ನಾನು ಮುಸ್ಲಿಮ್, ನನ್ನ ಐಡೆಂಟಿಟಿಯನ್ನು ಅಡಗಿಸಿಡಲಾರೆ…

0
720

ಅನು: ಡಾ| ನಹಾಸ್ ಮಾಳ

ಅಮೇರಿಕದಲ್ಲಿ ಚುನಾವಣೆಗೆ 11 ದಿನಗಳ ಮೊದಲು ಝೊಹ್ರಾನ್ ಮಮ್ದಾನಿ ನೀಡಿದ ಈ ಸಂಭಾಷಣೆಯನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಏಕೆಂದರೆ ಅದು ಹಲವು ವಿಧಗಳಲ್ಲಿ ಪ್ರಸ್ತುತವಾಗಿದೆ. ಅವರು ನ್ಯೂಯಾರ್ಕ್‌ನಲ್ಲಿರುವ ಮುಸ್ಲಿಮರೊಂದಿಗೆ ನಡೆಸಿದ ಈ ಸಂಭಾಷಣೆಯ ಬಹುಪಾಲು ಭಾರತೀಯ ಮುಸ್ಲಿಮರ ಪರಿಗಣನೆಗೆ ಅರ್ಹವಾಗಿದೆ. – ಅನುವಾದಕ

ಆರು ವರ್ಷಗಳ ಹಿಂದೆ ನಾನು ವಿಧಾನಸಭೆಗೆ ನನ್ನ ಉಮೇದುವಾರಿಕೆಯನ್ನು ಘೋಷಿಸಿದ ಸ್ವಲ್ಪ ಸಮಯದ ನಂತರ ಓರ್ವ ಒಳ್ಳೆಯ ಮುಸ್ಲಿಮ್ ಅಂಕಲ್ ನನ್ನನ್ನು ಪಕ್ಕಕ್ಕೆ ಕರೆದು ಪ್ರೀತಿಯಿಂದ ನನ್ನನ್ನು ನೋಡಿ ಮುಗುಳ್ನಕ್ಕರು. ನಾನು ಮುಸ್ಲಿಮ್ ಎಂದು ಜನರಿಗೆ ತಿಳಿಸಬೇಕೆಂದಿಲ್ಲ ಎಂದು ಬಹಳ ಮೆಲುಧ್ವನಿಯಲ್ಲಿ ಹೇಳಿದರು. ಅವರ ಕಣ್ಣುಗಳಲ್ಲಿ ಪ್ರೀತಿ, ವಾತ್ಸಲ್ಯ, ದಯೆ ಇತ್ತು. ಅವರ ಗಡ್ಡದಲ್ಲಿ ಹೆಮ್ಮೆ ಇತ್ತು. ಅವರ ಮುಖವು ಹೇಳಲಾಗದ ವಿಷಯಗಳ ಬಗ್ಗೆ ಭಾರವಾಗಿತ್ತು. ಅವರು ಅನೇಕ ವರ್ಷಗಳಿಂದ ಕಲಿತಿರುವ ಜೀವನಾನುಭವಗಳು ನನಗೆ ತಿಳಿದಿರಲಿಲ್ಲ.

ಆ ಪಾಠವೇನೆಂದರೆ ನಮ್ಮ ನಗರದ ನೆರಳುಗಳಲ್ಲಿ ಮಾತ್ರ ಮುಸ್ಲಿಮರು ಬದುಕಲು ಸಾಧ್ಯ. ತಮ್ಮ ಗುರುತನ್ನು ಬಹಿರಂಗಪಡಿಸದೆ ತಮ್ಮ ಧರ್ಮ, ಸಂಸ್ಕೃತಿಯನ್ನು ಮರೆಮಾಚಿ ಜೀವಿಸಿದರೆ ಮಾತ್ರ ಸುರಕ್ಷಿತರಾಗಬಹುದು ಹಾಗೂ ನೆಮ್ಮದಿಯಿಂದ ಬದುಕಬಹುದು.

ಕಳೆದ ಕೆಲವು ದಿನಗಳಿಂದ ರಾಜಕೀಯ ನಾಯಕರಾದ ಆಂಡ್ರೂ ಕೂಮೋ, ಕರ್ಟಿಸ್‌ಲೀವಾ ಎರಿಕ್ ಆಡಮ್ಸ್ ಮುಂತಾದವರ ಅಭಿಪ್ರಾಯವೂ ಇದೇ ರೀತಿಯಾಗಿದೆ.

