೆಯಾ? ಅಮೆರಿಕನ್ ಡಾಲರ್‌ನ ಎದುರು ಭಾರತದ ರೂಪಾಯಿಯ ಬೆಲೆಕುಸಿತವನ್ನು ಅವರು ಹೇಗೆ ವ್ಯಂಗ್ಯವಾಡಿದ್ದರು ಎಂಬುದು ನೆನಪಿದೆಯಾ? ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದ ರವಿಶಂಕರ್ ಪ್ರಸಾದ್ ಅವರು 2013 ಜುಲೈಯಲ್ಲಿ ಮಾಧ್ಯಮಗಳಿಗೆ ನೀಡಿದ ಹೇಳಿಕೆ ನೆನಪಿದೆಯಾ? ರಾಹುಲ್ ಗಾಂಧಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಪ್ರಾಯಕ್ಕೆ ಡಾಲರ ಮೌಲ್ಯವನ್ನು ಹೋಲಿಸಿ ಅವರು ಮಾಡಿದ ವಿಡಂಬನೆ ನೆನಪಿದೆಯಾ?

ಮನಮೋಹನ್ ಸಿಂಗ್ ಮತ್ತು ರೂಪಾಯಿ ಎರಡು ಕೂಡ ಮೌನವಾಗಿವೆ, ಡಾಲರ್ ಎದುರು ರೂಪಾಯಿ ಸದ್ದು ಮಾಡುತ್ತಿದ್ದ ಒಂದು ಕಾಲ ಇತ್ತು. ಈಗ ರೂಪಾಯಿ ತನ್ನ ಧ್ವನಿಯನ್ನೇ ಕಳೆದುಕೊಂಡಿದೆ. ಹಾಗೆಯೇ ಪ್ರಧಾನಿಯವರೂ ತನ್ನ ಧ್ವನಿಯನ್ನು ಕಳಕೊಂಡಿದ್ದಾರೆ. ರೂಪಾಯಿ ಮತ್ತು ಪ್ರಧಾನಿ ಇಬ್ಬರೂ ಮ್ಯೂಟ್ ಆಗಿದ್ದಾರೆ ಎಂದು 2013 ಆಗಸ್ಟ್ ನಲ್ಲಿ ಸೌರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ವ್ಯಂಗ್ಯವಾಡಿದ್ದರು. ಈ ಸಂದರ್ಭದಲ್ಲಿ ಒಂದು ಡಾಲರ್ ನ ಬೆಲೆ 60 ರೂಪಾಯಿ ಆಗಿತ್ತು.

ಮನಮೋಹನ್ ಸಿಂಗ್ ಸರಕಾರವನ್ನು ತರಾಟೆಗೆ ಎತ್ತಿಕೊಳ್ಳುವುದಕ್ಕೆ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಕೂಡ ಹಿಂದೆ ಬಿದ್ದಿರಲಿಲ್ಲ. ಯುಪಿಎ ಸರ್ಕಾರ 2004 ರಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬರುವಾಗ ರೂಪಾಯಿ ಎದುರು ಡಾಲರ್ ಮೌಲ್ಯ ರಾಹುಲ್ ಗಾಂಧಿಯ ಪ್ರಾಯದಷ್ಟಿತ್ತು. ಈಗ ಅದು ಸೋನಿಯಾ ಗಾಂಧಿಯ ಪ್ರಾಯದಷ್ಟಾಗಿದೆ.ಅತಿ ಶೀಘ್ರವೇ ಇದು ಮನಮೋಹನ್ ಸಿಂಗ್ ಅವರ ಪ್ರಾಯದ ಎತ್ತರಕ್ಕೆ ಏರಲಿದೆ ಎಂದು 2013 ಜುಲೈಯಲ್ಲಿ ತಮಾಷೆ ಮಾಡಿದ್ದರು. ಇವರು ಹೀಗೆ ಅಭಿಪ್ರಾಯ ಹಂಚಿಕೊಳ್ಳುವಾಗ ರಾಹುಲ್ ಗಾಂಧಿಯ ಪ್ರಾಯ 41 ಆಗಿತ್ತು. ಸೋನಿಯಾ ಗಾಂಧಿ ಪ್ರಾಯ 67 ಆಗಿತ್ತು ಮತ್ತು ಮನಮೋಹನ್ ಸಿಂಗ್ ಅವರ ಪ್ರಾಯ 80 ಆಗಿತ್ತು.

ಅಂದಹಾಗೆ, 12 ವರ್ಷಗಳ ಹಿಂದಿನ ಬೆಳವಣಿಗೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದಕ್ಕೆ ಒಂದು ಕಾರಣ ಇದೆ. ಅದುವೇ ಡಾಲರ್. 12 ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ಒಂದು ಡಾಲರ್ ನ ಬೆಲೆ 60 ರೂಪಾಯಿ ಆಗಿದ್ದರೆ 2025 ನವಂಬರ್ 24ರಂದು ಒಂದು ಡಾಲರ್ ನ ಬೆಲೆ 90 ರೂಪಾಯಿ ಆಗಿದೆ. ಕೇವಲ 12 ವರ್ಷಗಳಲ್ಲಿ ಡಾಲರ್ ನ ಬೆಲೆ 30 ರೂಪಾಯಿಯಷ್ಟು ಹೆಚ್ಚಿದೆ. ಒಂದು ವೇಳೆ ರವಿಶಂಕರ್ ಪ್ರಸಾದ್ ಅವರು ರಾಹುಲ್ ಗಾಂಧಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಪ್ರಾಯಕ್ಕೆ ಡಾಲರ ಬೆಲೆ ಏರಿಕೆಯನ್ನು ಹೋಲಿಸಿದಂತೆ ಇವತ್ತು ಹೋಲಿಸುವುದಾದರೆ ಬಿಜೆಪಿಯ ಯಾರೆಲ್ಲರ ಪ್ರಾಯಕ್ಕೆ ಈ ಡಾಲರ್‌ನ ಬೆಲೆಯನ್ನು ಹೋಲಿಸಬಹುದು?