ಒಬ್ಬ ರೇಡಿಯೋ ನಿರೂಪಕನು ನನ್ನ ಸ್ಪರ್ಧೆ ಯನ್ನು ಉಲ್ಲೇಖಿಸಿ ‘ಮತ್ತೊಂದು 9/11 ಬರಲಿದೆ’ ಎಂದು ಹೇಳಿದಾಗ, ಆಂಡ್ರೂ ಕೂಮೋ ಅದನ್ನು ಬೆಂಬಲಿಸಿ ನಕ್ಕರು. ‘ನಮ್ಮ ನಗರ ಯುರೋಪ್ ಆಗಬಾರದು’ ಎಂದು ಎರಿಕ್ ಆ್ಯಡಮ್ಸ್ ಹೇಳಿದರು. ಅವರು ನನ್ನನ್ನು ಉಗ್ರವಾದಿಗಳೊಂದಿಗೆ ಹೋಲಿಸಿದರು. ಈ ಸಂಘಟನೆಯು ಚರ್ಚ್ಗಳನ್ನು ನಾಶಗೊಳಿಸಲು ಪ್ರಯತ್ನಿಸುತ್ತದೆ ಎಂದು ಸುಳ್ಳು ಹೇಳಿದರು. ಅದರ ಮರುದಿನ ಕರ್ಟಿಸ್‌ಲೀವಾ ಹೇಳಿದನು, ನಾನು ಜಾಗತಿಕವಾಗಿ ಜಿಹಾದನ್ನು ಬೆಂಬಲಿಸುತ್ತೇನೆಂದು.

ಪ್ರತಿದಿನ ಜಾಹೀರಾತುಗಳಲ್ಲಿ ನನ್ನನ್ನು ಭಯೋ ತ್ಪಾದಕನಾಗಿ ತೋರಿಸಲಾಗುತ್ತಿದೆ. ನಾನು ಆಹಾರ ತಿನ್ನುವ ವಿಧಾನವನ್ನೂ ಹಾಸ್ಯ ಮಾಡುತ್ತಾರೆ. ನ್ಯೂಯಾರ್ಕ್ ನಿವಾಸಿಗಳು ಹಲಾಲ್ ಆಹಾರ ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳ ಬೇಕಾದೀತು ಎಂದು ಪ್ರಚಾರ ಮಾಡುತ್ತಾ, ನನ್ನ ಉಮೇದುವಾರಿಕೆಯನ್ನು ವಿಶ್ವ ವಾಣಿಜ್ಯ ಕೇಂದ್ರಕ್ಕೆ ವಿಮಾನ ನುಗ್ಗುತ್ತಿರುವಂತೆ ಚಿತ್ರಿಸುವ ವ್ಯಂಗ್ಯಚಿತ್ರಗಳನ್ನು ನಾವು ಕಾಣುತ್ತಿದ್ದೇವೆ. ಆದರೆ ನಾನು ಅವರೊಂದಿಗೆ ಹೆಚ್ಚು ವಾಗ್ವಾದ ನಡೆಸಲು ಈ ನಿಮಿಷಗಳನ್ನು ವ್ಯರ್ಥಗೊಳಿಸುವುದಿಲ್ಲ.

ಈ ಸಮಯದಲ್ಲಿ ನಾನು ನ್ಯೂಯಾರ್ಕ್ ನಗರದ ಮುಸ್ಲಿಮರೊಂದಿಗೆ ಮಾತಾಡಲು ಇಚ್ಛಿಸುತ್ತೇನೆ. ಸೆಪ್ಟೆಂಬರ್ 11ರ ನಂತರ ಬುರ್ಖಾ ಧರಿಸಿ ಸಬ್‌ವೇಯಲ್ಲಿ ಸಂಚರಿಸಲು ಸಾಧ್ಯವಾಗದೆ ಹೆದರಿ ನಿಲ್ಲಬೇಕಾದ ನನ್ನ ಅತ್ತೆಯೊಂದಿಗೆ ಮಾತಾಡಲು ಬಯಸುತ್ತೇನೆ. ನನ್ನ ಶಾಲೆಗಳಲ್ಲಿ ಕಲಿಸುತ್ತಿರುವ ಮುಸ್ಲಿಮ್ ಅಧ್ಯಾಪಕರೊಂದಿಗೆ, ನಗರದ ರಕ್ಷಣೆಯಲ್ಲಿ ತೊಡಗಿರುವ ಪೊಲೀಸರೊಂದಿಗೆ, ಈ ನಗರದಲ್ಲಿ ದುಡಿಯುತ್ತಿರುವ ಕಾರ್ಮಿಕರೊಂದಿಗೆ, ಇಲ್ಲಿನ ನಾಯಕರು ಅವರೊಂದಿಗೆ ವರ್ತಿಸುತ್ತಿರುವ, ತಾರತಮ್ಯ ಧೋರಣೆಗಳಿಂದ ಮುಸ್ಲಿಮ್ ವಿರೋಧಿ ನಿಲುವುಗಳಿಗೂ ಮೌನವಾಗಿರುವಂತಹ ಮುಸ್ಲಿಮ್ ನೌಕರರೊಂದಿಗೆ ನಾನು ಮಾತನಾಡಲು ಬಯಸುವವ.

ಈ ನ್ಯೂಯಾರ್ಕ್ ನಗರದಲ್ಲಿ ಮುಸ್ಲಿಮ್ ಮಗುವಾಗಿ ಬೆಳೆಯುವಾಗ ಅವನು ಸದಾ ತಾನು ಬೇರೆಯವನು ಎಂಬ ಭಾವನೆ ಉಂಟಾಗುತ್ತದೆ. ನಾನು ಬಾಲ್ಯದಲ್ಲಿಯೇ ಅರ್ಥ ಮಾಡಿಕೊಂಡಿದ್ದೆ. ಏನೆಂದರೆ ನನ್ನ ಹೆಸರನ್ನು ಯಾವಾಗ ಬೇಕಾದರೂ ಮುಹಮ್ಮದ್’ ಎಂದು ಕರೆದು ಅವಮಾನ ಮಾಡಬಹುದು.

ವಿಮಾನ ನಿಲ್ದಾಣದಲ್ಲಿ ಹಿಂತಿರುಗುವಾಗ, ನನ್ನನ್ನು ಎರಡು ಕನ್ನಡಿಗಳ ಮಧ್ಯದ ತಪಾಸಣಾ ಕೊಠಡಿಗೆ ಕರೆದುಕೊಂಡು ಹೋಗಿ, “ನೀನು ಯಾವುದೇ ದಾಳಿ ಮಾಡಲು ಬಂದಿದ್ದೀಯಾ?” ಎಂದು ಕೇಳಬಹುದು.

ನನ್ನ ಒಬ್ಬ ಸ್ನೇಹಿತನನ್ನು ಗುಪ್ತಚರನೆಂದು ಹಂಗಿಸಲಾಯಿತು. ಇನ್ನೊಬ್ಬನ ಗ್ಯಾರೇಜ್‌ನ ಮೇಲೆ ಟೆರರಿಸ್ಟ್' ಎಂದು ಬರೆದರು. ಕೆಲವು ಮಸೀದಿಗಳನ್ನು ಸುಟ್ಟರು. ನ್ಯೂಯಾರ್ಕ್‌ನಲ್ಲಿ ಮುಸ್ಲಿಮರು ಸದಾ ಅವಮಾನವನ್ನು ಅನುಭವಿಸಲು ಸಿದ್ಧರಾಗಿರಬೇಕು. ಅವಮಾನವು ನಮ್ಮನ್ನು ಬೇರೆಗೊಳಿಸುವುದಿಲ್ಲ. ಆ ಅವಮಾನ ಸಹಿಸಿ ಪ್ರತಿಕ್ರಿಯಿಸದೇ ಇರುವುದೇ ನಮ್ಮ ಮುಸ್ಲಿಮರ ನಿಜವಾದ ಸಮಸ್ಯೆ. ಒಂದು ವರ್ಷದಿಂದ ನಾನು ಮೇಯರ್ ಅಭ್ಯರ್ಥಿಯಾಗಿ ಎಲ್ಲರಿಗಾಗಿ ಹೋರಾಡುವ ನಾಯಕನಾಗಲು ಪ್ರಯತ್ನಿಸಿದೆ. ನಾನು ಕೇವಲ ಮುಸ್ಲಿಮ್ ಅಭ್ಯರ್ಥಿ’ ಆಗಬಾರದೆಂದು ಭಾವಿಸಿದೆ. ನನ್ನ ಧರ್ಮವನ್ನು ಮರೆತು, ಮೌನವಾಗಿದ್ದು ಮುಖ್ಯ ವಿಷಯಗಳ ಬಗ್ಗೆ ಮಾತ್ರ ಮಾತನಾಡಿದರೆ ಸಾಕು ಎಂದು ಭಾವಿಸಿದೆ.