12 ವರ್ಷಗಳ ಹಿಂದೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ರೂಪಾಯಿಯ ಮೌಲ್ಯವನ್ನು ಹೆಚ್ಚು ಗೊಳಿಸುವುದಾಗಿ ಮಾತು ಕೊಟ್ಟಿದ್ದರು. ಭಾರತದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವುದಾಗಿ ಹೇಳಿದ್ದರು. ಜನರು ಅವರ ಕೈಗೆ ಅಧಿಕಾರವನ್ನು ಕೊಟ್ಟರು. ಹೀಗೆ ಅಧಿಕಾರ ಕೊಟ್ಟು 12 ವರ್ಷಗಳೇ ಕಳೆದಿವೆ. ಈಗ ಅದೇ ಡಾಲರ್ ಭಾರತೀಯರ ಕೈಗೆ ಏಟುಕದಷ್ಟು ಎತ್ತರಕ್ಕೆ ಏರಿದೆ. ಹಾಗಿದ್ರೆ 2013ರಲ್ಲಿ ಅವರು ಭಾರತೀಯರನ್ನು ಮಂಗ ಮಾಡಿದ್ದಾ? ರೂಪಾಯಿಯ ಬೆಲೆಯನ್ನು ಹೆಚ್ಚಳ ಗೊಳಿಸುವ ಯಾವ ಯೋಜನೆಯೂ ಇಲ್ಲದೆ ಅವರು ಸುಮ್ಮನೆ ಭಾಷಣ ಮಾಡಿದ್ದಾ? ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಜನರನ್ನು ಯಾಮಾರಿಸಿದ್ದಾ? ಅಚ್ಚೆ ದಿನ್ ಕನಸನ್ನು ಕೊಟ್ಟು ಜನರನ್ನು ವಂಚಿಸಿದ್ದಾ?

ನರೇಂದ್ರ ಮೋದಿಯವರು ಅದೇ 2013ರಲ್ಲಿ ಮಾಡಿದ ಸರಣಿ ಭಾಷಣಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಏರಿಕೆಯ ಬಗ್ಗೆಯೂ ಸಾಕಷ್ಟು ಮಾತಾಡಿದ್ದರು. ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದರು. ಆಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 80 ರೂಪಾಯಿಯ ಹತ್ತಿರ ಇತ್ತು. ಅವರ ಭಾಷಣಕ್ಕೆ ಸಾರ್ವಜನಿಕರಿಂದ ಭರ್ಜರಿ ಚಪ್ಪಾಳೆಯೂ ಸಿಕ್ಕಿತ್ತು. ಹೀಗೆ ಕನಸನ್ನು ಮಾರಿದ ಪ್ರಧಾನಿ ಇದೀಗ ಅಧಿಕಾರಕ್ಕೆ ಬಂದು 12 ವರ್ಷಗಳೇ ಕಳೆದಿವೆ. ಆದರೆ 80ರ ಆಸುಪಾಸಿನಲ್ಲಿದ್ದ ಡೀಸೆಲ್ ಮತ್ತು ಪೆಟ್ರೋಲ್ ನ ಬೆಲೆ ಇದೀಗ ನೂರರ ಗಡಿಯನ್ನು ದಾಟಿದೆ. ಹಾಗಿದ್ದರೆ ಅವರು ಈ ಹಿಂದೆ ಮಾಡಿದ ಭಾಷಣದ ಅರ್ಥವೇನು? ವೋಟು ಪಡೆಯುವುದಕ್ಕಾಗಿ ಮತದಾರರಿಗೆ ಅವರು ಮಾಡಿದ್ದು ವಂಚನೆಯಲ್ಲವೇ? ರೂಪಾಯಿಯ ಬೆಲೆ ಹೆಚ್ಚಿಸುತ್ತೇನೆ, ಡಾಲರ್‌ನ ಬೆಲೆ ಇಳಿಸುತ್ತೇನೆ, ಬೆಲೆ ಏರಿಕೆಯನ್ನು ತಡೆಯುತ್ತೇನೆ ಎಂದೆಲ್ಲ ಅವರು ಬರೆ ಭಾಷಣಕ್ಕಾಗಿ ಮಾತ್ರ ಹೇಳಿದರೆ? ಈ ದೇಶದ ಜನರನ್ನು ನಂಬಿಸಿ ಮೋಸ ಮಾಡಿದರೆ?

ತನ್ನದೇ ಈ ಹಿಂದಿನ ಭಾಷಣವನ್ನು ಅವರು ಮತ್ತೊಮ್ಮೆ ಆಲಿಸಿದರೆ ಅವರ ಉತ್ತರ ಏನಿದ್ದೀತು?