ಆದರೆ ಅದು ನನ್ನ ತಪ್ಪು ನಿರ್ಧಾರವಾಗಿತ್ತು. ಇದರಿಂದ ಸಮಾಜದಲ್ಲಿ ಸ್ವಲ್ಪವೂ ಬದಲಾವಣೆ ಸಾಧ್ಯವಾಗದು. ಈ ರೀತಿಯಾದರೆ ಮೊದಲು ಓರ್ವ ಅಂಕಲ್ ಹೇಳಿದಂತೆ ಮುಸ್ಲಿಮರು ತಮ್ಮ ಐಡೆಂಟಿಟಿ ಮರೆಮಾಚಿ ನೆರಳಿನಂತೆ ಬದುಕಬೇಕಾದೀತು. ಅದರಿಂದ ನಾನು ನನ್ನ ಅಭಿಪ್ರಾಯ ಬದಲಾಯಿಸಿದೆ. ಇನ್ನು ಮುಸ್ಲಿಮರು ಸ್ವಂತಿಕೆ ಯಿಂದ ಆತ್ಮಾಭಿಮಾನದಿಂದ ತಮ್ಮ ಐಡೆಂಟಿಟಿಯೊಂದಿಗೆ ಈ ನಗರದಲ್ಲಿ ತಲೆ ಎತ್ತಿ ನಡೆಯುವಂತಹ ಅವಕಾಶವನ್ನು ಮರಳಿ ಗಳಿಸಬೇಕೆಂದು ನಿರ್ಧರಿಸಿದೆ. ಬಹಳ ಕಾಲಗಳಿಂದ ಎರಡನೇ ಪ್ರಜೆಯಾಗಿ ಅವಹೇಳನಗಳನ್ನು ಅನುಭವಿಸಿ, ದ್ವೇಷಗಳನ್ನು ಎದುರಿಸಿ ಬದುಕುವುದನ್ನು ಕೊನೆಗೊಳಿಸಬೇಕೆಂದು ನಿರ್ಧರಿಸಿದೆ. ಇಸ್ಲಾಮೋಫೋಬಿಯವನ್ನು ತೊಲಗಿಸಬೇಕು. ಒಬ್ಬನು ನಮ್ಮ ಮಸೀದಿಗಳನ್ನು ಆಕ್ರಮಿಸಿದರೆ ಅದನ್ನು ಖಂಡಿಸಲು ಯಾರೂ ಇಲ್ಲವೆಂದೂ ನಮಗೆ ತಿಳಿದಿದೆ. ಈ ನಗರದಲ್ಲಿರುವ ಉದ್ಯೋಗಸ್ಥರಿಗೆ ನನ್ನನ್ನು ಬಹಿಷ್ಕರಿ ಸುವ ಟಿ-ಶರ್ಟ್‌ಗಳನ್ನು ನೀಡಿದರೂ ಇಲ್ಲಿನ ಆಡಳಿತಗಾರರಿಗೆ ಭಯಪಡಬೇಕಾಗಿಲ್ಲ.

ಇಲ್ಲಿನ ಪರಿಸ್ಥಿತಿಯು ಬಹಳ ಕಠಿಣವಾಗಿತ್ತು. ಒಂದು ದಶಲಕ್ಷಕ್ಕಿಂತ ಅಧಿಕ ಮುಸ್ಲಿಮ್ ನ್ಯೂಯಾರ್ಕ್ ನಿವಾಸಿಗಳು ತಮ್ಮ ಮನೆಗಳಲ್ಲಿ ಅತಿಥಿಗಳಂತೆ ಜೀವಿಸುತ್ತಿದ್ದಾರೆ. ಇದು ಇನ್ನು ಬದಲಾಗಲೇಬೇಕು. ನಾವು ಈಗ ಒಂದು ಚುನಾವಣೆ ಸಮೀಪ ಇದ್ದೇವೆ. ಆದರೆ ಇಂದಿನ ವಿಷಯ ಅದಲ್ಲ. ಎರಡು ವಾರದೊಳಗೆ ಸ್ಥಾನ ಭ್ರಷ್ಟನಾದ ಒಬ್ಬ ಮಾಜಿ ಗವರ್ನರ್ ಮತ್ತು ಇಂದಿನ ಭ್ರಷ್ಟ ಮೇಯರನ್ನು ತೊಲಗಿಸಲಾಗುವುದು. ಅದಕ್ಕಾಗಿ ನಾವು ಶ್ರಮಿಸೋಣ.

ಆದರೆ ಅದಕ್ಕಿಂತಲೂ ಮುಖ್ಯವಾದ ವಿಷಯವೇನೆಂದರೆ ನಮ್ಮ ನಗರದಲ್ಲಿ ವ್ಯಾಪಕವಾದ ಮುಸ್ಲಿಮ್ ವಿರೋಧಿ ನಿಲುವನ್ನು ತೊರೆಯಲು ಮನಸ್ಸಿದೆಯಾ? ಮುಸ್ಲಿಮ್ ವಿರೋಧಿ ಭಾವನೆಯು ರಿಪಬ್ಲಿಕ್, ಡೆಮೊಕ್ರೆಟಿಕ್ ಎಂಬ ಪಕ್ಷಗಳಲ್ಲಿಯೂ ಸಾರ್ವತ್ರಿಕವಾಗಿದೆ. ಈ ನಗರದಲ್ಲಿ ರಾಜಕೀಯದಲ್ಲಿ ಇಸ್ಲಾಮೋಫೋಬಿಯಾ ವ್ಯಾಪಕವಾಗಿದೆ. ಅದು ಎಲ್ಲ ರಂಗಗಳಲ್ಲಿಯೂ ಹಾಸು ಹೊಕ್ಕಾಗಿದೆ.

ಕಳೆದ ಎರಡು ದಿನಗಳಿಂದ ನನ್ನ ಬಗ್ಗೆ ಪ್ರಚಾರ ಮಾಡಲು ಬಂದ ಎಲ್ಲರನ್ನೂ ಅಭಿನಂದಿಸುತ್ತೇನೆ. ಈ ನಗರದ ಮುಸ್ಲಿಮರ ಬಗ್ಗೆ ನೆನಪಿಸುತ್ತೇನೆ. ಮುಸ್ಲಿಮರು ಒಗ್ಗಟ್ಟಿನಿಂದ ಅದನ್ನು ಎದುರಿಸಿದರೆ ನಮಗೆ ನೆಮ್ಮದಿಯಿಂದ ಬಾಳುವ ಅವಕಾಶವಿದೆ. ಎಲ್ಲ ಸಮುದಾಯದೊಂದಿಗೂ ಅನ್ಯೋನ್ಯತೆಯಿಂದ ಬದುಕಬಹುದು. ನಮ್ಮ ಇಂದಿನ ಪರಿಸ್ಥಿತಿಗೆ ನಾವೇ ಕಾರಣಕರ್ತರಾಗಿದ್ದೇವೆ. ನಾವು ಸ್ವಾಭಿಮಾನದ ಗೌರವಯುತವಾದ ಜೀವನ ವಿಧಾನವನ್ನು ಅಂಗೀಕರಿಸ ಬೇಕೋ? ಅಥವಾ ಮುಸ್ಲಿಮ್ ಎಂಬ ಐಡೆಂಟಿಟಿಯನ್ನು ಅಡಗಿಸಿ ಬದುಕ ಬೇಕೋ? ಎಂದು ನಾವೇ ಸ್ವತಃ ನಿರ್ಧಾರ ಮಾಡಬೇಕು. ಈ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮ ಪಯಣವನ್ನು ಮುಂದುವರಿಸಬೇಕೇ ಎಂದು ತೀರ್ಮಾನಿಸಲು ಇನ್ನು ಕೇವಲ 11 ದಿನಗಳೇ ಉಳಿದಿರುವುದು.

ಈ 11 ದಿನ ಮತ್ತು ಅದರ ನಂತರವೂ ನಾನು ನ್ಯೂಯಾರ್ಕ್ ನಗರದ ಓರ್ವ ಮುಸ್ಲಿಮ್ ಪುರುಷನಾಗಿರುತ್ತೇನೆ. ನಾನು ಬದಲಾಗುವುದಿಲ್ಲ. ನನ್ನ ಆಹಾರ ಪದ್ಧತಿಯನ್ನು ಬದಲಾಯಿಸುವುದಿಲ್ಲ. ನನ್ನ ವಿಶ್ವಾಸವನ್ನು ಬದಲಾಯಿಸುವುದಿಲ್ಲ. ಆದರೆ ನಾನು ಬದಲಾಗುವುದೇನೆಂದರೆ ನಾನು ನೆರಳಿನಲ್ಲಿ ಬದುಕುವುದಿಲ್ಲ. ಆತ್ಮಾಭಿಮಾನದಿಂದ ಬೆಳಕಿನೊಂದಿಗೆ ನನ್ನ ವಿಶ್ವಾಸದೊಂದಿಗೆ ಮುಸ್ಲಿಮ್ ಆಗಿ ಬದುಕುತ್ತೇನೆ. ಅಭಿನಂದನೆಗಳು.